ಬ್ರೇಕಿಂಗ್ ನ್ಯೂಸ್
10-07-23 12:05 pm ರಾಜಕೀಯ ವಿಶ್ಲೇಷಣೆ ; ಆರ್.ಟಿ.ವಿಠ್ಠಲಮೂರ್ತಿ (R.T. Vittal Murthy) ಅಂಕಣಗಳು
ಕೆಲ ದಿನಗಳ ಹಿಂದೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ಒಂದು ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಕೆಲವರಷ್ಟೇ ಇದ್ದರು. ಅಲ್ಲಿ ಮಾತನಾಡಿದ ಯಡಿಯೂರಪ್ಪ ತಮ್ಮ ಪುತ್ರನಿಗೆ ಒಂದು ಮಹತ್ವದ ಸುಳಿವು ನೀಡಿದರಂತೆ. ರಾಜ್ಯದಲ್ಲಿ ಬಿಜೆಪಿಯ ಪುನಶ್ಚೇತನವಾಗಬೇಕು ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ನಮ್ಮ ಉದ್ದೇಶ ಈಡೇರಬೇಕು ಎಂದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾವು ಸೂಚಿಸಿದವರು ಬಂದು ಕೂರಬೇಕು.
ಹೀಗೆ ರಾಜ್ಯಾಧ್ಯಕ್ಷರಾಗುವವರು ಪಕ್ಷಕ್ಕೆ ಶಕ್ತಿ ತುಂಬುವ ನಮ್ಮ ಗುರಿಗೆ ಪ್ಲಸ್ ಆಗಿರಬೇಕು.ಆ ದೃಷ್ಟಿಯಿಂದ ನಮ್ಮ ಮುಂದಿರುವ ಆಯ್ಕೆ ಎಂದರೆ ಇವತ್ತು ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ. ಅವರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿದರೆ ರಾಜ್ಯದಲ್ಲಿ ಬಿಜೆಪಿಯ ಪವರ್ ಹೆಚ್ಚಾಗುತ್ತದೆ ಅಂತ ನಾನು ವರಿಷ್ಟರಿಗೆ ಹೇಳುತ್ತೇನೆ.ಆದರೆ ಅದಕ್ಕೂ ಮುನ್ನ ಶೋಭಾ ಕರಂದ್ಲಾಜೆ ಅವರ ವಿಷಯದಲ್ಲಿ ನಿನಗಿರುವ ಭಿನ್ನಾಭಿಪ್ರಾಯ ನಿವಾರಣೆಯಾಗಬೇಕು. ಹಾಗಂತ ಯಡಿಯೂರಪ್ಪ ಅವರು ಹೇಳಿದಾಗ ವಿಜಯೇಂದ್ರ ಅರೆಕ್ಷಣ ಮೌನವಾಗಿದ್ದರಂತೆ.
ಅಂದ ಹಾಗೆ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಶೋಭಾ ಕರಂದ್ಲಾಜೆ 2019 ರಲ್ಲಿ ನಡೆದ ಒಂದು ಘಟನೆಯಿಂದ ಬೇಸತ್ತು ದೂರವಾಗಿದ್ದರು. ಹೀಗಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಇಷ್ಟು ಕಾಲ ಅವರ ಕ್ಯಾಂಪಿನಲ್ಲಿ ಇವರು ಕಾಣಿಸಿಕೊಳ್ಳುತ್ತಿರಲಿಲ್ಲ. ನಾಲ್ಕು ವರ್ಷಗಳ ಹಿಂದೆ ವಿಜಯೇಂದ್ರ ತಮ್ಮ ವಿರುದ್ಧ ಕಿಡಿ ಕಾರಿದ್ದರಿಂದ ಕಿರಿಕಿರಿ ಮಾಡಿಕೊಂಡ ಶೋಭಾ ಕರಂದ್ಲಾಜೆ ತಪ್ಪಿಯೂ ಯಡಿಯೂರಪ್ಪ ಅವರ ಮನೆಯ ಕಡೆ ಹೋಗಿರಲಿಲ್ಲವಂತೆ.
