'ಕುಮಾರ' ಪೇಶ್ವಾಸ್ತ್ರಕ್ಕೆ ಕಮಲ ಪಾಳಯ ತಲ್ಲಣ ; ಒಂದು ಹೇಳಿಕೆ, ಹತ್ತು ಸಂದೇಶ, ಕಾಂಗ್ರೆಸ್ ಶಿಬಿರದಲ್ಲಿ ಹರ್ಷ ! ಅತಂತ್ರ ಫಲಿತಾಂಶಕ್ಕೆ ತಂತ್ರಗಾರಿಕೆ 

15-02-23 12:09 pm       ಆರ್.ಟಿ.ವಿಠ್ಠಲಮೂರ್ತಿ, ರಾಜಕೀಯ ವಿಶ್ಲೇಷಕರು   ಅಂಕಣಗಳು

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಯೋಗಿಸಿದ ಪೇಶ್ವಾಸ್ತ್ರ ಬಿಜೆಪಿಯ ತಲ್ಲಣಕ್ಕೆ ಕಾರಣವಾಗಿದ್ದರೆ, ಕಾಂಗ್ರೆಸ್ ಶಿಬಿರದ ಹರ್ಷಕ್ಕೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಯೋಗಿಸಿದ ಪೇಶ್ವಾಸ್ತ್ರ ಬಿಜೆಪಿಯ ತಲ್ಲಣಕ್ಕೆ ಕಾರಣವಾಗಿದ್ದರೆ, ಕಾಂಗ್ರೆಸ್ ಶಿಬಿರದ ಹರ್ಷಕ್ಕೆ ಕಾರಣವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯ ನಂತರ ಪೇಶ್ವೆ ಮೂಲದ ಪ್ರಹ್ಲಾದ್ ಜೋಷಿಯವರನ್ನು ಸಿಎಂ ಮಾಡಲು ಆರೆಸ್ಸೆಸ್ ಹುನ್ನಾರ ನಡೆಸಿದೆ ಎಂಬುದು ಕುಮಾರಸ್ವಾಮಿ ಅವರ ಅಸ್ತ್ರ.
ಅಂದ ಹಾಗೆ ಪ್ರಹ್ಲಾದ್ ಜೋಷಿ ಅವರು ಪೇಶ್ವೆ ಮೂಲದವರು ಎಂಬುದನ್ನು ಹೆಕ್ಕಿ ತೆಗೆದ ಕುಮಾರಸ್ವಾಮಿ ಅವರ ವಿರುದ್ಧ ಬ್ರಾಹ್ಮಣ ದ್ವೇಷಿ ಎಂಬ ಕೂಗು ಎದ್ದಿದೆಯಾದರೂ ಅದು ವರ್ಕ್ಔಟ್ ಆಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಮುಂದಿನ ಚುನಾವಣೆಯ ನಂತರ ಬ್ರಾಹ್ಮಣರನ್ನು ಸಿಎಂ ಮಾಡುವ ಹುನ್ನಾರ ನಡೆದಿದೆ ಎಂದು ಹೇಳಿದ್ದರೆ ಕುಮಾರಸ್ವಾಮಿ ಹಣೆಗೆ ಬ್ರಾಹ್ಮಣ ವಿರೋಧಿ ಎಂಬ ಬೋರ್ಡು ತಗಲಿಕೊಳ್ಳುತ್ತಿತ್ತು. ಆದರೆ ಅವರು, ಕರ್ನಾಟಕ ಮೂಲದ ಬ್ರಾಹ್ಮಣರನ್ನು ಬಿಟ್ಟು ಹೊರಗಿನವರಾದ ಪೇಶ್ವೆ ಬ್ರಾಹ್ಮಣ ಮೂಲದ ವ್ಯಕ್ತಿಗೆ ಸಿಎಂ ಪಟ್ಟ ಕಟ್ಟುವ ಹುನ್ನಾರ ನಡೆದಿದೆ ಎಂದಿದ್ದಾರೆ. 

