ಅಂತಾರಾಷ್ಟ್ರೀಯ ಕ್ರಿಕೆಟಿಗೆ ಧೋನಿ ಗುಡ್ ಬೈ ; ಶಾಟ್ ನಿಲ್ಲಿಸಿದ ಮಾಂತ್ರಿಕ !

15-08-20 08:22 pm       Sports Correspondent   ಕ್ರೀಡೆ

ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ, 2011ರ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ವಿದಾಯ ಘೋಷಣೆ ಮಾಡಿದ್ದಾರೆ. 

ನವದೆಹಲಿ, ಆಗಸ್ಟ್ 15: ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ, 2011ರ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ವಿದಾಯ ಘೋಷಣೆ ಮಾಡಿದ್ದಾರೆ. ಇನ್ ಸ್ಟಾ ಗ್ರಾಮಿನಲ್ಲಿ ವಿದಾಯ ಪ್ರಕಟಿಸಿರುವ ಧೋನಿ,  ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. 

ಕಳೆದ ಮೇ ತಿಂಗಳಲ್ಲಿ ಧೋನಿ ರಿಟೈರ್ಮೆಂಟ್ ಬಗ್ಗೆ ವದಂತಿ ಹರಿದಾಡಿತ್ತು. ಧೋನಿ ನಿವೃತ್ತಿಯ ಬಗ್ಗೆ ಅಭಿಮಾನಿಗಳಂತೂ ನಿರಾಸೆ ವ್ಯಕ್ತಪಡಿಸಿದ್ದೂ ಆಗಿತ್ತು. ಕೊನೆಗೆ, ಧೋನಿ ಪತ್ನಿ ಸಾಕ್ಷಿ ಪ್ರತಿಕ್ರಿಯಿಸಿ ನಿವೃತ್ತಿಯ ವದಂತಿಗೆ ತೆರೆ ಎಳೆದಿದ್ದರು. ಆಬಳಿಕ ಧೋನಿಯ ಬಾಲ್ಯದ ಕೋಚ್ ಆಗಿದ್ದ ಕೇಶವ್ ಬ್ಯಾನರ್ಜಿ ಕೂಡ ಧೋನಿ ಈಗ ನಿವೃತ್ತಿಯಾಗುವ ಅವಶ್ಯಕತೆ ಇಲ್ಲ. ಅವರ ಸೇವೆ ಇನ್ನಷ್ಟು ಭಾರತ ತಂಡಕ್ಕೆ ಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಸ್ವತಃ ಮಹೇಂದ್ರ ಸಿಂಗ್ ತಮ್ಮ ಕುರಿತು ಹರಿದಾಡಿದ್ದ ಸುದ್ದಿಗೆ ಅಂತಿಮ ಮುದ್ರೆ ಒತ್ತಿದ್ದಾರೆ. 

