Islamic NATO, Saudi–UAE Ties: ಮೋದಿ ಭೇಟಿಗೆ ಅರ್ಜಂಟಾಗಿ ಬಂದಿದ್ದೇಕೆ ಯುಎಇ ರಾಜ? ಕಡಿದುಬಿದ್ದ ಸೌದಿ- ಯುಎಇ ಸಂಬಂಧ ; ಇಸ್ಲಾಮಿಕ್ ನ್ಯಾಟೋಗೆ ಭಾರತ ಭೇಟಿ ಉತ್ತರ, ಶತ್ರುವಿನ ಶತ್ರು ಮಿತ್ರನಾಗೋದು ಹೇಗೆ? ಲಿಬರಲ್ ಆಗ್ತಿದೆ ಸೌದಿ! 

21-01-26 07:42 pm       Giridhar Shetty, Senior Journalist   ಅಂಕಣಗಳು

ಸಾಮಾನ್ಯವಾಗಿ ಒಂದು ರಾಷ್ಟ್ರದ ಮುಖ್ಯಸ್ಥರು ಇನ್ನೊಂದು ರಾಷ್ಟ್ರಕ್ಕೆ ಪ್ರವಾಸ ಹೋದಲ್ಲಿ ಒಂದೆರಡು ದಿನ ಇದ್ದು ಹೋಗುತ್ತಾರೆ. ಆದರೆ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೇದ್ ಜನವರಿ 19ರಂದು ಸಂಜೆ ಏಕಾಏಕಿ ಭಾರತದ ರಾಜಧಾನಿ ದೆಹಲಿಗೆ ಬಂದು, ಕೇವಲ ಎರಡು ಗಂಟೆ ಕಾಲ ಪ್ರಧಾನಿ ಮೋದಿ ಜೊತೆಗೆ ಚರ್ಚಿಸಿ ಅಷ್ಟೇ ವೇಗದಲ್ಲಿ ಹಿಂತಿರುಗಿ ಹೋಗಿದ್ದಾರೆ.

ಸಾಮಾನ್ಯವಾಗಿ ಒಂದು ರಾಷ್ಟ್ರದ ಮುಖ್ಯಸ್ಥರು ಇನ್ನೊಂದು ರಾಷ್ಟ್ರಕ್ಕೆ ಪ್ರವಾಸ ಹೋದಲ್ಲಿ ಒಂದೆರಡು ದಿನ ಇದ್ದು ಹೋಗುತ್ತಾರೆ. ಆದರೆ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೇದ್ ಜನವರಿ 19ರಂದು ಸಂಜೆ ಏಕಾಏಕಿ ಭಾರತದ ರಾಜಧಾನಿ ದೆಹಲಿಗೆ ಬಂದು, ಕೇವಲ ಎರಡು ಗಂಟೆ ಕಾಲ ಪ್ರಧಾನಿ ಮೋದಿ ಜೊತೆಗೆ ಚರ್ಚಿಸಿ ಅಷ್ಟೇ ವೇಗದಲ್ಲಿ ಹಿಂತಿರುಗಿ ಹೋಗಿದ್ದಾರೆ. ಪ್ರಧಾನಿ ಮೋದಿ ಶಿಷ್ಟಾಚಾರಗಳನ್ನು ಬದಿಗೊತ್ತಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಯುಎಇ ಅಧ್ಯಕ್ಷರನ್ನು ಆಲಿಂಗಿಸಿ ಬರಮಾಡಿಕೊಂಡಿದ್ದಾರೆ.

ಇಷ್ಟಕ್ಕೂ ಯುಎಇ ಅಧ್ಯಕ್ಷರು ಇಷ್ಟೊಂದು ವೇಗದಲ್ಲಿ ಭಾರತಕ್ಕೆ ಬಂದು ಹೋಗಿದ್ದು ಯಾಕೆ ಅನ್ನುವುದು ರಾಜಕೀಯ ವಲಯದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದೆ. ವ್ಯಾಪಾರ, ಹೂಡಿಕೆ, ವಿನಿಮಯ ಅದೇನೇ ಇದ್ದರೂ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸುವ ದುಬೈ ಎಂಬ ಅಗಣಿತ ನಿಧಿಗಳ ರಾಜನೊಬ್ಬ ಭಾರತಕ್ಕೆ ಅಷ್ಟು ಅರ್ಜಂಟಲ್ಲಿ ಬಂದು ಹೋಗಬೇಕಿರಲಿಲ್ಲ. ಅದಕ್ಕೆ ಅಂಥದ್ದೇ ದರ್ದು ಇತ್ತು ಎನ್ನುವ ಮಾತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ.