Ananth Kumar Passes Away at 59 in Bengaluru | India.com

ಹೀಗಾಗಿ ಇದಕ್ಕೆ ಕರ್ನಾಟಕ, ಕರ್ನಾಟಕೇತರ ಮೂಲದ ಬಣ್ಣ ತಗಲಿ ಆಟ ಶುರುವಾಗಿದೆ ಎಂಬುದೇ ವಸ್ತುಸ್ಥಿತಿ. ಅಂದ ಹಾಗೆ ಅನಂತಕುಮಾರ್ ಅವರ ನಂತರ ದಿಲ್ಲಿ ಮಟ್ಟದಲ್ಲಿ ಪ್ರಭಾವಿಯಾಗಿ ಬೆಳೆದಿರುವ ನಾಯಕರು ಪ್ರಹ್ಲಾದ್ ಜೋಷಿ. ಅವರು ತಮಗಿರುವ ಅರ್ಹತೆಯಿಂದ ಈ ಜಾಗಕ್ಕೆ ಬಂದಿದ್ದಾರೆ ಎಂಬುದು ನಿಜವಾದರೂ ಈಗ ಕುಮಾರಸ್ವಾಮಿ ಪ್ರಯೋಗಿಸಿದ ಅಸ್ತ್ರಕ್ಕೆ ಅವರು ಎದೆಯೊಡ್ಡಲೇಬೇಕಾದ ಸ್ಥಿತಿ ಇದೆ. ಅದೇ ರೀತಿ ಅದರ ಹೊಡೆತಕ್ಕೆ ರಾಜ್ಯ ಬಿಜೆಪಿ ಕೂಡಾ ತಲ್ಲಣಗೊಂಡಿದೆ. ಯಾಕೆಂದರೆ ಕುಮಾರಸ್ವಾಮಿ ಪ್ರಯೋಗಿಸಿದ ಅಸ್ತ್ರ ಲಿಂಗಾಯತ ಬ್ರಿಗೇಡ್ ನ ಮಧ್ಯೆ ಸ್ಪೋಟಿಸಿದೆ. 

Ready to resign if BJP high command asks me to, but will work as Karnataka  CM till then: B S Yediyurappa | India News,The Indian Express

