ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ ಭೇಟಿ ; ವ್ಯೂಹಾತ್ಮಕ ವಿಷಯಗಳ ಚರ್ಚೆ, ಅಮೇರಿಕಾ ಸುಂಕ ನೀತಿಗೆ ಸೆಡ್ಡು ಹೊಡೆಯಲು ತಂತ್ರ 

09-08-25 02:49 pm       HK News Desk   ದೇಶ - ವಿದೇಶ

ರಷ್ಯಾ ಪ್ರವಾಸದಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಷ್ಯಾದ ಉಪ ಪ್ರಧಾನಿ ಡೆನಿಸ್ ಮಾಂಟುರೋವ್ ಅವರನ್ನು ಭೇಟಿಯಾಗಿದ್ದು ಹಲವಾರು ವ್ಯೂಹಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ನವದೆಹಲಿ, ಆ.9: ರಷ್ಯಾ ಪ್ರವಾಸದಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಷ್ಯಾದ ಉಪ ಪ್ರಧಾನಿ ಡೆನಿಸ್ ಮಾಂಟುರೋವ್ ಅವರನ್ನು ಭೇಟಿಯಾಗಿದ್ದು ಹಲವಾರು ವ್ಯೂಹಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮುಖ್ಯವಾಗಿ ಅಮೇರಿಕಾ ಭಾರತದ ಸರಕುಗಳ ಮೇಲೆ ವಿಧಿಸಿರುವ ಶೇ.50ರ ಸುಂಕ ನೀತಿಗೆ ಸೆಡ್ಡು ಹೊಡೆಯಲು ಮಾಡಬೇಕಾದ ವ್ಯೂಹ ಹೆಣೆಯಲು ಅಜಿತ್ ದೋವಲ್ ಫಲಪ್ರದ ಮಾತುಕತೆಯಲ್ಲಿದ್ದಾರೆ ಎನ್ನಲಾಗಿದೆ.

ವಿಶೇಷವಾಗಿ ದ್ವೀಪಕ್ಷೀಯ ರಕ್ಷಣಾ ಮತ್ತು ತಾಂತ್ರಿಕ ವಿಷಯಗಳಲ್ಲಿ ಮಾಡಬೇಕಾದ ರಚನಾತ್ಮಕ ಕೆಲಸಗಳ ಬಗ್ಗೆ ಇವರ ಮಾತುಕತೆ ನಡೆಯಬೇಕಿತ್ತಾದರೂ ಅಮೆರಿಕಾದ ಸದ್ದು ಅಡಗಿಸಲು ಜಂಟಿಯಾಗಿ ಮಾಡಬೇಕಾದ ತಂತ್ರಗಳು ಹಾಗೂ ಅದಕ್ಕೆ ಪೂರಕವಾಗಿ ಆಗಬೇಕಾದ ಜಂಟಿ ಕಾರ್ಯಾಚರಣೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಂದಿನ ವರ್ಷ ರಷ್ಯಾ ಅಧ್ಯಕ್ಷ ವ್ಲ್ಯಾದಿಮಿರ್ ಪುಟಿನ್ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು ಆ ಸಂದರ್ಭ ಕೈಗೊಳ್ಳಬೇಕಾದ ಪರಮಾಣು ಶಕ್ತಿ, ದ್ವಿಪಕ್ಷೀಯ ರಕ್ಷಣಾ ಒಪ್ಪಂದಗಳ ಬಗ್ಗೆಯೂ ಅಂತಿಮ ರೂಪುರೇಷೆ ಬಗ್ಗೆಯೂ ಮಾತುಕತೆ ಮಾಡಿದ್ದಾರೆ. ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ನೀಡಿರುವ ಮಾಹಿತಿಯಂತೆ, ಅಜಿತ್ ದೋವಲ್ ಹಾಗೂ ಮಾಂಟುರೋವ್ ಮಧ್ಯೆ ಭಾರತ -ರಷ್ಯಾ ಭದ್ರತಾ-ತಾಂತ್ರಿಕ ಒಪ್ಪಂದ ಹಾಗೂ ಸಹಕಾರ, ಇತರ ವ್ಯೂಹಾತ್ಮಕ ವಲಯಗಳಲ್ಲಿ ಜಂಟಿ ಯೋಜನೆಗಳು, ಯುದ್ಧ ವಿಮಾನಗಳು, ರಾಸಾಯನಿಕ ಕ್ಷೇತ್ರ ಇತ್ಯಾದಿಗಳ ವಿಷಯದಲ್ಲಿ ಸಕಾರಾತ್ಮಕ ಮಾತುಕತೆ ನಡೆದಿದೆ.

ಈ ಮಧ್ಯೆ ಅಜಿತ್ ದೋವಲ್ ಗುರುವಾರ ರಷ್ಯಾ ಅಧ್ಯಕ್ಷ ವ್ಲ್ಯಾದಿಮಿರ್ ಪುಟಿನ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು ಹೊರಗಿನ ಯಾವುದೇ ಒತ್ತಡ ಬಂದರೂ ಭಾರತವು ರಷ್ಯಾ ಜೊತೆಗಿನ ಎಲ್ಲಾ ಒಪ್ಪಂದಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಲಿದೆ. ಇದುವರೆಗಿನ ಒಪ್ಪಂದಗಳನ್ನು ಯಾರದೋ ಒತ್ತಡ ತಂತ್ರಕ್ಕೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದ್ದಾರೆ. ಅಂತಿಮವಾಗಿ ಅಜಿತ್ ದೋವಲ್ ರಷ್ಯಾ ಅಧ್ಯಕ್ಷರಿಗೆ ಭಾರತಕ್ಕೆ ಬರುವಂತೆ ಪ್ರಧಾನಿ ನರೇಂದ್ರ ಮೋದಿಯವರ ಪರ ಆಮಂತ್ರಣ ನೀಡಿದ್ದು ಅದನ್ನು ಪುಟಿನ್ ಸ್ವೀಕರಿಸಿದ್ದಾರೆ.

National Security Advisor Ajit Doval held talks with Russia's First Deputy Prime Minister Denis Manturov here on bilateral military-technical ties and implementation of joint projects in strategic sectors.