IPL 2021 ಯುಎಇಗೆ ಸ್ಥಳಾಂತರ, ಬಿಸಿಸಿಐ ಅಧಿಕೃತ ಘೋಷಣೆ

29-05-21 03:21 pm       MYKHEL: Sadashiva   ಕ್ರೀಡೆ

ಐಪಿಎಲ್ 2021ರ ಆವೃತ್ತಿ ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿ ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶನಿವಾರ (ಮೇ 29) ಅಧಿಕೃತವಾಗಿ ತಿಳಿಸಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲ ಕೂಡ ಇದನ್ನು ಖಾತರಿಪಡಿಸಿದ್ದಾರೆ.

ವಿಶೇಷ ಸಾಮಾನ್ಯ ಸಭೆಯಲ್ಲಿ ಚರ್ಚೆಯ ಬಳಿಕ ಐಪಿಎಲ್ 14ನೇ ಆವೃತ್ತಿಯ ಇನ್ನುಳಿದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ಬಿಸಿಸಿಐ ಸದಸ್ಯರು ಒಪ್ಪಿಕೊಂಡಿರುವುದಾಗಿ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಸಭೆಯಲ್ಲಿ ಪುರುಷರ ಟಿ20 ವಿಶ್ವಕಪ್‌ ಆಯೋಜನೆ ಬಗ್ಗೆ ನಿರ್ಧರಿಸಲು ಐಸಿಸಿಯಿಂದ ಹೆಚ್ಚುವರಿ ಕಾಲಾವಕಾಶ ಕೇಳಲು ಸಮಿತಿಯ ನಿರ್ಧರಿಸಿದೆ ಎಂದೂ ತಿಳಿದು ಬಂದಿದೆ.



ಟಿ20 ವಿಶ್ವಕಪ್‌ ನಿರ್ಧಾರಕ್ಕೆ ಕಾಲಾವಕಾಶ

'ಐಸಿಸಿ ಟಿ20 ವಿಶ್ವಕಪ್ 2021ರ ಆತಿಥ್ಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಐಸಿಸಿಯಿಂದ ಸಮಯ ವಿಸ್ತರಣೆಯನ್ನು ಕೋರಲು ಬಿಸಿಸಿಐ ಎಸ್‌ಜಿಎಂ ಅಧಿಕಾರಿಗಳು ನಿರ್ಧರಿಸಿದ್ದಾರೆ,' ಎಂದು ಬಿಸಿಸಿಐ ಹೇಳಿದೆ. ಐಪಿಎಲ್ ಸ್ಥಳಾಂತರಿಸುತ್ತಿರುವುದರಿಂದ ಮತ್ತು ಐಪಿಎಲ್ ಬಳಿಕ ಟಿ20 ವಿಶ್ವಕಪ್‌ ನಡೆಯಲಿರುವುದರಿಂದ ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ಯೋಚಿಸಿ ನಿರ್ಧಾರ ತಾಳುವುದಾಗಿ ಬಿಸಿಸಿಐ ಹೇಳಿದೆ. ಬೋರ್ಡ್ ಹೇಳಿಕೆಯ ಪ್ರಕಾರ ಐಪಿಎಲ್‌ನ ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ.



ಯಾಕೆ ಐಪಿಎಲ್ ಮುಂದೂಡಿದ್ದು?

ಭಾರತದಲ್ಲಿ ಐಪಿಎಲ್ 2021ರ ಆವೃತ್ತಿ ನಡೆಯುತ್ತಿದ್ದಾಗ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡವು. ಹೀಗಾಗಿ ಐಪಿಎಲ್ ಅನ್ನು ಬಿಸಿಸಿಐ ಮೇ 4ರಂದು ಮುಂದೂಡಿತ್ತು.



ಆರಂಭ ದಿನಾಂಕ ಯಾವುದು?

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆಯಾದರೂ ಆರಂಭ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ. ಆದರೆ ಬಲ್ಲ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 18 ಅಥವಾ ಸೆಪ್ಟೆಂಬರ್ 19ರಿಂದ ಐಪಿಎಲ್ 2021ರ ಆವೃತ್ತಿ ಮುಂದುವರೆಯಲಿದೆ.

(Kannada Copy of MYKHEL Kannada)