ಮುಂದೆ ಅವರು ಪ್ರಧಾನಿ ನರೇಂದ್ರಮೋದಿ ಅವರ ಸಂಪುಟದಲ್ಲಿ ಸಚಿವರಾದರು.ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸೆಟ್ಲಾದರು. ಅಲ್ಲಿಗೆ ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಬಲವಂತವಾಗಿ ಕೆಳಕ್ಕಿಳಿಸಲಾಯಿತು. ಅಷ್ಟೇ ಅಲ್ಲ,ಅವರನ್ನು ಬಿಜೆಪಿಯ ಔಟರ್ ರಿಂಗ್ ರೋಡಿನಲ್ಲಿ ನಿಲ್ಲಿಸುವ ಯತ್ನ ಆರಂಭವಾಯಿತು. ಯಡಿಯೂರಪ್ಪ ಅವರನ್ನೇ ದೂರ ತಳ್ಳುವ ಯತ್ನ ನಡೆದಾಗ ವಿಜಯೇಂದ್ರ ಅವರನ್ನು ಸುಮ್ಮನೆ ಬಿಡಲು ಸಾಧ್ಯವೇ? ಹಾಗಂತಲೇ ಅವರ ವಿಧಾನಪರಿಷತ್ ಎಂಟ್ರಿಗೆ ಅವಕಾಶ ನೀಡದೆ,ಬೊಮ್ಮಾಯಿ ಸಂಪುಟಕ್ಕೆ ನುಗ್ಗುವ ಚಾನ್ಸು ನೀಡದೆ ನಿಯಂತ್ರಿಸಲಾಯಿತು. ಆದರೆ ಎಲ್ಲ ಕಡೆ ತಮಗಿರುವ ಲಿಂಕುಗಳನ್ನು ಬಳಸಿ ವಿಜಯೇಂದ್ರ ಅವರು ವಿಧಾನಸಭೆ ಪ್ರವೇಶಿಸುವಂತೆ ನೋಡಿಕೊಂಡ ಯಡಿಯೂರಪ್ಪ ಅವರಿಗೆ ಈಗ ನಿಜವಾದ ಸವಾಲು ಶುರುವಾಗಿದೆ.
ಅರ್ಥಾತ್, ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿರುವ ಅವರ ವಿರೋಧಿ ಗ್ಯಾಂಗು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಶಾಸಕಾಂಗ ನಾಯಕನ ಸ್ಥಾನವನ್ನು ಕಬ್ಜಾ ಮಾಡಿಕೊಳ್ಳಲು ಹೊರಟಿದೆ.
ವಿರೋಧಿ ಗ್ಯಾಂಗಿನ ಎ- ಬಿ ಪ್ಲಾನ್ ಏನು ?
ಈ ದಿಸೆಯಲ್ಲಿ 'ಎ' ಪ್ಲಾನ್ ಮತ್ತು 'ಬಿ' ಪ್ಲಾನ್ ರೆಡಿ ಮಾಡಿಟ್ಟುಕೊಂಡಿರುವ ಈ ಗ್ಯಾಂಗು ಯಶಸ್ವಿಯಾದರೆ ಅನುಮಾನವೇ ಬೇಡ,ಪಕ್ಷದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಷೇರು ಮೌಲ್ಯ ಕಡಿಮೆಯಾಗಲಿದೆ.
ಅಂದ ಹಾಗೆ ಹಿರಿಯ ನಾಯಕ ವಿ.ಸೋಮಣ್ಣ ರಾಜ್ಯಾಧ್ಯಕ್ಷರಾಗಿ, ಡಾ.ಅಶ್ವಥ್ಥ ನಾರಾಯಣ ಇಲ್ಲವೇ ವಿ.ಸುನೀಲ್ ಕುಮಾರ್ ಶಾಸಕಾಂಗ ನಾಯಕರಾಗುವುದು ಅದರ 'ಎ'ಪ್ಲಾನು. ಇದೇ ರೀತಿ ಡಾ.ಅಶ್ವಥ್ಥನಾರಾಯಣ, ಸಿ.ಟಿ.ರವಿ ಮತ್ತು ವಿ.ಸುನೀಲ್ ಕುಮಾರ್ ಅವರ ಪೈಕಿ ಒಬ್ಬರು ರಾಜ್ಯಾಧ್ಯಕ್ಷರಾಗಿ, ಬಸವನಗೌಡ ಪಾಟೀಲ್ ಯತ್ನಾಳ್ ಶಾಸಕಾಂಗ ನಾಯಕರಾಗುವುದು ಅದರ 'ಬಿ' ಪ್ಲಾನು.
