IPL 2022: ಲಖನೌ ವಿರುದ್ಧ ಸೋಲಿನ ಬೆನ್ನಲ್ಲೆ ರಿಷಭ್‌ ಪಂತ್‌ಗೆ ಮತ್ತೊಂದು ಆಘಾತ!

08-04-22 01:03 pm       Source: Vijayakarnataka   ಕ್ರೀಡೆ

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 15ನೇ ಪಂದ್ಯದಲ್ಲಿ ನಿಧಾನಗತಿಯ ಓವರ್‌ಗಳ ಅಪರಾಧ ಸಂಬಂಧ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ...

ಇಲ್ಲಿನ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದಿದ್ದ 2022ರ ಇಂಡಿಯನ್‌ ಪ್ರೀಮಿಯರ್ ಲೀಗ್‌(ಐಪಿಎಲ್‌) ಟೂರ್ನಿಯ ಲಖನೌ ಸೂಪರ್‌ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್‌ ಪಂತ್‌ಗೆ ದಂಡ ವಿಧಿಸಲಾಗಿದೆ.

2022ರ ಟಾಟಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಧಾನಗತಿಯ ಓವರ್‌ಗಳ ಸಂಬಂಧ ಪ್ರಸಕ್ತ ಆವೃತ್ತಿಯಲ್ಲಿ ತಂಡದ ಮೊದಲ ಅಪರಾಧ ಇದಾಗಿದೆ. ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್‌ ಪಂತ್‌ಗೆ 12 ಲಕ್ಷ ರೂ. ಗಳ ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್‌ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 6 ವಿಕೆಟ್‌ ಸೋತು ಬೇಸರದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಇಲ್ಲಿಯವರೆಗೂ ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮೂರು ಪಂದ್ಯಗಳಾಡಿದ್ದು, ಅದರಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯಿಸಿದೆ.

ಅಂದಹಾಗೆ ಗುರುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತ್ತು. ನಂತರ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗಡಿ ದಾಟಿ ಸಂಭ್ರಮಿಸಿತು.

ಇದಕ್ಕೂ ಮುನ್ನ ಬುಧವಾರ ರಾತ್ರಿ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ನಡುವಣ ಪಂದ್ಯದಲ್ಲಿ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ನಿತೀಶ್‌ ರಾಣಾ ಹಾಗೂ ಜಸ್‌ಪ್ರಿತ್‌ ಬುಮ್ರಾ ಅವರನ್ನು ವಾಗ್ದಂಡನೆಗೆ ಗುರಿ ಮಾಡಲಾಗಿತ್ತು. ನಿತೀಶ್‌ ರಾಣಾಗೆ ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ದಂಡ ವಿಧಿಸಲಾಗಿದ್ದರೆ, ಜಸ್‌ಪ್ರಿತ್‌ ಬುಮ್ರಾಗೆ ದಂಡ ವಿಧಿಸುವ ಬದಲು ವಾಗ್ದಂಡನೆಗೆ ಗುರಿಯಾಗಿಸಲಾಗಿತ್ತು.

IPL 2022: Jasprit Bumrah & Nitish Rana Fined 10% Match Fee For Breaching  Code Of

ಪೃಥ್ವಿ ಶಾ ಅರ್ಧಶತಕ

Prithvi Shaw's redemption lies in following the Sachin Tendulkar way |  Cricket - Hindustan Times

 ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಕೇವಲ 34 ಎಸೆತಗಳನ್ನು ಎದುರಿಸಿದ ಅವರು ಎರಡು ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 61 ರನ್‌ ಸಿಡಿಸಿದ್ದರು. ಇವರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ರಿಷಭ್‌ ಪಂತ್ ಹಾಗೂ ಸರ್ಫರಾಜ್ ಖಾನ್‌ ಕ್ರಮವಾಗಿ 39 ಮತ್ತು 36 ರನ್‌ ಗಳಿಸಿದರೂ ಡೆಲ್ಲಿ ಕ್ಯಾಪಿಟಲ್ಸ್‌ 149 ರನ್‌ಗಳು ಕಲೆ ಹಾಕಲು ಮಾತ್ರ ಶಕ್ತವಾಯಿತು.

ಮಿಂಚಿದ ಕ್ವಿಂಟನ್ ಡಿ ಕಾಕ್‌

Quinton de Kock Vs KL Rahul: The Best T20 Wicket-Keeper Opener | IWMBuzz

150 ರನ್‌ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಕೆ.ಎಲ್‌ ರಾಹುಲ್ ಹಾಗೂ ಕ್ವಿಟಂನ್ ಡಿ ಕಾಕ್‌ 73 ರನ್‌ ಜೊತೆಯಾಟವಾಡುವ ಮೂಲಕ ಭರ್ಜರಿ ಅಡಿಪಾಯ ಹಾಕಿಕೊಟ್ಟರು. 24 ರನ್‌ ಗಳಿಸಿ ರಾಹುಲ್‌ ವಿಕೆಟ್‌ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿ ಹೊತ್ತು ಬ್ಯಾಟ್‌ ಮಾಡಿದ ಡಿ ಕಾಕ್‌, 52 ಎಸೆತಗಳಲ್ಲಿ 80 ರನ್ ಸಿಡಿಸಿದರು. ಆದರೆ ಕೊನೆಯಲ್ಲಿ 12 ಎಸೆತಗಳಲ್ಲಿ 19 ರನ್‌ ಅಗತ್ಯವಿದ್ದ ವೇಳೆ ಕೃಣಾಲ್‌ ಪಾಂಡ್ಯ(19*) ಹಾಗೂ ಆಯುಷ್‌ ಬದೋನಿ(10*) ಪಂದ್ಯವನ್ನು ಸುಲಭವಾಗಿ ಮುಗಿಸಿದರು.

Ipl 2022 Delhi Capitals Skipper Rishabh Pant Fined Rs 12 Lakhs For Slow OverRate Against Lucknow Super Giants.