ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

20-08-20 04:41 pm       Headline Karnataka News Network   ಕ್ರೀಡೆ

ಒಬ್ಬ ಆಟಗಾರನ ಹೇರ್‍ಸ್ಟೈಲ್ ಹೇಗೆ ಇದೆ ಎಂಬುದು ಮುಖ್ಯವಲ್ಲ. ಸೋಲು ಮತ್ತು ಗೆಲುವುಗಳ ಮಧ್ಯೆ ಆಟಗಾರನ ತಲೆ ಎಷ್ಟು ತಾಳ್ಮೆಯಿಂದ ಇರುತ್ತದೆ ಎಂಬುದು ಮುಖ್ಯವಾಗುತ್ತದೆ, ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

ನವದೆಹಲಿ: ಭಾರತ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದಿದ್ದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿಹೊಗಳಿದ್ದಾರೆ.

ಭಾರತದ ಕ್ರಿಕೆಟ್ ತಂಡಕ್ಕಾಗಿ 16 ವರ್ಷಗಳ ಕಾಲ ಆಡಿ, ದೇಶಕ್ಕೆ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ತಂದು ಕೊಟ್ಟ ಚಾಣಾಕ್ಷ ನಾಯಕ ಎಂಎಸ್ ಧೋನಿಯವರು ಅಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಹೇಳಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಈಗ ಈ ವಿಚಾರವಾಗಿ ಧೋನಿಯವರಿಗೆ ಪತ್ರ ಬರೆದಿರುವ ಮೋದಿಯವರು, ಧೋನಿಯವರು ಭಾರತದ ಕ್ರಿಕೆಟ್‍ಗೆ ನೀಡಿದ ಕೊಡುಗೆ ಅದ್ಭುತವಾದದ್ದು. ಕ್ರಿಕೆಟ್‍ನಲ್ಲಿ ಧೋನಿಯವರನ್ನು ಇಷ್ಟಪಡದವರನ್ನು ಹುಡುಕುವುದು ಕಷ್ಟ ಎಂದು ಹಾಡಿಹೊಗಳಿದ್ದಾರೆ. ಜೊತೆಗೆ 39 ವರ್ಷದ ಧೋನಿ ತಮ್ಮ ಮಗಳು ಜೀವಾ ಜೊತೆ ಇಟ್ಟುಕೊಂಡಿರುವ ಪ್ರೀತಿಯ ಸಂಬಂಧದ ಬಗ್ಗೆಯು ಮೋದಿಯವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ ಧೋನಿ ಸೇನೆಗೆ ಸೇರಿದ ವಿಚಾರದ ಬಗ್ಗೆ ಪತ್ರದಲ್ಲಿ ಬರೆದಿರುವ ಮೋದಿಯವರು, ಧೋನಿಯವರಿಗೆ ಭಾರತೀಯ ಸೇನೆಯ ಮೇಲೆ ಇರುವ ಪ್ರೀತಿ ಅಪಾರವಾದದ್ದು ಎಂದಿದ್ದಾರೆ. ಜೊತೆಗೆ ಧೋನಿಯವರು ಸಣ್ಣ ಪಟ್ಟಣದಲ್ಲಿ ಹುಟ್ಟಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ರಾಷ್ಟ್ರಕ್ಕಾಗಿ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ಈಗಿನ ಯುವಜನತೆ ಸ್ಪೂರ್ತಿಯಾಗಿದ್ದಾರೆ. ಧೋನಿಯವರ ಸಾಧನೆಯನ್ನು 130 ಕೋಟಿ ಭಾರತೀಯರು ಮೆಚ್ಚಿಕೊಳ್ಳಬೇಕು ಎಂದಿದ್ದಾರೆ.

ಒಬ್ಬ ಆಟಗಾರನ ಹೇರ್‍ಸ್ಟೈಲ್ ಹೇಗೆ ಇದೆ ಎಂಬುದು ಮುಖ್ಯವಲ್ಲ. ಸೋಲು ಮತ್ತು ಗೆಲುವುಗಳ ಮಧ್ಯೆ ಆಟಗಾರನ ತಲೆ ಎಷ್ಟು ತಾಳ್ಮೆಯಿಂದ ಇರುತ್ತದೆ ಎಂಬುದು ಮುಖ್ಯವಾಗುತ್ತದೆ. ಈಗಿನ ಯುವ ಜನಗೆ ಒತ್ತಡ ಪರಿಸ್ಥಿತಿಯಲ್ಲೂ ಧೋನಿಯವರಂತೆ ತಾಳ್ಮೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ನೀವು ತಂಡವನ್ನು ಮುನ್ನಡೆಸುತ್ತಿದ್ದ ರೀತಿ ಮತ್ತು ನಿಮ್ಮ ಧೈರ್ಯವನ್ನು ಎಲ್ಲರೂ ಮೆಚ್ಚಲೇ ಬೇಕು ಎಂದು ಮೋದಿ ಧೋನಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧೋನಿಯವರು ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿದ್ದಾರೆ. ಜೊತೆಗೆ 2011ರ ವಿಶ್ವಕಪ್‍ನಲ್ಲಿ ಅವರು ಕೂಲ್ ಆಗಿ ಆಡಿ ಕಪ್ ಅನ್ನು ಗೆದ್ದುಕೊಟ್ಟಿದ್ದಾರೆ. 2007ರ ಟಿ-20 ವಿಶ್ವಕಪ್ ಅನ್ನು ಗೆದ್ದು ಅವರಲ್ಲಿರುವ ಛಲವನ್ನು ತೋರಿಸಿದ್ದಾರೆ. ಇಂಥಹ ಅದ್ಭುತ ಕ್ರೀಡಾಪಟುವಿನ ನಿವೃತ್ತಿ ನಂತರದ ಜೀವನ ಚೆನ್ನಾಗಿರಲಿ. ಮುಂದೆ ಅವರು ತಮ್ಮ ಕುಟುಂಬದ ಜೊತೆ ಉತ್ತಮವಾದ ಸಮಯವನ್ನು ಕಳೆಯಲಿ ಎಂದು ಮೋದಿಯವರು ಪತ್ರದ ಮೂಲಕ ಶುಭಕೋರಿದ್ದಾರೆ.