ಕೈರೊನ್‌ ಪೊಲಾರ್ಡ್‌ಗೆ ಚಳ್ಳೆಹಣ್ಣು ತಿನ್ನಿಸಿದ್ದೇಗೆಂದು ತಿಳಿಸಿದ ಚಹಲ್‌!

07-02-22 04:52 pm       Source: Vijayakarnataka   ಕ್ರೀಡೆ

ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಕೈರೊನ್‌ ಪೊಲಾರ್ಡ್‌ ಅವರನ್ನು ಶೂನ್ಯಕ್ಕೆ ಔಟ್‌ ಮಾಡಲು ತಾವು ರೂಪಿಸಿದ್ದ ಗೇಮ್‌ ಪ್ಲಾನ್‌ ಏನೆಂಬುದನ್ನು ಭಾರತದ ಯುಜ್ವೇಂದ್ರ ಚಹಲ್‌ ಬಹಿರಂಗಪಡಿಸಿದ್ದಾರೆ.

ಹೊಸದಿಲ್ಲಿ: ಮೊದಲನೇ ಒಡಿಐ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ನಾಯಕ ಹಾಗೂ ಬಿಗ್‌ ಹಿಟ್ಟರ್‌ ಕೈರೊನ್‌ ಪೊಲಾರ್ಡ್‌ ಅವರನ್ನು ಔಟ್‌ ಮಾಡಲು ತಾವು ರೂಪಿಸಿದ್ದ ತಂತ್ರವನ್ನು ಟೀಮ್‌ ಇಂಡಿಯಾ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಬಹಿರಂಗಪಡಿಸಿದ್ದಾರೆ.

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಓಡಿಐ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್‌ ಮೋಡಿಯ ಸಹಾಯದಿಂದ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ಭಾರತ ತಂಡ 1-0 ಮುನ್ನಡೆ ಪಡೆಯಿತು.

ಭಾರತ ತಂಡದ 1000ನೇ ಓಡಿಐ ಐತಿಹಾಸಿಕ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಸ್ವೀಕರಿಸಿದ ಯುಜ್ವೇಂದ್ರ ಚಹಲ್‌ ವಿಂಡೀಸ್‌ ನಾಯಕ ಕೈರೊನ್‌ ಪೊಲಾರ್ಡ್‌ ಸೇರಿದಂತೆ ಒಟ್ಟು 4 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಆ ಮೂಲಕ ವೆಸ್ಟ್‌ ಇಂಡೀಸ್‌ ತಂಡ 176ಕ್ಕೆ ಆಲ್‌ಔಟ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಂಡೀಸ್‌ ಎದುರು 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಭಾರತ!

ಪಂದ್ಯದ ಬಳಿಕ ನಾಯಕ ರೋಹಿತ್‌ ಶರ್ಮಾ ಜೊತೆ ಮಾತನಾಡಿದ ಚಹಲ್‌, "ದಕ್ಷಿಣ ಆಫ್ರಿಕಾದಲ್ಲಿ ನಾನು ಹೆಚ್ಚು ಗೂಗ್ಲಿಗಳನ್ನು ಬೌಲಿಂಗ್ ಮಾಡದಿರುವ ಬಗ್ಗೆ ಪಂದ್ಯಕ್ಕೂ ಮುನ್ನ ನಡೆದಿದ್ದ ಮಾತುಕತೆ ನನ್ನ ಮನಸ್ಸಿನಲ್ಲಿತ್ತು. ವಿಂಡೀಸ್‌ ಬ್ಯಾಟ್ಸ್‌ಮನ್‌ಗಳು ಹಾರ್ಡ್ ಹಿಟ್ಟರ್‌ಗಳೆಂದು ತಿಳಿದಿದೆ. ಒಮ್ಮೆ ಅವರು ತಮ್ಮ ಹೊಡೆತಗಳಿಗೆ ಹೋಗಲು ನಿರ್ಧರಿಸಿದರೆ, ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ," ಎಂದರು.

"ನೀವು(ರೋಹಿತ್‌) ಹೇಳಿದಂತೆ, ಗೂಗ್ಲಿಗಿಂತ ನನ್ನ ಲೆಗ್‌ ಸ್ಪಿನ್‌ ಹೆಚ್ಚು ಪರಿಣಾಮಕಾರಿಯಾಗಿತ್ತು. ಹಾಗಾಗಿ ಇದನ್ನು ನಾನು ಮಿಶ್ರಣ ಮಾಡಿದೆ. ಅದರಲ್ಲೂ ವಿಶೇಷವಾಗಿ ಕೈರೊನ್‌ ಪೊಲಾರ್ಡ್‌ಗೆ ನೀವು ಹೇಳಿದಂತೆ ಮುಂದೆ ಪಿಚ್‌ ಹಾಕಿ ಗೂಗ್ಲಿ ಮಾಡಿದೆ. ಅದರಂತೆ ಪೊಲಾರ್ಡ್‌ ಔಟ್‌ ಆದರು," ಎಂದು ಹೇಳಿದರು.

'ಪರಿಪೂರ್ಣ ಆಟದಲ್ಲಿ ನನಗೆ ನಂಬಿಕೆ ಇಲ್ಲ' ಗೆಲುವಿನ ಬಳಿಕ ರೋಹಿತ್ ಹೇಳಿದ್ದಿದು!

100 ಓಡಿಐ ವಿಕೆಟ್‌ ಪೂರ್ಣಗೊಳಿಸಿದ ಬಗ್ಗೆ ಮಾತನಾಡಿ, "ಅದ್ಭುತ ಭಾವನೆ ಉಂಟಾಗುತ್ತಿದೆ. ಕಳೆದ ಐದು ವರ್ಷಗಳಿಂದ ನನ್ನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಅನುಭವಿಸಿದ್ದೇನೆ. ಓಡಿಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಕಬಳಿಸಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದು ದೊಡ್ಡ ಸಂಗತಿ. ಇಷ್ಟು ಬೇಗ ಈ ಮೈಲುಗಲ್ಲು ಸ್ಥಾಪಿಸುತ್ತೇನೆಂದು ಅಂದುಕೊಂಡಿರಲಿಲ್ಲ," ಎಂದು ತಿಳಿಸಿದರು.

Ind Vs Wi 1st Odi, Had The Length Been Wrong, It Would Have Gone For A Six Yuzvendra Chahal On How He Dismissed Kieron Pollard.