ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡುಗರಿಬ್ಬರು ಥಂಡಿಯಲ್ಲಿ ಸತ್ತು ಹೋಗಿದ್ದರು, ನಾಲ್ಕು ದಿನ ಕಳೆದರೂ ಕದಲಲಿಲ್ಲ ಪಿಟ್ ಬುಲ್ ನಾಯಿ ! 

28-01-26 02:35 pm       HK News Desk   ದೇಶ - ವಿದೇಶ

ಶೂನ್ಯಕ್ಕಿಂತ ಕೆಳಗೆ ಕುಸಿದ ಉಷ್ಣತೆ, ಸುತ್ತಲೂ ಮಂಜುಗಡ್ಡೆ. ಜೋರು ಹಿಮಪಾತದಿಂದಾಗಿ ಕಣ್ಣೇ ಕಾಣದಷ್ಟು ಮಂಜು ಬಿದ್ದಿತ್ತು. ಆ ಹುಡುಗರಿಬ್ಬರು ಮಂಜಿನಲ್ಲಿ ಸಿಕ್ಕಿಬಿದ್ದು ಮರಗಟ್ಟಿ ಹೋಗಿದ್ದರು. ಆದರೆ ಅವರ ಜೊತೆಗಿದ್ದ ಪಿಟ್ ಬುಲ್ ನಾಯಿ ನಾಲ್ಕು ದಿನ ಕಳೆದರೂ ತನ್ನವರನ್ನು ಬಿಟ್ಟು ಕದಲಲಿಲ್ಲ.

ಶಿಮ್ಲಾ, ಜ.28 : ಶೂನ್ಯಕ್ಕಿಂತ ಕೆಳಗೆ ಕುಸಿದ ಉಷ್ಣತೆ, ಸುತ್ತಲೂ ಮಂಜುಗಡ್ಡೆ. ಜೋರು ಹಿಮಪಾತದಿಂದಾಗಿ ಕಣ್ಣೇ ಕಾಣದಷ್ಟು ಮಂಜು ಬಿದ್ದಿತ್ತು. ಆ ಹುಡುಗರಿಬ್ಬರು ಮಂಜಿನಲ್ಲಿ ಸಿಕ್ಕಿಬಿದ್ದು ಮರಗಟ್ಟಿ ಹೋಗಿದ್ದರು. ಆದರೆ ಅವರ ಜೊತೆಗಿದ್ದ ಪಿಟ್ ಬುಲ್ ನಾಯಿ ನಾಲ್ಕು ದಿನ ಕಳೆದರೂ ತನ್ನವರನ್ನು ಬಿಟ್ಟು ಕದಲಲಿಲ್ಲ. ಸತ್ತು ಬಿದ್ದ ತನ್ನ ಮಾಲೀಕರನ್ನು ಕಾಯುತ್ತ ಅನ್ನ, ನೀರಿಲ್ಲದೆ ಚಳಿಯಿಂದ ಥರಗುಟ್ಟುತ್ತ ನಾಲ್ಕು ದಿನವೂ ನಿಂತಲ್ಲೇ ನಿಂತಿತ್ತು.

ಅರುಣಾಚಲ ಪ್ರದೇಶದ ಶಿಮ್ಲಾದಲ್ಲಿ ಮೊನ್ನೆ ನಡೆದಿರುವ ಘಟನೆಯಿದು. ಜ.22ರಂದು 19 ವರ್ಷದ ವಿಕಸಿತ್ ರಾಣಾ ಮತ್ತು ತನ್ನ ಸೋದರ 13 ವರ್ಷದ ಪಿಯೂಷ್ ಪರ್ವತ ಪ್ರದೇಶದಲ್ಲಿ ಬೀಳುವ ಹಿಮಪಾತದ ಸುಂದರ ದೃಶ್ಯಗಳನ್ನು ಸೆರೆಹಿಡಿಯಲು ಮೊಬೈಲ್ ಜೊತೆಗೆ ತಮ್ಮ ನೆಚ್ಚಿನ ಜೋನು ಹೆಸರಿನ ಪಿಟ್ ಬುಲ್ ನಾಯಿಯನ್ನೂ ಕರೆದುಕೊಂಡು ಹೋಗಿದ್ದರು. ಟ್ರಕ್ಕಿಂಗ್ ನಲ್ಲಿ ಚಾಂಬಾ ಗ್ರಾಮದ ಬಾರ್ಮಣಿ ದೇವಸ್ಥಾನ ಸುತ್ತಿಕೊಂಡು ಬಳಿಕ ಪರ್ವತ ಪ್ರದೇಶಕ್ಕೆ ಹತ್ತತೊಡಗಿದ್ದರು. ಆದರೆ ಪರ್ವತ ಹತ್ತಿ ವಿಡಿಯೋ ಮಾಡುತ್ತಿದ್ದಾಗಲೇ ದಿಢೀರ್ ಆಗಿ ಹಿಮಗಾಳಿ ಬೀಸತೊಡಗಿದ್ದು ಜೋರು ಹಿಮದ ರಾಶಿ ಬೀಳತೊಡಗಿತ್ತು. ಹುಡುಗರಿಬ್ಬರು ಅಲ್ಲಿನ ಸುಂದರ ದೃಶ್ಯಗಳನ್ನು ಸೆರೆಹಿಡಿಯುವ ಉತ್ಸಾಹದಲ್ಲಿದ್ದರು.

