ಭಾರತ vs ಬೆಲ್ಜಿಯಂ ಹಾಕಿ ಸೆಮಿಫೈನಲ್‌ ವೇಳೆ ಪ್ರಧಾನಿ ಮೋದಿ ಟ್ರೋಲ್!

03-08-21 03:28 pm       Mykhel: Sadashiva   ಕ್ರೀಡೆ

ತೀವ್ರ ಕುತೂಹಲ ಮೂಡಿಸಿದ್ದ ಭಾರತ ಮತ್ತು ಬೆಲ್ಜಿಯಂ ನಡುವಿನ ಪುರುಷರ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಕಿ ತಂಡ ನಿರಾಸೆ ಅನುಭವಿದೆ.

ಟೋಕಿಯೋ: ತೀವ್ರ ಕುತೂಹಲ ಮೂಡಿಸಿದ್ದ ಭಾರತ ಮತ್ತು ಬೆಲ್ಜಿಯಂ ನಡುವಿನ ಪುರುಷರ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಕಿ ತಂಡ ನಿರಾಸೆ ಅನುಭವಿದೆ. ಕಾರಣ ಬೆಲ್ಜಿಯಂ ವಿರುದ್ಧ ಭಾರತ 5-2 ಅಂತರದಿಂದ ಸೋತಿದೆ. ಈ ಪಂದ್ಯ ಗೆದ್ದಿದ್ದರೆ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಲಭಿಸುವುದರಲ್ಲಿತ್ತು. ಆದರೆ ಪಂದ್ಯ ಸೋತಿರುವುದರಿಂದ ಭಾರತಕ್ಕೆ ಕಂಚಿನ ಪದಕಕ್ಕಾಗಿ ಇನ್ನೊಂದು ಪಂದ್ಯ ನಡೆಯಲಿದೆ. ಇದರಲ್ಲಿ ಭಾರತ ಗೆದ್ದರೆ ಕಂಚಿನ ಪದಕ ಲಭಿಸಲಿದೆ. ಇಲ್ಲದಿದ್ದರೆ, ಬರಿಗೈಯಲ್ಲಿ ಭಾರತ ಹಾಕಿ ಪುರುಷರು ವಾಪಸ್ ಹೋಗಬೇಕಾಗುತ್ತದೆ.

ಸೆಮಿಫೈನಲ್‌ನಲ್ಲಿ ಭಾರತ ಸೋತಿದೆಯಾದರೂ ಭಾರತೀಯ ತಂಡದ ಬಗ್ಗೆ ಶ್ಲಾಘನೆ ಕೇಳಿ ಬಂದಿದೆ. ಯಾಕೆಂದರೆ 41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ‌ ಪ್ರವೇಶಿಸಿತ್ತು. ಆದರೆ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಬೆಲ್ಜಿಯಂ ಹಾಕಿ ತಂಡ ಈ ಬಾರಿ ಸೆಮಿಫೈನಲ್‌ನಲ್ಲಿ ಮುನ್ನಡೆ ಪಡೆದುಕೊಂಡಿದೆ. ಇಲ್ಲಿಗೆ ಭಾರತಕ್ಕೆ ಹಾಕಿಯಲ್ಲಿ ಚಿನ್ನದ ಪದಕದ ಆಸೆ ಮಣ್ಣಾಗಿದೆ.