ಯಾರೇನೇ ಹೇಳಿದರೂ ಕರ್ನಾಟಕದ ನೆಲೆಯಲ್ಲಿ ಲಿಂಗಾಯತರೇ ಬಿಜೆಪಿಯ ಮೂಲ ಶಕ್ತಿ. ರಾಜ್ಯದಲ್ಲಿ ಅ ಪಕ್ಷ ತಲೆ ಎತ್ತಿ ನಿಲ್ಲಲು ಬಲ ತುಂಬಿದ್ದೇ ಲಿಂಗಾಯತ ಸಮುದಾಯ. ಆದರೆ ಅಂತಹ ಸಮುದಾಯದ ಆಂತರ್ಯದಲ್ಲಿ ಈಗ ಅಸಮಾಧಾನವಿದೆ. ಯಡಿಯೂರಪ್ಪ ಅವರ ಪದಚ್ಯುತಿಯ ನಂತರ ತಮ್ಮ ಸಮುದಾಯಕ್ಕೆ ಪರ್ಯಾಯ ನಾಯಕ ಯಾರು? ಎಂಬ ತಲಾಶೆಗಿಳಿಯುವಂತೆ ಮಾಡಿದೆ. ಇನ್ನು ಯಡಿಯೂರಪ್ಪ ಅವರ ಜಾಗಕ್ಕೆ ಬಂದು ಕುಳಿತಿರುವ ಬಸವರಾಜ ಬೊಮ್ಮಾಯಿ ಲಿಂಗಾಯತ ಸಮುದಾಯದವರು ಎಂಬುದೇನೋ ನಿಜ. ಆದರೆ ಅವರು ಸಂಘ ಪರಿವಾರದ ಕೈಗೊಂಬೆಯೇ ಹೊರತು ಯಡಿಯೂರಪ್ಪ ಅವರಂತೆ ಸ್ವಯಂ ನಿರ್ಣಯ ತೆಗೆದುಕೊಳ್ಳುವ ನಾಯಕರಲ್ಲ ಎಂಬುದು  ಲಿಂಗಾಯತ ಸಮುದಾಯಕ್ಕೆ ಗೊತ್ತಿದೆ. ಇವತ್ತು ಅಧಿಕಾರದಿಂದ ಇಳಿದ ಯಡಿಯೂರಪ್ಪ ಅವರನ್ನು ಬಿಜೆಪಿ ವರಿಷ್ಟರು ಅಚ್ಚಾ, ಅಚ್ಚಾ ಮಾಡಿಟ್ಟುಕೊಂಡಿದ್ದರೂ, ಅದು ನೆಪಕ್ಕಷ್ಟೇ ಎಂಬುದೂ ಗೊತ್ತಿದೆ. ಹೀಗಿರುವಾಗಲೇ ಕುಮಾರಸ್ವಾಮಿ ಎಸೆದ ಅಸ್ತ್ರ ಲಿಂಗಾಯತ ಪಾಳೆಯದ ಮನಃಸ್ಥಿತಿಯನ್ನು ಮತ್ತಷ್ಟು ತಲ್ಲಣಗೊಳಿಸಿರುವುದು ನಿಜ.
ವಸ್ತುಸ್ಥಿತಿ ಎಂದರೆ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನ ಜಾರಿಯಲ್ಲಿದ್ದಾಗ ಲಿಂಗಾಯತ ಪಾಳೆಯದಲ್ಲಿ ಒಂದು ಸಂದೇಶ ಮಿಂಚಿನಂತೆ ಹರಿದಾಡಿತ್ತು. ಆ ಸಂದೇಶ, ಸಿಎಂ ಹುದ್ದೆಗಾಗಿ ಪೈಪೋಟಿ ನಡೆಸಿದ್ದ ಮುರುಗೇಶ್ ನಿರಾಣಿ ಅವರಂತವರನ್ನು ವ್ಯಂಗ್ಯವಾಡಿ, ಯಡಿಯೂರಪ್ಪ ಅವರ ಜಾಗಕ್ಕೆ ಪ್ರಹ್ಲಾದ್ ಜೋಷಿ ಇಲ್ಲವೇ ಸಂತೋಷ್ ಅವರನ್ನು ತಂದು ಕೂರಿಸುವ ಪ್ರಯತ್ನ ನಡೆದಿದೆ ಅಂತ ಎಚ್ಚರಿಸಿತ್ತು. ಅರ್ಥಾತ್, ಯಡಿಯೂರಪ್ಪ ಅವರ ಜಾಗಕ್ಕೆ‌ ಪ್ರಹ್ಲಾದ್ ಜೋಷಿ ಅವರನ್ನು ತಂದು ಕೂರಿಸುವ ಯತ್ನಕ್ಕೆ ಹಿಂದೆಯೇ ಚಾಲನೆ ಸಿಕ್ಕಿತ್ತು. ಆದರೆ ಯಡಿಯೂರಪ್ಪ ಇಳಿದ ಕಾಲಕ್ಕೆ ಲಿಂಗಾಯತ ಮಠಾಧಿಪತಿಗಳು ಹಾಕಿದ ಅಬ್ಬರ ಹೇಗಿತ್ತೆಂದರೆ ಯಡಿಯೂರಪ್ಪ ಅವರ ಜಾಗಕ್ಕೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಷಿಯವರನ್ನು ತಂದು ಕೂರಿಸಲು ಆರೆಸ್ಸೆಸ್ ಮತ್ತು ಬಿಜೆಪಿ ವರಿಷ್ಟರು ಯೋಚಿಸುವಂತಾಯಿತು. ಅಷ್ಟೇ ಅಲ್ಲ, ಜೋಷಿಯವರನ್ನು ಸಿಎಂ ಹುದ್ದೆಗೆ ತಂದು‌ ಕೂರಿಸಿದರೆ ಲಿಂಗಾಯತರು ಬಿಜೆಪಿಗೆ ತಿರುಗೇಟು ಹೊಡೆಯುವುದು ನಿಶ್ಚಿತ ಎಂಬ ಲೆಕ್ಕಾಚಾರಕ್ಕಿಳಿಯುವಂತೆ ಮಾಡಿತು. 