ಈ ವೇಳೆ, 13 ವರ್ಷದ ಪಿಯೂಶ್ ತನ್ನ ಕೈಕಾಲು ನಡುಗುತ್ತಿದೆ, ನಡೆಯಲು ಆಗುವುದಿಲ್ಲ ಎಂದು ಕೇಳಿಕೊಂಡಿದ್ದಾನೆ. ಜನವರಿ 22ರಂದು ಜೋರು ಹಿಮ ಬೀಳುತ್ತದೆಯೆಂದು ಯೆಲ್ಲೋ ಎಲರ್ಟ್ ಇದ್ದರೂ, ಏನೂ ಆಗಲ್ಲ ಎಂದು ಹರೆಯದ ಹುಡುಗ ವಿಕಸಿತ್ ರಾಣಾ ತನ್ನ ತಮ್ಮನನ್ನೂ ಕರೆತಂದಿದ್ದ. ಅಂದು ರಾತ್ರಿಯಿಡೀ ಚಳಿಯ ನಡುವೆ ಅಲ್ಲಿಯೇ ಉಳಿದುಕೊಂಡಿದ್ದಾರೆ.

ರಾತ್ರಿಯಿಡೀ ಜೋರಾಗಿ ಹಿಮಪಾತವಾಗಿದ್ದರಿಂದ ದಾರಿ ಯಾವುದು, ಪ್ರಪಾತ ಎಲ್ಲಿ ಎನ್ನುವುದೇ ಕಾಣದಾಗಿತ್ತು. ದಾರಿಯಲ್ಲಿ ಮೂರು ಅಡಿಯಷ್ಟು ಹಿಮ ಬಿದ್ದಿತ್ತು. ಮರುದಿನ ತಾಯಿಗೆ ಫೋನ್ ಮಾಡಿದ್ದ ವಿಕಸಿತ್ ರಾಣಾ, ಪಿಯೂಶ್ ಗೆ ನಡೆಯಲು ಆಗುತ್ತಿಲ್ಲ, ಕುಸಿದು ಬಿದ್ದಿದ್ದಾನೆ, ಹೊತ್ತುಕೊಂಡು ಬರುತ್ತಿದ್ದೇನೆ ಎಂದು ಸಣ್ಣ ಸ್ವರದಲ್ಲಿ ಹೇಳಿದ್ದಾನೆ. ನನ್ನ ಕೈಗಳೂ ನಡುಗುತ್ತಿವೆ, ಲೊಕೇಶನ್ ಕಳಿಸಲೂ ಆಗುತ್ತಿಲ್ಲ ಎಂದಿದ್ದಾನೆ. ತಾಯಿ ಕೂಡಲೇ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಆದರೆ ಚಾಂಬಾ ಪರ್ವತ ಏರಿಯಾದಲ್ಲಿ ಜೋರಾಗಿ ಹಿಮ ಬಿದ್ದಿದ್ದರಿಂದ ಅಲ್ಲಿಗೆ ಹೋಗಲಾರದ ಸ್ಥಿತಿಯಾಗಿತ್ತು. ಹುಡುಗರಿಬ್ಬರು ಎಲ್ಲಿ ಸಿಲುಕಿದ್ದಾರೆಂದು ಪತ್ತೆ ಮಾಡುವುದಕ್ಕೆ ಪೊಲೀಸರಿಂದ ಸಾಧ್ಯವಾಗಲಿಲ್ಲ. ಡ್ರೋಣ್ ಮೂಲಕ ಹುಡುಕಾಡಕ್ಕೆ ನೋಡಿದರೂ ಸಕಾಲಕ್ಕೆ ಅದೂ ಸಿಕ್ಕಿರಲಿಲ್ಲ. 

ವಿಕಸಿತ್ ಬಳಿಯಿದ್ದ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆ ಜಾಗವನ್ನೂ ಟ್ರೇಸ್ ಮಾಡುವುದಕ್ಕೂ ಇವರಿಂದ ಆಗಲಿಲ್ಲ. ಎರಡು ದಿನ ಬಿಟ್ಟು ಜನವರಿ 25ರಂದು ವಾಯುಪಡೆಯವರು ಹೆಲಿಕಾಪ್ಟರ್ ನಲ್ಲಿ ಹುಡುಕಾಟ ಆರಂಭಿಸಿದ್ದರು. ಎತ್ತರ ಪ್ರದೇಶದಲ್ಲಿ ಏನಾದ್ರೂ ಸುಳಿವು ಸಿಗುತ್ತಾ ಎಂದು ಹುಡುಕುತ್ತಿದ್ದಾಗಲೇ ಹಿಮದ ನಡುವೆ ಸಣ್ಣ ನಾಯಿಯೊಂದು ನಿಂತಿರುವುದು ಕಾಣಿಸಿದೆ. ಹತ್ತಿರ ಹೋದಾಗ ವಿಕಸಿತ್ ರಾಣಾ ಶವ ಹಿಮದಲ್ಲಿ ಮುಚ್ಚಿಕೊಂಡಿರುವುದು ಕಂಡಿತ್ತು. ತುಸು ದೂರದಲ್ಲಿ ಬಿದ್ದಿದ್ದ ಪಿಯೂಶ್ ