ಕೊರೊನಾ ಪ್ರಕರಣಗಳಿದ್ದರೂ ಬಿಸಿಸಿಐ ಹೆಚ್ಚುವರಿ ಆಟಗಾರರನ್ನು ಇಂಗ್ಲೆಂಡ್‌ಗೆ ಕಳುಹಿಸುತ್ತಿಲ್ಲ!

16-07-21 12:07 pm       MYKHEL: Sadashiva   ಕ್ರೀಡೆ

ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ಆರಂಭಕ್ಕೆ ಇನ್ನು ಎರಡು ವಾರಗಳು ಬಾಕಿಯಿರುವಾಗ ವಿರಾಟ್ ಕೊಹ್ಲಿ ಪಾಳಯದಲ್ಲಿ ಕೊರೊನಾ ಭೀತಿ ಶುರುವಾಗಿದೆ.

ನವದೆಹಲಿ: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಟೀಮ್ ಇಂಡಿಯಾದಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ಆರಂಭಕ್ಕೆ ಇನ್ನು ಎರಡು ವಾರಗಳು ಬಾಕಿಯಿರುವಾಗ ವಿರಾಟ್ ಕೊಹ್ಲಿ ಪಾಳಯದಲ್ಲಿ ಕೊರೊನಾ ಭೀತಿ ಶುರುವಾಗಿದೆ.

ಭಾರತ ತಂಡದಲ್ಲೀಗ ಕೋವಿಡ್ ಭೀತಿ ಶುರುವಾಗಿದೆಯಾದರೂ ಇಂಗ್ಲೆಂಡ್‌ಗೆ ಹೆಚ್ಚುವರಿ ಆಟಗಾರರನ್ನು ಕಳುಹಿಸಿಕೊಡುತ್ತಿಲ್ಲ ಎಂದು ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲ ತಿಳಿಸಿದೆ. ಭಾರತ ತಂಡದಲ್ಲಿ ಮೂವರಿಗೆ ಈಗಾಗಲೇ ಕೋವಿಡ್ ಪಾಸಿಟಿವ್ ಬಂದಿರುವುದು ಬಹಿರಂಗಗೊಂಡಿದೆ.

ಭಾರತೀಯ ತಂಡ ಈಗ ಡರ್‌ಹ್ಯಾಮ್‌ನಲ್ಲಿ ಬಯೋಬಬಲ್ ಪ್ರವೇಶಿಸಿದೆ. ಆದರೆ ತಂಡದ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್, ಅನುಭವಿ ವೃದ್ಧಿಮಾನ್ ಸಾಹ ಮತ್ತು ಟ್ರೇನಿಂಗ್ ಸಿಬ್ಬಂದಿ ದಯಾನಂದ ಗರಣಿ ಲಂಡನ್‌ನಲ್ಲೇ ಉಳಿದು ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಇವರಲ್ಲಿ ಪಂತ್‌, ಗರಣಿಗೆ ಕೋವಿಡ್ ಪಾಸಿಟಿವ್ ಇದ್ದರೆ, ಸಾಹ ಮುನ್ನೆಚ್ಚರಿಕೆಯಾಗಿ ಐಸೊಲೇಶನ್‌ನಲ್ಲಿದ್ದಾರೆ.

ಆಟಗಾರರಲ್ಲಿ ಸಾಹ ಮತ್ತು ಪಂತ್ ಇಬ್ಬರೂ ಕ್ವಾರಂಟೈನ್ ಅವಧಿ ಮುಗಿಸುತ್ತ ಬಂದಿರುವುದರಿಂದ ಈಗಾಗಲೇ ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡಕ್ಕೆ ಹೆಚ್ಚುವರಿ ಆಟಗಾರರನ್ನು ಕಳುಹಿಸುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಇಂಗ್ಲೆಂಡ್‌ನಲ್ಲೀಗ 20 ಆಟಗಾರರು 4 ಮೀಸಲು ಆಟಗಾರರು ಇದ್ದಾರೆ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ನಡೆಯಲಿದೆ.

(Kannada Copy of Mykhel Kannada)