Bommai presses for US consulate in Bengaluru | Deccan Herald

ಇಂತಹ ಲೆಕ್ಕಾಚಾರದ ಲಾಭ ಪಡೆದವರು ಬಸವರಾಜ ಬೊಮ್ಮಾಯಿ. ಆದರೆ ಕೆಲವೇ ಕಾಲದ ನಂತರ ಬೊಮ್ಮಾಯಿ ಅವರನ್ನಿಳಿಸಿ ಜೋಷಿಯವರನ್ನು ತಂದು ಕೂರಿಸುವ ಮತ್ತೊಂದು ಅಟೆಂಪ್ಟು ನಡೆಯಿತಾದರೂ ಅದು ಕೂಡಾ ನಿಖರ ರೂಪ ತಳೆಯಲಿಲ್ಲ. ಕಾರಣ? ವಿಧಾನಸಭೆ ಚುನಾವಣೆಯಲ್ಲಿ ಸ್ವಯಂಬಲದ ಮೂಲಕ ಗೆಲ್ಲಲು ಲಿಂಗಾಯತ ಶಕ್ತಿ ಬಿಜೆಪಿ ಜತೆಗಿರಬೇಕು.ಈಗ ಜೋಷಿಯವರನ್ನು ತಂದು ಕೂರಿಸಿದರೆ ಅದು ಕಷ್ಟವಾಗಬಹುದು ಎಂಬ ಲೆಕ್ಕಾಚಾರ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರ ಖುರ್ಚಿ ಅಲುಗಾಡಲಿಲ್ಲ. ಮತ್ತು ಈ ಸತ್ಯ  ಗೊತ್ತಿದ್ದುದರಿಂದ ಸ್ವತಃ ಬೊಮ್ಮಾಯಿ ಕೂಡ ಪ್ರತಿಯೊಂದಕ್ಕೂ ಪ್ರಹ್ಲಾದ್ ಜೋಷಿಯವರಿಗೆ ಅಂಟಿಕೊಂಡು ಕಾಲ ತಳ್ಳಿಬಿಟ್ಟರು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕುಮಾರಸ್ವಾಮಿ ಎಸೆದ ಪೇಶ್ವಾಸ್ತ್ರ, ಸಿಡಿತಲೆಯಂತೆ ಕೆಲಸ ಮಾಡುತ್ತಾ ಲಿಂಗಾಯತ ಪಾಳೆಯದಂತೆಯೇ ಹಿಂದೂ ಮತ ಬ್ಯಾಂಕಿನ ಆವರಣದಲ್ಲೂ ಸಣ್ಣ, ಸಣ್ಣ ಸ್ಫೋಟದ ಸದ್ದು ಕೇಳತೊಡಗಿದೆ.

ಪರಿಣಾಮ? ಒಂದು ಮಟ್ಟದಲ್ಲಿ ಬಿಜೆಪಿ ಪಾಳೆಯದಲ್ಲಿ ಚಿಂತೆ ಶುರುವಾಗಿರುವುದು ನಿಜ. ಆದರೆ ಗಮನಿಸಬೇಕಾದ ವಿಷಯವೆಂದರೆ ಕುಮಾರಸ್ವಾಮಿ ಅವರ ಅಸ್ತ್ರ ಕಾಂಗ್ರೆಸ್ ಪಾಳೆಯದಲ್ಲಿ ಹರ್ಷ ಮೂಡಿಸಿರುವುದು. ಕಾರಣ? ಈ ಅಸ್ತ್ರದ ಹೊಡೆತಕ್ಕೆ ಲಿಂಗಾಯತ ಮತ ಬ್ಯಾಂಕಿನಲ್ಲಿ ಆಗುವ ವ್ಯತ್ಯಾಸ ಜೆಡಿಎಸ್ ಗಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಲಾಭದಾಯಕವಾಗುತ್ತದೆ. 

