ಟೋಕಿಯೋ ಒಲಿಂಪಿಕ್ಸ್: ಮಣಿಕಾ ಬಾತ್ರಾಗೆ ಟಿಟಿಎಫ್‌ಐನಿಂದ ಶೋಕಾಸ್ ನೋಟಿಸ್!

05-08-21 12:53 pm       Mykhel: Sadashiva   ಕ್ರೀಡೆ

ಟೋಕಿಯೋ ಒಲಿಂಪಿಕ್ಸ್ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್‌ ರಾಯ್ ಸಹಾಯ ನಿರಾಕರಿಸಿದ ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಟಿಟಿಎಫ್‌ಐ ಶೋಕಾಸ್ ನೋಟಿಸ್ ನೀಡಲು ನಿರ್ಧರಿಸಿದೆ.

ನವದೆಹಲಿ: ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್‌ ರಾಯ್ ಸಹಾಯ ನಿರಾಕರಿಸಿದ ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾಗೆ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ಬುಧವಾರ (ಆಗಸ್ಟ್ 4) ಶೋಕಾಸ್ ನೋಟಿಸ್ ನೀಡಲು ನಿರ್ಧರಿಸಿದೆ.

ಮಣಿಕಾ ಬಾತ್ರಾ ಅವರ ವೈಯಕ್ತಿಕ ಕೋಚ್ ಸನ್ಮಯ್ ಪರಂಜ್ಪೆ ಅವರಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಭ್ಯಾಸದ ವೇಳೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಪಂದ್ಯದ ವೇಳೆ ಕ್ರೀಡಾಂಗಣ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸ್ಪರ್ಧೆಯ ವೇಳೆ ಪರಂಜ್ಪೆಗೆ ಅವಕಾಶ ನೀಡಬೇಕೆಂದು ಮಣಿಕಾ ಒತ್ತಾಯಿಸಿದರಾದರೂ ಆಯೋಜಕರು ಇದಕ್ಕೆ ಸಮ್ಮತಿಸಲಿಲ್ಲ.



ಯಾಕೆಂದರೆ ಒಲಿಂಪಿಕ್ಸ್‌ನಂತ ದೊಡ್ಡ ಕ್ರೀಡಾಕೂಟಗಳ ವೇಳೆ ರಾಷ್ಟ್ರೀಯ ಕೋಚ್‌ಗೆ ಸ್ಪರ್ಧೆ ನಡೆಯುತ್ತಿರುವ ವೇಳೆ ಪ್ಲೇಯರ್‌ಗೆ ಸಲಹೆ, ಮಾರ್ಗದರ್ಶನ ನೀಡಲು ಅವಕಾಶವಿದೆಯೇ ಹೊರತು ವೈಯಕ್ತಿಕ ಕೋಚ್‌ಗಳ ಸಹಾಯ ಪಡೆದುಕೊಳ್ಳಲು ಪ್ಲೇಯರ್‌ಗೆ ಅವಕಾಶವಿಲ್ಲ. ಸ್ಪರ್ಧೆ ನಡೆಯುವಾಗ ವೈಯಕ್ತಿಕ ಕೋಚ್ ಪ್ರವೇಶಕ್ಕೆ ಹೆಚ್ಚಿನಸಾರಿ ಅವಕಾಶ ಮಾಡಿಕೊಡಲ್ಲ. ಇದರಿಂದ ಬೇಸರಗೊಂಡ ಮಣಿಕಾ ಪ್ರತಿಭಟನಾರ್ಧವಾಗಿ ಸ್ಪರ್ಧೆಯ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್‌ ರಾಯ್ ಸಹಾಯ ನಿರಾಕರಿಸಿದ್ದರು. ಪರಿಣಾಮ, ಮಹಿಳಾ ಸಿಂಗಲ್ಸ್ 32ನೇ ಸುತ್ತಿಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಮಣಿಕಾ, ಆ ಬಳಿಕ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ತಂಡ ಸ್ಪರ್ಧೆಯಲ್ಲೂ ಮಣಿಕಾಗೆ ಪದಕ ಸಿಕ್ಕಿರಲಿಲ್ಲ.

(Kannada Copy of Mykhel Kannada)