Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್‌ ಸಯೀದ್‌ ಭೇಟಿ ಮಾಡಿದ್ದಕ್ಕೆ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅಭಿನಂದಿಸಿದ್ದರು..! ದೆಹಲಿ ಹೈಕೋರ್ಟ್‌ಗೆ ಜೆಕೆಎಲ್ಎಫ್ ಉಗ್ರ ಯಾಸಿನ್‌ ಮಲಿಕ್‌ ಸ್ಪೋಟಕ ಹೇಳಿಕೆ 

19-09-25 02:24 pm       HK News Desk   ದೇಶ - ವಿದೇಶ

2006ರಲ್ಲಿ ಪಾಕಿಸ್ತಾನದಲ್ಲಿ ಲಷ್ಕರ್‌ ಎ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಸಂಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ ಮೈಂಡ್ ಹಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಭಾರತದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನನಗೆ ವೈಯಕ್ತಿಕವಾಗಿ ಧನ್ಯವಾದ ಹೇಳಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಉಗ್ರ ಸಂಘಟನೆಯ ಭಯೋತ್ಪಾದಕ ಯಾಸಿನ್ ಮಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾನೆ. 

ನವದೆಹಲಿ, ಸೆ.19 : 2006ರಲ್ಲಿ ಪಾಕಿಸ್ತಾನದಲ್ಲಿ ಲಷ್ಕರ್‌ ಎ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಸಂಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ ಮೈಂಡ್ ಹಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಭಾರತದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನನಗೆ ವೈಯಕ್ತಿಕವಾಗಿ ಧನ್ಯವಾದ ಹೇಳಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಉಗ್ರ ಸಂಘಟನೆಯ ಭಯೋತ್ಪಾದಕ ಯಾಸಿನ್ ಮಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾನೆ. 

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಯಾಸಿನ್ ಮಲಿಕ್, ಆಗಸ್ಟ್ 25ರಂದು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, 2006ರಲ್ಲಿ ಎಲ್‌ಇಟಿ ಜೊತೆ ನಡೆದ ಸಭೆ ನಮ್ಮ ಸ್ವತಂತ್ರ ಕಾರ್ಯಕ್ರಮವಾಗಿರಲಿಲ್ಲ, ಪಾಕಿಸ್ತಾನದೊಂದಿಗೆ ಮಾಡಬೇಕಾದ ಶಾಂತಿ ಪ್ರಕ್ರಿಯೆಯ ಭಾಗವಾಗಿ ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ಆ ಸಭೆ ನಡೆಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಯಾಸಿನ್‌ ಮಲಿಕ್ ಅಫಿಡವಿಟ್‌ನಲ್ಲಿ ನೀಡಿದ ಹೇಳಿಕೆಯ ಪ್ರಕಾರ, 2005ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಮೊದಲು ಗುಪ್ತಚರ ಬ್ಯೂರೋದ (ಐಬಿ) ವಿಶೇಷ ನಿರ್ದೇಶಕ ವಿ.ಕೆ.ಜೋಶಿ ಅವರನ್ನು ದೆಹಲಿಯಲ್ಲಿ ಆತ ಭೇಟಿಯಾಗಿದ್ದ. ಪಾಕಿಸ್ತಾನದ ರಾಜಕೀಯ ನಾಯಕತ್ವದೊಂದಿಗೆ ಮಾತ್ರವಲ್ಲದೆ, ಸಯೀದ್ ಸೇರಿದಂತೆ ಭಯೋತ್ಪಾದಕ ಸಂಘಟನೆಯ ಪ್ರಮುಖರ ಜೊತೆ ಮಾತನಾಡಲು ಅವಕಾಶ ಸಿಕ್ಕರೆ ಅದನ್ನು ಬಳಸಿಕೊಳ್ಳುವಂತೆ ಜೋಶಿ ತನ್ನಲ್ಲಿ ವಿನಂತಿಸಿದ್ದರು. ಆಗಿನ ಪ್ರಧಾನಿ ಮನಮೋಹನ್‌ ಸಿಂಗ್ ಅವರು ಪಾಕಿಸ್ತಾನದ ಜೊತೆ ನಡೆಸುತ್ತಿದ್ದ ಶಾಂತಿ ಪ್ರಯತ್ನಗಳನ್ನು ಬೆಂಬಲಿಸಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಜೋಶಿ ತನ್ನಲ್ಲಿ ಕೇಳಿಕೊಂಡಿದ್ದರು ಎಂದು ಮಲಿಕ್‌ ತಿಳಿಸಿದ್ದಾರೆ. 

