Mcc Bank Anil Lobo Fraud, Cheating: ಕೆಥೋಲಿಕ್ ಕ್ರೈಸ್ತರ ಎಂಸಿಸಿ ಬ್ಯಾಂಕಿನಲ್ಲಿ ಭಾರೀ ಭ್ರಷ್ಟಾಚಾರ ; ಬ್ಯಾಂಕನ್ನು ಕುಟುಂಬದ ಆಸ್ತಿ ಮಾಡಿಕೊಂಡ ಅಧ್ಯಕ್ಷ ಅನಿಲ್ ಲೋಬೋ ! ಬೇನಾಮಿ ಹೆಸರಲ್ಲಿ ಕೋಟ್ಯಂತರ ಸಾಲ, ಕಿಕ್ ಬ್ಯಾಕ್ ! ಆರ್ ಬಿಐ ಪರಿಶೀಲನೆಯಲ್ಲಿ ಗೋಲ್ಮಾಲ್ ಪತ್ತೆ !

01-04-22 07:15 pm       Mangalore Correspondent   ಕ್ರೈಂ

ಮೂರು ವರ್ಷಗಳ ಹಿಂದೆ ಬ್ಯಾಂಕಿನ ಅಧ್ಯಕ್ಷನಾಗಿ ಗುತ್ತಿಗೆ ವಹಿಸಿಕೊಂಡಿರುವ ಅನಿಲ್ ಕುಮಾರ್ ಲೋಬೊ ಬ್ಯಾಂಕನ್ನು ತನ್ನ ಕುಟುಂಬದ ಆಸ್ತಿ ಎಂಬಂತೆ ಮಾಡಿಕೊಂಡಿದ್ದಾನೆ. ತನ್ನ ಗೆಳೆಯರಿಗೆ ಕೋಟಿ ಕೋಟಿ ರೂಪಾಯಿಯನ್ನು ಸಾಲದ ರೂಪದಲ್ಲಿ ನೀಡಿದ್ದಲ್ಲದೆ, ಅದರಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾನೆ.

ಮಂಗಳೂರುಎ.1 : ಸುದೀರ್ಘ 110 ವರ್ಷಗಳ ಇತಿಹಾಸ ಇರುವ ಬ್ರಿಟಿಷರ ಕಾಲದಿಂದಲೂ ಕರಾವಳಿಯ ಕೆಥೋಲಿಕ್ ಕ್ರೈಸ್ತರ ಶ್ರೇಯೋಭಿವೃದ್ಧಿಯನ್ನೇ ಧ್ಯೇಯವಾಗಿಸಿಕೊಂಡು ಬಂದಿದ್ದ ಪ್ರತಿಷ್ಠಿತ ಬ್ಯಾಂಕ್. ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಸದ್ಯಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 16 ಶಾಖೆಗಳಾಗಿ ವಿಸ್ತಾರಗೊಂಡು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ 700 ಕೋಟಿಗೂ ಹೆಚ್ಚು ವ್ಯವಹಾರ ನಡೆಸುತ್ತಿದೆ. ಇಂಥ ಪ್ರತಿಷ್ಠೆ ಮತ್ತು ಹೆಗ್ಗಳಿಕೆ ಹೊಂದಿರುವ ಮಂಗಳೂರು ಕೆಥೋಲಿಕ್ ಕೋ-ಆಪರೇಟಿವ್ (ಎಸಿಸಿ) ಬ್ಯಾಂಕಿನಲ್ಲೀಗ ಅಧ್ಯಕ್ಷರು ಮತ್ತು ನಿರ್ದೇಶಕರೇ ಸೇರಿಕೊಂಡು ಬ್ಯಾಂಕಿನ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಮೂರು ವರ್ಷಗಳ ಹಿಂದೆ ಬ್ಯಾಂಕಿನ ಅಧ್ಯಕ್ಷನಾಗಿ ಗುತ್ತಿಗೆ ವಹಿಸಿಕೊಂಡಿರುವ ಅನಿಲ್ ಕುಮಾರ್ ಲೋಬೊ ಬ್ಯಾಂಕನ್ನು ತನ್ನ ಕುಟುಂಬದ ಆಸ್ತಿ ಎಂಬಂತೆ ಮಾಡಿಕೊಂಡಿದ್ದಾನೆ. ತನ್ನ ಗೆಳೆಯರಿಗೆ ಕೋಟಿ ಕೋಟಿ ರೂಪಾಯಿಯನ್ನು ಸಾಲದ ರೂಪದಲ್ಲಿ ನೀಡಿದ್ದಲ್ಲದೆ, ಅದರಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾನೆ. ಬ್ಯಾಂಕಿನ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ಮತ್ತು ನಿರ್ದೇಶಕನಾಗಿರುವ ಜೋಸೆಫ್ ಎಂ. ಅನಿಲ್ ಪತ್ರಾವೋ ಸೇರಿಕೊಂಡು ಬ್ಯಾಂಕಿನಿಂದ ಬೇಕಾಬಿಟ್ಟಿ ಸಾಲ ಎತ್ತಿದ್ದಲ್ಲದೆ, ಅದನ್ನು ತಮ್ಮದೇ ಸಂಸ್ಥೆಗಳಿಗೆ ವರ್ಗಾಯಿಸಿದ್ದಾರೆ. ಇವರ ಅಕ್ರಮ ವಹಿವಾಟುಗಳಿಗೆ ಬ್ಯಾಂಕಿನ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿರುವ ಸುನೀಲ್ ಮಿನೇಜಸ್ ಸಾಥ್ ನೀಡಿದ್ದಾನೆ.

