ಟೋಕಿಯೋ ಒಲಿಂಪಿಕ್ಸ್: ಕಂಚಿನ ಪದಕ ಕೈಚೆಲ್ಲಿದ ಭಾರತೀಯ ಮಹಿಳಾ ಹಾಕಿ ತಂಡ

06-08-21 10:45 am       Mykhel: Sadashiva   ಕ್ರೀಡೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 4-3ರ ಸೋಲು ಕಂಡಿದೆ.

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 4-3ರ ಸೋಲು ಕಂಡಿದೆ. ಇದರೊಂದಿಗೆ ಮಹಿಳಾ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಲಿದ್ದ ಚೊಚ್ಚಲ ಒಲಿಂಪಿಕ್ ಪದಕ ಕೈತಪ್ಪಿದೆ. ಅಲ್ಲದೆ ಹಾಕಿ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಸಿಗಲಿದ್ದ 6ನೇ ಪದಕವೂ ಕೈಜಾರಿದೆ

ಶುಕ್ರವಾರ (ಆಗಸ್ಟ್ 6) ನಡೆದ ಕಂಚಿನ ಪದಕದ ಪಂದ್ಯದಲ್ಲಿ ಭಾರತ ಉತ್ತಮ ಪೈಪೋಟಿ ನೀಡಿತು. ಭಾರತದ ಪರ ಗುರ್‌ಜೀತ್ ಕೌರ್ ಎರಡು ಗೋಲ್‌ಗಳು, ವಂದನಾ ಕಟಾರಿಯಾ ಒಂದು ಗೋಲ್ ಬಾರಿಸಿದರಾದರೂ ಪಂದ್ಯ ಗೆಲ್ಲುವಲ್ಲಿ ಭಾರತ ವಿಫಲವಾಯ್ತು. ಇಲ್ಲಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೀಲ್ಡ್ ಹಾಕಿ ವಿಭಾಗದಲ್ಲಿ ಭಾರತದ ಸ್ಪರ್ಧೆ ಕೊನೆಗೊಂಡಿದೆ.



ದ್ವಿತೀಯ ಕ್ವಾರ್ಟರ್‌ನಲ್ಲಿ ಮುಂದಿದ್ದ ಭಾರತ

ಪಂದ್ಯದ ಆರಂಭಿಕ ಕ್ವಾರ್ಟರ್‌ನಲ್ಲಿ ಇತ್ತಂಡಗಳಿಂದ ಗೋಲ್ ದಾಖಲಾಗಲಿಲ್ಲ. ಹೀಗಾಗಿ ಮೊದಲ ಕ್ವಾರ್ಟರ್ 0-0ಯಿಂದ ಕೊನೆಯಾಯ್ತು. ಆದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ಭಾರತ ಮುನ್ನಡೆ ಪಡೆದುಕೊಂಡಿತ್ತು. 16ನೇ ನಿಮಿಷದಲ್ಲಿ ಗ್ರೇಟ್ ಬ್ರಿಟನ್‌ನ ಎಲೆನಾ ಸಿಯಾನ್ ರೇಯರ್ ಮೊದಲ ಗೋಲ್ ಬಾರಿಸಿದರು. 24ನೇ ನಿಮಿಷದಲ್ಲಿ ಮತ್ತೆ ಬ್ರಿಟನ್‌ನ ಸಾರಾ ರಾಬರ್ಟ್ಸನ್ ಮತ್ತೊಂದು ಗೋಲ್ ಬಾರಿಸಿ ತಂಡಕ್ಕೆ 2-0ಯ ಮುನ್ನಡೆ ಕೊಟ್ಟಿದ್ದರು. ಆದರೆ 25 ಮತ್ತು 26ನೇ ನಿಮಿಷಗಳಲ್ಲಿ ಭಾರತದಿಂದ ಎರಡು ಗೋಲ್‌ಗಳು ಸಿಡಿದವರು. ಗುರ್‌ಜೀತ್ ಕೌರ್ ಬೆನ್ನು ಬೆನ್ನಿಗೆ ಎರಡು ಗೋಲ್ ಬಾರಿಸಿ ಅಂಕವನ್ನು 2-2ಕ್ಕೆ ತಂದರು. 29ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಅವರಿಂದ ಗೋಲ್ ದಾಖಲಾಯ್ತು. ಹೀಗಾಗಿ ಭಾರತ ದ್ವಿತೀಯ ಕ್ವಾರ್ಟರ್‌ನಲ್ಲಿ 3-2ರ ಮುನ್ನಡೆ ಪಡೆದುಕೊಂಡಿತ್ತು.



