ನೈಜೀರಿಯಾದಲ್ಲಿ ಅತ್ಯಾಚಾರ ಸಾಬೀತಾದರೆ ಬೀಜಕ್ಕೇ ಕತ್ತರಿ !

18-09-20 04:37 pm       Headline Karnataka News Network   ಕ್ರೈಂ

ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಪುರುಷನ ವೃಷಣಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಆತನ ಲೈಂಗಿಕ ಶಕ್ತಿಯನ್ನು ತೆಗೆದು ಹಾಕುತ್ತಾರೆ.

ನೈಜೀರಿಯಾ, ಸೆಪ್ಟಂಬರ್ 18: ಅತ್ಯಾಚಾರ ಪ್ರಕರಣ ಕೇಳಿಬಂದಾಗೆಲ್ಲ ಕೆಲವರು ಗೊಣಗುವುದು ಕೇಳಿರಬಹುದು. ಆತನ ‘ಅದನ್ನೇ’ ಕತ್ತರಿಸಬೇಕು ಎಂದು. ಆದರೆ, ಅಂಥ ಕಾನೂನು ಮಾತ್ರ ಎಲ್ಲಿಯೂ ಜಾರಿಯಾಗಿರಲಿಲ್ಲ. ಈಗ ನೈಜೀರಿಯಾ ಅಂಥದ್ದೊಂದು ಕಠಿಣ ಕಾನೂನು ಜಾರಿಗೆ ಮುಂದಾಗಿದೆ.

ಅತ್ಯಾಚಾರ ಪ್ರಕರಣಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಶಿಕ್ಷೆಗಳೂ ಥರಾವರಿ ಇವೆ. ಕೆಲವೊಂದು ದೇಶಗಳಲ್ಲಿ ಗಲ್ಲು ಶಿಕ್ಷೆ, ಜೀವಾವಧಿ, 20 ವರ್ಷ ಜೈಲು ಹೀಗೆ ಶಿಕ್ಷೆಯ ಪ್ರಕಾರ ಇವೆ. ಇಂಥ ಕಠಿಣ ಶಿಕ್ಷೆಗಳಿದ್ದರೂ, ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಈಗ ನೈಜೀರಿಯಾ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಪುರುಷನ ಲೈಂಗಿಕ ಶಕ್ತಿಯನ್ನೇ ನಿಶ್ಶಕ್ತಿಗೊಳಿಸುವ ಶಿಕ್ಷೆ ಜಾರಿಗೆ ಮುಂದಾಗಿದೆ.

ನೈಜೀರಿಯಾದಲ್ಲಿ ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಿದ್ದರಿಂದ ಹೊಸ ಕಾನೂನು ತರಲಾಗಿದೆ. ನೈಜೀರಿಯಾದ ಕಾಡುನ ಎನ್ನುವ ರಾಜ್ಯದ ಗವರ್ನರ್ ನಾಸಿರ್ ಅಹ್ಮದ್ ಎಲ್ ರಫಾಯಿ, ಅತ್ಯಾಚಾರ ಕಾನೂನಿಗೆ ತಿದ್ದುಪಡಿ ತಂದಿದ್ದು, ಹೊಸ ಕಾಯ್ದೆ ಪ್ರಕಾರ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಪುರುಷನ ವೃಷಣಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಆತನ ಲೈಂಗಿಕ ಶಕ್ತಿಯನ್ನು ತೆಗೆದು ಹಾಕುತ್ತಾರೆ. ಆತನಿಗೆ ಮುಂದೆಂದೂ ಲೈಂಗಿಕ ಆಸಕ್ತಿಯೇ ಬರದಂತೆ ಮಾಡಲಾಗುತ್ತದೆ. ಹಾಗೆಯೇ ಮಹಿಳೆಯರು ಕೂಡ ಇಂಥ ಕೃತ್ಯ ಎಸಗಿದಲ್ಲಿ ಅವರಿಗೂ ಇದೇ ರೀತಿಯ ಶಿಕ್ಷೆ ವಿಧಿಸಲಾಗುವುದು. ಇನ್ನು 14 ವರ್ಷದ ಒಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದಲ್ಲಿ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ.

ಈ ಹಿಂದೆ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ನೈಜೀರಿಯಾದಲ್ಲಿ ಜೀವಾವಧಿ ಶಿಕ್ಷೆ ಮತ್ತು ಇತರೇ ಪ್ರಕರಣಗಳಿಗೆ 21 ವರ್ಷದ ಶಿಕ್ಷೆ ಜಾರಿಯಲ್ಲಿತ್ತು.