ಟ್ರಂಪ್ ಸುಂಕಾಸ್ತ್ರಕ್ಕೆ ಭಾರತದ ಬ್ರಹ್ಮಾಸ್ತ್ರ ; ಐರೋಪ್ಯ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದ, ಒಂದೇ ಕಲ್ಲಿಗೆ 27 ರಾಷ್ಟ್ರಗಳ ಮಾರುಕಟ್ಟೆ ! ಹೊಸ ವ್ಯಾಪಾರ ನೀತಿಗೆ ಅಮೆರಿಕ ಕಿಡಿ 

28-01-26 11:22 am       HK News Desk   ದೇಶ - ವಿದೇಶ

ಭಾರತ - ಐರೋಪ್ಯ ಒಕ್ಕೂಟದ ನಡುವಿನ ಐತಿಹಾಸಿಕ 'ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ (ಎಫ್‌ಟಿಎ) ಮಂಗಳವಾರ ಸಹಿ ಬಿದ್ದಿದೆ. ಅಮೆರಿಕದ ಸುಂಕಾಸ್ತ್ರ ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣ ಆಗಿರುವಾಗಲೇ ಭಾರತ ಮತ್ತು ಯುರೋಪಿನ 27 ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದ ಡೊನಾಲ್ಡ್ ಟ್ರಂಪ್ ಪಾಲಿಗೆ ಪ್ರಭಾವಿ ಪ್ರತ್ಯಸ್ತ್ರ ಹೆಣೆದಂತಾಗಿದೆ. 

ನವದೆಹಲಿ, ಜ.28 : ಭಾರತ - ಐರೋಪ್ಯ ಒಕ್ಕೂಟದ ನಡುವಿನ ಐತಿಹಾಸಿಕ 'ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ (ಎಫ್‌ಟಿಎ) ಮಂಗಳವಾರ ಸಹಿ ಬಿದ್ದಿದೆ. ಅಮೆರಿಕದ ಸುಂಕಾಸ್ತ್ರ ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣ ಆಗಿರುವಾಗಲೇ ಭಾರತ ಮತ್ತು ಯುರೋಪಿನ 27 ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದ ಡೊನಾಲ್ಡ್ ಟ್ರಂಪ್ ಪಾಲಿಗೆ ಪ್ರಭಾವಿ ಪ್ರತ್ಯಸ್ತ್ರ ಹೆಣೆದಂತಾಗಿದೆ. 

ಐರೋಪ್ಯ ಒಕ್ಕೂಟ ವಿಶ್ವದ 2ನೇ ಆರ್ಥಿಕ ಶಕ್ತಿಯಾಗಿದ್ದು ಈಗ ಜಗತ್ತಿನ 4ನೇ ಆರ್ಥಿಕ ಶಕ್ತಿಯಾದ ಭಾರತದ ನಡುವೆ ರೂಪಿತವಾದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಏರೋಪ್ಯ ಮಂಡಳಿ ಅಧ್ಯಕ್ಷ ಆಂಟೋನಿಯೊ ಕೊಸ್ಟಾ ಮಂಗಳವಾರ ಅಧಿಕೃತವಾಗಿ ಸಹಿ ಹಾಕಿದರು. ಈ ರೀತಿಯ ವ್ಯಾಪಾರ ಒಪ್ಪಂದಕ್ಕೆ 2007ರಲ್ಲೇ ಮುನ್ನುಡಿ ಬರೆದಿದ್ದರೂ, ರಾಜಕೀಯ ಅನಿಶ್ಚಿತತೆ ಮತ್ತು ನಾನಾ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿತ್ತು. ಈಗ ಎರಡು ದಶಕದ ಬಳಿಕ ವ್ಯಾಪಾರ ಒಪ್ಪಂದ ಏರ್ಪಟ್ಟಿದ್ದು ಭಾರತ- ಯುರೋಪ್ ನಡುವೆ ಸರಕು ವ್ಯಾಪಾರಕ್ಕೆ ಮುಕ್ತ ವೇದಿಕೆ ಸಿಕ್ಕಂತಾಗಿದೆ. 

