ಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದು ಇತಿಹಾಸ ಬರೆದ ಭಾರತೀಯ ಹಾಕಿ ತಂಡ!

05-08-21 11:11 am       Mykhel: Sadashiva   ಕ್ರೀಡೆ

ಭಾರತೀಯ ಹಾಕಿ ಪುರುಷರ ತಂಡ ಇತಿಹಾಸ ನಿರ್ಮಿಸಿದೆ. ಭಾರತದ ಸಾಂಪ್ರದಾಯಿಕ ಕ್ರೀಡೆ ಹಾಕಿಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತೀಯ ಪುರುಷರು 5-4ರಿಂದ ಜರ್ಮನಿ ತಂಡವನ್ನು ಸೋಲಿಸಿದ್ದಾರೆ.

ಟೋಕಿಯೋ: ಭಾರತೀಯ ಹಾಕಿ ಪುರುಷರ ತಂಡ ಇತಿಹಾಸ ನಿರ್ಮಿಸಿದೆ. ಭಾರತದ ಸಾಂಪ್ರದಾಯಿಕ ಕ್ರೀಡೆ ಹಾಕಿಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತೀಯ ಪುರುಷರು 5-4ರಿಂದ ಜರ್ಮನಿ ತಂಡವನ್ನು ಸೋಲಿಸಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 5ನೇ ಪದಕ ಲಭಿಸಿದೆ. ಆದರೆ ತಂಡ ಸ್ಪರ್ಧೆಯಲ್ಲಿ ಟೀಮ್ ಇಂಡಿಯಾಕ್ಕೆ ಲಭಿಸುತ್ತಿರುವ ಮೊದಲನೇ ಪದಕವಿದು. ಅಷ್ಟೇ ಅಲ್ಲ, ಸುಮಾರು 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಲಭಿಸುತ್ತಿರುವ ಮೊದಲನೇ ಕಂಚಿನ ಪದಕವಿದು!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುತ್ತಲೇ ಅಸಲಿಗೆ ಭಾರತದ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿತ್ತು. ಯಾಕೆಂದರೆ ಭಾರತೀಯ ಹಾಕಿ ಪುರುಷರು ಬರೋಬ್ಬರಿ 41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 3-1ರಿಂದ ಸೋಲಿಸುವ ಮೂಲಕ ಹಾಕಿ ಪುರುಷರು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದರು.



1980ರಲ್ಲಿ ಬಂಗಾರ ಗೆದ್ದ ಬಳಿಕ ಭಾರತಕ್ಕೆ ಇದೇ ಮೊದಲ ಪದಕ

1980ರ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದ ಬಳಿಕ ಇದೇ ಮೊದಲಬಾರಿಗೆ ಭಾರತಕ್ಕೆ ಪದಕ ಲಭಿಸಿದೆ. ಆಗಸ್ಟ್ 5ರ ಗುರುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಮೊದಲು ಗೋಲ್ ಖಾತೆ ತೆರೆದಿದ್ದು ಜರ್ಮನಿ ತಂಡ. ಮೊದಲ ಕ್ವಾರ್ಟರ್‌ನ 2ನೇ ನಿಮಿಷದಲ್ಲಿ ತೈಮೂರ್ ಒರುಜ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ನೀಡಿದರು. ಅದಾಗಿ ಮೊದಲ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳಿಂದ ಗೋಲ್ ದಾಖಲಾಗಲಿಲ್ಲ. ಮೊದಲ ಕ್ವಾರ್ಟರ್ 1-0ಯಿಂದ ಕೊನೆಗೊಂಡಿತು. ಆದರೆ ದ್ವಿತೀಯ ಕ್ವಾರ್ಟರ್‌ ಆರಂಭದಲ್ಲೇ ಭಾರತ ಗೋಲ್ ಬಾರಿಸಿತು. 17ನೇ ನಿಮಿಷದಲ್ಲಿ ಸಿಮರ್ಜೀತ್ ಸಿಂಗ್ ಗೋಲ್ ಬಾರಿಸಿ ಭಾರತಕ್ಕೆ ಹುರುಪು ತುಂಬಿದರು. ಮತ್ತೆ ಜರ್ಮನಿಯ ನಿಕ್ಲಾಸ್ ವೆಲ್ಲೆನ್ 24ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.



ದ್ವಿತೀಯ ಕ್ವಾರ್ಟರ್‌ನಲ್ಲಿ ಹೆಚ್ಚು ಗೋಲ್‌ಗಳು!