ಯಾವಾಗ ಇದು ಸ್ಪಷ್ಟವಾಯಿತೋ?ಇದಾದ ನಂತರ ಧಿಡೀರನೆ ಎಚ್ಚೆತ್ತ ಯಡಿಯೂರಪ್ಪ ತಾವು ಒಂದು ಪ್ಲಾನು ರೆಡಿ ಮಾಡಿದ್ದಾರೆ. ಅದರ ಪ್ರಕಾರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಇಲ್ಲವೇ ಮಾಜಿ ಸಚಿವ ಆರ್.ಅಶೋಕ್ ಅವರನ್ನು ತರಬೇಕು. ಅದೇ ರೀತಿ ಶಾಸಕಾಂಗ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂದು ಕೂರುವಂತೆ ಮಾಡಬೇಕು ಎಂಬುದು ಯಡಿಯೂರಪ್ಪ ಪ್ಲಾನು.
ಬೊಮ್ಮಾಯಿ ಈಗ ಅನಿವಾರ್ಯ, ಯಾಕಂದ್ರೆ...
ಅಂದ ಹಾಗೆ ಪಕ್ಷದ ಶಾಸಕಾಂಗ ನಾಯಕರಾಗಿ,ಆ ಮೂಲಕ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ಬಸವರಾಜ ಬೊಮ್ಮಾಯಿ ಅವರ ಆಯ್ಕೆ ಆಗುವುದು ಸಹಜ ನ್ಯಾಯ.
ಯಾಕೆಂದರೆ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡು ಅಧಿಕೃತ ವಿರೋಧ ಪಕ್ಷವಾದಾಗ ಮುಖ್ಯಮಂತ್ರಿಗಳಾಗಿದ್ದವರೇ ವಿಪಕ್ಷ ನಾಯಕರಾಗುವುದು ಸಂಪ್ರದಾಯ.
ಇದಕ್ಕೆ ಕಾರಣವೂ ಇದೆ.ಅದೆಂದರೆ ಮುಖ್ಯಮಂತ್ರಿಗಳಾಗಿದ್ದವರಿಗೆ ಸರ್ಕಾರದ ಎಲ್ಲ ಇಲಾಖೆಗಳ ಆಳ-ಅಗಲ ಗೊತ್ತಿರುತ್ತದೆ.ಅದೇ ರೀತಿ ಬಯಸಿದ ಮಾಹಿತಿ ಪಡೆಯಲು ಅವರಿಗೆ ಬೇಕಾದ ಅಧಿಕಾರಿಗಳಿರುತ್ತಾರೆ.
ಇದೇ ಕಾರಣಕ್ಕಾಗಿ ಕರ್ನಾಟಕದ ಇತಿಹಾಸದಲ್ಲಿ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡು ಅಧಿಕೃತ ವಿರೋಧ ಪಕ್ಷವಾದಾಗ ಮುಖ್ಯಮಂತ್ರಿಗಳಾಗಿದ್ದವರೇ ವಿಪಕ್ಷ ನಾಯಕರಾಗಿದ್ದು ಜಾಸ್ತಿ. 2006 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಉರುಳಿ ಬಿದ್ದು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಧರ್ಮಸಿಂಗ್ ಪ್ರತಿಪಕ್ಷ ನಾಯಕರಾಗಿದ್ದರು. 2013 ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಶುರುವಿನಲ್ಲಿ ಜೆಡಿಎಸ್ ನ ಕುಮಾರಸ್ವಾಮಿ, ನಂತರ ಬಿಜೆಪಿಯ ಜಗದೀಶ್ ಶೆಟ್ಟರ್, 2018 ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಮೇಲೆದ್ದಾಗ ಬಿಜೆಪಿಯ ಯಡಿಯೂರಪ್ಪ, 2019 ರಲ್ಲಿ ಬಿಜೆಪಿ ಸರ್ಕಾರ ಸೆಟ್ಲಾದಾಗ ಸಿದ್ಧರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದರು.