ಗಲ್ಫ್ ಸಂಬಂಧ ಹಿಂದಿನಂತಿಲ್ಲ !

ಮಧ್ಯಪ್ರಾಚ್ಯದ ಯೆಮನ್ ಪ್ರತ್ಯೇಕ ರಾಷ್ಟ್ರವಾಗಿದ್ದರೂ, ಅಲ್ಲಿ ಬಂಡುಕೋರರದ್ದೇ ಪ್ರಾಬಲ್ಯ. ಯಾವುದೇ ರೀತಿ-ನೀತಿಯಿಲ್ಲದೆ ನಿಯಂತ್ರಣ ಕಳಕೊಂಡಿರುವ ಆ ದೇಶವನ್ನು ಒಂದು ಕಡೆಯಿಂದ ಸೌದಿ ಅರೇಬಿಯಾ ಮತ್ತು ಇನ್ನೊಂದು ಕಡೆಯಿಂದ ಯುಎಇ ವಶಕ್ಕೆ ಪಡೆಯಲು ನೋಡುತ್ತಿವೆ. ಈ ಪ್ರಯತ್ನ ಒಂದು ವರ್ಷದಿಂದ ಆಗುತ್ತಿದ್ದರೂ, ಆರು ತಿಂಗಳಿಂದೀಚೆಗೆ ಸೌದಿ ಇದೇ ವಿಚಾರ ಮುಂದಿಟ್ಟು ಯುಎಇ ವಿರುದ್ಧ ನಿಂತಿದೆ. ಯಾಕಂದ್ರೆ, ಗಲ್ಫ್ ರಾಷ್ಟ್ರದಲ್ಲಿ ಸೌದಿ ಅರೇಬಿಯಾದ್ದು ದೊಡ್ಡಣ್ಣನಾಗುವ ಬಯಕೆ. ಕಳೆದ ಡಿಸೆಂಬರ್ ಅಂತ್ಯದಲ್ಲಿ ಯುಎಇ ವಿರುದ್ಧವೇ ಯೆಮನ್ ದೇಶದಲ್ಲಿ ಸೇನೆಯನ್ನು ಜಮಾಯಿಸಿ ಕಾಲು ಕೆರೆದುಕೊಂಡು ಬಂದಿದೆ. ಸಂಪತ್ತಿನಲ್ಲಿ ಹೆವಿ ವೈಟ್ ಆಗಿದ್ದರೂ, ಸೇನೆಯಲ್ಲಿ ಸೌದಿಯನ್ನು ಎದುರು ಹಾಕುವಷ್ಟು ತಾಕತ್ತು ಯುಎಇಗಿಲ್ಲ.

