NREGA: ಆವತ್ತು 'ನರೇಗಾ' ಕಣ್ಬಿಡುವಾಗ ಕಾಂಗ್ರೆಸ್, ಬಿಜೆಪಿಯೇ ವಿರೋಧಿಸಿದ್ದವು! ಆರ್ಥಿಕ ತಜ್ಞರ ಒತ್ತಾಸೆಗೆ ಒಲ್ಲದ ಮನಸ್ಸಿನಲ್ಲೇ ಜಾರಿಗೆ ಬಂದಿತ್ತು.. 

23-01-26 02:30 pm       ರಾಮಸ್ವಾಮಿ ಹುಲಕೋಡು, ಹಿರಿಯ ಪತ್ರಕರ್ತರು   ಅಂಕಣಗಳು

ಗ್ರಾಮೀಣಾಭಿವೃದ್ಧಿ ಮತ್ತು ನಿರುದ್ಯೋಗ ನಿವಾರಣೆಯಲ್ಲಿ 'ಗೇಮ್ ಚೇಂಜರ್ ಎಂದು ಖ್ಯಾತಿ ಪಡೆದ 'ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದರೂ, ಇದನ್ನು ರೂಪಿಸಿದ್ದು ಕೇವಲ ಕಾಂಗ್ರೆಸಿಗರೇನೂ ಅಲ್ಲ! ಯುಪಿಎ ಸರಕಾರ ಆಗ ಜಾರಿಗೆ ತಂದಿದ್ದೂ ಒಲ್ಲದ ಮನಸ್ಸಿನಿಂದಲೇ!

ಗ್ರಾಮೀಣಾಭಿವೃದ್ಧಿ ಮತ್ತು ನಿರುದ್ಯೋಗ ನಿವಾರಣೆಯಲ್ಲಿ 'ಗೇಮ್ ಚೇಂಜರ್ ಎಂದು ಖ್ಯಾತಿ ಪಡೆದ 'ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದರೂ, ಇದನ್ನು ರೂಪಿಸಿದ್ದು ಕೇವಲ ಕಾಂಗ್ರೆಸಿಗರೇನೂ ಅಲ್ಲ! ಯುಪಿಎ ಸರಕಾರ ಆಗ ಜಾರಿಗೆ ತಂದಿದ್ದೂ ಒಲ್ಲದ ಮನಸ್ಸಿನಿಂದಲೇ!

ಹೌದು, 2004ರಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಸರಕಾರ ರಚಿಸಿದ್ದ ಯುಪಿಎ, ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಅಧ್ಯಕ್ಷತೆಯ ಸಮಿತಿ ರಚಿಸಿದ್ದ 'ಸಾಮಾನ್ಯ ಕನಿಷ್ಠ ಕಾರ್ಯಕ್ರಮ'ಗಳನ್ನು ಒಪ್ಪಿಕೊಂಡಿತ್ತು. ಇದರಲ್ಲಿ ಗ್ರಾಮೀಣ ಭಾಗದ ಬಡವರಿಗೆ ಉದ್ಯೋಗ ನೀಡುವ ಯೋಜನೆ ರೂಪಿಸುವ ಪ್ರಸ್ತಾಪವೂ ಇತ್ತು. ಹೀಗಾಗಿ ಹೊಸ ಯೋಜನೆ ರೂಪಿಸುವ ಅನಿವಾರ್ಯತೆ ಆಗಿನ ಸರಕಾರಕ್ಕೆ ಸೃಷ್ಟಿಯಾಗಿತ್ತು.

ಬಹುಮತಕ್ಕೆ ಅಗತ್ಯ 117 ಸಂಸದರ ಕೊರತೆ ಇದ್ದರೂ ಅಧಿಕಾರ ಹಿಡಿದಿದ್ದ ಕಾಂಗ್ರೆಸ್, ಅಗತ್ಯ ವಿಷಯಗಳಲ್ಲಿ ಮಾರ್ಗದರ್ಶನ ನೀಡಲು ತಜ್ಞರನ್ನೊಳಗೊಂಡ ರಾಷ್ಟ್ರೀಯ ಸಲಹಾ ಮಂಡಳಿಯನ್ನು (ಎನ್‌ಸಿ) ರಚಿಸಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದು, ಕೃಷಿ ತಜ್ಞ ಎಂ.ಎಸ್.ಸ್ವಾಮಿನಾಥನ್, ಸಾಮಾಜಿಕ ಕಾರ್ಯಕರ್ತೆ, ಮ್ಯಾಗ್ದೆಸೆ ಪ್ರಶಸ್ತಿ ಪುರಸ್ಕೃತ ಅರುಣಾ ರಾಯ್, ಬೆಲ್ಜಿಯಂ ಮೂಲದ ಭಾರತೀಯ ಆರ್ಥಿಕ ತಜ್ಞ ಜಾನ್‌ಡ್ರೆಝ್, ಸಾಮಾಜಿಕ ಕಾರ್ಯಕರ್ತ - ಲೇಖಕ ಹರ್ಷ ಮಂದರ್, ಪರಿಸರ ತಜ್ಞ ಮಾಧವ ಗಾಡ್ಗೀಳ್, ಲೋಕ ಸತ್ತಾ ಸಂಸ್ಥಾಪಕ ಜಯಪ್ರಕಾಶ್ ನಾರಾಯಣ್ ಮತ್ತಿತರರು ಈ ಸಲಹಾ ಮಂಡಳಿಯಲ್ಲಿದ್ದರು. ಈ ಎಲ್ಲ ತಜ್ಞರು ಹಲವಾರು ಸಭೆ-ಚರ್ಚೆ ನಡೆಸಿ, ರೂಪಿಸಿದ ಯೋಜನೆಯೇ 'ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (ನರೇಗಾ).