ಬ್ಯಾಂಕಿನೊಳಗಿನ ಅಕ್ರಮ, ಬೇಕಾಬಿಟ್ಟಿ ಪರಭಾರೆ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಕೋ-ಆಪರೇಟಿವ್ ಸೊಸೈಟಿಗಳ ರಿಜಿಸ್ಟ್ರಾರ್ ಗೆ ದೂರು ನೀಡಿದ್ದು ಬ್ಯಾಂಕಿನ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಆರ್ ಬಿಐಗೂ ಪತ್ರ ಬರೆದಿದ್ದಾರೆ. ಅದರಂತೆ, ಆರ್ ಬಿಐ ಅಧಿಕಾರಿಗಳು ಬ್ಯಾಂಕಿನ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಿದ್ದು, ಬ್ಯಾಂಕಿನ ಅಧ್ಯಕ್ಷ ಮತ್ತು ಆತನ ಗೆಳೆಯರು ಹಲವಾರು ಕೋಟಿ ಮೊತ್ತದ ಅವ್ಯವಹಾರ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಮೈಕ್ಸ್ ಇಲೆಕ್ಟ್ರಾನಿಕ್ಸ್ ಹೆಸರಲ್ಲಿ ಸಂಸ್ಥೆ ಹೊಂದಿದ್ದ ಅನಿಲ್ ಕುಮಾರ್ ಲೋಬೋ ತನ್ನ ವ್ಯವಹಾರ ಪಾಲುದಾರಿಕೆ ನೆಪದಲ್ಲಿ ಸವಿಲ್ ಮಸ್ಕರೇನಸ್ ಎಂಬ ವ್ಯಕ್ತಿಯ ಹೆಸರಲ್ಲಿ ಕೋಟ್ಯಂತರ ರೂ. ಸಾಲ ಪಡೆದಿದ್ದು, ಅದನ್ನು ನಿರಂತರವಾಗಿ ತನ್ನ ಮತ್ತು ಪತ್ನಿಯ ಹೆಸರಿಗೆ ವರ್ಗಾವಣೆ ಮಾಡಿರುವುದು ಕಂಡುಬಂದಿದೆ.