ಇದೇ ವೇಳೆ, ಅತ್ತ ಅಮೆರಿಕವು ಇರಾನ್ ವಿರುದ್ಧ ನಿಂತಿದ್ದು, ಯಾವುದೇ ಕ್ಷಣದಲ್ಲಿ ಅಟ್ಯಾಕ್ ಮಾಡುತ್ತೇನೆಂದು ಅಬ್ಬರಿಸುತ್ತಿದೆ. ಆದರೆ ಅಮೆರಿಕದ ಆಕ್ರಮಣಕ್ಕೆ ಗಲ್ಫ್ ರಾಷ್ಟ್ರಗಳು ವಿರೋಧಿಸಿದ್ದು, ಸೇನಾ ನೆಲೆಯನ್ನು ಬಳಸಿಕೊಳ್ಳದಂತೆ ಪರೋಕ್ಷವಾಗಿ ಹೇಳುತ್ತಿದೆ. ಸೌದಿ ಪಕ್ಕದಲ್ಲಿರುವ ಕತಾರ್ ನಲ್ಲಿ ಅಮೆರಿಕ ಸೇನಾ ಬೇಸ್ ಇದೆ. ನಾಲ್ಕು ತಿಂಗಳ ಹಿಂದೆ ಇಸ್ರೇಲ್, ಕತಾರ್ ಮತ್ತು ಇರಾನ್ ಮೇಲೆ ಏಕಾಏಕಿ ಅಟ್ಯಾಕ್ ಮಾಡಿರುವುದು, ಹಾಗಿದ್ರೂ ಅಮೆರಿಕ ಮೌನವಾಗಿದ್ದು ಆ ದೇಶಗಳನ್ನು ಸಿಟ್ಟಿಗೇಳುವಂತೆ ಮಾಡಿದೆ. ಈವರೆಗೂ ಯುಎಇ, ಕತಾರ್ ನಂತಹ ಸಣ್ಣ ರಾಷ್ಟ್ರಗಳು ತಮಗೆ ತೊಂದರೆಯಾದರೆ ಅಮೆರಿಕ ಬೆನ್ನಿಗಿದೆ ಎಂದೇ ನಂಬಿದ್ದವು. ಅದೇ ಕಾರಣಕ್ಕೆ ಅಮೆರಿಕಕ್ಕೆ ಸೇನಾ ನೆಲೆ ಸ್ಥಾಪಿಸಲು ಜಾಗ ಬಿಟ್ಟುಕೊಂಡಿದ್ದವು. ಮತ್ತೊಂದು ಕಡೆ ಕೆಂಪು ಸಮುದ್ರದಲ್ಲಿ ತಲೆದೋರಿರುವ ಬಿಕ್ಕಟ್ಟು, ಗಾಜಾ ಪಟ್ಟಿಯ ಅಶಾಂತಿ, ಇಸ್ರೇಲ್- ಹಮಾಸ್ ಸಂಘರ್ಷ ಇವೆಲ್ಲ ಕಾರಣದಿಂದಾಗಿ ಗಲ್ಫ್ ರಾಷ್ಟ್ರದಲ್ಲಿ ಶಾಂತಿ ಅನ್ನುವುದೇ ಮಗ್ಗಲು ಬದಲಿಸಿ ಮಲಕ್ಕೊಂಡು ಬಿಟ್ಟಿದೆ.  

ಸುನ್ನಿ- ಶಿಯಾಗಳ ಹಗೆತನ

ಗಲ್ಫ್ ನಲ್ಲಿರುವುದು ಮುಸ್ಲಿಂ ರಾಷ್ಟ್ರಗಳೇ ಆಗಿದ್ದರೂ, ಒಳಗಡೆ ಶಿಯಾ ಮತ್ತು ಸುನ್ನಿಗಳ ನಡುವೆ ಪ್ರಾಬಲ್ಯಕ್ಕಾಗಿ ಹೊಯ್ದಾಟ ಇದೆ. ಸೌದಿ ಅರೇಬಿಯಾ, ಯುಎಇ, ಕತಾರ್ ಸುನ್ನಿಗಳ ಆಡಳಿತ ಹೊಂದಿದ್ದರೆ, ಇರಾನ್ ಶಿಯಾಗಳ ಪ್ರಾಬಲ್ಯದಲ್ಲಿದೆ. ಇರಾಕ್ ನಲ್ಲಿ ಸುನ್ನಿಗಳೇ ಹೆಚ್ಚಿದ್ದರೂ ಹಿಂದೆ ಶಿಯಾ ಪಂಗಡದ ಸದ್ದಾಂ ಹುಸೇನ್ ಅಧ್ಯಕ್ಷನಾಗಿದ್ದ ವೇಳೆ ಆತನನ್ನು ಅಮೆರಿಕ ಸದೆಬಡಿದಾಗ ಇತ್ತ ಸುನ್ನಿಗಳು ಒಳಗಿಂದೊಳಗೆ ಸಂಭ್ರಮಿಸಿದ್ದರು. ಈಗಲೂ ಇವರೊಳಗೆ ಅಧಿಪತ್ಯಕ್ಕಾಗಿ ಕಾದಾಟ ಇದೆ. ಈಗಂತೂ ತಾವು ಸುನ್ನಿಗಳೇ ಆಗಿದ್ದರೂ, ಪಕ್ಕದ ಯುಎಇ ವಿರುದ್ಧ ಸೌದಿ ಕಾಲು ಕೆರೆಯುತ್ತಿದ್ದು, ಯೆಮನ್ ಬಂಡುಕೋರರನ್ನು ಛೂಬಿಡುತ್ತಿದೆ. ಇದೇ ವೇಳೆ, ಸೌದಿ, ಟರ್ಕಿ ಮತ್ತು ಪಾಕಿಸ್ತಾನ ಸೇರಿಕೊಂಡು ಇಸ್ಲಾಮಿಕ್ ನ್ಯಾಟೋ ಸ್ಥಾಪನೆಗೆ ಮುಂದಾಗಿರುವುದು ಯುಎಇಗೆ ಸಿಟ್ಟು ತರಿಸಿದೆ. ಅಮೆರಿಕವನ್ನು ಎದುರು ಹಾಕ್ಕೊಳ್ಳುವ ತಂತ್ರಗಾರಿಕೆ ಇಲ್ಲವಾದರೂ, ನ್ಯಾಟೋ ಸ್ಥಾಪನೆಯ ಉದ್ದೇಶ ಯುಎಇ ಪ್ರಾಬಲ್ಯಕ್ಕೆ ಕಡಿವಾಣ ಹಾಕೋದೇ ಆಗಿದೆ.