2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದ ಧೋನಿ, ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ನಿರ್ವಹಣೆಯ ಮೂಲಕ ಭರವಸೆ ಮೂಡಿಸಿದ್ದರು. 2007ರಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಧೋನಿಗೆ ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಯಶಸ್ವೀ ನಾಯಕನಾಗಿ ಹೊರಹೊಮ್ಮಿದ್ದರು. 2007ರಲ್ಲೇ ಧೋನಿ ನಾಯಕತ್ವದಲ್ಲಿ ಭಾರತ ಟಿ ಟ್ವೆಂಟಿ ವಿಶ್ವ ಕಪ್ ಜಯಿಸಿದ್ದು ಅವರ ಕ್ಯಾಪ್ಟನ್ಸೀಗೆ ಮೆರುಗು ನೀಡಿತ್ತು. 2011ರಲ್ಲಿ ಭಾರತಕ್ಕೆ ಕಪಿಲ್ ದೇವ್ ಬಳಿಕ ಮತ್ತೊಮ್ಮೆ ಕ್ರಿಕೆಟ್ ವಿಶ್ವಕಪ್ ದಕ್ಕಿಸಿಕೊಟ್ಟಿದ್ದು ಧೋನಿ ನಾಯಕತ್ವ. ಅಮೋಘ ಬ್ಯಾಟಿಂಗ್ ಮತ್ತು ಕೀಪಿಂಗ್ ಅಲ್ಲದೆ ಕೂಲ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದ ಛಾತಿ ಧೋನಿಯನ್ನು ಬಹುಬೇಗ ಕ್ರಿಕೆಟ್ ಪ್ರಿಯರ ಕಣ್ಮಣಿಯಾಗಿಸಿತ್ತು. 2010 ಮತ್ತು 2016ರಲ್ಲಿ ಏಶ್ಯಾಕಪ್ ಟ್ರೋಫಿ, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟ ಶ್ರೇಯವೂ ಧೋನಿಯದ್ದು. ಚೇಸಿಂಗ್ ಸಂದರ್ಭದಲ್ಲಿ ಧೋನಿ ಕ್ರೀಸಿನಲ್ಲಿ ಇದ್ದಾರೆ ಅಂದ್ರೆ ಭಾರತದ ಗೆಲುವು ಶತಸ್ಸಿದ್ಧ ಅನ್ನುವಷ್ಟರ ಮಟ್ಟಿಗೆ ಕ್ರೀಸಿಗಂಟಿಕೊಂಡು ಆಡುವ ಛಾತಿಯುಳ್ಳ ವಿಶ್ವದ ಅತಿ ವಿರಳ ಕ್ರಿಕೆಟಿಗರಲ್ಲಿ ಧೋನಿ ಒಬ್ಬರು. ಫ್ಲ್ಯಾಟ್ ಸಿಕ್ಸ್ ಅಂತೂ ಧೋನಿ ಸಿಕ್ಸ್ ಅಂತಲೇ ಹೆಸರಾಗಿತ್ತು. ಎದುರಾಳಿ ತಂಡದಲ್ಲಿ ಯಾವುದೇ ಬೌಲರ್ ಆಗಿದ್ದರೂ, ಧೋನಿ ಕ್ರೀಸಿನಲ್ಲಿದ್ದರೆ ನಡುಗಿಕೊಂಡೇ ಬಾಲ್ ಮಾಡುವಷ್ಟರ ಮಟ್ಟಿಗೆ ಧೋನಿ ಬ್ಯಾಟಿಂಗ್ ವೈಭವ ಇತ್ತು. 

ಇಂಥ ಅಪರೂಪದ ಕ್ರಿಕೆಟ್ ಮಾಂತ್ರಿಕ ಧೋನಿ ಜಾರ್ಖಂಡ್ ರಾಜ್ಯದ ಹಳ್ಳಿಗಾಡಿನ ಹುಡುಗ. ರಾಂಚಿಯಲ್ಲಿ ಎಮ್ಮೆಯ ಹಾಲು ಕುಡಿದೇ ಬೆಳೆದುಬಂದ ಧೋನಿ ಕ್ರಿಕೆಟಿನಲ್ಲಿ ಈ ಪರಿ ಆವರಿಸಿಕೊಂಡಿದ್ದೇ ಒಂದು ಅಚ್ಚರಿ. ಆದರೆ, ಭಾರತ ಕಂಡ ಅಪರೂಪದ ಆಟಗಾರನಿಗೆ ಕಳೆದ ನಾಲ್ಕೈದು ವರ್ಷಗಳಲ್ಲಿ ಹಿನ್ನಡೆ ಆಗಿತ್ತು. ಇದೇ ಕಾರಣಕ್ಕೆ 39ರ ಹರೆಯದ ಧೋನಿಯ ನಿವೃತ್ತಿ ಬಗ್ಗೆ ಮಾತುಗಳು ಹರಿದಾಡಿದ್ದವು. ಕೊಹ್ಲಿ ನಾಯಕನಾದ ಮೇಲಂತೂ ಆಟದಲ್ಲಿ ಕನ್ಸಿಸ್ಟೆನ್ಸಿ ಕಳಕೊಂಡ ಧೋನಿಯನ್ನು ಆಯ್ಕೆ ಸಂದರ್ಭದಲ್ಲಿಯೂ ಕಡೆಗಣಿಸಲಾಗಿತ್ತು. ಇದರಿಂದ ನೋವು ಅನುಭವಿಸಿದ್ದ ಧೋನಿ ಈಗ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದಾರೆ. ಐಪಿಎಲ್ ಸರಣಿಯಲ್ಲಿ ಮುಂದಯವರಿಯಲಿದ್ದಾರೆ.