Afghan Foreign Minister, Amir Khan Muttaqi: ಮಹಿಳಾ ಪತ್ರಕರ್ತರನ್ನು ಹೊರಗಿಟ್ಟು ಅಫ್ಘನ್ ವಿದೇಶಾಂಗ ಸಚಿವನ ಸುದ್ದಿಗೋಷ್ಟಿ ; ವ್ಯಾಪಕ ಖಂಡನೆ, ನಮ್ಮ ನೆಲದಲ್ಲಿ ಸ್ತ್ರೀದ್ವೇಷ ತೋರಿಸಲು ಆತನಿಗೆಷ್ಟು ಧೈರ್ಯ ಎಂದು ಪ್ರಶ್ನಿಸಿದ ಮಹಿಳಾ ನಾಯಕಿಯರು 

11-10-25 12:52 pm       HK News Desk   ದೇಶ - ವಿದೇಶ

ರಾಜತಾಂತ್ರಿಕ ಸಂಬಂಧ ವೃದ್ಧಿಗಾಗಿ ಭಾರತಕ್ಕೆ ಭೇಟಿ ನೀಡಿದ್ದ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ತಾಲಿಬಾನ್ ಮಾದರಿಯ ಸ್ತ್ರೀದ್ವೇಷವನ್ನು ತೋರಿಸಿದ್ದಾರೆ.