ದ್ವಿತೀಯ ಕ್ವಾರ್ಟರ್ ಆರಂಭದಲ್ಲಿ ಸಿಮರ್ಜೀತ್‌ ಮತ್ತು ವೆಲ್ಲೆನ್ ಗೋಲ್ ಬಾರಿಸಿದ ಬಳಿಕ ಮತ್ತೂ ಗೋಲ್‌ಗಳು ಸಿಡಿಯಲಾರಂಭಿದವು. ಜರ್ಮನಿಯ ಬೆನೆಡಿಕ್ಟ್ ಫರ್ಕ್ 25ನೇ ನಿಮಿಷದಲ್ಲಿ ತಂಡಕ್ಕೆ ಎರಡನೇ ಗೋಲ್ ಬಾರಿಸಿದರು. ಭಾರತದಿಂದ 27ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಭಾರತದ ಪರ 2ನೇ ಗೋಲ್ ಬಾರಿಸಿದರು. 29ನೇ ನಿಮಿಷದಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ರಿಂದ ತಂಡಕ್ಕೆ ಮೂರನೇ ಗೋಲ್ ಸಿಡಿಯಿತು. ದ್ವಿತೀಯ ಕ್ವಾರ್ಟರ್ 3-3ರ ಸಮಬಲದೊಂದಿಗೆ ಕೊನೆಗೊಂಡಿತು.



ತೃತೀಯ ಕ್ವಾರ್ಟರ್‌ನಲ್ಲಿ ಭಾರತಕ್ಕೆ ವಿಜಯದ ಗೋಲ್

ಭಾರತಕ್ಕೆ ವಿಜಯದ ಗೋಲ್ ಸಿಕ್ಕಿದ್ದು ತೃತೀಯ ಕ್ವಾರ್ಟರ್‌ನಲ್ಲಿ. 3-3ರಿಂದ ಅಂಕ ಸರಿದೂಗಿದ್ದಾಗ 31ನೇ ನಿಮಿದಲ್ಲಿ ಭಾರತದ ರೂಪೀಂದರ್ ಪಾಲ್ ಸಿಂಗ್ ತಂಡದ ಪರ ನಾಲ್ಕನೇ ಗೋಲ್ ಬಾರಿಸಿದರು. ಅದಾಗಿ 34ನೇ ನಿಮಿಷದಲ್ಲಿ ಸಿಮರ್‌ಜೀತ್‌ ಸಿಂಗ್ ಅವರಿಂದ 5ನೇ ಗೋಲ್ ಸಿಡಿಯಿತು. ವಿಶ್ವ ನಂ.3 ಭಾರತ ಆಗಲೇ ಗೆಲುವಿನ ಹುರುಪಿನಲ್ಲಿತ್ತು. ಆ ಬಳಿಕ ಪಂದ್ಯ ಇನ್ನೂ ರೂಚಕ ರೀತಿಯಲ್ಲಿ ಮುಂದುವರೆಯಿತು. ಯಾಕೆಂದರೆ ಜರ್ಮನಿಯ ಲುಕಾಸ್ ವಿಂಡ್‌ಫೆಡರ್ 48ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಆದರೆ ಆ ಬಳಿಕ ಗೋಲ್ ಬಾರಿಸಲು ಜರ್ಮನಿ ಮಾಡಿದ ಪ್ರಯತ್ನವೆಲ್ಲ ವಿಫಲವಾಯ್ತು. ಮುಖ್ಯವಾಗಿ ತಂಡದ ಗೋಲ್ ಕೀಪರ್ ಶ್ರೀಜೇಶ್ ಪರತ್ತು ರವೀಂದ್ರನ್ ಉತ್ತಮ ರಕ್ಷಣಾತ್ಮಕ ಆಟವಾಡಿ ಎದುರಾಳಿ ತಂಡದ ಗೋಲ್ ಯತ್ನಗಳನ್ನು ವಿಫಲಗೊಳಿಸಿದರು.



ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಭಾರತ

ಆಗಸ್ಟ್ 3ರಂದು ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಪುರುಷರ ಹಾಕಿ ತಂಡ ಚಿನ್ನದ ಪದಕದಾಸೆಯನ್ನು ಕೈ ಚೆಲ್ಲಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ಧ ಭಾರತ 5-2ರ ಸೋಲನುಭವಿಸಿತ್ತು. ಹೀಗಾಗಿಯೇ ಭಾರತಕ್ಕೆ ಜರ್ಮನಿ ವಿರುದ್ಧ ಕಂಚಿನ ಪದಕಕ್ಕಾಗಿ ಪಂದ್ಯ ನಡೆದಿತ್ತು. ಇದರಲ್ಲಿ ಭಾರತ ಗೆದ್ದು ಪದಕಗಳ ಸಂಖ್ಯೆ ಹೆಚ್ಚಿಸಿದೆ. ಆಗಸ್ಟ್ 4ರಂದು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವೂ ಅರ್ಜೆಂಟೀನಾ ವಿರುದ್ಧ 2-1ರ ಸೋಲು ಕಂಡಿತ್ತು. ಮಹಿಳಾ ತಂಡಕ್ಕೂ ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕಾಗಿ ಪಂದ್ಯ ನಡೆಯಲಿದೆ. ಆಗಸ್ಟ್ 6ರ 7 AMಗೆ ಈ ಪಂದ್ಯ ನಡೆಯಲಿದೆ.

(Kannada Copy of Mykhel Kannada)