ಸಿಎಸ್‌ಕೆಯಿಂದ ನೀರಜ್ ಚೋಪ್ರಾಗೆ 1 ಕೋ.ರೂ., ವಿಶೇಷ ಜೆರ್ಸಿ ಕೊಡುಗೆ

08-08-21 12:15 pm       Mykhel: Sadashiva   ಕ್ರೀಡೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ ಗೆದ್ದಿರುವ ಅಥ್ಲೀಟ್ ನೀರಜ್ ಚೋಪ್ರಾಗೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ ಭರ್ಜರಿ ಪುರಸ್ಕಾರ ಘೋಷಿಸಿದೆ.

ಚೆನ್ನೈ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ ಗೆದ್ದಿರುವ ಅಥ್ಲೀಟ್ ನೀರಜ್ ಚೋಪ್ರಾಗೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ ಭರ್ಜರಿ ಪುರಸ್ಕಾರ ಘೋಷಿಸಿದೆ. ಪುರುಷರ ಜಾವೆಲಿನ್ ಥ್ರೋನಲ್ಲಿ ದೇಶಕ್ಕೆ ಚಿನ್ನದ ಮೆರಗು ತಂದಿರುವ ಚೋಪ್ರಾಗೆ 1 ಕೋಟಿ ರೂ. ನಗದು ಪುರಸ್ಕಾರ ಮತ್ತು ಸ್ಪರ್ಧೆಯ ವೇಳೆ ಚೋಪ್ರಾ ಧರಿಸಿದ್ದ 8758 ಎದೆ ಸಂಖ್ಯೆಯ ವಿಶೇಷ ಜೆರ್ಸಿ ಬಿಡುಗಡೆ ಮಾಡಲಿದೆ.

ಆಗಸ್ಟ್ 7ರಂದು ನಡೆದಿದ್ದ ಪುರುಷರ ಜಾವೆಲಿನ್ ಥ್ರೋನಲ್ಲಿ 87.58 ಮೀಟರ್ ಸಾಧನೆಯೊಂದಿಗೆ ನೀರಜ್ ಚೋಪ್ರಾ ಬಂಗಾರ ಗೆದ್ದಿದ್ದರು. ಇದು ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಲಭಿಸಿದ ಚೊಚ್ಚಲ ಚಿನ್ನದ ಪದಕ ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ದೊರೆತ ಮೊದಲ ಬಂಗಾರ ಪದಕ ಹಾಗು ಒಟ್ಟಾರೆ ಭಾರತಕ್ಕೆ ಸಿಕ್ಕ 7ನೇ ಪದಕವಾಗಿ ಗುರುತಿಸಿಕೊಂಡಿತ್ತು.



ನೀರಜ್‌ಗೆ 1 ಕೋಟಿ ರೂಪಾಯಿ ನಗದು ಪುರಸ್ಕಾರ

"ಚೆನ್ನೈ ಸೂಪರ್ ಕಿಂಗ್ಸ್‌ ಕ್ರಿಕೆಟ್ ಲಿಮಿಟೆಡ್ ಅಭಿಮಾನಿಗಳ ಪರವಾಗಿ ಭಾರತದ ಜನಪ್ರಿಯ ಮತ್ತು ಪ್ರೀತಿಯ ಕ್ರೀಡಾ ತಾರೆ ಲೆಫ್ಟಿನೆಂಟ್ ಕರ್ನಲ್ ಆಗಿರುವ ಎಂಎಸ್ ಧೋನಿ ಅವರು ಭಾರತೀಯ ಆರ್ಮಿಯಲ್ಲಿ ಜೂನಿಯರ್ ಕಮಿಶನರ್ ಆಫೀಸರ್ ಆಗಿರುವ ನೀರಜ್ ಚೋಪ್ರಾ ಅವರ ಈ ಐತಿಹಾಸಿಕ ಗೆಲುವನ್ನು ಆಚರಿಸಲು ಖುಷಿಪಡುತ್ತಿದ್ದಾರೆ," ಎಂದು ಸಿಎಸ್‌ಕೆ ಅಧಿಕೃತ ಹೇಳಿಕೆ ತಿಳಿಸಿದೆ. ಚೋಪ್ರಾ ಅವರ ಈ ಅದ್ಭುತ ಸಾಧನೆಗಾಗಿ ಅಭಿನಂದನೆಯ ಭಾಗವಾಗಿ ಸಿಎಸ್‌ಕೆ ಚೋಪ್ರಾಗೆ 1 ಕೋಟಿ ರೂ. ನಗದು ಪುರಸ್ಕಾರ ನೀಡುವುದಾಗಿ ಸಿಎಸ್‌ಕೆ ತಿಳಿಸಿದೆ. ನೀರಜ್ ಚೋಪ್ರಾಗೆ ಗೌರವಾರ್ಥವಾಗಿ ಸ್ಪರ್ಧೆಯ ವೇಳೆ ಅವರು ಧರಿಸಿದ್ದ ಎದೆ ಸಂಖ್ಯೆ 8758ರ ಜೆರ್ಸಿಯನ್ನೂ ಹೊರ ತರುವುದಾಗಿಯೂ ಸಿಎಸ್‌ಕೆ ತಿಳಿಸಿದೆ.