2017ರ ಮಾರ್ಚ್ 15ರಂದು ಸವಿಲ್ ಪ್ರಕಾಶ್ ಹೆಸರಲ್ಲಿ 38 ಲಕ್ಷ ಸಾಲ ಪಡೆದಿದ್ದು, ಅದನ್ನು ಮರುದಿನವೇ ಅನಿಲ್ ಕುಮಾರ್ ಲೋಬೊ, ಆತನ ಪತ್ನಿ ಅನ್ನಾ ಮರಿಯಾ ಲೋಬೊ ಮತ್ತು ಈ ಮೂವರೂ ಒಳಗೊಂಡಿರುವ ಜಂಟಿ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಇದೇ ರೀತಿ 2019ರ ಜೂನ್ 6ರಂದು 84 ಲಕ್ಷ ಸಾಲವನ್ನು ಸವಿಲ್ ಪ್ರಕಾಶ್ ಹೆಸರಲ್ಲಿ ಎಂಸಿಸಿ ಬ್ಯಾಂಕಿನಿಂದ ತೆಗೆಯಲಾಗಿತ್ತು. ಅದನ್ನು ಸಾಲದ ಖಾತೆಯಿಂದಲೇ ಬ್ಯಾಂಕಿನ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ಮತ್ತು ಆತನ ಪತ್ನಿಯ ಖಾತೆಗೆ 20 ಲಕ್ಷ ಮತ್ತು ತಲಾ 10 ಲಕ್ಷದಂತೆ ಅದೇ ತಿಂಗಳಲ್ಲಿ ವರ್ಗಾವಣೆ ಮಾಡಿದ್ದು ಕಂಡುಬಂದಿದೆ. ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಬೇರೆ ಬೇರೆ ಬ್ಯಾಂಕುಗಳಲ್ಲಿರುವ ಅನಿಲ್ ಕುಮಾರ್ ಮತ್ತು ಆತನ ಪತ್ನಿಯ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿತ್ತು. 2020ರ ಜೂನ್ 9ರಂದು ಸವಿಲ್ ಪ್ರಕಾಶ್ ಹೆಸರಲ್ಲಿ 75 ಲಕ್ಷ ಸಾಲ ಮಂಜೂರಾಗಿದ್ದು, ಅದರಲ್ಲಿ 39 ಲಕ್ಷ ರೂ.ವನ್ನು ಅನಿಲ್ ಕುಮಾರ್ ಲೋಬೋ ಅವರ ಐಡಿಬಿಐ ಬ್ಯಾಂಕಿನ ಖಾತೆಗೆ ಸೆ.29ರಂದು ವರ್ಗಾವಣೆ ಮಾಡಲಾಗಿತ್ತು.

ಅನಿಲ್ ಕುಮಾರ್ ಲೋಬೊ, ಆತನ ಪತ್ನಿ ಅನ್ನಾ ಮರಿಯಾ ಲೋಬೊ ಮತ್ತು ಸವಿಲ್ ಮಸ್ಕರೇನಸ್ ಎಂಸಿಸಿ ಬ್ಯಾಂಕಿನಲ್ಲಿ ಜಂಟಿ ಪಾಲುದಾರಿಕೆ ನೆಲೆಯಲ್ಲಿ ಖಾತೆ ಹೊಂದಿದ್ದು, ಅನಿಲ್ ಕುಮಾರ್ ಲೋಬೊ ಅಧ್ಯಕ್ಷನಾಗಿ ನೇಮಕ ಆಗುವ ಹೊತ್ತಲ್ಲೇ ಎರಡು ಬಾರಿ ದೊಡ್ಡ ಮೊತ್ತದ ಸಾಲ ಪಾವತಿಯಾಗಿತ್ತು. ಬ್ಯಾಂಕಿನ ಕುಲಶೇಖರ ಶಾಖೆಯಿಂದ ಮೂರು ಬಾರಿ ಸಾಲ ತೆಗೆದಿದ್ದು ಮ್ಯಾನೇಜರ್ ಮತ್ತು ಸಿಇಓ ಆಗಿದ್ದವರನ್ನು ಬೆದರಿಸಿ ಅಕ್ರಮವಾಗಿ ಪಡೆಯಲಾಗಿತ್ತು ಅನ್ನುವ ಆರೋಪವನ್ನು ಜೆರಾರ್ಡ್ ಟವರ್ಸ್ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ತನ್ನ ಗೆಳೆಯರಿಗೂ ಬೇಕಾಬಿಟ್ಟಿ ಸಾಲ ತೆಗೆಸಿಕೊಟ್ಟು ಅದರಿಂದಲೂ ಅನಿಲ್ ಕುಮಾರ್ ಲೋಬೊ ಕಿಕ್ ಬ್ಯಾಕ್ ಪಡೆದಿದ್ದಾನೆ. ಎಲಿಯಾಸ್ ಸ್ಯಾಂಕ್ಟಿಸ್ ಎಂಬ ವ್ಯಕ್ತಿಗೆ ಎಂಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಿಂದ 1.70 ಕೋಟಿ ಸಾಲವನ್ನು 2020ರ ಆಗಸ್ಟ್ 31ರಂದು ನೀಡಲಾಗಿತ್ತು. ಅದೇ ದಿನ ಸಾಲದ ಮೊತ್ತ ಎಲಿಯಾಸ್ ಸ್ಯಾಂಕ್ಟಿಸ್ ಅವರ ಕಾರ್ಪೊರೇಶನ್ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು. ಆದರೆ, ಸೆ.15ರಂದು ಸ್ಯಾಂಕ್ಟಿಸ್ ಅವರ ಖಾತೆಯಿಂದ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ಮತ್ತು ಆತನ ಪತ್ನಿ ಅನ್ನಾ ಮರಿಯಾ ಲೋಬೊ ಅವರ ಖಾತೆಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಪರ್ಸೆಂಟೇಜ್ ಹೆಸರಲ್ಲಿ ಕಿಕ್ ಬ್ಯಾಕ್ ನೀಡಲಾಗಿತ್ತು.

