ಐಪಿಎಲ್ 2021: ಮುಂಬೈ ಇಂಡಿಯನ್ಸ್‌ನ ಕಿರಣ್ ಮೋರೆಗೆ ಕೊರೊನಾ ವೈರಸ್

06-04-21 06:19 pm       Source: MYKHEL   ಕ್ರೀಡೆ

ಈ ಬಾರಿಯ ಐಪಿಎಲ್‌ನಲ್ಲಿ ಕೊರೊನಾ ವೈರಸ್ ಸಾಕಷ್ಟು ಆತಂಕವನ್ನುಂಟು ಮಾಡುತ್ತಿದ್ದು ಈಗ ಮುಂಬೈ ಇಂಡಿಯನ್ಸ್ ಪಾಳಯದಲ್ಲಿಯೂ ಕೊರೊನಾ ವೈರಸ್ ಕಾಣಿಸಿಕೊಂಡಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಕೊರೊನಾ ವೈರಸ್ ಸಾಕಷ್ಟು ಆತಂಕವನ್ನುಂಟು ಮಾಡುತ್ತಿದ್ದು ಈಗ ಮುಂಬೈ ಇಂಡಿಯನ್ಸ್ ಪಾಳಯದಲ್ಲಿಯೂ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಶಕ ಹಾಗೂ ವಿಕೆಟ್ ಕೀಪಿಂಗ್ ಕನ್ಸಲ್ಟೆಂಟ್ ಆಗಿರುವ ಕಿರಣ್ ಮೋರೆ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ.

ಕಿರಣ್ ಮೋರೆ ಕೊರೊನಾ ವೈರಸ್‌ಗೆ ತುತ್ತಾಗಿರುವ ಸಂಗತಿಯನ್ನು ಮುಂಬೈ ಇಂಡಿಯನ್ಸ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆಗೆ ಯಾವುದೇ ಕೊರೊನಾ ವೈರಸ್‌ನ ಲಕ್ಷಣಗಳು ಇಲ್ಲ. ಅವರು ತಂಡದಿಂದ ಪ್ರತ್ಯೇಕವಾಗಿದ್ದಾರೆ ಎಂದು ಟ್ವಿಟ್‌ನಲ್ಲಿ ತಿಳಿಸಲಾಗಿದೆ.

"ಪ್ರಸ್ತುತ ಕಿರಣ್ ಮೋರೆ ಅವರಲ್ಲಿ ಕೊರೊನಾ ಲಕ್ಷಣಗಳು ಕಂಡು ಬರುತ್ತಿಲ್ಲ. ಮುಂಬೈ ಇಂಡಿಯನ್ಸ್ ಹಾಗೂ ಕಿರಣ್ ಮೋರೆ ಬಿಸಿಸಿಐ ನೀಡಿರುವ ಎಲ್ಲಾ ರೀತಿಯ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಬಂದಿದೆ. ಎಂಐ ವೈದ್ಯಕೀಯ ತಂಡ ಮಿಸ್ಟರ್ ಮೋರೆ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಬಿಸಿಸಿಐ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿದೆ" ಎಂದು ಟ್ವೀಟ್ ಮಾಡಿದೆ.

"ಈ ಸಂಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು ಸುರಕ್ಷಿತವಾಗಿರಲು ಮತ್ತು COVID-19 ನಡವಳಿಕೆಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸುವುದನ್ನು ನಾವು ನೆನಪಿಸಲು ಬಯಸುತ್ತೇವೆ" ಎಂದು ಇದೇ ಟ್ವೀಟ್‌ನಲ್ಲಿ ತನ್ನ ಅಭಿಮಾನಿಗಳಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಚ್ಚರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ.

ಇತ್ತೀಚೆಗೆ ಮತ್ತಿಬ್ಬರು ಮೈದಾನದ ಸಿಬ್ಬಂದಿಗಳು ಮತ್ತು ಓರ್ವ ಪ್ಲಂಬರ್ ಕೂಡ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಅದಕ್ಕೂ ಮುನ್ನ ಅಕ್ಷರ್ ಪಟೇಲ್, ನಿತೀಶ್ ರಾಣಾ ಹಾಗೂ ದೇವದತ್ ಪಡಿಕ್ಕಲ್ ಕೊರೊನಾ ವೈರಸ್‌ಗೆ ತುತ್ತಾಗಿದ್ದರು.

This News Article Is A Copy Of MYKHEL