ಶತ್ರುವಿನ ಶತ್ರು ಮಿತ್ರನಂತೆ

ಪಾಕಿಸ್ತಾನ ಏನಿದ್ದರೂ ಭಾರತದ ವೈರಿ ರಾಷ್ಟ್ರ. ಈಗ ತೈಲ ಸಮೃದ್ಧಿಯ ಸೌದಿ, ಪಾಕ್ ಜೊತೆಗೆ ಸೇರಿದರೆ ಸಹಜವಾಗಿಯೇ ಭಾರತ ವಿರೋಧಿಯಾಗುತ್ತದೆ. ಅದೇ ಕಾರಣಕ್ಕೆ ಯುಎಇ ರಾಜ, ಸೇನಾಶಕ್ತಿಯಲ್ಲಿ ಜಗತ್ತಿನ ಮೂರನೇ ಪ್ರಾಬಲ್ಯದ ಮಿಲಿಟರಿಯನ್ನು ಹೊಂದಿರುವ ಭಾರತದತ್ತ ಮುಖ ಮಾಡಿದ್ದಾರೆ. ಅತ್ತ ಅಮೆರಿಕದ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ರೀತಿ ಮಾತನ್ನಾಡುತ್ತಿರುವುದು, ಗ್ರೀನ್ ಲ್ಯಾಂಡ್ ನೆಪದಲ್ಲಿ ಯುರೋಪ್ ರಾಷ್ಟ್ರಗಳನ್ನೇ ಎದುರು ಹಾಕ್ಕೊಂಡಿರುವುದು, ಆತನ ಮಾತನ್ನು ಯಾರು ಕೂಡ ನಂಬದ ಸ್ಥಿತಿಯಾಗಿರುವ ಸಂದರ್ಭದಲ್ಲಿ ಉಳಿದಿರೋದು ಆಪ್ತ ಮಿತ್ರ ಭಾರತ ಮಾತ್ರ ಅನ್ನೋದು ಝಾಯೇದ್ ಪಾಲಿಗೆ ಖರೆಯಾಗಿದೆ. ಯಾಕಂದ್ರೆ, ದುಬೈನಲ್ಲಿ ಏನಿಲ್ಲಾಂದ್ರೂ ಸುಮಾರು 45 ಲಕ್ಷ ಮಂದಿ ಭಾರತೀಯರೇ ಇದ್ದಾರೆ. ಅತ್ತ ಸೌದಿ ನ್ಯಾಟೋ ನೆಪದಲ್ಲಿ ಪಾಕನ್ನು ಅಪ್ಪಿಕೊಂಡರೆ, ಇತ್ತ ಯುಎಇ ತನ್ನ ಸ್ವಾರ್ಥಕ್ಕೆ ಭಾರತವನ್ನು ಆಶ್ರಯಿಸಿದೆ. ಹಾಗಾಗಿ ಆ ಕಡೆಯ ನ್ಯಾಟೋ ರೂಪ ಪಡೆಯುವ ಮೊದಲೇ ಯುಎಇ ರಾಜ ದೆಹಲಿಗೆ ದೌಡಾಯಿಸಿ ಮೋದಿ ಜೊತೆಗೆ ಗುಪ್ತ ಮಾತುಗಳನ್ನಾಡಿ ಹೋಗಿದ್ದಾರೆ.