1983 ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಗುಂಡೂರಾಯರು ಸೋಲನುಭವಿಸಿದ್ದರಿಂದ ಜನತಾರಂಗ ಸರ್ಕಾರದ ಎದುರು ಪ್ರತಿಪಕ್ಷ ನಾಯಕರಾಗಲು ಸಾಧ್ಯವಾಗಲಿಲ್ಲ. 1994 ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಾಗ ಅದಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನವೇ ಇರಲಿಲ್ಲ. ಹಾಗೆ ನೋಡಿದರೆ ಪಕ್ಷ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆದರೂ ವಿಪಕ್ಷ ನಾಯಕ ಸ್ಥಾನದಲ್ಲಿ ಕೂರದ ಮಾಜಿ ಮುಖ್ಯಮಂತ್ರಿ ಎಂದರೆ ರಾಮಕೃಷ್ಣ ಹೆಗಡೆ. 1989 ರಲ್ಲಿ ಜನತಾದಳ ಇಪ್ಪತ್ನಾಲ್ಕು ಸ್ಥಾನ ಗೆದ್ದು ಅಧಿಕೃತ ವಿರೋಧ ಪಕ್ಷವಾದಾಗ,ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹೆಗಡೆ ಸಹಜ ಆಯ್ಕೆಯಾಗಿದ್ದರು. ಆದರೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಾಟ್ಲಿಂಗ್ ಹಗರಣ,ರೇವಜಿತು ಹಗರಣ,ಟೆಲಿಫೋನ್ ಕದ್ದಾಲಿಕೆ ಹಗರಣಗಳಿಗೆ ಸಿಲುಕಿಕೊಂಡಿದ್ದ ಅವರು,ಇಷ್ಟೆಲ್ಲ ರಗಳೆ ಹೆಗಲ ಮೇಲಿರುವಾಗ ತಾವು ವಿಪಕ್ಷ ನಾಯಕನಾಗಿ ಕೂರುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು.
ಹೀಗಾಗಿ ಅವತ್ತು ಡಿ.ಬಿ.ಚಂದ್ರೇಗೌಡರು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆಯಾದರು. ಹೀಗೆ ಆಡಳಿತಾರೂಢ ಪಕ್ಷ ಅಧಿಕೃತ ವಿರೋಧ ಪಕ್ಷವಾದಾಗ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮುಖ್ಯಮಂತ್ರಿಗಳಾಗಿದ್ದವರೇ ಬಂದು ಕೂರುವುದು ಪ್ರಾಕ್ಟಿಕಲ್ ಕೂಡಾ. ಯಾರೇನೇ ಹೇಳಿದರೂ ಇವತ್ತು ಸಿದ್ಧರಾಮಯ್ಯ ಅವರ ಮುಂದೆ ನಿಲ್ಲುವ ಮತ್ತು ಹಣಕಾಸಿನ ವಿಷಯದಲ್ಲಿ ಪವರ್ ಫುಲ್ಲಾಗಿ ಮಾತನಾಡುವ ಶಕ್ತಿ ಅಂತಿದ್ದರೆ ಅದು ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಅಜೆಂಡಾ ಹಿಡಿದು ಹೋರಾಡಲು ಒಂದು ರಾಜಕೀಯ ಪಕ್ಷಕ್ಕೆ ಜನತಾ ನ್ಯಾಯಾಲಯ ಸಾಕು,ಆದರೆ ವಿಧಾನಸಭೆಯಲ್ಲಿ ಹೋರಾಡಲು ಅದಕ್ಕೆ ವಿಷಯ ಜ್ಞಾನದ ನೇತೃತ್ವ ಬೇಕೇ ಬೇಕು.
ಆ ದೃಷ್ಟಿಯಿಂದ ಬೊಮ್ಮಾಯಿ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ತರದೆ ಬಿಜೆಪಿ ವರಿಷ್ಟರಿಗೆ ವಿಧಿಯಿಲ್ಲ.ಒಂದು ವೇಳೆ ಹಾಗೆ ಮಾಡದೆ ಬೊಮ್ಮಾಯಿ ಮ್ಯಾಚ್ ಫಿಕ್ಸಿಂಗ್ ಕ್ಯಾಂಡಿಡೇಟು ಅಂತ ವಾದಿಸುವವರ ಪರ ಅದು ನಿಂತರೆ,ಬೇರೊಬ್ಬರನ್ನು ತಂದರೆ ಪರಿಸ್ಥಿತಿ ಕಷ್ಟಕರವಾಗಬಹುದು.
