IPL 2022: ಆರ್‌ಸಿಬಿ ಬೌಲರ್‌ಗಳಿಗೆ ಬೆವರಿಳಿಸಿದ್ದೇಗೆಂದು ತಿಳಿಸಿದ ಶಿವಂ ದುಬೇ!

13-04-22 01:59 pm       Source: Vijayakarnataka   ಕ್ರೀಡೆ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ 23 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಶಿವಂ ದುಬೇ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ...

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ ಅಜೇಯ 95 ರನ್‌ ಸಿಡಿಸಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ 23 ರನ್‌ಗಳ ಗೆಲುವಿಗೆ ನೆರವಾದ ಶಿವಂ ದುಬೇ ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲಾನ್‌ ಏನೆಂಬುದನ್ನು ಬಹಿರಂಗಪಡಿಸಿದರು.

ಮಂಗಳವಾರ ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್ ಪರ ಶಿವಂ ದುಬೇ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಆರ್‌ಸಿಬಿ ಬೌಲರ್‌ಗಳನ್ನು ಬೆವರಿಳಿಸಿದ ಶಿವಂ ದುಬೇ, ಕೇವಲ 5 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಂ ದುಬೇ, "ಟೀಮ್‌ ಮ್ಯಾನೇಜ್‌ಮೆಂಟ್‌ ನನ್ನನ್ನು ಸಾಕಷ್ಟು ಬೆಂಬಲಿಸಿದೆ. ಇದರ ಜೊತೆಗೆ ನನ್ನ ಆಟವನ್ನು ನಾನು ಬೆಂಬಲಿಸಿದ್ದೇನೆ. ಚೆಂಡನ್ನು ಹೊಡೆಯಬೇಕೆಂದು ಅನಿಸಿದರೆ ಹೊಡೆಯುತ್ತಿದ್ದೆ. ಅದರಂತೆ ಬ್ಯಾಟ್‌ಗೆ ಚೆಂಡು ಚೆನ್ನಾಗಿ ಸಿಗುತ್ತಿತ್ತು. ಇದು ನನ್ನಲ್ಲಿ ವಿಶ್ವಾಸವನ್ನು ಹೆಚ್ಚಿಸಿತು. ಇದಕ್ಕೆ ತಕ್ಕಂತೆ ನನ್ನ ಸ್ವಾಭಾವಿಕ ಆಟವನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದೇನೆ," ಎಂದು ಹೇಳಿದರು.

shivan dube

ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ತನ್ನ ಆರಂಭಿಕ ಪಂದ್ಯದಲ್ಲಿ 3 ರನ್‌ ಗಳಿಸಿದ್ದ ಶಿವಂ ದುಬೇ ಅವರು ನಂತರ ಲಖನೌ ಸೂಪರ್‌ ಜಯಂಟ್ಸ್ ಹಾಗೂ ಪಂಜಾಬ್‌ ಕಿಂಗ್ಸ್‌ ವಿರುದ್ಧ ಕ್ರಮವಾಗಿ 49 ಮತ್ತು 57 ರನ್‌ ಸಿಡಿಸಿದ್ದರು. ಆ ಮೂಲಕ ತಮ್ಮ ಬ್ಯಾಟಿಂಗ್‌ ಪ್ರದರ್ಶನವನ್ನು ಉತ್ತಮಪಡಿಸಿಕೊಂಡರು. ಮುಂಬೈ ಪರ ದೇಶಿ ಕ್ರಿಕೆಟ್‌ ಆಡುವಾಗ ತಮ್ಮ ಆಟದಲ್ಲಿ ಸುಧಾರಣೆ ಕಂಡುಕೊಂಡಿರುವ ಬಗ್ಗೆ ದುಬೇ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