ಆಧುನಿಕ ಕಾಲದಲ್ಲಿ ಫೋನ್, ಇನ್ನಿತರ ಸಂವಹನ ಮಾಧ್ಯಮ ಇರುವಾಗ ಅದ್ಯಾವುದೂ ಬೇಡವೆಂದು ವಿಶೇಷ ವಿಮಾನ ಹತ್ತಿಕೊಂಡು ನೇರವಾಗಿ ದೆಹಲಿಗೆ ಬಂದು ಮೋದಿ ಜೊತೆಗೆ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತ ಪ್ರಧಾನಿ ಕಚೇರಿಯಲ್ಲಿ ಎರಡು ಗಂಟೆ ಕಾಲ ಅರ್ಜಂಟ್ ಮಾತಾಡಿದ್ದು ಏನಿರಬಹುದು ಅನ್ನೋದು ಊಹಿಸಲು ಬರುತ್ತಿದೆ. ವ್ಯಾಪಾರ, ಹೂಡಿಕೆ ಇನ್ನಾವುದೇ ಒಪ್ಪಂದಕ್ಕಿಂತಲೂ ಅಂತಾರಾಷ್ಟ್ರೀಯ ಸಂಬಂಧ, ಸೇನಾ ಮೈತ್ರಿ ಮುಖ್ಯ ಎನ್ನುವುದನ್ನು ದುಬೈ ತಡವಾಗಿ ತಿಳ್ಕೊಂಡಂತಿದೆ. ಅಷ್ಟೇ ಅಲ್ಲ, ಹಿಡನ್ ಅಜೆಂಡಾ ಏನಪ್ಪಾಂದ್ರೆ ಯುಎಇ, ಭಾರತದ ಮೂಲಕ ಇಸ್ರೇಲ್ ಜೊತೆಗಿನ ಒಳಮೈತ್ರಿಯನ್ನು ಗಟ್ಟಿ ಮಾಡಲು ಮುಂದಾಗಿದೆ. ಸುತ್ತಲೂ ಇರಾನ್, ಸೌದಿಯಂಥ ಮುಸ್ಲಿಂ ರಾಷ್ಟ್ರಗಳಿದ್ದರೂ, ಇಸ್ರೇಲ್ ವಿಶ್ವದಲ್ಲೇ ಅತಿ ಪ್ರಬಲ ಸೇನಾ ಶಕ್ತಿ ಹೊಂದಿದೆ. ಮೇಲಾಗಿ ಇಸ್ರೇಲ್, ಭಾರತದ ಪಾಲಿಗೆ ಸನ್ಮಿತ್ರ. ಇಸ್ಲಾಮಿಕ್ ನ್ಯಾಟೋ ವಿಚಾರದಲ್ಲಿ ಭಾರತದ ಜೊತೆಗೆ ನಿಂತರೆ ಶತ್ರುವಿನ ಶತ್ರು ಮಿತ್ರನಾಗುತ್ತಾನೆ ಅನ್ನುವುದನ್ನು ಯುಎಇ ಈ ರಹಸ್ಯ ಭೇಟಿ ಮೂಲಕ ಸೌದಿಗೆ ತೋರಿಸಿಕೊಟ್ಟಿದೆ.


ಲಿಬರಲ್ ಆಗುತ್ತಿದೆ ಸೌದಿ ಅರೇಬಿಯಾ 

ಶಿಯಾ ಪ್ರಾಬಲ್ಯದ ಇರಾನ್ ಅತ್ಯಂತ ಕಟ್ಟರ್ ವಾದಿಗಳ ಹಿಡಿತದ ದೇಶ. ಯುವತಿಯರ ಪಾಲಿಗೆ ಉಸಿರುಕಟ್ಟುವ ವಾತಾವರಣ ಅಲ್ಲಿದೆ. ಇದೇ ಕಾರಣಕ್ಕಾಗಿ ಇರಾನಿ ಯುವತಿಯರು, ಯುವಕರು ಸರ್ವಾಧಿಕಾರಿ ದೊರೆ ಖಮೇನಿಯನ್ನು ರಾಜ್ಯಾಡಳಿತದಿಂದ ಇಳಿಸಲು ಹೋರಾಡುತ್ತಿದ್ದಾರೆ. ಮಹಿಳೆಯರ ಮೇಲಿನ ಅತಿಯಾದ ನಿಯಂತ್ರಣ, ಬುರ್ಖಾ ಇಲ್ಲದೆ ಹೊರಬಂದರೆ ಗುಂಡಿಟ್ಟು ಸಾಯಿಸುವಂಥ ಸಂಸ್ಕೃತಿಯಿಂದ ಜನರು ಬೇಸತ್ತಿದ್ದಾರೆ. ರಾಜರು ತಮ್ಮನ್ನು ಗುಲಾಮರನ್ನಾಗಿಸಿ ಸಮಾಜಕ್ಕೆ ಮಾತ್ರ ಬೋಧನೆ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಯುವತಿಯರು ಬೀದಿಗಿಳಿದು ತಾವೂ ಸಿಗರೇಟು ಸೇದುತ್ತಾ ಪೋಸು ಕೊಟ್ಟು ಖಮೇನಿ ಆಡಳಿತಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ಇದೇ ರೀತಿಯ ಕಟ್ಟುಪಾಡು ಹಿಂದೆ ಸೌದಿಯಲ್ಲೂ ಇತ್ತು. ಆದರೆ ಈಗೀಗ ಸೌದಿ ಬಿಗಿ ನಿಯಮಗಳನ್ನು ಸಡಿಲಿಸುತ್ತಿದೆ, ಮಹಿಳೆಯರ ಮೇಲಿನ ಕಟ್ಟುಪಾಡುಗಳನ್ನೂ ಸಡಿಲ ಮಾಡಿಕೊಂಡಿದೆ.