ಶಾಂತಿ ಮಾತುಕತೆಯಲ್ಲಿ ಭಯೋತ್ಪಾದಕ ನಾಯಕರನ್ನು ಸಹ ಸೇರಿಸಿಕೊಳ್ಳದಿದ್ದರೆ ಪಾಕಿಸ್ತಾನದೊಂದಿಗಿನ ಆ ಮಾತುಕತೆ ಅರ್ಥಪೂರ್ಣವಾಗಿರುವುದಿಲ್ಲ ಎಂದು ತನಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ಮಲಿಕ್‌ ಹೇಳಿದ್ದಾನೆ. ಈ ಕೋರಿಕೆಯ ಮೇರೆಗೆ, ಪಾಕಿಸ್ತಾನದಲ್ಲಿ ನಡೆದ ಸಮಾರಂಭದಲ್ಲಿ ಸಯೀದ್ ಮತ್ತು ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಇತರ ನಾಯಕರನ್ನು ಭೇಟಿ ಮಾಡಲು ತಾನು ಒಪ್ಪಿಕೊಂಡಿದ್ದಾಗಿಯೂ ಆತ ತಿಳಿಸಿದ್ದಾನೆ.

ಹಫೀಜ್‌ ಸಯೀದ್‌ ಜಿಹಾದಿ ಗುಂಪುಗಳ ಸಭೆ ಹೇಗೆ ಆಯೋಜಿಸುತ್ತಿದ್ದ ಎಂಬ ಬಗ್ಗೆಯೂ ಯಾಸಿನ್‌ ಮಲಿಕ್‌ ಅಫಿಡವಿಟ್‌ನಲ್ಲಿ ವಿವರಿಸಿದ್ದಾನೆ. ಭಯೋತ್ಪಾದಕರು ಶಾಂತಿ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ನಾನು ಸಯೀದ್‌ ಎದುರೇ ಭಾಷಣ ಮಾಡಿದ್ದೆ. ಇಸ್ಲಾಮಿಕ್ ಬೋಧನೆಗಳನ್ನು ಉಲ್ಲೇಖಿಸಿ, ಹಿಂಸಾಚಾರದ ಬದಲು ಸಮನ್ವಯಕ್ಕಾಗಿ ತಾನು ಒತ್ತಾಯಿಸಿದ್ದೆ ಎಂದಿದ್ದೆ. ಆದರೆ ಆದೇ ಸಭೆಯ ಫೋಟೋಗಳು ಯಾಸಿನ್‌ ಮಲಿಕ್‌, ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳ ಜೊತೆ ಸಂಬಂಧ ಹೊಂದಿದ್ದಾನೆ ಎಂಬರ್ಥದಲ್ಲಿ ಬಿಂಬಿಸಲ್ಪಟ್ಟಿದ್ದವು. ಇದು ನನಗೆ ಆದ ದೊಡ್ಡ ದ್ರೋಹ. ಅಂದಿನ ಸಭೆ ಅಧಿಕೃತವಾಗಿ ಸರ್ಕಾರದಿಂದ ಅನುಮೋದಿಸಲಾದ ಕಾರ್ಯಕ್ರಮವಾಗಿತ್ತು. ನಂತರ ರಾಜಕೀಯ ಉದ್ದೇಶಗಳಿಂದ ಅದನ್ನು ವಿರೂಪಗೊಳಿಸಲಾಯಿತು ಎಂದು ಯಾಸಿನ್‌ ಮಲಿಕ್‌ ಹೇಳಿದ್ದಾನೆ.