"ನಾನು ದೀರ್ಘಕಾಲದಿಂದ ಏನು ಮಾಡಲು ಪ್ರಯತ್ನಿಸುತ್ತಿದ್ದೇನೋ, ಈಗ ಅದನ್ನು ಕಾರ್ಯಗತಗೊಳಿಸಲು ಸಮರ್ಥನಾಗಿದ್ದೇನೆ. ರಣಜಿ ಟ್ರೋಫಿ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಹೇಗೆ ಆಡಿದ್ದೇನೆ. ಇದೀಗ ಇಲ್ಲಿಯೂ ಅದೇ ಹಂತದ ಆಟವನ್ನು ಪ್ರದರ್ಶಿಸಿದ್ದೇನೆ. ಹೆಚ್ಚು ಸಮಯೋಜಿತವಾಗಿ ಇರಲು ನಾನು ಪ್ರಯತ್ನಿಸುತ್ತಿದ್ದೇನೆ ಹಾಗೂ ಇದರ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ," ಎಂದು ತಿಳಿಸಿದರು.

"ಅತ್ಯುತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ಆಟದ ಮೂಲಭೂತ ಅಂಶಗಳಿಗೆ ಅಂಟಿಕೊಂಡಿದ್ದೇನೆ. ಇದನ್ನು ಬಿಟ್ಟು ನಾನು ಬೇರೆ ಯಾವುದೇ ಸಂಗತಿಗಳನ್ನು ಪ್ರಯತ್ನಿಸುತ್ತಿಲ್ಲ," ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಶಿವಂ ದುಬೇ ಹೇಳಿದ್ದಾರೆ.

ಮೊಯೀನ್‌ ಅಲಿ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದಿದ್ದ ಶಿವಂ ದುಬೇ ಆರಂಭಿಕ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಅವರ ಜೊತೆ ಸೇರಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್‌ ಮಾಡಿದ ಈ ಜೋಡಿ ನಂತರ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿತು. ಮುರಿಯದ ಮೂರನೇ ವಿಕೆಟ್‌ಗೆ ಈ ಜೋಡಿ 165 ರನ್‌ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು.

Robin Uthappa - The Walking Assassin

"ನಾವು ಕ್ರೀಸ್‌ನಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ. ದೊಡ್ಡ ಹೊಡೆತಕ್ಕೆ ಕೈ ಹಾಕಬೇಕೆ? ಅಥವಾ ಬೇಡವೇ ಎಂಬ ಬಗ್ಗೆ ನಾವು ಬೌಲರ್‌ಗಳನ್ನು ಎದುರಿಸುವ ವೇಳೆ ನಿರ್ಧರಿಸುತ್ತಿದ್ದೆವು. ಇದು ನಮ್ಮ ವಿಶ್ವಾಸವನ್ನು ಹೆಚ್ಚಿಸುತ್ತಿತ್ತು. ಆರಂಭದಲ್ಲಿ ಚೆಂಡು ಸ್ವಲ್ಪ ಹಿಡಿತಕ್ಕೆ ಸಿಗುತ್ತಿತ್ತು. ನಂತರ ಆಕ್ರಮಣ ಆಟ ಪ್ರದರ್ಶಿಸಲು ನಿರ್ಧರಿಸಿದೆವು. ದೊಡ್ಡ ಹೊಡೆತ ಹೊಡೆಯಬಹುದೆಂದು ಅನಿಸಿದರೆ, ಆ ಎಸೆತಗಳನ್ನು ಮುಲಾಜಿಲ್ಲದೆ ಹೊಡೆಯುತ್ತಿದ್ದೆವು. ಆದರೆ ಆರಂಭದಲ್ಲಿ ಹೊಸ ಚೆಂಡು ಆಗಿದ್ದರಿಂದ, ಬ್ಯಾಟಿಂಗ್‌ಗೆ ಸ್ವಲ್ಪ ಕಠಿಣವಾಗುತ್ತಿತ್ತು," ಎಂದು ಶಿವಂ ದುಬೇ ತಿಳಿಸಿದ್ದಾರೆ.

Ipl 2022 I Am Just Trying To Play My Natural Game Csk Allrounder Shivam Dube Opens Up His Batting Plans Against Rcb.