ಪತಿ, ಇಬ್ಬರು ಮಕ್ಕಳನ್ನು ಕೊಲೆಗೈದು ವೈದ್ಯೆ ನೇಣಿಗೆ ಶರಣು

19-08-20 04:07 pm       Headline Karnataka News Network   ಕ್ರೈಂ

ಕುಟುಂಬದಲ್ಲಿ ಗಂಡ-ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದರು. ಹೊರಗಿನಿಂದ ನೋಡಿದವರಿಗೆ ಇದೊಂದು ಸುಂದರ ಸಂಸಾರ. ಆದರೆ, ಏನಾಯಿತೋ ಏನೋ, ಗಂಡ ಹಾಗೂ ಮಕ್ಕಳನ್ನು ಕೊಂದು ಆಕೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮುಂಬೈ , ಆಗಸ್ಟ್ 19: ವೈದ್ಯೆಯೊಬ್ಬಳು ಪತಿ ಹಾಗೂ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಕೊರಡಿ ಪ್ರದೇಶದ ಓಂ ನಗರದಲ್ಲಿರುವ ಮನೆಯಲ್ಲಿ ವೈದ್ಯೆ ಡಾ. ಸುಷ್ಮಾ ರಾಣೆ (41) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೂ ಮೊದಲು ಪತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಧೀರಜ್(42) ಹಾಗೂ 11 ವರ್ಷ ಹಾಗೂ 5 ವರ್ಷದ ಪುಟ್ಟ ಮಕ್ಕಳನ್ನು ಕೊಲೆ ಮಾಡಿದ್ದಾಳೆ.

ಪತಿ ಹಾಗೂ ಮಕ್ಕಳ ಮೃತದೇಹ ಬೆಡ್ ರೂಂ ನಲ್ಲಿರುವ ಬೆಡ್ ಮೇಲೆ ಬಿದ್ದಿದ್ದರೆ, ವೈದ್ಯೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕೊರಡಿ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ವೈದ್ಯೆಯ ಕುಟುಂಬದ ಜೊತೆ ವಾಸವಾಗಿದ್ದ 60 ವರ್ಷದ ಮಹಿಳೆ ಬೆಡ್ ರೂಮ್ ಬಾಗಿಲು ತಟ್ಟಿದರೂ ಯಾರೂ ಹೊರಬರದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಪೊಲೀಸರಿಗೆ 2 ಸಿರಿಂಜ್ ಗಳು ಹಾಗೂ ಡೆತ್ ನೋಟ್ ಸಿಕಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೀವನದಲ್ಲಿ ಖುಷಿಯಿಲ್ಲ ಎಂದು ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ಸುಷ್ಮಾ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ.

ಪ್ರಾಥಮಿಕ ವರದಿಯ ಪ್ರಕಾರ, ಸುಷ್ಮಾ ತನ್ನ ಪತಿ ಹಾಗೂ ಮಕ್ಕಳನ್ನು ಪ್ರಜ್ಞಾಹೀನ ಸ್ಥಿತಿಗೆ ತರಲು ನಿದ್ರೆಯ ಮಾತ್ರೆಗಳನ್ನು ಆಹಾರದಲ್ಲಿ ನೀಡಿರಬಹುದು. ನಂತರ ಇಂಜೆಕ್ಷನ್ ಚುಚ್ಚಿ ಸಾಯಿಸಿರಬಹುದು ತಿಳಿದುಬಂದಿದೆ.

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.