ಟೋಕಿಯೋ ಒಲಿಂಪಿಕ್ಸ್: ಕ್ರೀಡಾಗ್ರಾಮದಲ್ಲಿ ಮತ್ತಿಬ್ಬರು ಅಥ್ಲಿಟ್‌ಗಳಿಗೆ ಕೊರೊನಾವೈರಸ್ ದೃಢ

22-07-21 10:38 am       MYKHEL: Sadashiva   ಕ್ರೀಡೆ

ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಹಿಂದೆಂದೂ ಕಂಡಿರದ ಅತ್ಯಂತ ವಿಚಿತ್ರ ಸನ್ನಿವೇಶವನ್ನು ಕೊರೊನಾವೈರಸ್‌ನ ಕಾರಣದಿಂದಾಗಿ ಎದುರಿಸುತ್ತಿದೆ.

ಟೋಕಿಯೋ, ಜುಲೈ 22: ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಹಿಂದೆಂದೂ ಕಂಡಿರದ ಅತ್ಯಂತ ವಿಚಿತ್ರ ಸನ್ನಿವೇಶವನ್ನು ಕೊರೊನಾವೈರಸ್‌ನ ಕಾರಣದಿಂದಾಗಿ ಎದುರಿಸುತ್ತಿದೆ. ಸಾಕಷ್ಟು ಕಠಿಣ ನಿಯಮಗಳನ್ನು ಹೊಂದಿರುವ ಹೊರತಾಗಿಯೂ ಕೊರೊನಾವೈರಸ್‌ ಪ್ರಕರಣಗಳು ಕ್ರೀಡಾಗ್ರಾಮದಲ್ಲಿ ಪತ್ತೆಯಾಗುತ್ತಿದೆ.

ಗುರುವಾರ ಟೋಕಿಯೋ ಒಲಿಂಪಿಕ್ಸ್ ಆಯೋಜಕರು ಕೋವಿಡ್ ಹೊಸ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇದರಲ್ಲಿ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಇಬ್ಬರು ಅಥ್ಲೀಟ್‌ಗಳಿಗೆ ಕೊರೊನಾವೈರಸ್‌ ಇರುವುದು ದೃಢಪಟ್ಟಿದೆ. 11 ಹೊಸ ಪ್ರಕರಣಗಳು ಕ್ರೀಡಾಗ್ರಾಮದಲ್ಲಿ ಪತ್ತೆಯಾಗಿದ್ದು ಇದರಲ್ಲಿ ಇಬ್ಬರು ಅಥ್ಲೀಟ್‌ಗಳಾಗಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 86 ಕೊರೊನಾವೈರಸ್ ಪ್ರಕರಣಗಳು ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕ್ರೀಡಾಪಟುಗಳು ಹಾಗೂ ಇತರ ಸಿಬ್ಬಂದಿಗಳಿಗೆ ಕಾಣಿಸಿಕೊಂಡಿದೆ.



ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಕೊರೊನಾವೈರಸ್‌ಗೆ ತುತ್ತಾದಂತಾ ಸಂದರ್ಭದಲ್ಲಿ ಪಂದ್ಯಗಳನ್ನು ಮುಂದುವರಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ವಿಚಾರವಾಗಿ ಈಗಾಗಲೇ ಮಾರ್ಗಸೂಚಿಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಹೀಗಾಗಿ ಒಲಿಂಪಿಕ್ಸ್ ಸುಸೂತ್ರವಾಗಿ ನೆರವೇರಲು ಯಾವುದೇ ಅಡ್ಡಿಯಾಗಲಾರದು ಎಂಬ ವಿಶ್ವಾಸ ಒಲಿಂಪಿಕ್ಸ್ ಆಯೋಜಕರಲ್ಲಿದೆ.

ಇನ್ನು ಭಾರತೀಯ ಕ್ರೀಡಾಪಟುಗಳ ಮೊದಲ ತಂಡ ಈಗಾಗಲೇ ಟೋಕಿಯೋದ ಕ್ರೀಡಾಗ್ರಾಮದಲ್ಲಿ ಮೂರು ಮಹಡಿಯ ಕಟ್ಟಡದಲ್ಲಿ ವಾಸ್ತವ್ಯದಲ್ಲಿದ್ದಾರೆ. ಕೊರೊನಾವೈರಸ್‌ನ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ಕ್ರೀಡಾಪಟುಗಳು ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತಿದ್ದು ಅಭ್ಯಾಸಕ್ಕೆ ನಿಗದಿಪಡಿಸಿರುವ ಸ್ಥಳವನ್ನು ಹೊರತುಪಡಿಸಿ ಬೇರೆಲ್ಲೂ ತೆರಳದಂತೆ ತಮಗೆ ತಾವೇ ನಿರ್ಬಂಧಿಸಿಕೊಂಡಿದ್ದಾರೆ. ಕ್ರೀಡಾಗ್ರಾಮದ ಒಳಗೆ ಕ್ರೀಡಾಪಟುಗಳ ಓಡಾಟಕ್ಕೆ ಯಾವುದೇ ನಿರ್ಬಂಧಗಳು ಇಲ್ಲದ ಕಾರಣ ಭಾರತೀಯ ಕ್ರೀಡಾಪಟುಗಳು ಈ ಮುನ್ನೆಚ್ಚರಿಕೆಯನ್ನು ವಹಿಸಿಕೊಂಡಿದ್ದಾರೆ.

(Kannada Copy of Mykhel Kannada)