ಅಮೆರಿಕದ ಪೆಕರಾಟಕ್ಕೆ ಎಚ್ಚರ

ಯುಎಇ, ಬೆಹ್ರೈನ್ ಥರ ಟೂರಿಸಂ ಆಕರ್ಷಿಸದಿದ್ದರೆ, ಅಮೆರಿಕದ ಪೆಕರಾಟದ ಮಧ್ಯೆ ಭವಿಷ್ಯ ಕರಾಳವಾದೀತು ಅನ್ನುವುದನ್ನು ಅರಿತುಕೊಳ್ತಿದೆ. ಕುಡಿತ, ಮೋಜಿಗಾಗಿ ದುಬೈ, ಬೆಹರಿನ್ ಹೋಗಬೇಕಿಲ್ಲ, ಇಲ್ಲಿಯೇ ಪ್ರತ್ಯೇಕ ಸ್ಥಳವನ್ನು ನಿರ್ಮಿಸುತ್ತೇವೆಂದು ಸೌದಿಯಲ್ಲೇ ಒಂದು ಜಾಗವನ್ನು ದುಬೈ ರೀತಿ ಬೆಳೆಸ್ತಾ ಇದೆ. ಇದಕ್ಕೆ ಐಸಿಸ್, ಇರಾನಿ ಕಟ್ಟರ್ ವಾದಿಗಳ ವಿರೋಧ ಇದ್ದರೂ, ಸೌದಿಯ ರಾಜನಿಗೂ ಇವರನ್ನು ನಂಬಿಕೊಂಡು ಕುಳಿತರೆ ಭವಿಷ್ಯ ಇಲ್ಲ ಅನ್ನುವುದು ಅರಿವಿಗೆ ಬಂದಿದೆ. ಹೀಗಾಗಿ ಗಲ್ಫ್ ರಾಷ್ಟ್ರಗಳು ತೈಲ ಸಮೃದ್ಧಿ ಇದ್ದರೂ, ಅಮೆರಿಕದ ಕೊಳ್ಳುಬಾಕತನ, ತೈಲ ರಾಷ್ಟ್ರಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಹಪಾಹಪಿಯಿಂದಾಗಿ ಆ ರಾಷ್ಟ್ರವನ್ನು ನಂಬಿ ಕೂರುವುದನ್ನು ಬಿಟ್ಟು ತಮ್ಮಲ್ಲೂ ಸೇನಾ ಶಕ್ತಿ ಇರಬೇಕೆಂದು ಬಯಸುತ್ತಿದೆ. ಈ ಕಾರಣಕ್ಕಾಗಿ ಭಾರತ, ರಷ್ಯಾ, ಇಸ್ರೇಲಿನಿಂದ ಸೇನಾ ಉಪಕರಣ ಖರೀದಿಸಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ತಪ್ಪಿಲ್ಲ ಬಿಡಿ.

(ಗಲ್ಫ್ ರಾಷ್ಟ್ರದಲ್ಲಿರುವ ಅಧಿಕಾರಿಯೊಬ್ಬರ ಮಾಹಿತಿ ಆಧರಿತ ಲೇಖನ)

Usually, when a head of state visits another country, the visit lasts at least a day or two. But UAE President Mohammed bin Zayed landed unexpectedly in New Delhi on the evening of January 19, held talks with Prime Minister Narendra Modi for barely two hours, and returned just as swiftly. Breaking protocol, Prime Minister Modi himself went to the airport to receive him and warmly embraced the UAE leader.