ಗೋಲ್ ಕೀಪರ್ ಸವಿತಾ ಪೂನಿಯ ಉತ್ತಮ ಪ್ರದರ್ಶನ

ಪಂದ್ಯದ ತೃತೀಯ ಕ್ವಾರ್ಟರ್‌ನಿಂದ ಭಾರತೀಯ ವನಿತಾ ತಂಡದಿಂದ ಗೋಲ್ ದಾಖಲಾಗಲಿಲ್ಲ. ಆದರೆ ಗ್ರೇಟ್ ಬ್ರಿಟನ್ ಎರಡು ಗೋಲ್ ಬಾರಿಸಿತು. ತೃತೀಯ ಕ್ವಾರ್ಟರ್‌ನಲ್ಲಿ ಹಾಲಿ ಪಿಯರ್ನ್-ವೆಬ್ 35ನೇ ನಿಮಿಷದಲ್ಲಿ ಗೋಲ್ ಬಾರಿಸಿ ಅಂಕವನ್ನು 3-3ಕ್ಕೆ ತಂದರು. ಅದಾಗಿ ನಾಲ್ಕನೇ ಕ್ವಾರ್ಟರ್‌ನಲ್ಲಿ ಮತ್ತೆ ಗ್ರೇಸ್ ಬಾಲ್ಸ್ಟನ್ ನಾಲ್ಕನೇ ಗೋಲ್ ಬಾರಿಸಿ ಗ್ರೇಟ್ ಬ್ರಿಟನ್‌ಗೆ ಭರ್ಜರಿ ಮುನ್ನಡೆ ಕೊಟ್ಟರು. ಭಾರತ ಅಂಕ ಸರಿದೂಗಿಸಲು ಕೊನೇ ಕ್ಷಣದವರೆಗೂ ಹೋರಾಟ ನಡೆಸಿತಾದರೂ ಪ್ರಯತ್ನ ಫಲ ನೀಡಲಿಲ್ಲ. ಆದರೆ ಪಂದ್ಯದಲ್ಲಿ ಭಾರತದ ಗೋಲ್ ಕೀಪರ್ ಸವಿತಾ ಪೂನಿಯಾ, ಗುರ್‌ಜೀತ್ ಕೌರ್ ಮತ್ತು ವಂದನಾ ಕಟಾರಿಯಾ ತಂಡದ ಉತ್ತಮ ಪೈಪೋಟಿಗೆ ನೆರವಾಗಿದ್ದು ಗಮನ ಸೆಳೆದಿತ್ತು.



ಭಾರತದ ಮಹಿಳಾ ಹಾಕಿ ಐತಿಹಾಸಿಕ ಸಾಧನೆ

ಆಗಸ್ಟ್ 4ರಂದು ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತೀಯ ಹಾಕಿ ವನಿತೆಯರು 2-1ರ ಸೋಲಿನೊಂದಿಗೆ ಚಿನ್ನ ಅಥವಾ ಬೆಳ್ಳಿ ಪದಕದ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಭಾರತೀಯ ಮಹಿಳಾ ತಂಡ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದರಿಂದ ಈ ಸಾಧನೆ ಹೊಸ ದಾಖಲೆಯೆನಿಸಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 1-0 ಅಂತರದಿಂದ ಗೆದ್ದಿದ್ದ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿತ್ತು. ಕಂಚಿನ ಪದಕದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಸೋತಿರುವ ಭಾರತೀಯ ತಂಡಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಸಾಂತ್ವನಿಸಿ ಟ್ವೀಟ್ ಮಾಡಿದ್ದಾರೆ. ಭಾರತದ ಅನೇಕ ತಾರೆಯರು ಟ್ವೀಟ್‌ ಮಾಡಿ ಭಾರತೀಯ ಮಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ, ನೀಡಿದ ಪೈಪೋಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(Kannada Copy of Mykhel Kannada)