ಶೋಭಾ ಕರಂದ್ಲಾಜೆ
ಏಕೆ ಬೇಕು?
------------------------------------
ಅಂದ ಹಾಗೆ ಇಂತಹ ಅಂಶಗಳೆಲ್ಲ ಬೊಮ್ಮಾಯಿ ಅವರಿಗೆ ಪ್ಲಸ್ ಆಗುವುದರಿಂದ ಯಡಿಯೂರಪ್ಪ ಅವರಿಗೆ ಹೆಚ್ಚಿನ ಚಿಂತೆ ಇಲ್ಲ. ಆದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ತರುವ ವಿಷಯದಲ್ಲಿ ಅವರಿಗೆ ಒಂದಿಲ್ಲೊಂದು ಅಡ್ಡಿ ಎದುರಾಗುತ್ತಿದೆ. ಹಾಗಂತಲೇ ಅವರು ಶಾಂಗ್ರಿಲಾ ಹೋಟೆಲಿನ ಮೀಟಿಂಗಿನಲ್ಲಿ ಕುಳಿತು ವಿಜಯೇಂದ್ರ ಅವರಿಗಿದ್ದ ವಿರೋಧವನ್ನು ನಿವಾರಿಸಿದ್ದಾರೆ. ಇದಾದ ನಂತರ ದಿಲ್ಲಿಗೆ ಹೋದ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ಚರ್ಚಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ತಂದರೆ ಕರ್ನಾಟಕದಲ್ಲಿ ಒಕ್ಕಲಿಗ ಮತ ಬ್ಯಾಂಕನ್ನು ಕ್ರೋಢೀಕರಿಸುವುದು ಸುಲಭ ಎಂದವರು ಹೇಳಿದ್ದನ್ನು ನಡ್ಡಾ ಕುತೂಹಲದಿಂದ ಕೇಳಿಸಿಕೊಂಡರಂತೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹಳೆ ಮೈಸೂರು ಭಾಗದ ಬಹುತೇಕ ಒಕ್ಕಲಿಗ ಮತದಾರರು ಕಾಂಗ್ರೆಸ್ ಗೆ ಪರ್ಯಾಯವಾದ ಶಕ್ತಿಯನ್ನು ಅರಸುತ್ತಿದ್ದಾರೆ.ಇಂತಹ ಕಾಲದಲ್ಲಿ ಬಿಜೆಪಿ-ಜೆಡಿಎಸ್ ಪರಸ್ಪರ ಕೈಗೂಡಿಸಿದರೆ ಮತ್ತು ಅದೇ ಕಾಲಕ್ಕೆ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಬಿಜೆಪಿಯ ಮುಂಚೂಣಿಯಲ್ಲಿ ನಿಂತಿದ್ದರೆ ಒಕ್ಕಲಿಗ ಮತದಾರರು ಕನ್ ಸಾಲಿಡೇಟ್ ಆಗುತ್ತಾರೆ. ಕಳೆದ ಚುನಾವಣೆಯಲ್ಲಿ ನಾವು ಜೆಡಿಎಸ್ ಮತ ಬ್ಯಾಂಕನ್ನು ಒಡೆದಿದ್ದರಿಂದ ಅದು ಕಾಂಗ್ರೆಸ್ಸಿಗೆ ಅನುಕೂಲವಾಯಿತು.ಈಗ ಆ ಮತ ಬ್ಯಾಂಕು ಒಗ್ಗೂಡುವಂತೆ ಮಾಡಿದರೆ ನಾವು ಯಶಸ್ಸು ಗಳಿಸುವುದು ಗ್ಯಾರಂಟಿ. ಇಷ್ಟಾದ ನಂತರ ನೋ ಡೌಟ್,ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾವು ಇಪ್ಪತ್ತಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಅಂತ ಯಡಿಯೂರಪ್ಪ ವಿವರಿಸಿದಾಗ ನಡ್ಡಾ ತಲೆದೂಗಿದರಂತೆ.
ಶೋಭಕ್ಕ ಬಂದ್ರೆ ತಲೆ
ಎತ್ತಲಿದೆ ಕೆಜೆಪಿ?
