ಬಿಟ್ ಕಾಯಿನ್ ಬಳಸಿ ಡಾರ್ಕ್ ನೆಟ್ ಡ್ರಗ್ಸ್ ಖರೀದಿ ; ನಾಲ್ವರ ಸೆರೆ

29-09-20 09:28 pm       Udupi Reporter   ಕ್ರೈಂ

ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ಖರೀದಿಸಿ ತಂದು ಉಡುಪಿ ಹಾಗೂ ಚೆನ್ನೈನಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು, ಸೆಪ್ಟಂಬರ್ 29: ಡಾರ್ಕ್‌ನೆಟ್ ವೆಬ್ ಮೂಲಕ ಡ್ರಗ್ಸ್ ಖರೀದಿಸಿ ಉಡುಪಿ ಹಾಗೂ ಚೆನ್ನೈನಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಬೆಂಗಳೂರಿನ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕೆ. ಪ್ರಮೋದ್, ಮಾಸ್ಟರ್ ಮೈಂಡ್ ಫಾಹಿಮ್, ಕರ್ನಾಟಕದ ಎ. ಹಶೀರ್ ಹಾಗೂ ಎಸ್‌.ಎಸ್‌. ಶೆಟ್ಟಿ ಬಂಧಿತರು. ಕಳೆದ ಜುಲೈನಲ್ಲಿ ನೆದರ್ಲೆಂಡ್ ರಾಷ್ಟ್ರದ ವಿಳಾಸದಲ್ಲಿ ಭಾರತದ ಫಾರಿನ್ ಪೋಸ್ಟ್ ಆಫೀಸ್ ಗೆ ಪಾರ್ಸೆಲ್ ಬಂದಿತ್ತು. ಅದರಲ್ಲಿ ಯಾರಿಗೆ ಎನ್ನುವ ವಿಳಾಸ ಇರಲಿಲ್ಲ. ಪಾರ್ಸೆಲ್ ಚೆಕ್ ಮಾಡಿದಾಗ, 750 ಎಂಡಿಎಂಎ ಮಾತ್ರೆಗಳು ಪತ್ತೆಯಾಗಿದ್ದವು. ಅದರಂತೆ, ಪ್ರಕರಣ ಸಂಬಂಧಿಸಿ ಬೆಂಗಳೂರಿನ ರಾಷ್ಟ್ರೀಯ ಮಾದಕ ವಸ್ತುಗಳ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಸಮಗ್ರ ತನಿಖೆ ಕೈಗೊಂಡಿದ್ದರು. ತನಿಖೆ ನಡೆಸಿದಾಗ, ಈ ಜಾಲದ ಹಿಂದೆ ಪ್ರಭಾವಿ ನೆಟ್ವರ್ಕ್ ಇರುವುದು ಪತ್ತೆಯಾಗಿದೆ. ಜಾಲದ ಸೂತ್ರಧಾರ ಎನ್ನಲಾಗಿರುವ ಫಾಹಿಮ್, ಡಾರ್ಕ್ ನೆಟ್ ವೆಬ್ ಮೂಲಕ ಡ್ರಗ್ಸ್ ಖರೀದಿ ಮಾಡುತ್ತಿದ್ದ. ಅದಕ್ಕಾಗಿ ಸಾಕಷ್ಟು ಬಿಟ್ ಕಾಯಿನ್ ಖರೀದಿಸಿ ಇಟ್ಟಿದ್ದ. ಡಾರ್ಕ್ ನೆಟ್ ನಲ್ಲಿ ನೇರವಾಗಿ ರೂಪಾಯಿ ಅಥವಾ ಇನ್ನಾವುದೇ ಕರೆನ್ಸಿ ನೀಡಲು ಆಗದ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ಬಳಸಿ ಡ್ರಗ್ ಖರೀದಿಸುತ್ತಿದ್ದ. ಡಾರ್ಕ್ ನೆಟ್ ಮೂಲಕ ಪಾರ್ಸೆಲ್ ಆರ್ಡರ್ ಮಾಡಿ, ದೇಶದ ವಿವಿಧೆಡೆಯ ವಿಳಾಸ ಕೊಡುತ್ತಿದ್ದ. ಬಳಿಕ ಅಲ್ಲಿಂದ ಪಾರ್ಸೆಲ್ ಡೆಲಿವರಿ ಪಡೆಯುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

ಎರಡು ವರ್ಷಗಳಿಂದ ಈ ಗ್ಯಾಂಗ್ ಡ್ರಗ್ಸ್ ಮಾರಾಟ ಮಾಡುತ್ತಿತ್ತು. ಉಡುಪಿಯ ಮಣಿಪಾಲ್ ವಿಶ್ವವಿದ್ಯಾಲಯ, ಎನ್‌ಎಂಎಎಂ ಐಟಿ ಕಾಲೇಜು, ಮಣಿಪಾಲ್ ಕ್ಲಬ್‌ಗಳು, ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.