ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾಣದಲ್ಲಿ ಸರ್ಕಾರ ದಿವಾಳಿ, ಏನ್ ಹೇಳ್ತಾರೆ ಸಿಎಂ ರೇವಂತ್​ ರೆಡ್ಡಿ ?

26-08-25 09:02 pm       HK News Desk   ದೇಶ - ವಿದೇಶ

ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಮತ್ತೊಮ್ಮೆ ನಿರಾಶೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಖಜಾನೆ ಬತ್ತಿ ಹೋಗಿದೆ. ಬಡವರಿಗೆ ಹಂಚಲು ಭೂಮಿಯೂ ಇಲ್ಲ ಎಂದು ಹೇಳಿದ್ದಾರೆ.

ಹೈದರಾಬಾದ್, ಆ.26: ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಮತ್ತೊಮ್ಮೆ ನಿರಾಶೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಖಜಾನೆ ಬತ್ತಿ ಹೋಗಿದೆ. ಬಡವರಿಗೆ ಹಂಚಲು ಭೂಮಿಯೂ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆಲ್ಲಾ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಹೈದರಾಬಾದ್​​ನಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಹೊಸ ಹಾಸ್ಟೆಲ್​ ಉದ್ಘಾಟನೆ ಮತ್ತು ವಿವಿಧ ಕಟ್ಟಡಗಳಿಗೆ ಶಿಲಾನ್ಯಾಸ ಮಾಡಿದ ಬಳಿಕ ಮಾತನಾಡಿದ ಅವರು, "ನಾನು ನಿಮಗೆ ರಾಜ್ಯದ ನಿಜವಾದ ಪರಿಸ್ಥಿತಿಯನ್ನು ಹೇಳುತ್ತೇನೆ. ಬಡವರಿಗೆ ವಿತರಿಸಲು ನನ್ನ ಬಳಿ ಭೂಮಿಯೂ ಇಲ್ಲ. ನಾನು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲು ಬಯಸಿದ್ದರೂ, ಸರ್ಕಾರದ ಖಜಾನೆ ಖಾಲಿಯಾಗಿದೆ" ಎಂದರು.

ತೆಲಂಗಾಣವು ದೇಶದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದಾಗಿದ್ದರೂ, ಆರ್ಥಿಕ ಸ್ಥಿತಿ ಕೆಟ್ಟದಾಗಿದೆ. ಬಡವರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು (ಗ್ಯಾರಂಟಿ) ಜಾರಿ ಮಾಡಿದೆ. ಆದರೆ, ವಿತ್ತೀಯ ಸ್ಥಿತಿ ಗಂಭೀರವಾಗಿದೆ ಎಂದು ಅವರು ಒಪ್ಪಿಕೊಂಡರು.

ಶಿಕ್ಷಣ ಕೊಡಿಸುವೆ, ಬೇರೆ ಕಷ್ಟಕಷ್ಟ:

ಮುಂದುವರಿದು ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದ ಸಿಎಂ ರೇವಂತ್​ ರೆಡ್ಡಿ ಅವರು, "ನಿಮಗೆ ನಾನು ಗುಣಮಟ್ಟದ ಶಿಕ್ಷಣವನ್ನು ನೀಡಲು ಮಾತ್ರ ಶಕ್ತನಾಗಿದ್ದೇನೆ. ಇದರಿಂದ ಮಾತ್ರ ನಾವು ಬೆಳೆಯಲು ಸಾಧ್ಯ. ಉಸ್ಮಾನಿಯಾ ವಿವಿಯನ್ನು ಆಕ್ಸ್​​ಫರ್ಡ್​ ವಿಶ್ವವಿದ್ಯಾಲಯದ ಮಾದರಿಗೆ ಕೊಂಡೊಯ್ಯಲು ಎಲ್ಲ ಪ್ರಯತ್ನ ನಡೆಸಲಾಗುವುದು" ಎಂದು ಅಭಯ ನೀಡಿದರು.

"ತೆಲಂಗಾಣದಲ್ಲಿ 1.5 ಕೋಟಿ ಎಕರೆ ಕೃಷಿ ಭೂಮಿ ಇದ್ದು, ಅದರಲ್ಲಿ ಶೇಕಡಾ 96ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು ತಲಾ ಒಂದರಿಂದ ಮೂರು ಎಕರೆ ಭೂಮಿ ಹೊಂದಿದ್ದಾರೆ. ಸರ್ಕಾರ ಭೂ ಮಿತಿ ಕಾಯ್ದೆ ಜಾರಿಗೆ ತಂದರೂ ಸಹ, ಹೆಚ್ಚುವರಿ ಭೂಮಿಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯದ ಜನರಿಗೆ ನಾನು ನೀಡಬಹುದಾದ ಏಕೈಕ ಸಂಪನ್ಮೂಲವೆಂದರೆ ಗುಣಮಟ್ಟದ ಶಿಕ್ಷಣ ಮಾತ್ರ" ಎಂದರು.

"ತೆಲಂಗಾಣ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದು. ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ಆದಾಯ, ಕಾನೂನು-ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಗುರುತಿಸಿದೆ. ಕಳೆದ 20 ತಿಂಗಳುಗಳಲ್ಲಿ ಖಾಸಗಿ ವಲಯದಲ್ಲಿ ರಾಜ್ಯವು 1.5 ಲಕ್ಷ ಯುವಕರಿಗೆ ಉದ್ಯೋಗ ನೀಡಿದೆ" ಎಂದು ಹೇಳಿದರು.

ಇದಕ್ಕೂ ಮೊದಲು ಮೇ ತಿಂಗಳಲ್ಲಿ ಸಭೆಯೊಂದರಲ್ಲಿ ರಾಜ್ಯದ ಖಜಾನೆ ಬರಿದಾದ ಬಗ್ಗೆ ಸಿಎಂ ತಿಳಿಸಿದ್ದರು. ನಮ್ಮ ಆರ್ಥಿಕ ಸ್ಥಿತಿಯು ನಿರಾಶಾದಾಯಕವಾಗಿದೆ. ವಿಶ್ವಾಸದ ಕೊರತೆಯಿಂದ ಬ್ಯಾಂಕ್​​ಗಳು ಹೊಸ ಸಾಲ ಮಂಜೂರು ಮಾಡಲೂ ಹಿಂದೇಟು ಹಾಕುತ್ತಿವೆ. ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗುತ್ತಿದೆ ಎಂದು ದೈನೇಸಿ ಸ್ಥಿತಿಯನ್ನು ಒಪ್ಪಿಕೊಂಡಿದ್ದರು.

Telangana Chief Minister Revanth Reddy has once again expressed deep concern over the state’s worsening financial condition, admitting that the government coffers are empty and even land to distribute to the poor is unavailable.