ನವದೆಹಲಿ, ಅ.11: ರಾಜತಾಂತ್ರಿಕ ಸಂಬಂಧ ವೃದ್ಧಿಗಾಗಿ ಭಾರತಕ್ಕೆ ಭೇಟಿ ನೀಡಿದ್ದ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ತಾಲಿಬಾನ್ ಮಾದರಿಯ ಸ್ತ್ರೀದ್ವೇಷವನ್ನು ತೋರಿಸಿದ್ದಾರೆ. ತನ್ನ ಸುದ್ದಿಗೋಷ್ಟಿಯಲ್ಲಿ ಮಹಿಳಾ ಪತ್ರಕರ್ತರು ಪಾಲ್ಗೊಳ್ಳಬಾರದೆಂದು ರಾಷ್ಟ್ರೀಯ ವಾಹಿನಿಗಳ ಮಹಿಳಾ ಪತ್ರಕರ್ತರನ್ನು ಹೊರಕ್ಕೆ ಕಳಿಸಿದ ಘಟನೆ ನಡೆದಿದ್ದು, ಕೇಂದ್ರ ಸರಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಅಫ್ಘನ್ ಸಚಿವ ಮುತ್ತಕಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಆದರೆ ಮಹಿಳಾ ಪತ್ರಕರ್ತರನ್ನು ಹೊರಕ್ಕೆ ಕಳಿಸಿ ಸುದ್ದಿಗೋಷ್ಟಿ ನಡೆಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ತಾಲಿಬಾನ್ ಸಚಿವನಿಗೆ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟು ಸುದ್ದಿಗೋಷ್ಟಿ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದು ಯಾಕೆ. ನಮ್ಮದೇ ನೆಲದಲ್ಲಿ, ನಮ್ಮ ಸರ್ಕಾರದಿಂದಲೇ ಭದ್ರತೆ ಕೊಟ್ಟು ಮಹಿಳೆಯರನ್ನು ಹೊರಕ್ಕಿಟ್ಟು ಸುದ್ದಿಗೋಷ್ಟಿ ನಡೆಸಲು ಅವಕಾಶ ನೀಡಿದ್ದು ಹೇಗೆ? ಇಂಥದ್ದಕ್ಕೆಲ್ಲ ಅವಕಾಶ ನೀಡಲು ಧೈರ್ಯ ಹೇಗೆ ಬಂತು ನಿಮಗೆ, ಇದನ್ನು ಬಹಿಷ್ಕರಿಸುವ ಧೈರ್ಯ ಬೆನ್ನುಮೂಳೆ ಇಲ್ಲದ ಪುರುಷ ಪತ್ರಕರ್ತರಿಗೆ ಇರಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಚಿದಂಬರಂ ಕೂಡ ಆಘಾತ ವ್ಯಕ್ತಪಡಿಸಿದ್ದು, ಪುರುಷ ಪತ್ರಕರ್ತರು ಸುದ್ದಿಗೋಷ್ಟಿ ಬಹಿಷ್ಕರಿಸಿ ವಾಕೌಟ್ ಮಾಡಬೇಕಿತ್ತು. ಮಹಿಳೆಯರನ್ನು ಹೊರಕ್ಕಿಡುವ ವಿಚಾರ ಗೊತ್ತಾಗಿಯೂ ಯಾಕೆ ಸುಮ್ಮನುಳಿದರು ಎಂದು ಪ್ರಶ್ನಿಸಿದ್ದಾರೆ. ಸಂಸದೆ ಪ್ರಿಯಾಂಕ ವಾದ್ರಾ ನೇರವಾಗಿ ಪ್ರಧಾನಿ ಮೋದಿಯನ್ನು ಪ್ರಶ್ನೆ ಮಾಡಿದ್ದು, ಮಹಿಳಾ ಪಢಾವೋ, ಬಚಾವೋ ಎಂದು ಹೇಳುವ ನೀವು ಮಹಿಳೆಯರನ್ನು ಹೊರಗಿಡುವ ಅಫ್ಘನ್ ಸಚಿವನಿಗೆ ಯಾಕೆ ಅವಕಾಶ ನೀಡಿದ್ರಿ. ತಾಲಿಬಾನಲ್ಲಿ ಸ್ತ್ರೀದ್ವೇಷ ಇರಬಹುದು. ಬೇರೆ ದೇಶಗಳಿಗೆ ಹೋಗಿದ್ದಾಗಲೂ ತನ್ನ ಸ್ತ್ರೀ ದ್ವೇಷ ಪಾಲಿಸಲು ಅವಕಾಶ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ವಿವಾದ ಭುಗಿಲೇಳುತ್ತಿದ್ದಂತೆ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು, ಸುದ್ದಿಗೋಷ್ಟಿ ಕರೆದಿರುವ ವಿಚಾರದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಹೇಳಿದೆ. ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ. ಅದೇ ಮಾದರಿಯನ್ನು ಅಫ್ಘಾನ್ ಸಚಿವ ಭಾರತದ ನೆಲದಲ್ಲೂ ತೋರಿಸಿದ್ದಾನೆ. ಪಾಕಿಸ್ತಾನ ಜೊತೆಗೆ ಸಂಬಂಧ ಕಡಿದುಕೊಂಡಿರುವ ಹಿನ್ನೆಲೆಯಲ್ಲಿ ಭಾರತವು ಅಫ್ಘಾನಿಸ್ತಾನ ಜೊತೆಗೆ ಮೈತ್ರಿ ಏರ್ಪಡಿಸುವ ನಿಟ್ಟಿನಲ್ಲಿ ಅಲ್ಲಿನ ಸಚಿವರನ್ನು ಕರೆಸಿಕೊಂಡಿತ್ತು. ಅ.9ರಿಂದ 16ರ ವರೆಗೆ ಒಂದು ವಾರ ಕಾಲ ಅಫ್ಘಾನ್ ಸಚಿವ ಭಾರತದಲ್ಲಿ ಇರಲಿದ್ದು ಮೊದಲ ದಿನವೇ ಸ್ತ್ರೀದ್ವೇಷ ತೋರಿಸಿ ಟೀಕೆಗೆ ಗುರಿಯಾಗಿದ್ದಾರೆ. ರಾಷ್ಟ್ರೀಯ ವಾಹಿನಿಗಳ ಹಲವಾರು ಮಹಿಳಾ ಪತ್ರಕರ್ತರು ತಮ್ಮ ಟ್ವಿಟರ್ ನಲ್ಲಿ ಅಫ್ಘಾನ್ ಸಚಿವನ ಧೋರಣೆಯನ್ನು ಖಂಡಿಸಿದ್ದಾರೆ. ವಿಪಕ್ಷ ನಾಯಕರು ಕೂಡ ಖಂಡನೆ ವ್ಯಕ್ತಪಡಿಸಿದ್ದು ಆಡಳಿತ ಪಕ್ಷದ ನಾಯಕರು ಮಗುಮ್ಮಾಗಿದ್ದಾರೆ.

A major diplomatic controversy erupted in New Delhi after Afghanistan’s Foreign Minister Amir Khan Muttaqi barred women journalists from attending his press conference during his official visit to India. The move, reminiscent of the Taliban’s misogynistic policies, has drawn widespread condemnation from Indian opposition leaders, journalists, and women’s rights activists.