ಟೋಕಿಯೋ ಒಲಿಂಪಿಕ್ಸ್ 2021: ಪದಕದಾಸೆ ಕೈ ಚೆಲ್ಲಿದ ಅನ್ನು ರಾಣಿ

03-08-21 12:15 pm       Mykhel: Sadashiva   ಕ್ರೀಡೆ

ಟೋಕಿಯೋ ಒಲಿಂಪಿಕ್ಸ್ 2021ರ ಅಥ್ಲೆಟಿಕ್ಸ್ ವಿಭಾಗದ ಮಹಿಳಾ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ನಿರಾಸೆಯಾಗಿದೆ.

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ 2021ರ ಅಥ್ಲೆಟಿಕ್ಸ್ ವಿಭಾಗದ ಮಹಿಳಾ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಜಾವೆಲಿನ್ ಥ್ರೋವರ್ ಅನ್ನು ರಾಣಿ ಪದಕದಾಸೆ ಕೈ ಚೆಲ್ಲಿದ್ದಾರೆ. ಮಂಗಳವಾರ (ಆಗಸ್ಟ್ 3) ನಡೆದ ಗ್ರೂಪ್ ಹಂತದ ಸ್ಪರ್ಧೇಯಲ್ಲಿ ರಾಣಿ ಫೈನಲ್‌ಗೂ ಅರ್ಹತೆ ಗಿಟ್ಟಿಸಿಕೊಳ್ಳದೆ ಸ್ಪರ್ಧೆ ಮುಗಿಸಿದ್ದಾರೆ. ನೀರಸ ಪ್ರದರ್ಶನದೊಂದಿಗೆ ರಾಣಿ 14ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ.

ಅನ್ನು ರಾಣಿ ಆರಂಭಿಕ ಥ್ರೋನಲ್ಲಿ 50.35 ಮೀಟರ್ ಸಾಧನೆ ತೋರಿದರು. ದ್ವಿತೀಯ ಎಸೆತದ ವೇಳೆ ಕೊಂಚ ಸುಧಾರಣೆ ತೋರಿದರು. ದ್ವಿತೀಯ ಪ್ರಯತ್ನದಲ್ಲಿ ರಾಣಿ 53.19 ಮೀಟರ್ ದೂರದ ಸಾಧನೆ ತೋರಿದರು. ಗ್ರೂಪ್‌ 'ಎ'ಯಲ್ಲಿದ್ದ ರಾಣಿ ಸೇರಿ ಈ ವಿಭಾಗದಲ್ಲಿ ಒಟ್ಟು 14 ಸ್ಪರ್ಧಿಗಳಿದ್ದರು.

ಅರ್ಹತೆಗಿಂತ ಕಡಿಮೆ ಸಾಧನೆ ತೋರಿದ ರಾಣಿ

ತೃತೀಯ ಪ್ರಯತ್ನದಲ್ಲೂ ರಾಣಿ ಫೈನಲ್‌ಗೆ ಅರ್ಹತೆ ಪಡೆಯುವ ಸಾಧನೆ ತೋರಲಿಲ್ಲ. ತೃತೀಯ ಪ್ರಯತ್ನದಲ್ಲಿ ರಾಣಿ 54.04 ಮೀಟರ್ ಸಾಧನೆ ತೋರಿದರಾದರೂ ಇದೂ ಕೂಡ ಫೈನಲ್ ಕ್ವಾಲಿಫಿಕೇಶನ್‌ಗೆ ಅರ್ಹತೆ ಪಡೆಯದ ದೂರವಾಗಿತ್ತು. ಗ್ರೂಪ್‌ ಹಂತದಲ್ಲಿ ಫೈನಲ್‌ಗೆ ನೇರ ಅರ್ಹತೆ ಗಿಟ್ಟಿಸುವುದಾದರೆ ರಾಣಿ 63 ಮೀಟರ್ ದೂರ ಈಟಿ ಎಸೆಯಬೇಕಿತ್ತು. 12 ಮಂದಿ ಮಹಿಳೆಯರ ಫೈನಲ್‌ ಹಂತಕ್ಕೆ ರಾಣಿ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 29ರ ಹರೆಯದ ರಾಣಿ ಅಂತಿಮ ಸುತ್ತಿನಲ್ಲೂ ಉತ್ತಮ ಪ್ರದರ್ಶನ ನೀಡಲಿಲ್ಲ. ನಿರಾಸೆಯೊಂದಿಗೆ ಸ್ಪರ್ಧೆ ಮುಗಿಸಿದ್ದಾರೆ. ಸೋಮವಾರ (ಆಗಸ್ಟ್ 2) ನಡೆದಿದ್ದ ಡಿಸ್ಕಸ್ ಎಸೆತದ ಫೈನಲ್ ಹಂತದ ಸ್ಪರ್ಧೆಯಲ್ಲಿ ಭಾರತದ ಕಮಲ್‌ಪ್ರೀತ್ ಕೌರ್ 6ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಈ ಮೂಲಕ ಭಾರತದ ಪರವಾಗಿ ಪದಕದ ಸಾಧನೆ ಮಾಡಲು ಕಮಲ್‌ಪ್ರೀತ್ ಕೌರ್ ವಿಫಲರಾಗಿದ್ದರು. ಕಮಲ್‌ಪ್ರೀತ್‌ಪದಕದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು.