ಎನ್‌ಎಸಿ ಈ ಯೋಜನೆ ರೂಪಿಸಿದ್ದರೂ, ಯುಪಿಎ ಸರಕಾರ ಇದನ್ನು ಕೂಡಲೇ ಜಾರಿಗೆ ತರುವ ಮನಸ್ಸು ಮಾಡಿರಲಿಲ್ಲ. ಪ್ರತಿಪಕ್ಷ ಬಿಜೆಪಿಯೂ ಯೋಜನೆ ಜಾರಿಗೆ ಬರಲೇ ಬಾರದೆಂಬಂತೆ ನಡೆದುಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮನವೊಲಿಸಿ, ಯೋಜನೆ ಜಾರಿಗೆ ಬರುವಂತೆ ನೋಡಿಕೊಂಡವರಲ್ಲಿ ಅರುಣಾ ರಾಯ್, ಜಾನ್ ಡ್ರೆಝ್, ಸಿಪಿಐ ನಾಯಕಿ ಅನ್ನಿ ರಾಜಾ ಪ್ರಮುಖರು.

ಈ ಯೋಜನೆಯನ್ನು ಮೊದಲಿಗೆ ವಿರೋಧಿಸಿದವರೆಂದರೆ ಆಗಿನ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, 'ಉದ್ಯೋಗದ ಖಾತರಿ' ನೀಡುವಿಕೆಯಿಂದ ಸರಕಾರದ ಮೇಲಿನ ಹಣಕಾಸಿನ ಹೊರೆ ಹೆಚ್ಚಲಿದೆ ಎಂದಿದ್ದರು. ಹೀಗಾಗಿ, ಉದ್ಯೋಗ ಖಾತರಿ ನೀಡುವ ವಿಷಯ ಕೈಬಿಟ್ಟು 2004ರ ಡಿಸೆಂಬರ್ 21ರಂದು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ, ಯೋಜನೆ ರೂಪಿಸಿದವರು ಸುಮ್ಮನಿರಲಿಲ್ಲ. ಸಂಸತ್ತಿನ ಹೊರಗೆ ಸಹಿ ಸಂಗ್ರಹ ಚಳವಳಿ ನಡೆಸಿದರು. ಮೂಲ ವಿಧೇಯಕವೇ ಜಾರಿಗೆ ಬರಲಿ ಎಂದು ಒತ್ತಾಯಿಸಿದ್ದರು. ಎಡಪಕ್ಷಗಳು ಇವರಿಗೆ ಬೆಂಬಲ ನೀಡಿದ್ದವು. ನಿಧಾನವಾಗಿ ಸಾರ್ವಜನಿಕರ ಒತ್ತಡ ಹೆಚ್ಚುತ್ತಾ ಹೋಯಿತು, ಲೋಕಸಭೆಯಲ್ಲಿ ಈ ವಿಧೇಯಕದ ಮೇಲೆ ಚರ್ಚೆ ನಡೆದ ನಂತರ ವಿಧೇಯಕವನ್ನು ಗ್ರಾಮೀಣಾಭಿವೃದ್ಧಿ ಸಂಬಂಧಿಸಿದ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು. ಯೋಜನೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಾನ್‌ ಡ್ರೆಝ್ ಅವರು ಬಿಜೆಪಿ ನಾಯಕ ಅರುಣ್ ಜೇಟ್ಲಿಯನ್ನು ಭೇಟಿಯಾಗಿ ವಿಧೇಯಕ ಬಗ್ಗೆ ವಿವರಿಸಿದ್ದರು. ಜೇಟ್ಲಿ ಅವರಿಗೂ ಈ ವಿಧೇಯಕದ ಅಗತ್ಯತೆ ಅರ್ಥವಾಗಿತ್ತು. ಬಿಜೆಪಿಯ ನಿಲುವು ಸಡಿಲಗೊಂಡಿತು. 

