ಭಾರತ ತಂಡದಲ್ಲಿ ಟಿ. ನಟರಾಜನ್‌ಗೆ ಅವಕಾಶ ಕಲ್ಪಿಸಿ ಎಂದ ಮೈಕಲ್‌ ವಾನ್!

16-04-22 01:37 pm       Source: Vijayakarnataka   ಕ್ರೀಡೆ

ಭಾರತ ತಂಡದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವೇಗಿ ಟಿ ನಟರಾಜನ್‌ ಅವರನ್ನು ಪರಿಗಣಿಸಬೇಕೆಂದು ಆಗ್ರಹಿಸಿದ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌, ಅತ್ಯುತ್ತಮ ತಂಡ...

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡುತ್ತಿರುವ ವೇಗಿ ಟಿ ನಟರಾಜನ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್, ಎಡಗೈ ವೇಗಿಯನ್ನು ಭಾರತ ತಂಡದ ಆಯ್ಕೆಗೆ ಪರಿಗಣಿಸಬೇಕೆಂದಿದ್ದಾರೆ.

ಭಾರತದಲ್ಲಿ ಐಪಿಎಲ್‌ ಟೂರ್ನಿ ಆರಂಭವಾದ ದಿನದಿಂದಲೂ ಸಾಕಷ್ಟು ಪ್ರತಿಭಾವಂತ ವೇಗಿಗಳು ಬೆಳಕಿಗೆ ಬಂದಿದ್ದಾರೆ. ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್‌ ಶಮಿ, ಪ್ರಸಿಧ್‌ ಕೃಷ್ಣ, ಮೊಹಮ್ಮದ್ ಸಿರಾಜ್‌ ಸೇರಿದಂತೆ ಹಲವು ಯುವ ವೇಗಿಗಳು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಟಿ ನಟರಾಜನ್‌ ಕೂಡ ಐಪಿಎಲ್‌ ಮೂಲಕ ಬೆಳಕಿಗೆ ಬಂದ ಯುವ ಪ್ರತಿಭೆ.

ಸೇಲಂ ಎಕ್ಸ್‌ಪ್ರೆಸ್‌ ಖ್ಯಾತಿಯ ಟಿ ನಟರಾಜನ್‌ ಅವರ ಬಗ್ಗೆ ಕ್ರಿಕ್‌ಬಝ್‌ ಜೊತೆ ಮಾತನಾಡಿದ ಮೈಕಲ್‌ ವಾನ್‌, ಎಡಗೈ ವೇಗಿಯನ್ನು ಟೀಮ್‌ ಇಂಡಿಯಾ ಆಯ್ಕೆಗೆ ಪರಿಗಣಿಸಿಲ್ಲವಾದರೆ ಅದು ಅತ್ಯಂತ ಹಾಸ್ಯಸ್ಪದ ಎಂದು ವ್ಯಂಗ್ಯವಾಡಿದರು. ಆ ಮೂಲಕ ಮುಂದಿನ ಐಸಿಸಿ ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ ನಟರಾಜನ್‌ಗೆ ಅವಕಾಶ ಕಲ್ಪಿಸಬೇಕೆಂಬುದು ಇಂಗ್ಲೆಂಡ್‌ ಮಾಜಿ ನಾಯಕನ ಒಮ್ಮತ.

SRH's T Natarajan positive for COVID-19, BCCI conducts two tests for  confirmation | Sports News,The Indian Express

"ಟಿ ನಟರಾಜನ್‌ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿಲ್ಲವಾದರೆ, ಅದು ನಿಜಕ್ಕೂ ಹ್ಯಾಸ್ಯಸ್ಪದವಾಗಿರುತ್ತದೆ. ಅವರು ಎಡಗೈ ವೇಗಿ ಎಂಬುದನ್ನು ಮರೆಯಬಾರದು. ಪಿಚ್‌ ಹಿಡಿತಕ್ಕೆ ಸಿಗಲು ಆರಂಭಿಸುತ್ತಿದ್ದಂತೆ ಎಡಗೈ ವೇಗಿಗಳು ಇನಿಂಗ್ಸ್‌ನ ಬ್ಯಾಕೆಂಡ್‌ನಲ್ಲಿ ಆಂಗಲ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಬಹುದು ಹಾಗೂ ಅವರು ಪಿಚ್‌ನ ಕೆಲ ಭಾಗಗಳನ್ನು ರಕ್ಷಿಸಬಹುದು," ಎಂದು ಮೈಕಲ್‌ ವಾನ್ ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ.