ನೀರಾಜ್ ಚೋಪ್ರಾ ಮೇಲೆ ಎಲ್ಲರ ಕಣ್ಣು

ಇದೇ ವರ್ಷ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕ್ರೀಡಾಕೂಟದ ವೇಳೆ ಅನ್ನು ರಾಣಿ 63.24 ಮೀಟರ್ ಅತ್ಯುತ್ತಮ ಸಾಧನೆ ತೋರಿದ್ದರು. ಆದರೆ ಆ ಸಾಧನೆಯ ಸಮೀಪಕ್ಕೂ ಅನ್ನು ಹೋಗಲಿಲ್ಲ. ಇದರೊಂದಿಗೆ ಎಸೆತದ ವಿಭಾಗಗಳಲ್ಲಿ ಭಾರತಕ್ಕೆ ತೀವ್ರ ನಿರಾಸೆಯಾಗಿದೆ. ಗ್ರೂಪ್ ವಿಭಾಗದಲ್ಲಿ ನೇರ ಅರ್ಹತೆ ಗಿಟ್ಟಿಸಿಕೊಂಡವರೆಂದರೆ ಪೋಲ್ಯಾಂಡ್‌ನ ಮಾರಿಯಾ ಆಂಡ್ರೆಜಿಕ್ 65.25 ಮೀಟರ್ ದೂರದೊಂದಿಗೆ ಮೊದಲ ಪ್ರಯತ್ನದಲ್ಲೇ ಫೈನಲ್‌ ಹಂತಕ್ಕೆ ಪ್ರವೇಶ ಪಡೆದುಕೊಂಡರು. ನಿಯಮದ ಪ್ರಕಾರ 63 ಮೀಟರ್ ಅಥವಾ ಅದಕ್ಕಿಂತ ಕೆಳಗೆ ಬೆಸ್ಟ್ ಸಾಧನೆಗಳು ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿವೆ. ಇನ್ನು ಅಥ್ಲೆಟಿಕ್ಸ್ ಪುರುಷರ ವಿಭಾಗದಲ್ಲಿ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಮೇಲೆ ಎಲ್ಲರ ಕಣ್ಣಿದೆ. ನೀರಜ್ ರಾಷ್ಟ್ರೀಯ ಮಟ್ಟದ ಕ್ರೀಡೆ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಸಾಧನೆ ತೋರಿದ್ದವರು. ನೀರಜ್ ಸ್ಪರ್ಧೆ ಆಗಸ್ಟ್ 4ರ ಬುಧವಾರ ನಡೆಯಲಿದೆ.

ಭಾರತಕ್ಕೆ ಎರಡು ಪದಕಗಳು

ಭಾರತಕ್ಕೆ ಇಲ್ಲೀವರೆಗೆ (ಆಗಸ್ಟ್ 3, 8.15 AM) ಎರಡು ಪದಕಗಳು ಸಿಕ್ಕಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದರೆ, ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್ ಪಿವಿ ಸಿಂಧುಗೆ ಕಂಚಿನ ಪದಕ ಲಭಿಸಿದೆ. ಭಾರತೀಯ ತಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದಾರೆ. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಹಿಂದಿ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು.

(Kannada Copy of Mykhel Kannada)