ಭಾರತ ಸೋತಿದ್ದಕ್ಕೆ ಪ್ರಧಾನಿ ಮೋದಿ ಟ್ರೋಲ್

ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಸೋತು ನಿರಾಸೆ ಅನುಭವಿಸಿದ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ತಮಾಷೆಗೀಡಾಗಿದ್ದಾರೆ. ಇದಕ್ಕೊಂದು ಕಾರಣವಿದೆ. ಪಂದ್ಯ ಆರಂಭದಲ್ಲಿ ಅಂದರೆ ಮೊದಲ ಕ್ವಾರ್ಟರ್‌ನಲ್ಲಿ ಭಾರತ ಎರಡು ಗೋಲ್‌ಗಳನ್ನು ಬಾರಿಸಿ ಮುನ್ನಡೆಯಲ್ಲಿತ್ತು. ಮನ್‌ಪ್ರೀತ್ ಸಿಂಗ್ 11ನೇ ನಿಮಿಷದಲ್ಲಿ ಮತ್ತು ಮನ್‌ಪ್ರೀತ್‌ ಸಿಂಗ್‌ 13ನೇ ನಿಮಿಷಗಳಲ್ಲಿ ತಂಡಕ್ಕೆ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. "ನಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತು ಬೆಲ್ಜಿಯಂ ನಡುವಿನ ಹಾಕಿ ಸೆಮಿಫೈನಲ್‌ ಪಂದ್ಯ ನೋಡುತ್ತಿದ್ದೇನೆ. ನಮ್ಮ ತಂಡದ ಕೌಶಲದ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಅವರಿಗೆ ಶುಭ ಹಾರೈಸುತ್ತಿದ್ದೇನೆ," ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ಆ ವೇಳೆ ಭಾರತ 2-1ರ ಮುನ್ನಡೆಯಲ್ಲಿತ್ತು. ದುರದೃಷ್ಟವೆಂದರೆ ಪ್ರಧಾನಿ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬೆಲ್ಜಿಯಂ ಗೋಲ್ ಬಾರಿಸಿ ಅಂಕವನ್ನು 2-2ರಿಂದ ಸರಿದೂಗಿಸಿಕೊಂಡಿತು. ಆ ಬಳಿಕ ಭಾರೀ ಮುನ್ನಡೆ ಪಡೆದುಕೊಳ್ಳಲಾರಂಭಿಸಿತ್ತು.



ಪ್ರಧಾನಿ ತೋರಿಕೆಯ ದುರಾದೃಷ್ಟದಿಂದ ಭಾರತ ಸೋತಿದೆ?

ಪ್ರಧಾನಿಯ ತೋರಿಕೆಯ ಚಟದಿಂದಾಗಿಯೇ ಪುರುಷರ ಹಾಕಿಯಲ್ಲಿ ಭಾರತೀಯ ತಂಡ ಸೋತಿದೆ. ಪ್ರಧಾನಿ ಹೀಗೆ ತನ್ನನ್ನು ನಾನು ಪ್ರದರ್ಶಿಸಿಕೊಂಡ ಹೆಚ್ಚಿನ ಸಂದರ್ಭಗಳಲ್ಲಿ ಭಾರತಕ್ಕೆ ಸೋಲಾಗಿದೆ. ಹಿಂದೆ ಚಂದ್ರಯಾನ-2 ರಾಕೆಟ್ ಉಡಾವಣೆ ವೇಳೆಯೂ ಹೀಗೆ ಮೋದಿ ವಕ್ಕರಿಸಿಕೊಂಡ ಮೇಲೆ ಉಡಾವಣೆ ವಿಫಲವಾಗಿತ್ತು. ಈಗಲೂ ಕೂಡ ಮುನ್ನಡೆಯಲ್ಲಿದ್ದ ಭಾರತ ಹಾಕಿ ತಂಡ ಮೋದಿ ಟ್ವೀಟ್‌ನ ಬಳಿಕ ಸೋಲುತ್ತಲೇ ಸಾಗಿತು ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಮೋದಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಅಚ್ಚರಿಯಂದ್ರೆ ಪ್ರಧಾನಿ ಟ್ವೀಟಿಗೂ ಮುನ್ನ ಮುನ್ನಡೆಯಲ್ಲಿದ್ದ ಭಾರತೀಯ ತಂಡ ಆ ಬಳಿಕ ಒಂದೇ ಒಂದು ಗೋಲ್ ಬಾರಿಸಲಿಲ್ಲ. ಆದರೆ ಎದುರಾಳಿ ಬೆಲ್ಜಿಯಂ ಪ್ರಧಾನಿ ಟ್ವೀಟ್‌ ಬಳಿಕ ಸಾಲು ಸಾಲು 4 ಗೋಲ್‌ಗಳನ್ನು ಬಾರಿಸಿ ವಿಜಯದ ಕೇಕೆ ಹಾಕಿತ್ತು!



