ಅಯೋಧ್ಯೆಯಲ್ಲಿ ಹತ್ತಡಿ ಎತ್ತರದ ಬೃಹತ್ ಭಗವಾಧ್ವಜ ಅನಾವರಣ ; ರಾಮ- ಸೀತೆಯ ವಿವಾಹ ದಿನವೇ ಮಂದಿರ ಸಂಪೂರ್ಣ, ಶತಮಾನಗಳಷ್ಟು ಹಳೆಯ ಗಾಯ ವಾಸಿಯಾಗುತ್ತಿರುವ ಸಂಕೇತ ಎಂದ ಮೋದಿ 

25-11-25 04:30 pm       HK News Desk   ದೇಶ - ವಿದೇಶ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಬೃಹತ್ ಗಾತ್ರದ ಭಗವಾಧ್ವಜವನ್ನು ಅನಾವರಣಗೊಳಿಸಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ.

ಲಕ್ನೋ, ನ.25 : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಬೃಹತ್ ಗಾತ್ರದ ಭಗವಾಧ್ವಜವನ್ನು ಅನಾವರಣಗೊಳಿಸಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ.

ಹಿಂದೂ ಸಂಪ್ರದಾಯದಲ್ಲಿ ಶುಭವೆಂದು ಪರಿಗಣಿಸಲಾದ 'ಅಭಿಜಿತ್ ಮುಹೂರ್ತ'ದ ಸಮಯದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ. ಈ ದಿನ ಮಾರ್ಗಶಿರ ಶುಕ್ಲ ಪಂಚಮಿ ತಿಥಿಯಾಗಿದ್ದು, ಇದೇ ದಿನ ಶ್ರೀರಾಮ ಮತ್ತು ಸೀತೆಯರ ವಿವಾಹವಾಗಿತ್ತು. 

ದೇಗುಲದ ಶಿಖರದ ಮೇಲೆ ಸ್ಥಾಪಿಸಿದ 42 ಅಡಿ ಎತ್ತರದ ಧ್ವಜಸ್ತಂಭವನ್ನು 360 ಡಿಗ್ರಿ ತಿರುಗುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾಕೃತಿಯಲ್ಲಿದೆ. 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದರ ಮೇಲೆ ಸೂರ್ಯ, 'ಓಂ' ಹಾಗೂ ಕೋವಿದಾರ ಮರವನ್ನು ಚಿತ್ರಿಸಲಾಗಿದೆ. ಸೂರ್ಯನ ಚಿತ್ರ ರಾಮನ ಸೂರ್ಯ ವಂಶವನ್ನು ಸೂಚಿಸುತ್ತದೆ. “ಓಂ' ಶುಭಸೂಚಕವಾಗಿದ್ದು, ಕೋವಿದಾರ ಮರವು ಅಯೋಧ್ಯೆಯ ಪ್ರಾಚೀನ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. 

ಧ್ವಜಾರೋಹಣ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ಧರ್ಮ ಧ್ವಜವು ಕೇವಲ ಧ್ವಜವಲ್ಲ. ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ವಾಸಿಯಾಗುತ್ತಿರುವುದನ್ನು ತೋರಿಸುತ್ತಿರುವ ಪ್ರತೀಕ. 500 ವರ್ಷಗಳ ಹಳೆಯ ಸಂಕಲ್ಪ ನೆರವೇರಿದ್ದು, ಭಗವಾನ್ ಶ್ರೀರಾಮನ ಆದರ್ಶಗಳನ್ನು ಸಾಕಾರಗೊಳಿಸುತ್ತಿದೆ. ಸತ್ಯ ಮತ್ತು ಸದಾಚಾರದ ವಿಜಯವನ್ನು ಸಂಕೇತಿಸುತ್ತದೆ. ಇದರೊಂದಿಗೆ ಪ್ರತಿಯೊಬ್ಬ ರಾಮ ಭಕ್ತನ ಹೃದಯವು ತೃಪ್ತಿ, ಕೃತಜ್ಞತೆ ಮತ್ತು ದೈವಿಕ ಸಂತೋಷದಿಂದ ತುಂಬಿರುತ್ತದೆ ಎಂದು ತಿಳಿಸಿದರು.

ರಾಮ ಮಂದಿರಕ್ಕೆ ಬಂದಾಗ ಪ್ರತಿಯೊಬ್ಬ ನಾಗರಿಕನೂ ಸಪ್ತ ಮಂಟಪಕ್ಕೆ ಭೇಟಿ ನೀಡಲೇಬೇಕು. ಈ ಮಂಟಪಗಳು ನಂಬಿಕೆ, ಸ್ನೇಹ, ಕರ್ತವ್ಯ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಬಲಪಡಿಸುತ್ತವೆ. ನಮ್ಮ ರಾಮನು ಭಾವನೆಗಳ ಮೂಲಕ ಒಂದಾಗುತ್ತಾನೆ, ವಿಭಜನೆಯಲ್ಲ, ಅವನಿಗೆ ಮುಖ್ಯವಾದುದು ಭಕ್ತಿ, ವಂಶಾವಳಿಯಲ್ಲ.

ಕೆಲವು ದಿನಗಳ ಹಿಂದೆ, ಮುಂದಿನ 10 ವರ್ಷಗಳಲ್ಲಿ ಭಾರತವನ್ನು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸುವುದು ನಮ್ಮ ಗುರಿ ಎಂದು ನಾನು ಹೇಳಿದ್ದೆ. ನಾವು ಸ್ವಾತಂತ್ರ್ಯವನ್ನು ಗಳಿಸಿದ್ದೇವೆ. ಆದರೆ, ನಾವು ಕೀಳರಿಮೆಯಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿದೇಶದ್ದು ಶ್ರೇಷ್ಠ ಮತ್ತು ನಮ್ಮದು ಕೀಳು ಎಂದು ನಾವು ನಂಬಲು ಪ್ರಾರಂಭಿಸಿದೆವು. ನಮ್ಮ ಸಂವಿಧಾನವು ವಿದೇಶಿ ಸಂವಿಧಾನಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತಿತ್ತು, ಆದರೆ, ಸತ್ಯವೆಂದರೆ ಭಾರತ ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವ ನಮ್ಮ ಡಿಎನ್‌ಎಯಲ್ಲಿದೆ ಎಂದು ತಿಳಿಸಿದರು. 

ಧ್ವಜಾರೋಹಣ ಸಮಾರಂಭಕ್ಕೂ ಮುನ್ನ, ಪ್ರಧಾನಿ ಮೋದಿಯವರು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವಾಲಯ ಸಂಕೀರ್ಣದ ವರೆಗೆ ರೋಡ್ ಶೋ ನಡೆಸಿದರು. ಭಾರೀ ಭದ್ರತೆ ನಡುವೆ ಮಹಿಳೆಯರು ಮತ್ತು ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ನಿವಾಸಿಗಳು ಮತ್ತು ಭಕ್ತರು ಮಾರ್ಗದುದ್ದಕ್ಕೂ ಸಾಲುಗಟ್ಟಿ ಹೂವಿನ ಮಳೆಯನ್ನು ಸುರಿಸಿದರು.

Prime Minister Narendra Modi unveiled a 10-foot saffron Bhagwa flag atop the newly completed Ram Temple in Ayodhya during the auspicious Abhijit Muhurat — the same day believed to mark the wedding of Lord Ram and Sita. The 42-foot rotating flagpole features symbols including the Sun, ‘Om,’ and the Kovidar tree, representing Ayodhya’s ancient traditions.