ಇದಲ್ಲದೆ, ಬ್ಯಾಂಕಿನ ಅಧ್ಯಕ್ಷನಾಗುವುದಕ್ಕೂ ಮುನ್ನ ಅನಿಲ್ ಕುಮಾರ್ ಲೋಬೋ ತನ್ನ ಖಾತೆಯಿಂದ ಮೋರ್ಗನ್ಸ್ ಗೇಟ್ ಶಾಖೆಯಲ್ಲಿ ಸಾಲ ಪಡೆದು ಉಳಿಸಿಕೊಂಡಿದ್ದ ಬೆನೆಡಿಕ್ಟ್ ಐವಾನ್ ಡಿಸೋಜ ಎಂಬವರ ಸಾಲದ ಖಾತೆಗೆ ಹಣ ಹಾಕಿದ್ದು ಕಂಡುಬಂದಿದೆ. ಐವಾನ್ ಡಿಸೋಜ ಹೆಸರಲ್ಲಿದ್ದ 32 ಲಕ್ಷ ಮತ್ತು 13.40 ಲಕ್ಷದ ಸಾಲವನ್ನು ಅನಿಲ್ ಕುಮಾರ್ ಲೋಬೊ ತನ್ನ ಎಸ್ ಬಿ ಖಾತೆಯಿಂದ ವಿವಿಧ ಸಂದರ್ಭಗಳಲ್ಲಿ ಸಾಲದ ಖಾತೆಗೆ ಹಣ ವರ್ಗಾಯಿಸಿದ್ದು ಆರ್ ಬಿಐ ಅಧಿಕಾರಿಗಳ ಪರಿಶೀಲನೆಯಲ್ಲಿ ಕಂಡುಬಂದಿದೆ. ಆದರೆ, 2019ರಲ್ಲಿ ಅನಿಲ್ ಕುಮಾರ್ ಲೋಬೊ ಅಧ್ಯಕ್ಷನಾದ ಬಳಿಕ ಅದೇ ಮೋರ್ಗನ್ಸ್ ಗೇಟ್ ಬ್ಯಾಂಕ್ ಶಾಖೆಯಿಂದ ಬೆನೆಡಿಕ್ಟ್ ಐವಾನ್ ಡಿಸೋಜ ಹೆಸರಲ್ಲಿ 25 ಲಕ್ಷ, 30 ಲಕ್ಷ ಮತ್ತು 51 ಲಕ್ಷ ರೂಪಾಯಿ ಮೊತ್ತವನ್ನು ಪ್ರತ್ಯೇಕವಾಗಿ ಸಾಲ ಪಡೆಯಲಾಗಿದೆ. ಬ್ಯಾಂಕಿನ ಅಧ್ಯಕ್ಷನಾಗಿ ವ್ಯಾಪಕ ಭ್ರಷ್ಟಾಚಾರ ಮಾಡಿರುವುದಕ್ಕೆ ಲಭ್ಯವಾಗಿರುವ ಸಣ್ಣ ಮಟ್ಟಿನ ದಾಖಲೆ ಇದಾಗಿದ್ದು, ಇದಕ್ಕಿಂತಲೂ ಹೆಚ್ಚಿನ ಭ್ರಷ್ಟಾಚಾರ ಬ್ಯಾಂಕಿನಲ್ಲಿ ನಡೆದಿರುವ ಅನುಮಾನಗಳಿವೆ.  \