ನೀರಜ್ ಚೋಪ್ರಾಗೆ ಹಲವು ಕಡೆಯಿಂದ ಹಣದ ಹೊಳೆ

ಸಿಎಸ್‌ಕೆ ವಕ್ತಾರ ಮಾತನಾಡಿ, "ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರ ಸಾಧನೆ ನಮಗೆ ಹೆಮ್ಮೆ ತರಿಸಿದೆ. ಅವರ ಪ್ರಯತ್ನ, ಸಾಧನೆ ದೇಶದ ಮಿಲಿಯನ್‌ ಜನರನ್ನು ಸ್ಫೂರ್ತಿಗೊಳಿಸಿದೆ, ಅವರೊಳಗೂ ಕ್ರೀಡಾ ಸಾಧನೆಯ ಬಗ್ಗೆ ನಂಬಿಕೆ ಮೂಡಿಸಿದೆ. ಕ್ರೀಡೆಯಲ್ಲಿ ನಾವೂ ದೊಡ್ಡ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧಿಸಬಹುದು ಎಂಬ ಆಶಾಭಾವನೆ ಅನೇಕರಲ್ಲಿ ಮೂಡಿದೆ. 87.58 ಮೀಟರ್ ಜಾವೆಲಿನ್ ಎಸೆದು ಅವರು ಗೆದ್ದಿರುವ ಬಂಗಾರದ ಪದಕ ಇಡೀ ಭಾರತ ದೇಶದ ಎಲ್ಲರನ್ನೂ ಸಂಭ್ರಮದಲ್ಲಿ ತೇಲುವಂತೆ ಮಾಡಿದೆ," ಎಂದು ಹೇಳಿದ್ದಾರೆ. ನೀರಜ್ ಚೋಪ್ರಾಗೆ ಈಗಾಗಲೇ ಅವರಿರುವ ಹರ್ಯಾಣ ರಾಜ್ಯ ಸರ್ಕಾರ 6 ಕೋಟಿ ರೂ. ಘೋಷಿಸಿದೆ, ಭಾರತದ ಖ್ಯಾತ ಮೋಟಾರ್ ಉತ್ಪನ್ನ ಸಂಸ್ಥೆ ಮಹೀಂದ್ರದಿಂದ ಹೊಸ ಕಾರು ಘೋಷಿಸಲಾಗಿದೆ. ಜೊತೆಗೆ ಭಾರತೀಯ ಒಲಿಂಪಿಕ್ ಕಮಿಟಿಯಿಂದ 1 ಕೋಟಿ ರೂ.ಗೂ ಹೆಚ್ಚು ನಗದು ಸಿಗಲಿದೆ.



ದ್ವಿತೀಯ ಯತ್ನದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್

ಅಂದ್ಹಾಗೆ ಟೋಕಿಯೋ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಸ್ಪರ್ಧೆಯ ಗ್ರೂಪ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶಿಸಿದ್ದ ನೀರಜ್ ಚೋಪ್ರಾ ಫೈನಲ್‌ನಲ್ಲಿ ಮೂರು ಎಸೆತಗಳನ್ನು ಎಸೆದಿದ್ದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ದೂರ ಈಟಿ ಎಸೆದಿದ್ದರು. ಎರಡನೇ ಯತ್ನದಲ್ಲಿ 87.58 ಮೀಟರ್ ಸಾಧನೆ ತೋರಿದ್ದರು. ಭಾರತಕ್ಕೆ ಬಂಗಾರ ತಂದಿದ್ದು ಇದೇ ಎಸೆತ. ಮೂರನೇ ಯತ್ನವಾಗಿ ಚೋಪ್ರಾ 76.79 ಮೀಟರ್ ದೂರ ಎಸೆದರಾದರೂ ಇದು ಹಿಂದಿನಕ್ಕಿಂತ ಉತ್ತಮ ಎಸೆತ ಎನಿಸಲಿಲ್ಲ. ಪುರುಷರ ಜಾವೆಲಿನ್‌ನಲ್ಲಿ ನೀರಜ್ ಬಂಗಾರ ಗೆದ್ದರೆ, ಝೆಕ್ ರಿಪಬ್ಲಿಕ್‌ನ ಜಾಕೂಬ್ ವಾಡ್ಲೆಜ್ಚ್ 86.67 ಮೀಟರ್ ಸಾಧನೆಯೊಂದಿಗೆ ಈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದರು. ಕಂಚಿನ ಪದಕ ಝೆಕ್ ರಿಪಬ್ಲಿಕ್‌ನವರೇ ವೆಸೆಲಿ ವಿಟೆಜ್ಸ್ಲಾವ್ (85.44 ಮೀಟರ್) ಪಾಲಾಗಿತ್ತು.

(Kannada Copy of Mykhel Kannada)