ಇವತ್ತು ಬಿಜೆಪಿಯ ಕೆಲ ನಾಯಕರು, ಲಿಂಗಾಯತ ಪಾಳೆಯ ಬಿಜೆಪಿ ಜತೆ ಸಾಲಿಡ್ಡಾಗಿ ನಿಲ್ಲುತ್ತದೆ. ಯಾಕೆಂದರೆ ಹೋಗಲು ಅದಕ್ಕೆ ಬೇರೆ ದಾರಿ ಎಲ್ಲಿದೆ?ಎನ್ನುತ್ತಾರೆ.
ಆದರೆ ಪರ್ಯಾಯ ದಾರಿ ಹುಡುಕುವ ವಿಷಯದಲ್ಲಿ ಲಿಂಗಾಯತರು ಯಾವತ್ತೂ ಅಸಹಾಯಕರಲ್ಲ ಎಂಬುದು ಇತಿಹಾಸ. ರಾಜ್ಯ ಮಟ್ಟದಲ್ಲಿ ತಮ್ಮ ಸಮುದಾಯದ ನಾಯಕ ಯಾರು ಎಂಬುದು ಖಚಿತವಾಗದಿದ್ದರೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಆ ಸಮುದಾಯ ಹೆಜ್ಜೆ ಇಡುತ್ತದೆ. ಹಾಗಾದಾಗ ಸಹಜವಾಗಿಯೇ ಕಾಂಗ್ರೆಸ್ ಪಕ್ಷ ಹೆಚ್ಚು ಲಾಭ ಪಡೆಯುತ್ತದೆ. ಹೀಗಾಗಿ ಕುಮಾರಸ್ವಾಮಿ ಎಸೆದ ಪೇಶ್ವಾಸ್ತ್ರ 2013 ರ ಇತಿಹಾಸ ಮರುಕಳಿಕೆಯಾಗಲು ನೆರವು ನೀಡುತ್ತದೆ ಎಂಬುದು ಕೈ ಪಾಳೆಯದ ಲೆಕ್ಕಾಚಾರ. ಅಂದ ಹಾಗೆ 2008 ರಿಂದ 2013 ರ ತನಕ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಹುತೇಕ ಹಗರಣಗಳನ್ನು ಬೆಳಕಿಗೆ ತಂದವರೇ ಕುಮಾರಸ್ವಾಮಿ. ಆದರೆ ಆವತ್ತಿನ ಸನ್ನಿವೇಶ ಹೇಗಿತ್ತೆಂದರೆ ಕುಮಾರಸ್ವಾಮಿ ಅವರ ಹೋರಾಟದ ಫಲ ಕಾಂಗ್ರೆಸ್ ಪಕ್ಷಕ್ಕೆ ದಕ್ಕುವಂತೆ ಮಾಡಿತು. ಇವತ್ತೂ ಅಷ್ಟೇ. ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ  ನಿಲ್ಲಲು ಹವಣಿಸುತ್ತಿರುವ, ಹೋರಾಡುತ್ತಿರುವ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲೇ ಮೇಲೆದ್ದಿದೆ.

ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಎಸೆದ ಅಸ್ತ್ರ ಆ ಪಕ್ಷದ ಗೆಲುವಿನ ಗ್ರಾಫನ್ನು ಹೆಚ್ಚಿಸಬಹುದು ಎಂಬುದು ಕೈ ಪಾಳೆಯದ ಲೆಕ್ಕಾಚಾರ. 

For Article 370 move, personal calls to senior opposition leaders helped  clinch majority vote': Pralhad Joshi | Latest News India - Hindustan Times

ಇಂತಹ ಲೆಕ್ಕಾಚಾರಗಳೇನೇ ಇದ್ದರೂ ಕುಮಾರಸ್ವಾಮಿ ಹಲ ಸಂದೇಶಗಳನ್ನು ರವಾನಿಸುವಲ್ಲಿ ಸಫಲರಾಗಿದ್ದಾರೆ. ಮೊದಲನೆಯದಾಗಿ, ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಬಿಜೆಪಿಯ ದಾರಿಯ ಮಧ್ಯೆ ಸೈಜುಗಲ್ಲು ಇಟ್ಟಿರುವುದು. ಎರಡನೆಯದಾಗಿ, ನಿಮ್ಮ ಮತ ಪಡೆದು ಪ್ರಹ್ಲಾದ್ ಜೋಷಿ   ಅವರನ್ನು ಸಿಎಂ ಮಾಡುವುದು ಆರೆಸ್ಸೆಸ್ ಹುನ್ನಾರ ಅಂತ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸಂದೇಶ ರವಾನಿಸಿರುವುದು. ಮೂರನೆಯದಾಗಿ,ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಬಿಜೆಪಿ ಜತೆ ಹೊಂದಾಣಿಕೆ ಅನಿವಾರ್ಯವಾದರೆ ನಾವು ಸಿಎಂ ಪಟ್ಟ ಬಿಟ್ಟುಕೊಡಲು ಸಿದ್ಧರಿಲ್ಲ ಎಂಬುದು. ಆ ಮೂಲಕ ಅಗತ್ಯ ಬಿದ್ದರೆ ನಾವು ಕಾಂಗ್ರೆಸ್ ಜತೆ ಕೈ ಜೋಡಿಸಲೂ ಸಿದ್ಧ ಎಂಬುದು ಕುಮಾರಸ್ವಾಮಿ ಅವರ ನಾಲ್ಕನೇ ಸಂದೇಶ. ಅವರು ರವಾನಿಸಿದ ಈ ಸಂದೇಶಗಳು ಬಿಜೆಪಿಯನ್ನು ಯಾವ ಮಟ್ಟಿಗೆ ಅಲುಗಾಡಿಸಿವೆ ಎಂದರೆ,ಈ ಎಪಿಸೋಡಿಗೆ ಅವರು ಎಬ್ಬಿಸಿರುವ ಹಾಹಾಕಾರವೇ‌ ಇದಕ್ಕೆ ಸಾಕ್ಷಿ. ಆದರೆ ಈ ಹಾಹಾಕಾರ ಲಿಂಗಾಯತ ಸಮುದಾಯವನ್ನು ಸಮಾಧಾನಿಸಲು ಸಾಧ್ಯವಾ?ಎಂಬುದರ ಮೇಲೆ ಕುಮಾರಸ್ವಾಮಿ ಪ್ರಯೋಗಿಸಿದ ಅಸ್ತ್ರದ ಯಶಸ್ಸು, ವೈಫಲ್ಯ ನಿರ್ಧಾರವಾಗುತ್ತದೆ.