ಉದ್ಯಮಿ ಫ್ರಾನ್ಸಿಸ್ ಗೂ ಅಕ್ರಮ ಲೋನ್

ಜೋಸೆಫ್ ಅನಿಲ್ ಪತ್ರಾವೋ ಎಂಬ ಇನ್ನೊಬ್ಬ ಡೈರೆಕ್ಟರ್ ಕೂಡ ಅಧ್ಯಕ್ಷನ ರೀತಿಯೇ ಬ್ಯಾಂಕಿಗೆ ಮೋಸ ಮಾಡಿದ್ದಾನೆ. ಮಂಗಳೂರಿನ ಉದ್ಯಮಿ ಫ್ರಾನ್ಸಿಸ್ ಅಲ್ಫ್ರೆಡ್ ಕಾನ್ಸೆಸೋ ಮತ್ತು ಅವರ ಪತ್ನಿ ಡೋರಿಸ್ ಫ್ರಾನ್ಸಿಸ್ ವ್ಯವಹಾರ ಪಾಲುದಾರರೆಂದು ತೋರಿಸಿ ಎಂಸಿಸಿ ಬಿಜೈ ಶಾಖೆಯಿಂದ 5 ಕೋಟಿ ಸಾಲ ತೆಗೆದಿದ್ದಾರೆ. ಇಷ್ಟು ದೊಡ್ಡ ಮೊತ್ತದ ಸಾಲ ಪಡೆಯಲು ಫ್ರಾನ್ಸಿಸ್ ಕಾನ್ಸೆಸೋ ಸಿಬಿಲ್ ಅರ್ಹತೆ ಹೊಂದಿಲ್ಲದಿದ್ದರೂ, ಬ್ಯಾಂಕಿನ ಇನ್ ಚಾರ್ಜ್ ಡೈರೆಕ್ಟರ್ ಆಗಿರುವ ಜೋಸೆಫ್ ಎಂ. ಅನಿಲ್ ಪತ್ರಾವೋ ಒತ್ತಾಸೆಯಿಂದ ಸಾಲ ನೀಡಲಾಗಿತ್ತು. ಜೋಸೆಫ್ ಪತ್ರಾವೋ ಮತ್ತು ಫ್ರಾನ್ಸಿಸ್ ಅಲ್ಫ್ರೆಡ್ ಜಂಟಿಯಾಗಿ ವ್ಯವಹಾರ ಪಾಲುದಾರಿಕೆ ಹೊಂದಿದ್ದು, ದೇರೆಬೈಲ್ ನಲ್ಲಿ 18 ಸೆಂಟ್ಸ್ ಜಾಗ ಖರೀದಿಸಿ ಅಪಾರ್ಟ್ಮೆಂಟ್ ನಿರ್ಮಾಣದಲ್ಲಿ ತೊಡಗಿರುವ ದಾಖಲೆ ಸಿಕ್ಕಿದೆ. ಹೀಗಾಗಿ ಜೋಸೆಫ್ ಪತ್ರಾವೋ ಸ್ವಹಿತಾಸಕ್ತಿಯಿಂದ ಬ್ಯಾಂಕಿಗೆ ಮೋಸ ಮಾಡಿ, ಐದು ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ರೀತಿ ಮಾಡುವುದಕ್ಕೆ ಸೊಸೈಟಿ ಕಾಯ್ದೆಯಲ್ಲಿ ಅವಕಾಶ ಇಲ್ಲ.