ಒಂದು ವರ್ಷದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಸುಂಕ ಕ್ರಮಗಳಿಂದ ಹಿಂಜರಿಕೆ ಹಾದಿ ಹಿಡಿದಿದ್ದ ಜಾಗತಿಕ ಆರ್ಥಿಕತೆಗೆ ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ ಟಾನಿಕ್ ನೀಡಲಿದೆ. ಟ್ರಂಪ್ ಅತಿರೇಕದ ಪ್ರತಿಸುಂಕ ಕ್ರಮಗಳ ಬಳಿಕ ಪರ್ಯಾಯ ಮಾರುಕಟ್ಟೆ ಹುಡುಕಾಟದಲ್ಲಿ ಭಾರತಕ್ಕೆ ಐರೋಪ್ಯ ಒಕ್ಕೂಟ ಜತೆಗಿನ ಒಪ್ಪಂದ ಸಂಜೀವಿನಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಭಾರತ ಪ್ರವಾಸದಲ್ಲಿರುವ ಐರೋಪ್ಯ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್‌ಡೆ‌ರ್ ಲೇಯೆನ್ ಹಾಗೂ ಐರೋಪ್ಯ ಮಂಡಳಿ ಅಧ್ಯಕ್ಷ ಆಂಟೋನಿಯೊ ಕೊಸ್ಟಾ ನೇತೃತ್ವದ ನಿಯೋಗ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಮುಖ ಸಚಿವರ ಜತೆ ಅಂತಿಮ ಸಮಾಲೋಚನೆ ನಡೆಸಿದ ಬಳಿಕ ಒಪ್ಪಂದಕ್ಕೆ ಅನುಮೋದನೆ ನೀಡಲಾಯಿತು.

ಹೊಸದಿಲ್ಲಿಯಲ್ಲಿ ವಾನ್‌ಡೆರ್ ಹಾಗೂ ಕಾಸ್ಟಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಅವರು, ಭಾರತ- ಐರೋಪ್ಯ ಒಕ್ಕೂಟದ ನಡುವಿನ 'ಮದರ್ ಆಫ್ ಆಲ್ ಡೀಲ್ಸ್' (ಎಲ್ಲಾ ಒಪ್ಪಂದಗಳ ತಾಯಿ) ಎಂದು ಹೇಳಲಾದ 'ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ ಸಹಿ ಹಾಕಿರುವುದಾಗಿ ಘೋಷಣೆ ಮಾಡಿದರು. ಮುಂದಿನ ವರ್ಷದಿಂದ ಒಪ್ಪಂದ ಜಾರಿಗೆ ಬರಲಿದೆ. ಆದರೆ ಈ ಹೊಸ ವ್ಯಾಪಾರ ಪರ್ವಕ್ಕೆ ಅಮೆರಿಕ ಉರಿದು ಬಿದ್ದಿದ್ದು ಯುರೋಪ್ ರಾಷ್ಟ್ರಗಳ ವಿರುದ್ಧ ಕಿಡಿಕಾರಿದೆ. 

ಮುಕ್ತ ವ್ಯಾಪಾರದಿಂದ ಏನೆಲ್ಲ ಪರಿಣಾಮ ? 

ಮುಕ್ತ ವ್ಯಾಪಾರ ಒಪ್ಪಂದದಿಂದ ಯುರೋಪ್ ಕೈಗಾರಿಕೆ, ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ಮೇಲಿನ ಸುಂಕ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಭಾರತೀಯ ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ಪನ್ನಗಳು ಲಭಿಸಲಿವೆ.  ರಾಸಾಯನಿಕ ವಸ್ತುಗಳ ಮೇಲಿನ ಆಮದು ಸುಂಕ ಶೇ.22ರಷ್ಟು ಕಡಿಮೆಯಾಗಲಿದೆ. ಭಾರತೀಯ ಕೈಗಾರಿಕೆಗಳಿಗೆ ಅಗ್ಗದ ದರದಲ್ಲಿ ರಾಸಾಯನಿಕ ವಸ್ತುಗಳು ಲಭಿಸಲಿವೆ. ಶೇ.44ರಷ್ಟಿರುವ ಯಂತ್ರೋಪಕರಣ ಮೇಲಿನ ತೆರಿಗೆ ಶೂನ್ಯಕ್ಕೆ ಇಳಿಯಲಿದೆ. 