ತಾನು ಇಂಡಿಯನ್‌ ಆಯ್ಕೆದಾರನಾಗಿದ್ದರೆ ಟಿ ನಟರಾಜನ್‌ ಅವರನ್ನು ಬಹಳಾ ಹತ್ತಿರದಿಂದ ಅವಲೋಕಿಸುತ್ತಿದ್ದೆ ಎಂಬ ಅಂಶವನ್ನುಇದೇ ವೇಳೆ ಇಂಗ್ಲೆಂಡ್‌ ಮಾಜಿ ನಾಯಕ ಉಲ್ಲೇಖಿಸಿದರು. 2022ರ ಐಸಿಸಿ ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಆಯ್ಕೆಯಾಗಬಲ್ಲ ಆಟಗಾರರ ರೇಸ್‌ನಲ್ಲಿ ಯಾರ್ಕರ್‌ ಕಿಂಗ್‌ ನಟರಾಜನ್‌ ಕೂಡ ಇದ್ದಾರೆ.

"ವಿಶ್ವದ ಅತ್ಯುತ್ತಮ ಟಿ20 ತಂಡಗಳಲ್ಲಿ ಎಡಗೈ ಸೀಮ್‌ ಬೌಲರ್‌ಗಳು ಇದ್ದೇ ಇರುತ್ತಾರೆ. ಒಬ್ಬರು ಇರಬಹುದು ಅಥವಾ ಇಬ್ಬರು ಕೂಡ ಇರಬಹುದು. ಒಂದು ವೇಳೆ ನಾನು ಭಾರತದ ಆಯ್ಕೆದಾರನಾಗಿದ್ದರೆ, ಖಂಡಿತಾ ಟಿ ನಟರಾಜನ್‌ ಅವರನ್ನು ಬಹಳಾ ಹತ್ತಿರದಿಂದ ನೋಡುತ್ತಿದ್ದೆ," ಎಂದು ಮೈಕಲ್‌ ವಾನ್‌ ಹೇಳಿದ್ದಾರೆ.

ಪ್ರಸ್ತುತ ಭಾರತ ತಂಡದಲ್ಲಿ ಬುಮ್ರಾ, ಶಮಿ, ಸಿರಾಜ್‌, ಭುವನೇಶ್ವರ್‌ ಕುಮಾರ್‌, ಪ್ರಸಿಧ್‌ ಕೃಷ್ಣ, ದೀಪಕ್ ಚಹರ್, ಉಮೇಶ್‌ ಯಾದವ್‌, ಶಾರ್ದುಲ್ ಠಾಕೂರ್‌ ಸೇರಿ ಹಲವು ವೇಗಿಗಳಿದ್ದಾರೆ. ಇದರ ಜೊತೆಗೆ ಗಾಯದಿಂದಾಗಿ ದೀರ್ಘಾವಧಿ ಭಾರತ ತಂಡದಿಂದ ಹೊರಗುಳಿದಿದ್ದ ಟಿ ನಟರಾಜನ್‌ ಅವರು ಇದೀಗ 2022ರ ಐಪಿಎಲ್‌ ಟೂರ್ನಿಯಲ್ಲಿ ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ.

Bhuvneshwar Kumar out for 6 months, to return only in IPL 2021

ಅಂದಹಾಗೆ 2020/21ರ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟಿ ನಟರಾಜನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸಿಡ್ನಿ ಟೆಸ್ಟ್‌ ಪದಾರ್ಪಣೆ ಪಂದ್ಯದಲ್ಲಿ ನಟರಾಜನ್‌ ಗಮನಾರ್ಹ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಆ ಮೂಲಕ ಭಾರತ 2-1 ಅಂತರದಲ್ಲಿ ಸತತ ಎರಡನೇ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದು ಸಾಧನೆ ಮಾಡಿತ್ತು.

Ipl 2022 If I Was An Indian Selector, I Would Be Keeping A Close Eye On Him Michael Vaughan Bats For T Natarajan.