ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ವಿಜೇತೆ ಮೀರಾಬಾಯಿ ಚಾನುಗೆ ರೈಲ್ವೆ ಸಚಿವರ ಬಂಪರ್ ಗಿಫ್ಟ್

27-07-21 11:45 am       MYKHEL: Srinivasa A   ಕ್ರೀಡೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆಲ್ಲುವುದರ ಮೂಲಕ ಮೀರಾಬಾಯಿ ಚಾನು ದೇಶದ ಹಲವಾರು ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿ ನಿಂತಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಹೀಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆಲ್ಲುವುದರ ಮೂಲಕ ಮೀರಾಬಾಯಿ ಚಾನು ದೇಶದ ಹಲವಾರು ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿ ನಿಂತಿದ್ದಾರೆ.

ತಾವು ಪಟ್ಟ ಶ್ರಮ ಮತ್ತು ತಮ್ಮ ಪ್ರತಿಭೆಯಿಂದ ಮೀರಾಬಾಯಿ ಚಾನು ಹಲವಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ಮೀರಾಬಾಯಿ ಚಾನುಗೆ 2 ಕೋಟಿ ರೂಪಾಯಿ ಮತ್ತು ರೈಲ್ವೆ ಹುದ್ದೆಯಲ್ಲಿ ಬಡ್ತಿ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.



ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಮೀರಾಬಾಯಿ ಚಾನು 49 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ರಜತ ಪದಕಕ್ಕೆ ಮುತ್ತಿಟ್ಟಿದ್ದರು. ಈ ಮೂಲಕ 21 ವರ್ಷಗಳ ಬಳಿಕ ಭಾರತ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗೆದ್ದಂತಾಯಿತು. ಕೇವಲ ಕೇಂದ್ರ ರೈಲ್ವೆ ಸಚಿವರು ಮಾತ್ರವಲ್ಲದೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಕೂಡಾ ಮೀರಾಬಾಯಿ ಚಾನುಗೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಮತ್ತು 1 ಕೋಟಿ ಬಹುಮಾನವನ್ನು ಘೋಷಿಸಿದ್ದರು. ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಚೆಕಿಂಗ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೀರಾಬಾಯಿ ಚಾನುಗೆ ಇದೀಗ ಅದೇ ಹುದ್ದೆಯಲ್ಲಿ ಬಡ್ತಿ ಮತ್ತು 2 ಕೋಟಿಯನ್ನು ರೈಲ್ವೆ ಸಚಿವರು ಘೋಷಿಸಿದ್ದರೆ, ಅತ್ತ ಮಣಿಪುರ ಸಿಎಂ 1 ಕೋಟಿ ಬಹುಮಾನ ಮತ್ತು ಪೊಲೀಸ್ ಇಲಾಖೆಯಲ್ಲಿ ಹುದ್ದೆಯನ್ನು ಘೋಷಿಸಿದ್ದಾರೆ.

(Kannada Copy of Mykhel Kannada)