ಬಾಲಿವುಡ್​ ಚಿತ್ರರಂಗದ ದಂತಕಥೆ, 'ಹೀ ಮ್ಯಾನ್' ಖ್ಯಾತಿಯ ನಟ ಧರ್ಮೇಂದ್ರ ಇನ್ನಿಲ್ಲ ! 70-80ರ ದಶಕದಲ್ಲಿ ಹಿಂದಿ ಚಿತ್ರರಂಗ ಆಳಿದ್ದ ಪಂಜಾಬಿ ಕುಡಿ 

24-11-25 03:37 pm       HK News Desk   ದೇಶ - ವಿದೇಶ

ಬಾಲಿವುಡ್​ ಚಿತ್ರರಂಗದ ದಂತಕಥೆ, ಹೀ ಮ್ಯಾನ್ ಖ್ಯಾತಿಯ ನಟ ಧರ್ಮೇಂದ್ರ(89) ನಿಧನ ಹೊಂದಿದ್ದಾರೆ. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 

ಮುಂಬೈ, ನ.24 : ಬಾಲಿವುಡ್​ ಚಿತ್ರರಂಗದ ದಂತಕಥೆ, ಹೀ ಮ್ಯಾನ್ ಖ್ಯಾತಿಯ ನಟ ಧರ್ಮೇಂದ್ರ(89) ನಿಧನ ಹೊಂದಿದ್ದಾರೆ. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 

ಇದೇ ಡಿಸೆಂಬರ್ 8ರಂದು ಧರ್ಮೇಂದ್ರ ಅವರಿಗೆ 90ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಆದರೆ ಅದಕ್ಕೆ ಎರಡು ವಾರ ಇರುವಾಗಲೇ ಇಹಲೋಕ ತ್ಯಜಿಸಿದ್ದಾರೆ.‌ 80ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ್ದ ದಿಗ್ಗಜ ನಟ ಇನ್ನಿಲ್ಲವಾಗಿದ್ದಾರೆ. 

ಬಾಲಿವುಡ್​ನಲ್ಲಿ ‘ಹಿ ಮ್ಯಾನ್’ ಎಂದೇ ಫೇಮಸ್ ಆಗಿದ್ದ ಧರ್ಮೇಂದ್ರ ಅವರ ನಗು ಅದೆಷ್ಟೋ ಮಹಿಳಾ ಅಭಿಮಾನಿಗಳ ನಿದ್ದೆಗೆಡಿಸಿತ್ತು. ಅವರು ತೆರೆಮೇಲೆ ಕಾಣಿಸಿಕೊಂಡರೆ, ಅವರ ಚಾರ್ಮ್, ನಗುವನ್ನು ಕಂಡು ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದರು. ಪಂಜಾಬಿ ಮೂಲದ ಕುಟುಂಬದ ಕುಡಿ ಮುಂಬೈ ಚಿತ್ರರಂಗವನ್ನು ಆಳಿದ್ದೇ ರೋಚಕ.‌

ಧರ್ಮೇಂದ್ರ 1935ರಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದರು. ಅಲ್ಲಿನ ಸಣ್ಣ ಪಟ್ಟಣದಿಂದ ಕುಟುಂಬದ ಜೊತೆಗೆ ಬಂದಿದ್ದ ಅವರು, ಚಿತ್ರರಂಗದಲ್ಲಿ ಅತಿ ಪ್ರೀತಿಯ ಹೀರೋ ಆಗಿ ಮೆರೆದಿದ್ದರು. 1960ರ ವೇಳೆಗೆ ಹಿಂದಿ ಚಿತ್ರರಂಗಕ್ಕೆ ಬಂದ ಅವರು, ಹೊಸತನಕ್ಕೆ ನಾಂದಿ ಹಾಡಿದ್ದರು. 1966ರ ‘ಫೂಲ್ ಔರ್ ಪತ್ತರ್’ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ನೀಡಿತ್ತು. ಚಿತ್ರದಲ್ಲಿ ಡಿಟೆಕ್ಟಿವ್ ಅಧಿಕಾರಿ ಆಗಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಶರ್ಟ್ ಬಟನ್ ತೆಗೆದು ಚಿತ್ರದಲ್ಲಿ ಎದೆ ತೋರಿಸುವ ಶೈಲಿಯನ್ನು ಪ್ರಚಲಿತಕ್ಕೆ ತಂದಿದ್ದೂ ಧರ್ಮೇಂದ್ರ. ವಿಶಾಲ ಎದೆಯೇ ಅವರ ಎದೆಗಾರಿಕೆಯ ಪ್ಲಸ್ ಆಗಿತ್ತು. 1970ರ ವೇಳೆ ‘ಶೋಲೆ’, ‘ಡ್ರೀಮ್ ಗರ್ಲ್’, ‘ಸೀತಾ ಔರ್ ಗೀತಾ’, ‘ಜುಗ್ಣು’, ‘ರಾಜಾ ರಾಣಿ’ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. 1980ರ ಬಳಿಕ ಹೀರೋ ಪಾತ್ರಗಳಿಂದ ದೂರ ಸರಿದರೂ ಚಿತ್ರರಂಗದಲ್ಲಿ ಅವರೇ ಛಾಪು ಮೂಡಿಸಿದ್ದರು. ರಾಜಕೀಯ ಸೇರ್ಪಡೆಯಾಗಿ 2004ರಿಂದ 2009ರ ವರೆಗೆ ಬಿಜೆಪಿ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದರು. 

ಕಳೆದೊಂದು ತಿಂಗಳಿಂದ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಒಂದು ವಾರದ ಹಿಂದೆ ನಿಧನದ ಬಗ್ಗೆಯೂ ಸುದ್ದಿ ಹಬ್ಬಿತ್ತು. ಆಸ್ಪತ್ರೆಯಲ್ಲಿದ್ದ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದ ಹಿನ್ನೆಲೆ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿತ್ತು. 12 ದಿನಗಳ ಹಿಂದಷ್ಟೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು. ಧರ್ಮೇಂದ್ರ ಎರಡನೇ ಪತ್ನಿಯಾಗಿ ಖ್ಯಾತ ನಟಿ ಹೇಮಾ ಮಾಲಿನಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಖ್ಯಾತ ನಟ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಇಶಾ ಡಿಯೋಲ್ ಸೇರಿದಂತೆ ಆರು ಜನ ಮಕ್ಕಳಿದ್ದಾರೆ. 2012ರಲ್ಲಿ ಧರ್ಮೇಂದ್ರ ಅವರನ್ನು ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಗೌರವ ‘ಪದ್ಮಭೂಷಣ’ ನೀಡಿ ಗೌರವಿಸಿದೆ.

Legendary Bollywood actor and ‘He-Man’ fame star Dharmendra (89) has passed away. He had been suffering from age-related health issues for quite some time and breathed his last today.