Gujarat Election 2022 Phase 1 Highlights: 59.2% voting till 5 pm; PM Modi  holds roadshow in Ahmedabad | Gujarat Election Result 2022 Date | Zee  Business

ಶಾಸಕರಿಗೆ ಟಿಕೆಟ್ ತಪ್ಪಿಸುವುದು ಹೇಗೆ?

ಈ ಮಧ್ಯೆ ಕರ್ನಾಟಕದಲ್ಲಿ ಗುಜರಾತ್ ಸೂತ್ರ ಜಾರಿಗೊಳಿಸಲು ಹೊರಟಿದ್ದ ಬಿಜೆಪಿ ನಾಯಕರಿಗೆ ಹೊಸ ಚಿಂತೆ ಶುರುವಾಗಿದೆಯಂತೆ. ಹಾಲಿ ಶಾಸಕರ ಪೈಕಿ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಟಿಕೆಟ್ ತಪ್ಪಿಸುವುದು ಹೇಗೆ?ಎಂಬುದು ಈ ಚಿಂತೆ. ಅಂದ ಹಾಗೆ ಕ್ಷೇತ್ರದಲ್ಲಿ ಜನಪ್ರಿಯತೆ ಉಳಿಸಿಕೊಳ್ಳದ, ಕ್ರಿಯಾಶೀಲರಲ್ಲದ, ವಯೋಮಿತಿ ಮೀರಿದ ಹಲವರಿಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ಮತ್ತು ಈ ತೀರ್ಮಾನ ಬಿಜೆಪಿಗೆ ದೊಡ್ಡ ಮಟ್ಟದ ಲಾಭ ನೀಡಿತ್ತು. ಹೀಗಾಗಿ ಕರ್ನಾಟಕದಲ್ಲೂ ಇದೇ ಸೂತ್ರವನ್ನು ಅನುಸರಿಸಲು ನಿರ್ಧರಿಸಿದ ಬಿಜೆಪಿ ವರಿಷ್ಟರು ಅಂತಹ ಶಾಸಕರ ಪಟ್ಟಿ ಮಾಡಲು ರಾಜ್ಯದ ನಾಯಕರಿಗೆ ಸೂಚಿಸಿದ್ದರು. ವರಿಷ್ಟರ ಸೂಚನೆಯ ಪ್ರಕಾರ ನಡೆದ ಸರ್ವೆ, ಇಪ್ಪತ್ತಕ್ಕೂ ಹೆಚ್ಚು ಹಾಲಿ ಶಾಸಕರಿಗೆ  ಟಿಕೆಟ್ ತಪ್ಪಿಸಬೇಕು ಎಂದು ಹೇಳಿದೆಯಂತೆ. ಆದರೆ ಈಗಿನ ಸಮಸ್ಯೆ ಎಂದರೆ ಈ ಪಟ್ಟಿಯಲ್ಲಿರುವ ಮೂರ್ನಾಲ್ಕು ಮಂದಿಯನ್ನು ಬಿಟ್ಟರೆ ಉಳಿದವರಿಗೆ ಟಿಕೆಟ್ ತಪ್ಪಿಸುವುದು ಪಕ್ಷಕ್ಕೆ ದುಬಾರಿಯಾಗಬಹುದು ಎಂಬ ಅಭಿಪ್ರಾಯ ಸ್ಥಳೀಯ ನಾಯಕರಿಂದ ವ್ಯಕ್ತವಾಗುತ್ತಿರುವುದು. ಅವರ ಪ್ರಕಾರ,ಕಳೆದ ಬಾರಿ ಗೆದ್ದು ಶಾಸಕರಾದವರು ಒಂದು ಮಟ್ಟದಲ್ಲಾದರೂ ಶಕ್ತಿ ಹೊಂದಿರುತ್ತಾರೆ. ಈಗ ಇದ್ದಕ್ಕಿದ್ದಂತೆ ಅವರಿಗೆ ಟಿಕೆಟ್ ತಪ್ಪಿಸಿ ಬೇರೆಯವರಿಗೆ ಅವಕಾಶ ಕೊಟ್ಟರೆ ಆಂತರಿಕ ದಳ್ಳುರಿ ಶುರುವಾಗುತ್ತದೆ.