ಸೋತ ಬಳಿಕ ಮೋದಿ ಸ್ಫೂರ್ತಿಯ ಟ್ವೀಟ್‌

ಸೆಮಿಫೈನಲ್‌ನಲ್ಲಿ ಭಾರತೀಯ ತಂಡ ಸೋತ ಬಳಿಕವೂ ಪ್ರಧಾನಿ ಮೋದಿ ಸ್ಫೂರ್ತಿಯ ಮಾತುಗಳೊಂದಿಗೆ ಟ್ವೀಟ್ ಮಾಡಿದ್ದರು. 'ಸೋಲು-ಗೆಲುವು ಬದುಕಿನ ಭಾಗ. ನಮ್ಮ ಆಟಗಾರರು ದಿಟ್ಟ ಹೋರಾಟ ನೀಡಿದ್ದಾರೆ. ಅದೇ ಆಟದಲ್ಲಿ ಪ್ರಮುಖವಾಗುತ್ತದೆ. ಮುಂದಿನ ಪಂದ್ಯಕ್ಕೆ ನಾನು ಶುಭ ಹಾರೈಸುತ್ತೇನೆ. ನಮ್ಮ ಆಟಗಾರರ ಬಗ್ಗೆ ನಮಗೆ ಹೆಮ್ಮೆಯಿದೆ' ಎಂದು ಮೋದಿ ಟ್ವೀಟಿನಲ್ಲಿ ಬರೆದುಕೊಂಡಿದ್ದರು. ಪ್ರಧಾನಿ ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದಾರೆಂದರೆ ಇನ್ನು ಮುಂದಿನ ಪಂದ್ಯದಲ್ಲಿ ಭಾರತೀಯ ಹಾಕಿ ಪುರುಷರು ಗೆದ್ದಂತೆಯೇ ಎಂದು ಇಲ್ಲೂ ಕೆಲವರು ತಮಾಷೆ ಮಾಡಲಾರಂಭಿಸಿದ್ದಾರೆ. ಅಂದ್ಹಾಗೆ ಭಾರತೀಯ ತಂಡದ ಪರ ಮನ್‌ಪ್ರೀತ್‌ ಹರ್ಮನ್‌ಪ್ರೀತ್‌ ಸಿಂಗ್ ಗೋಲ್ ಬಾರಿಸಿದ್ದರೆ, ಬೆಲ್ಜಿಯಂನಿಂದ ಅಲೆಕ್ಸಾಂಡರ್ ರಾಬಿ ಹೆಂಡ್ರಿಕ್ಸ್ ಮೂರು ಗೋಲ್‌ಗಳನ್ನು ಬಾರಿಸಿ ಪಂದ್ಯದ ಗೆಲುವಿನ ರುವಾರಿ ಎನಿಸಿದ್ದರು. 19ನೇ ನಿಮಿಷ, 49 ನಿಮಿಷ ಮತ್ತು 53ನೇ ನಿಮಿಷಗಳಲ್ಲಿ ರಾಬಿ ಹೆಂಡ್ರಿಕ್ಸ್ ಗೋಲ್ ಬಾರಿಸಿ ಬೆಲ್ಜಿಯಂ ಭರ್ಜರಿ ಮುನ್ನಡೆಗೆ ಕಾರಣರಾದರು. ಇನ್ನು ಲೊಕ್ ಫ್ಯಾನಿ ಲ್ಯೂಪರ್ಟ್ ಪಂದ್ಯ ಆರಂಭದಲ್ಲೇ ಅಂದರೆ 2ನೇ ನಿಮಿಷದಲ್ಲೇ ಗೋಲ್ ಬಾರಿಸಿದರೆ, ಜಾನ್-ಜಾನ್ ಡೊಮಿನಿಕ್ ಡೊಹ್ಮೆನ್ ಪಂದ್ಯದ ಕೊನೇ ಕ್ಷಣ ಅಂದರೆ 60ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೆಲುವನ್ನು ಸಾರಿದರು.

(Kannada Copy of Mykhel Kannada)