ಪ್ರಸ್ತುತ ಶೇ.11ರಷ್ಟಿರುವ ಔಷಧ ಉತ್ಪನ್ನಗಳ ಮೇಲಿಕ ಸುಂಕ ಶೂನ್ಯಕ್ಕೆ ಇಳಿಯಲಿದೆ. ಶೇ.90ರಷ್ಟು ವೈದ್ಯಕೀಯ ಉಪಕರಣ, ಶಸ್ತ್ರಚಿಕಿತ್ಸಾ ಉಪಕರಣಗಳ ಮೇಲಿನ ಸುಂಕವೂ ಸಂಪೂರ್ಣ ರದ್ದಾಗಲಿದೆ. ವಿಮಾನ ಹಾಗೂ ಬಾಹ್ಯಾಕಾಶ ಉಪಕರಣಗಳ ಮೇಲಿನ ಸುಂಕವೂ ರದ್ದಾಗಲಿದ್ದು, ಎಲ್ಲಾ ವಿಧದ ಉಪಕರಣ, ಉತ್ಪನ್ನಗಳು ಅಗ್ಗದ ದರದಲ್ಲಿ ಲಭಿಸಲಿವೆ. ಚರ್ಮ ಉತ್ಪನ್ನಗಳು, ಸಾಗರ ಉತ್ಪನ್ನಗಳು, ಹರಳು, ಆಭರಣ, ಕರಕುಶಲ ಕಾರ್ಮಿಕ ವಲಯದ ಉತ್ಪನ್ನಗಳು ಸೇರಿ 102 ವಲಯದಲ್ಲಿ ಭಾರತದ ಸರಕುಗಳು ಯರೋಪ್ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಲಿವೆ. 

ವ್ಯಾಪಾರ ಒಪ್ಪಂದ ಪರಿಣಾಮ ಭಾರತ- ಐರೋಪ್ಯ ಒಕ್ಕೂಟದ ನಡುವೆ ಆರ್ಥಿಕ ವ್ಯವಹಾರ 17 ಲಕ್ಷ ಕೋಟಿ ರೂ.ಗೆ ಏರಲಿದೆ. ಯುರೋಪ್ ಉತ್ಪನ್ನಗಳಿಗೆ 95 ಪರ್ಸೆಂಟ್ ತೆರಿಗೆ ರದ್ದಾಗಲಿದ್ದು ಅದೇ ರೀತಿ ಭಾರತದ ಸರಕುಗಳಿಗೆ ಯುರೋಪಿನ 27 ರಾಷ್ಟ್ರಗಳಲ್ಲಿ ತೆರಿಗೆ ಕಡಿತವಾಗಲಿದೆ. ಜಾಗತಿಕ ಜಿಡಿಪಿಯಲ್ಲಿ ಐರೋಪ್ಯ ಒಕ್ಕೂಟದ ಪಾಲು 25 ಶೇಕಡದಷ್ಟಿದ್ದು ಈ ವ್ಯಾಪಾರ ಒಪ್ಪಂದ ನೀತಿಯಿಂದಾಗಿ ಯುರೋಪ್ ರಾಷ್ಟ್ರಗಳಿಗೆ ಭಾರತದ ದೊಡ್ಡ ಮಟ್ಟದ ಗ್ರಾಹಕ ವೇದಿಕೆ ಸೃಷ್ಟಿಯಾಗಲಿದೆ. ಹಲವಾರು ಕಂಪನಿಗಳು ಭಾರತದಲ್ಲೇ ಉತ್ಪಾದನೆಗೆ ಇಳಿಯುವುದರಿಂದ ಉದ್ಯೋಗವೂ ಹೆಚ್ಚಲಿದೆ. ಐಷಾರಾಮಿ ಕಾರುಗಳು, ಯಂತ್ರೋಪಕರಣಗಳು, ಮುತ್ತು ರತ್ನ, ಅಮೂಲ್ಯ ಲೋಹ, ಉಕ್ಕು, ವಿದೇಶಿ ಮದ್ಯ ಸೇರಿದಂತೆ ಯುರೋಪ್ ರಫ್ತು ಮತ್ತು ಅಲ್ಲಿಂದ ಆಮದಾಗುವ ವಸ್ತುಗಳ ದರ ಭಾರೀ ಪ್ರಮಾಣದಲ್ಲಿ ಇಳಿಯಲಿದೆ.

India and the European Union signed a historic Free Trade Agreement, opening access to 27 EU markets, cutting tariffs, boosting trade, and strengthening India’s global economic position amid U.S. tariff tensions.