ಟೋಕಿಯೋ ಒಲಿಂಪಿಕ್ಸ್: 400 ಮೀ. ಹರ್ಡಲ್ಸ್‌ನಲ್ಲಿ ವಿಶ್ವದಾಖಲೆ ಬರೆದ ಸಿಡ್ನಿ ಮೆಕ್ಲಾಫ್ಲಿನ್

04-08-21 10:59 am       Mykhel: Sadashiva   ಕ್ರೀಡೆ

ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾ (ಯುಎಸ್‌ಎ)ಯ ಸಿಡ್ನಿ ಮೆಕ್ಲಾಫ್ಲಿನ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾ (ಯುಎಸ್‌ಎ)ಯ ಸಿಡ್ನಿ ಮೆಕ್ಲಾಫ್ಲಿನ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಹಿಳಾ ವಿಭಾಗದ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಮೆಕ್ಲಾಫ್ಲಿನ್ ತನ್ನದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸುಧಾರಿಸಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದವರೇ ಆದ ದಲಿಲಾ ಮುಹಮ್ಮದ್ ಅವರನ್ನು ಮೆಕ್ಲಾಫ್ಲಿನ್ ಸೋಲಿಸಿ ಗಮನ ಸೆಳೆದಿದ್ದಾರೆ (ಚಿತ್ರಕೃಪೆ: ಇಎಸ್‌ಪಿಎನ್ ಟ್ವಿಟರ್).

ಬುಧವಾರ (ಆಗಸ್ಟ್ 4) ನಡೆದ ಮಹಿಳಾ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 51.46 ಸೆಕೆಂಡ್ ಸಾಧನೆಯೊಂದಿಗೆ ಸಿಡ್ನಿ ಮೆಕ್ಲಾಫ್ಲಿನ್ ಚಿನ್ನದ ಪದಕ ಗೆದ್ದಿದ್ದಾರೆ. ಈ ವಿಭಾಗದಲ್ಲಿ ಅಮೆರಿಕಾದವರೇ ಆದ ದಲಿಲಾ ಮುಹಮ್ಮದ್ 51.58 ಸೆಕೆಂಡ್ ಕಾಲಾವಧಿಯೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ. ಕಂಚಿನ ಪದಕ ನೆದರ್ಲ್ಯಾಂಡ್ಸ್‌ನ ಫೆಮ್ಕೆ ಬೋಲ್ (52.03 ಸೆಕೆಂಡ್) ಪಾಲಾಗಿದೆ.



ಕೊನೇ ಕ್ಷಣದಲ್ಲಿ ಓಡಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ

ಇದಕ್ಕೂ ಮುನ್ನ 51.90 ಸೆಕೆಂಡ್ ಸಾಧನೆಯೊಂದಿಗೆ ಸಿಡ್ನಿ ಮೆಕ್ಲಾಫ್ಲಿನ್ ವಿಶ್ವದಾಖಲೆ ನಿರ್ಮಿಸಿದ್ದರು. ಈಗ ಅವರದ್ದೇ ಹೆಸರಿನಲ್ಲಿದ್ದ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. 21ರ ಹರೆಯದ ಮೆಕ್ಲಾಫ್ಲಿನ್ 4ನೇ ಲೇನ್ ನಂಬರ್‌ನಲ್ಲಿ ಓಡಿದ್ದರು. ಅಂತಿಮ 100 ಮೀಟರ್‌ಗಳ ಅಂತರವಿದ್ದಾಗ ಹಿಂದಿನ ಬಾರಿಯ ಚಾಂಪಿಯನ್ ದಲಿಲಾ ಅವರನ್ನು ಮೆಕ್ಲಾಫ್ಲಿನ್ ಹಿಂದಿಕ್ಕಿದ್ದರು. ಕಳೆದ ಜೂನ್‌ನಲ್ಲಿ ಟ್ರಯಲ್ಸ್ ನೀಡುವಾಗ ಮೆಕ್ಲಾಫ್ಲಿನ್ ಅವರು 400 ಮೀ. ಹರ್ಡಲ್ಸ್ ಅನ್ನು 51.90 ಸೆಕೆಂಡ್ ಕಾಲಾವಧಿಯಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆ ಮುರಿದಿದ್ದಷ್ಟೇ ಅಲ್ಲ, ಅವರ ಹೆಸರಿನಲ್ಲಿ ಹೊಸ ವಿಶ್ವದಾಖಲೆ ನಿರ್ಮಾಣವಾಗಿ ಬಂಗಾರವೂ ಲಭಿಸಿದೆ. ದ್ವಿತೀಯ ಸ್ಥಾನಿ ಮುಹಮ್ಮದ್ ಕೂಡ ಹಿಂದಿನ (51.90 ಸೆ.) ಸರಿಗಟ್ಟಿದ್ದಾರೆ. ತೃತೀಯ ಸ್ಥಾನಿ ಫೆಮ್ಕೆ ಬೋಲ್ ಹೆಸರಿನಲ್ಲೂ ಯುರೋಪಿಯನ್ ನೂತನ ದಾಖಲೆ (52.03 ಸೆ.) ನಿರ್ಮಾಣವಾಗಿದೆ.

ಆರಂಭದಲ್ಲಿ ದಲಿಲಾ ಮುಹಮ್ಮದ್ ಮುನ್ನಡೆ

ಓಟದ ಆರಂಭದಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್ ದಲಿಲಾ ಮುಹಮ್ಮದ್ ಅವರು ಮುನ್ನಡೆಯಲ್ಲಿದ್ದರು. ಆರಂಭಿಕ 200 ಮೀಟರ್ ದೂರದವರೆಗೂ ಮುಹಮ್ಮದ್ ಮುಂದಿದ್ದರು. ಕೊನೇ ಗಳಿಗೆಯಲ್ಲಿ ಮೆಕ್ಲಾಫ್ಲಿನ್ ಸುಧಾರಣೆ ಕಾಣಲಾರಂಭಿಸಿದರು. ಕೊನೇ 100 ಮೀಟರ್ ವೇಳೆ ಆಲ್ ಔಟ್ ಪ್ರಯತ್ನದೊಂದಿಗೆ ಮುಂದುವರೆದ ಮೆಕ್ಲಾಫ್ಲಿನ್ ವಿಶ್ವದಾಖಲೆಯೊಂದಿಗೆ ಪ್ರಥಮಸ್ಥಾನ ತನ್ನದಾಗಿಸಿಕೊಂಡಿದ್ದಾರೆ. 5ನೇ ಟ್ರ್ಯಾಕ್‌ನಲ್ಲಿದ್ದ ಫೆಮ್ಕೆ ಬೋಲ್ ಕೂಡ ಕೊನೇ ಕ್ಷಣದಲ್ಲಿ ಗೇರ್ ಚೇಂಚ್ ಮಾಡಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. 

(Kannada Copy of Mykhel Kannada)