ಅಕ್ರಮಕ್ಕೆ ಸಹಕರಿಸದೇ ಇದ್ದರೆ ಸಿಬಂದಿ ಎತ್ತಂಗಡಿ

ಅನಿಲ್ ಕುಮಾರ್ ಲೋಬೋ ಮತ್ತು ತಂಡ ಬ್ಯಾಂಕಿನಲ್ಲಿ ಡೈರೆಕ್ಟರ್ ಆಗಿ ತಮ್ಮ ಕಾರುಬಾರು ಶುರು ಮಾಡಿದ ಬಳಿಕ ಬ್ಯಾಂಕಿನಲ್ಲಿ ಮ್ಯಾನೇಜರ್ ಇತ್ಯಾದಿ ಪ್ರಮುಖ ಹುದ್ದೆಗಳಲ್ಲಿದ್ದವರು ತಮ್ಮ ಅಕ್ರಮಕ್ಕೆ ಸಹಕರಿಸದೇ ಇದ್ದರೆ ಬೇರೆ ಕಡೆಗೆ ಎತ್ತಂಗಡಿ ಮಾಡುವುದು, ಬಲವಂತದಿಂದ ರಾಜಿನಾಮೆ ಕೊಡಿಸಿದ್ದೂ ನಡೆದಿದೆಯಂತೆ. ಕಳೆದ ಐದು ವರ್ಷಗಳಲ್ಲಿ ಎಂಸಿಸಿ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಹತ್ತು ಮ್ಯಾನೇಜರ್ ಗಳನ್ನು ಬಲವಂತದಿಂದ ರಾಜಿನಾಮೆ ಕೊಡಿಸಲಾಗಿದೆ ಎನ್ನುವ ಆರೋಪಗಳಿವೆ. ಮಂಗಳೂರಿನಲ್ಲಿ 17 ವರ್ಷಗಳಿಂದ ಸಿಬಂದಿ ಆಗಿದ್ದ ಪುತ್ತೂರಿನ ಮಹಿಳೆಯೊಬ್ಬರು ಇವರ ಕಿರುಕುಳದಿಂದ ಕೆಲಸ ತ್ಯಜಿಸಿದ್ದಾರೆ. ಕಿನ್ನಿಗೋಳಿಯ ಅಂಗವಿಕಲ ಸಿಬಂದಿಯೊಬ್ಬರನ್ನು ಬಲವಂತದಿಂದ ರಾಜಿನಾಮೆ ನೀಡುವಂತೆ ಮಾಡಲಾಗಿತ್ತು ಅನ್ನೋದನ್ನು ಜೆರಾರ್ಡ್ ಟವರ್ ಹೇಳುತ್ತಾರೆ. 40-45 ವರ್ಷದ ಮಹಿಳಾ ಸಿಬಂದಿಯನ್ನು ಸತತ ವರ್ಗಾಯಿಸುತ್ತಾ ಹಿಂಸೆ ನೀಡುವುದು ಕೂಡ ನಡೆದಿದ್ದು, ತಮಗೆ ಸಹಕರಿಸದೇ ಇದ್ದವರು ಕೆಲಸ ಬಿಟ್ಟು ನಡೆಯುವಂತೆ ಮಾಡುತ್ತಿದ್ದಾರೆ.

ಡಿಸಿಸಿ ರೀತಿಯಲ್ಲೇ ಅಕ್ರಮ, ಭ್ರಷ್ಟಾಚಾರ

ಎಂಸಿಸಿ ಬ್ಯಾಂಕ್ ಸೊಸೈಟಿಯ ಅಕ್ರಮದ ಬಗ್ಗೆ ಸಹಕಾರಿ ಇಲಾಖೆಯ ಸಚಿವ ಸೋಮಶೇಖರ್, ಇಲಾಖೆಯ ರಿಜಿಸ್ಟ್ರಾರ್, ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ ಕಾಮತ್ ಅವರಿಗೂ ಜೆರಾರ್ಡ್ ಟವರ್ ದೂರು ನೀಡಿದ್ದರೂ ಎಲ್ಲರೂ ಅಕ್ರಮದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ ಅಧ್ಯಕ್ಷ ರಾಜೇಂದ್ರ ಕುಮಾರ್ ಮಾದರಿಯಲ್ಲೇ ಎಂಸಿಸಿ ಬ್ಯಾಂಕಿನಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದರೂ, ಇತರೇ ನಿರ್ದೇಶಕರು, ಸದಸ್ಯರು ಮೂಕ ಪ್ರೇಕ್ಷಕರಾಗಿದ್ದಾರೆ. ಸೊಸೈಟಿ ಬ್ಯಾಂಕುಗಳಂದ್ರೆ ಕೆಲವರ ಪಾಲಿಗೆ ತಮ್ಮ ಕುಟುಂಬದ ಸೊತ್ತು ಅನ್ನುವ ರೀತಿ ತಮ್ಮದೇ ಕಾರುಬಾರು ನಡೆಸುತ್ತಿದ್ದಾರೆ. ಸಹಕಾರಿ ಇಲಾಖೆಯ ಸಡಿಲ ಕಾನೂನು, ಇವರ ಅವ್ಯವಹಾರವನ್ನು ಪ್ರಶ್ನಿಸಬೇಕಾದ ಇಲಾಖೆಯ ಅಧಿಕಾರಿಗಳೇ ಅಕ್ರಮದಲ್ಲಿ ಶಾಮೀಲಾಗುವುದು ಕಳ್ಳರ ಕೂಟಕ್ಕೆ ಲಗಾಮು ಇಲ್ಲದಂತಾಗಿದೆ.

Mangalore Catholic Bank president Anil Lobo Fermai has been caught by RBI of looting crores of Money for his personal use after complaint by social activist Gerard Towers. In the past five years more than 10 Bank Managers have been transferred by Anil Lobo for not cooperating along with him in creating misapporiate funds. The Mangalorean Catholic Cooperative Society was established. On 9-5-1912 the First General Assembly of the New Society called. The members elected Hon'ble P F X Saldanha as its first President, Simon Alvares as Vice President and Shri J M Castelino as Secretary and Treasurer.