ಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನ

24-03-21 02:45 pm       Source: MYKHEL   ಕ್ರೀಡೆ

ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ಸ್ಯಾಮ್ ಬಿಲ್ಲಿಂಗ್ಸ್‌ ಭಾರತ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಆಡೋದು ಅನುಮಾನ.

ಪೂಣೆ: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ಸ್ಯಾಮ್ ಬಿಲ್ಲಿಂಗ್ಸ್‌ ಭಾರತ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಆಡೋದು ಅನುಮಾನ. ಇಬ್ಬರೂ ಗಾಯಕ್ಕೀಡಾಗಿ ಸದ್ಯ ಆಂಗ್ಲ ತಂಡದಿಂದ ಹೊರಗಿದ್ದಾರೆ.

ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 23) ನಡೆದಿದ್ದ ಆರಂಭಿಕ ಏಕದಿನ ಪಂದ್ಯದ ವೇಳೆ ಇಯಾನ್ ಮಾರ್ಗನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್‌ ಗಾಯ ಮಾಡಿಕೊಂಡು ಮೈದಾನದಿಂದ ಹೊರ ನಡೆದಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 66 ರನ್‌ಗಳ ಭರ್ಜರಿ ಜಯ ಗಳಿಸಿತ್ತು.

ಭಾರತದ ಇನ್ನಿಂಗ್ಸ್‌ ವೇಳೆ ಬಲಗೈ ಬೆರಳಿಗೆ ತೀವ್ರವಾಗಿ ಗಾಯವಾಗಿದ್ದರಿಂದ ಮಾರ್ಗನ್ ಪಂದ್ಯದ ಮಧ್ಯದಲ್ಲೇ ಮೈದಾನದಿಂದ ಹೊರ ನಡೆದಿದ್ದರು. ಇನ್ನು ಬೌಂಡರಿ ತಡೆಯುವ ಯತ್ನದ ವೇಳೆ ಬಿಲ್ಲಿಂಗ್ಸ್‌ ಭುಜದ ಮೂಳೆಗೆ ಗಾಯ ಮಾಡಿಕೊಂಡಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಮಾರ್ಗನ್ 22, ಬಿಲ್ಲಿಂಗ್ಸ್ 18 ರನ್ ಬಾರಿಸಿದ್ದರು.

'ಗಾಯದ ಪರಿಸ್ಥಿತಿ ಹೇಗಿದೆ ಎಂದು ನಾವು 48 ಗಂಟೆಗಳ ಕಾಲ ಕಾದು ನೋಡಲಿದ್ದೇವೆ. ಬಹುಶಃ ಶುಕ್ರವಾರದ ವೇಳೆಗೆ ನಾನು ಲಭ್ಯನಿರಲಿದ್ದೇನೆ,' ಎಂದು ಮಾರ್ಗನ್ ಹೇಳಿದ್ದಾರೆ. ಮಾರ್ಚ್ 26ರ ಶುಕ್ರವಾರ ಇದೇ ಪೂಣೆ ಸ್ಟೇಡಿಯಂನಲ್ಲಿ 1.30 pmಗೆ ದ್ವಿತೀಯ ಏಕದಿನ ಪಂದ್ಯ ಆರಂಭಗೊಳ್ಳಲಿದೆ.

This News Article Is A Copy Of MYKHEL