ಇಂತಹ ದಳ್ಳುರಿಯನ್ನು ಮೂರ್ನಾಲ್ಕು ಕಡೆ ಶಮನ ಮಾಡಬಹುದು. ಆದರೆ ಎಲ್ಲ ಕಡೆ ಇದು ಸಾಧ್ಯವಿಲ್ಲ. 

Is Modi lying or Amit Shah? Mamata's TMC questions contradictory tweets on  village electrification

ಅಂದ ಹಾಗೆ ಗುಜರಾತ್ ನಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಮತದಾರರ ಜತೆಗಿರುವ ಕನೆಕ್ಷನ್ ಕಾರಣ. ಆದರೆ ಇಲ್ಲಿನ ಮತದಾರರ ಜತೆ ಮೋದಿ- ಅಮಿತ್ ಶಾ ಅವರಿಗೆ ಕನೆಕ್ಷನ್ ಕಷ್ಟ. ಅದೇ ರೀತಿ ಎಮ್ಮೆಲ್ಲೆ ಚುನಾವಣೆಯಲ್ಲಿ ಮೋದಿ ಹವಾ ನಿರೀಕ್ಷಿಸಿದಷ್ಟು ಫಲ ಕೊಡುವುದಿಲ್ಲ.
ಆ ಕೆಲಸವನ್ನು ಇದುವರೆಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಮಾಡುತ್ತಿದ್ದರು.ಅದರೆ ಈಗ ಯಡಿಯೂರಪ್ಪ ಪಕ್ಷದ ಮುಂಚೂಣಿಯಲ್ಲಿಲ್ಲ. ಹೀಗಾಗಿ ಸ್ಥಳೀಯ ಅಭ್ಯರ್ಥಿಗೆ ಮತದಾರರ. ಜತೆ ಕನೆಕ್ಷನ್ ಇರಬೇಕು. ಇಂತಹ ಪರಿಸ್ಥಿತಿಯಲ್ಲಿ ಈಗಿರುವವರನ್ನು ತೆಗೆದು ಸುಧಾರಿಸಿಕೊಳ್ಳುವುದು  ಬಹಳ ಕಷ್ಟ. ಹೀಗಾಗಿ ಅಭ್ಯರ್ಥಿಯ ವಯೋಮಿತಿ ಮಾನದಂಡವಾಗುವುದು ಬೇಡ. ಅದೇ ರೀತಿ ಬೇರೆ ಕಾರಣಗಳಿಗಾಗಿ ಒಬ್ಬರಿಗೆ ಟಿಕೆಟ್ ತಪ್ಪಿಸುವ ಮುನ್ನ ಸಾಧಕ ಬಾಧಕಗಳನ್ನು ಮತ್ತೊಮ್ಮೆ ಗಮನಿಸಬೇಕು ಎಂಬುದು ಹಲವರ ಅಭಿಪ್ರಾಯ. ಹೀಗಾಗಿ ಈ ವಿಷಯವೂ ಬಿಜೆಪಿ ಚಿಂತೆಗಳ ಪಟ್ಟಿಗೆ ಸೇರ್ಪಡೆಯಾಗಿದೆ.

“The whole Brahmin community has not turned against me. I am still committed to my remarks on Peshwa DNA. I do not have any issue if a leader from any sub-community among Brahmins becomes a CM,” he said.