------------------------------
ಯಾವಾಗ ಯಡಿಯೂರಪ್ಪ ದಿಲ್ಲಿಗೆ ಹೋಗಿ ಶೋಭಾ ಕರಂದ್ಲಾಜೆ ಪಕ್ಷಾಧ್ಯಕ್ಷರಾಗಲಿ ಅಂತ ಹೇಳಿ ಬಂದರೋ?ಇದಾದ ನಂತರ ಅವರ ವಿರೋಧಿ ಗ್ಯಾಂಗು ಕುದಿಯತೊಡಗಿದೆ.
ಹಾಗಂತಲೇ ಅದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಸಂದೇಶ ರವಾನಿಸಿ,ಶೋಭಾ ಪಕ್ಷದ ಅಧ್ಯಕ್ಷರಾದರೆ ಕರ್ನಾಟಕದಲ್ಲಿ ಕೆಜೆಪಿ ಮತ್ತೆ ತಲೆ ಎತ್ತಲಿದೆ ಅಂತ ಹೇಳಿದೆಯಂತೆ.
ಮತ್ತೊಮ್ಮೆ ಕೆಜೆಪಿ ತಲೆ ಎತ್ತುವುದು ಎಂದರೆ ಯಡಿಯೂರಪ್ಪ ನಿಷ್ಟರು ಮೇಲೆದ್ದು,ಪಕ್ಷ ನಿಷ್ಟರು ಮೂಲೆಗುಂಪಾಗುವುದು ನಿಶ್ಚಿತ ಅಂತಲೂ ವಿವರಿಸಿದೆಯಂತೆ.
ಎಲ್ಲಕ್ಕಿಂತ ಮುಖ್ಯವಾಗಿ ಶೋಭಾ ಕರಂದ್ಲಾಜೆ ಪಕ್ಷದ ಅಧ್ಯಕ್ಷರಾದರೆ ಬಿಜೆಪಿಗಿಂತ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಪ್ಲಸ್ಸು.ಯಾಕೆಂದರೆ ಇವರಿಬ್ಬರೂ ಕರ್ನಾಟಕದಲ್ಲಿ ಪವರ್ ಮಿನಿ ಸ್ಟರುಗಳಾಗಿದ್ದವರು ಅಂತ ಅದು ಸೂಚ್ಯವಾಗಿ ಹೇಳಿದೆಯಂತೆ. ಪರಿಣಾಮ?ರಾಜ್ಯ ಬಿಜೆಪಿಯನ್ನು ವಶಪಡಿಸಿಕೊಳ್ಳಲು ಎರಡು ಬಣಗಳು ನಡೆಸಿರುವ ಕದನ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮುಂದೇನೋ?ಕಾದು ನೋಡಬೇಕು.
ರಾಜಕೀಯ ವಿಶ್ಲೇಷಣೆ ; ಆರ್.ಟಿ.ವಿಠ್ಠಲಮೂರ್ತಿ
A few days ago, an important meeting was held at the Shangri-La Hotel in Bengaluru. Former Chief Minister B S Yediyurappa and his son B Y Vijayendra were among those present at the meeting. Speaking there, Yediyurappa gave an important clue to his son. If the BJP has to be revived in the state and our objective of winning more than 20 seats in the parliamentary elections is to be fulfilled, then those we have suggested for the post of state president of the party should come and sit down.
22-01-25 11:00 am
HK News Desk
Priyanka, Mohan Bhagwat; ಬೆಳಗಾವಿ ; ಮೋಹನ್ ಭಾಗವ...
21-01-25 10:59 pm
BJP MLA BP Harish, B. Y. Vijayendra, Yatnal:...
20-01-25 07:00 pm
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
21-01-25 11:02 pm
HK News Desk
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
21-01-25 11:51 pm
Mangalore Correspondent
Mangalore Praveen Nettaru murder case, NIA ar...
21-01-25 09:43 pm
Mangalore University, Phd courses: ಪಿಎಚ್ ಡಿ ಪ...
21-01-25 08:11 pm
Mangalore Kotekar bank robbery, president: 15...
21-01-25 07:43 pm
Mangalore Kotekar Bank Robbery, Accused Photo...
21-01-25 12:21 pm
22-01-25 11:04 am
Mangalore Correspondent
Kotekar Bank Robbery, Police Shoot: ಬ್ಯಾಂಕ್ ದ...
21-01-25 06:00 pm
Hubballi Bank Robbery, Kotekar, Bidar: ಬೀದರ್...
20-01-25 10:18 pm
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm