ಚೇತನ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಯನ್ನು ಕಿತ್ತೊಗೆದ ಬಿಸಿಸಿಐ!

19-11-22 11:57 am       Source: Vijayakarnataka   ಕ್ರೀಡೆ

ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾದ ವೈಫಲ್ಯದ ಹಿನ್ನೆಲೆಯಲ್ಲಿ ಮಾಜಿ ವೇಗದ ಬೌಲರ್‌ ಚೇತನ್‌ ಶರ್ಮಾ ಸಾರಥ್ಯದ ಆಯ್ಕೆ ಸಮಿತಿಯನ್ನು ಕಿತ್ತೊಗೆಯಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ.

2021ರ ಮತ್ತು 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲು ವಿಫಲವಾದ ಬೆನ್ನಲ್ಲೇ ಕಠಿಣ ನಿರ್ಧಾರ ತೆಗೆದುಕೊಂಡಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಮಾಜಿ ವೇಗದ ಬೌಲರ್ ಚೇತನ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಯನ್ನು ಕಿತ್ತೊಗೆದಿದೆ. ಬಿಸಿಸಿಐ ಈಗಾಗಗಲೇ ಹೊಸ ಆಯ್ಕೆ ಸಮಿತಿ ರಚಿಸುವ ಸಲುವಾಗಿ ಖಾಲಿ ಇರುವ 5 ಹುದ್ದೆಗಳಿಗೆ ಅರ್ಜಿ ಕೂಡ ಆಹ್ವಾನಿಸಿದೆ.

ಚೇತನ್‌ ಶರ್ಮಾ ಸಾರಥ್ಯದ ಆಯ್ಕೆ ಸಮಿತಿಯಲ್ಲಿ ಸುನಿಲ್‌ ಜೋಶಿ, ಹವಿಂದರ್‌ ಸಿಂಗ್‌ ಮತ್ತು ದೇಬಾಶಿಶ್‌ ಮೊಹಾಂತಿ ಅವರಂತಹ ಮಾಜಿ ಆಟಗಾರರು ಇದ್ದರು. ಇದೀಗ ಹೊಸ ಆಯ್ಕೆ ಸಮಿತಿ ಸೇರಲು ಆಸಕ್ತರು ನವೆಂಬರ್‌ 28ರ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

2021ರ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೂಪರ್‌-12 ಹಂತದಲ್ಲೇ ಮುಗ್ಗರಿಸಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2022ರ ಸಾಲಿನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತು. ಅದರಲ್ಲೂ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು 10 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು. ಸೂಪರ್‌-12 ಹಂತದಲ್ಲಿ ಪಾಕಿಸ್ತಾನ ಎದುರು ಸೋಲಿನಿಂದ ಪಾರಾಗಿ ಕೊನೇ ಎಸೆತದಲ್ಲಿ ಜಯ ದಕ್ಕಿಸಿಕೊಂಡಿದ್ದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿಸೋಲುಂಡಿತ್ತು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಸೋಲಿನ ದವಡೆಗೆ ಸಿಲುಕಿತ್ತು, ಆದರೆ ಅದೃಷ್ಟ ಭಾರತ ತಂಡದ ಪಾಲಾಗಿತ್ತು.

ಸೂಪರ್‌-12 ಹಂತದಲ್ಲಿ ಭಾರತ ತಂಡ ನೆದರ್ಲೆಂಡ್ಸ್‌ ಮತ್ತು ಜಿಂಬಾಬ್ವೆ ಎದುರು ಮಾತ್ರವೇ ಅಧಿಕಾರಯುತ ಜಯ ದಾಖಲಿಸಿತ್ತು. ಇನ್ನು ಚೇತನ್‌ ಶರ್ಮಾ ಸಾರಥ್ಯದ ಆಯ್ಕೆ ಸಮಿತಿ ಇದ್ದ ಸಂದರ್ಭದಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು ಆಡಿಲ್ಲ. 2023ರಲ್ಲಿ ಭಾರತದ ಆತಿಥ್ಯದಲ್ಲೇ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಇದಕ್ಕೆ ಬಲಿಷ್ಠ ತಂಡ ಕಟ್ಟಲು ಬಿಸಿಸಿಐ ಹೊಸ ಆಯ್ಕೆ ಸಮಿತಿ ರಚನೆಗೆ ಮುಂದಾಗಿದೆ.

ಬಿಸಿಸಿಐ ಪ್ರಕಟಿಸಿರುವ ಜಾಹೀರಾತು ಪ್ರಕಾರ, ನೂತನ ಆಯ್ಕೆ ಸಮಿತಿ ಸೇರಲು ಬಯಸುವ ಆಕಾಂಕ್ಷಿಗಳು ಭಾರತ ತಂಡದ ಪರ ಕನಿಷ್ಠ 7 ಟೆಸ್ಟ್‌ ಆಡಿರಬೇಕು ಅಥವಾ 30 ಪ್ರಥಮದರ್ಜೆ ಪಂದ್ಯಗಳನ್ನು ಆಡಿರಬೇಕು ಅಥವಾ ಟೀಮ್ ಇಂಡಿಯಾ ಪರ 10 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ ಅನುಭವ ಹೊಂದಿರಬೇಕು. ಲಿಸ್ಟ್‌ 'ಎ' ಮತ್ತು ಟಿ20 ಕ್ರಿಕೆಟ್‌ ಮಾತ್ರವೇ ಆಡಿದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತ್ತಿಲ್ಲ. ಇನ್ನು ಅಭ್ಯರ್ಥಿಗಳು ಕ್ರಿಕೆಟ್‌ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿ ಕನಿಷ್ಠ 5 ವರ್ಷಗಳು ಆಗಿರಬೇಕು. ಸೆಲೆಕ್ಟರ್ಸ್‌ಗೆ 60 ವರ್ಷವಾದರೆ ಅವರ ಅಧಿಕಾರ ಅವಧಿ ಕೊನೆಗೊಳ್ಳಲಿದೆ. ಕಳೆದ 5 ವರ್ಷಗಳಲ್ಲಿ ಯಾವುದಾದರು ತಂಡದ ಆಯ್ಕೆ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು ಕೂಡ ಅರ್ಜಿ ಸಲ್ಲಿಸುವಂತ್ತಿಲ್ಲ.

ಇನ್ನು ಚೇತನ್‌ ಶರ್ಮಾ ಸಾರಥ್ಯದ ಆಯ್ಕೆ ಸಮಿತಿ, ಡಿಸೆಂಬರ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿ ಆಗಿದೆ. ಹೀಗಾಗಿ ಹೊಸ ಆಯ್ಕೆ ಸಮಿತಿ ರಚನೆಯಾಗಿ ಮುಂದಿನ ಸರಣಿಗೆ ತಂಡ ಕಟ್ಟಲು ಸಾಕಷ್ಟು ಸಮಯವಿದೆ. ಭಾರತ ತಂಡ 2023ರ ಫೆಬ್ರವರಿ-ಮಾರ್ಚ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು ತಾಯ್ನಾಡಿನಲ್ಲಿ ಮಹತ್ವದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನು ಆಡುವುದಿದೆ.

 

Bcci Fired The Entire Selection Committee Led By Chetan Sharma.