ಯಾಸಿನ್‌ ಮಲಿಕ್ ತಾನು ಭಾರತಕ್ಕೆ ಹಿಂದಿರುಗಿದ ನಂತರ ಏನಾಯಿತು ಎಂಬುದನ್ನೂ ಅಫಿಡವಿಟ್‌ನಲ್ಲಿ ವಿವರಿಸಿದ್ದು, ಪಾಕಿಸ್ತಾನದಲ್ಲಾದ ಸಭೆಯ ಬಗ್ಗೆ ಆಗಿನ ಪ್ರಧಾನಮಂತ್ರಿಗೆ ನೇರವಾಗಿ ಮಾಹಿತಿ ನೀಡಲು ನನಗೆ ಗುಪ್ತಚರ ಇಲಾಖೆಯಿಂದ ಕೇಳಿದ್ದರು.‌ ಭಾರತಕ್ಕೆ ಬಂದ ಅದೇ ದಿನ ಸಂಜೆ ರಾಜಧಾನಿಯಲ್ಲಿ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಸಮ್ಮುಖದಲ್ಲಿ ಮನಮೋಹನ್‌ ಸಿಂಗ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದೆ. ಪಾಕಿಸ್ತಾನದ ಅತ್ಯಂತ ತೀವ್ರವಾದಿಗಳೊಂದಿಗೆ ವ್ಯವಹರಿಸಲು ತೋರಿಸಿದ ಪ್ರಯತ್ನ, ತಾಳ್ಮೆ ಮತ್ತು ಸಮರ್ಪಣೆಗಾಗಿ ಮನಮೋಹನ್‌ ಸಿಂಗ್‌ ನನಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸಿದ್ದರು ಎಂದು ಹೇಳಿದ್ದಾನೆ. ಮನಮೋಹನ್‌ ಸಿಂಗ್‌ ಜೊತೆ ಕೈಕುಲುಕುತ್ತಿರುವ ಫೋಟೋ ಬಗ್ಗೆ ತಿಳಿಸಿರುವ ಯಾಸಿನ್‌ ಮಲಿಕ್‌ ನಾನು ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದಾಗ, ಯಾವುದೇ ಹಿಂಜರಿಕೆಯಿಲ್ಲದೆ ಅವರು, ನಿಮ್ಮನ್ನು ಕಾಶ್ಮೀರದಲ್ಲಿ ಅಹಿಂಸಾತ್ಮಕ ಚಳವಳಿಯ ಪಿತಾಮಹ ಎಂದು ಪರಿಗಣಿಸುತ್ತೇನೆ ಎಂದು ಹೇಳಿದ್ದಾಗಿ ತಿಳಿಸಿದ್ದರು.

ಇದೇ ವೇಳೆ ಅಟಲ್ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿ, ಪಿ.ಚಿದಂಬರಂ, ಐ.ಕೆ ಗುಜ್ರಾಲ್ ಮತ್ತು ರಾಜೇಶ್ ಪೈಲಟ್ ಮೊದಲಾದ ಉನ್ನತ ರಾಜಕೀಯ ನಾಯಕರೊಂದಿಗಿನ ತನ್ನ ಭೇಟಿ ಮತ್ತು ಸಭೆಗಳ ಬಗ್ಗೆಯೂ ಯಾಸಿನ್‌ ಮಲಿಕ್ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. 1990ರಲ್ಲಿ ನನ್ನ ಬಂಧನವಾದ ನಂತರ ಆ ಬಳಿಕದ ಪ್ರಧಾನಿಗಳಾದ ವಿ.ಪಿ.ಸಿಂಗ್, ಚಂದ್ರಶೇಖರ್, ಪಿ.ವಿ.ನರಸಿಂಹ ರಾವ್, ಎಚ್.ಡಿ. ದೇವಗೌಡ, ಇಂದರ್ ಕುಮಾರ್ ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಸತತ ಆರು ಸರ್ಕಾರಗಳಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ ಎಂದು ಹೇಳಿದ್ದಾನೆ. 1990ರ ಜನವರಿಯಲ್ಲಿ ಶ್ರೀನಗರದಲ್ಲಿ ನಾಲ್ವರು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಕೊಂದ ಆರೋಪ ಯಾಸಿನ್‌ ಮಲಿಕ್ ಮೇಲಿದೆ. ಕೇಂದ್ರದ ಮಾಜಿ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರನ್ನು ಅಪಹರಿಸಿದ ಆರೋಪವೂ ಆತನ ಮೇಲಿದೆ. 1990ರ ಕಾಶ್ಮೀರಿ ಪಂಡಿತರ ನರಮೇಧಕ್ಕೆ ಯಾಸಿನ್‌ ಮಲಿಕ್‌ನನ್ನೇ ದೂಷಿಸಲಾಗುತ್ತಿದೆ.

In an explosive revelation, jailed separatist leader and JKLF terrorist Yasin Malik has claimed that former Prime Minister Dr. Manmohan Singh personally thanked him in 2006 after he met Lashkar-e-Taiba (LeT) founder and 26/11 mastermind Hafiz Saeed in Pakistan.