ಐಪಿಎಲ್‌ನಿಂದ ಜೋಶ್ ಹ್ಯಾಜಲ್‌ವುಡ್ ಹಿಂದಕ್ಕೆ ಸರಿಯಲು ಪೂಜಾರ ಕಾರಣವಂತೆ!

01-04-21 01:33 pm       Source: MYKHEL Madhukara Shetty   ಕ್ರೀಡೆ

ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಗುರುವಾರ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿದರು.

ಈ ಬಾರಿಯ ಐಪಿಎಲ್ ಆರಂಭಕ್ಕೆ ಈಗ ಉಳಿದಿರುವುದು ಬೆರಳೆಣಿಕೆಯ ದಿನಗಳು ಮಾತ್ರ. ಆದರೆ ಅಂತಿಮ ಕ್ಷಣದಲ್ಲಿ ಕೆಲ ಆಟಗಾರರು ಹಿಂದಕ್ಕೆ ಸರಿಯುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಗುರುವಾರ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿದರು. ಜೋಶ್ ಹ್ಯಾಜಲ್‌ವುಡ್ ಇದಕ್ಕೆ ಬಯೋಬಬಲ್‌ನ ಕಾರಣವನ್ನು ನೀಡಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಬೇರೆಯದ್ದೇ ಕಾರಣವನ್ನು ಹುಡುಕಿದ್ದು ಟ್ವಿಟ್ಟರ್‌ನಲ್ಲಿ ತಮಾಷೆ ಮಾಡುತ್ತಾ ಕಾಲೆಳೆದಿದ್ದಾರೆ.

ಜೋಶ್ ಹ್ಯಾಜಲ್‌ವುಡ್ ಗುರುವಾರ ಮುಂಜಾನೆ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆಯೇ ಟ್ವಿಟ್ಟರ್‌ನಲ್ಲಿ ಭಾರತದ ಟೆಸ್ಟ್ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಟ್ರೆಂಡ್ ಆಗಿದ್ದರು. ಜೋಶ್ ಹ್ಯಾಜಲ್‌ವುಡ್ ಘೋಷಣೆಗೂ ಇದಕ್ಕೂ ಸಂಬಂಧ ಏನಿದೆ ಎನ್ನಿಸಿದರೂ ನೆಟ್ಟಿಗರು ಪೂಜಾರ ಅವರೇ ಹ್ಯಾಜಲ್‌ವುಡ್ ಅವರ ಈ ನಿರ್ಧಾರಕ್ಕೆ ಕಾರಣ ಎಂದು ಟ್ರಾಲ್ ಮಾಡಲು ಆರಂಭಿಸಿದರು.

ಕಳೆದ ಭಾರತದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಟೀಮ್ ಇಂಡಿಯಾ ಪರವಾಗಿ ಆಡಲಿಳಿದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ ತಮ್ಮ ಅತ್ಯಂತ ನಿಧಾನಗತಿಯ ಬ್ಯಾಟಿಂಗ್‌ನಿಂದ ಎದುರಾಳಿ ಆಸಿಸ್ ಬೌಲರ್‌ಗಳಿಗೆ ಕಂಟಕವಾಗಿದ್ದರು. ಭಾರತೀಯ ಬ್ಯಾಟ್ಸ್‌ಮನ್‌ ಪೂಜಾರಾಗೆ ಚೆಂಡೆಸೆದು ಆಸಿಸ್ ಬೌಲರ್‌ಗಳು ಹತಾಶರಾಗಿರುವುದನ್ನು ಸ್ವತಃ ಆಸ್ಟ್ರೇಲಿಯಾ ಬೌಲರ್‌ಗಳೆ ಹಲವು ಬಾರಿ ಹೇಳಿಕೊಂಡಿದ್ದರು. ಈ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು. ಈಗ ಐಪಿಎಲ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಹಾಗೂ ಚೇತೇಶ್ವರ್ ಪೂಜಾರ ಒಂದೇ ತಂಡದಲ್ಲಿ ಆಡಬೇಕಿತ್ತು. ಚೇತೇಶ್ವರ್ ಪೂಜಾರ ಹಾಗೂ ಜೋಶ್ ಹ್ಯಾಜಲ್‌ವುಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಣಕ್ಕಿಳಿಯಲಿದ್ದರು. ಆದರೆ ನೆಟ್‌ನಲ್ಲಿ ಚೇತೇಶ್ವರ್ ಪೂಜಾರಾಗೆ ತಾನು ಬೌಲಿಂಗ್ ಮಾಡಬೇಕು ಎಂಬ ಕಾರಣಕ್ಕೆ ಆತಂಕದಿಂದ ಹ್ಯಾಜಲ್‌ವುಡ್ ಐಪಿಎಲ್‌ನಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೆ ಉಳಿದುಕೊಳ್ಳುತ್ತಿದ್ದ ಚೇತೇಶ್ವರ್ ಪೂಜಾರ ಈ ಬಾರಿ ಮೂಲ ಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದರು. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗೆ ನೆಟ್ ಅಭ್ಯಾಸದಲ್ಲಿ ತೊಡಗಿರುವ ಪೂಜಾರ ಟೂರ್ನಿಗೆ ಸಿದ್ಧರಾಗುತ್ತಿದ್ದಾರೆ.

This News Article Is A Copy Of MYKHEL