ಇತ್ತ ಕಾಂಗ್ರೆಸ್‌ನಲ್ಲಿ ಮೂಲ ವಿಧೇಯಕಕ್ಕೆ ಯೋಜನಾ ಆಯೋಗ, ಹಣಕಾಸು ಸಚಿವಾಲಯ, ಸಚಿವ ಸಂಪುಟದ ಹಲವು ಸದಸ್ಯರು, ಅಷ್ಟೇ ಅಲ್ಲ, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಚೇರಿಯೂ ಹಲವು ತಗಾದೆ ತೆಗೆದು ಕುಳಿತಿದ್ದವು. ಪ್ರಣವ್ ಮುಖರ್ಜಿಯಂತೂ 'ಆಗಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿದ್ದರಂತೆ. 

ಕೊನೆಗೆ ಸಲಹಾ ಮಂಡಳಿಯ ಈ ಸ್ನೇಹಿತರು ಮಂಡಳಿಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಅವರಿಗೆ ವಿಧೇಯಕದಲ್ಲಿ 'ಉದ್ಯೋಗ ಖಾತ್ರಿ' ನೀಡುವ ವಿಷಯ ಎಷ್ಟು ಮಹತ್ವದ್ದು, ಅದನ್ನು ಬಿಟ್ಟು ಯೋಜನೆ ಜಾರಿಗೆ ತರಲೇಬಾರದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಈ ವೇಳೆ "ಇಂಥ ಒಳ್ಳೆಯ ವಿಧೇಯಕಕ್ಕೆ ಅಡ್ಡಿಪಡಿಸುತ್ತಿರುವವರಾದರೂ ಯಾರು?'' ಎಂದು ಸೋನಿಯಾ ಇವರನ್ನು ಪ್ರಶ್ನಿಸಿದ್ದರಂತೆ!ವಾಸ್ತವದಲ್ಲಿ ವಿಧೇಯಕವನ್ನು ಕಾಂಗ್ರೆಸ್‌ನಲ್ಲಿ ಸೋನಿಯಾ ಬಿಟ್ಟು ಮತ್ತೆಲ್ಲರೂ ವಿರೋಧಿಸುತ್ತಿದ್ದರು! 

ಯುಪಿಎ ಸರಕಾರಕ್ಕೆ ಸೋನಿಯಾ ಅವರ ಮಾತನ್ನು ಮೀರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಈ ವಿಧೇಯಕವನ್ನು ಆಗಿನ ಗ್ರಾಮೀಣಾಭಿವೃದ್ಧಿ ಸಚಿವ, ಸಮಾಜವಾದಿ ರಾಜಕಾರಣಿ ರಘುವಂಶ ಪ್ರಸಾದ್ ಸಿಂಗ್ ಲೋಕಸಭೆಯಲ್ಲಿ ಮಂಡಿಸಿದ್ದರು. 2005ರ ಆಗಸ್ಟ್ 23ರಂದು ಅಂಗೀಕಾರಗೊಂಡಿತು.  ರಾಷ್ಟ್ರಪತಿಗಳ ಒಪ್ಪಿಗೆ ಪಡೆದು 2006ರ ಫೆಬ್ರವರಿ 2ರಂದು ಜಾರಿಗೆ ಬಂದಿತು. ಮೊದಲಿಗೆ ದೇಶದ ಅತ್ಯಂತ ಹಿಂದುಳಿದ 200 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತರಲಾಯಿತು. ಮುಂದೆ ದೇಶದ ಎಲ್ಲ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಯಿತು. 2009ರ ಗಾಂಧಿ ಜಯಂತಿಯ ಸಂದರ್ಭದಲ್ಲಿ ಈ ಯೋಜನೆಗೆ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' ಎಂದು ಮರು ನಾಮಕರಣ ಮಾಡಲಾಯಿತು.

(ಲೇಖನ: ರಾಮಸ್ವಾಮಿ ಹುಲಕೋಡು, ಹಿರಿಯ ಪತ್ರಕರ್ತರು

Widely regarded as a game-changer in rural employment, NREGA was not an easy political decision. Though implemented under the Congress-led UPA government, the scheme initially faced resistance from both Congress leaders and the BJP due to financial concerns. It was eventually shaped and pushed through by pressure from Left parties, public activism, and the National Advisory Council led by Sonia Gandhi.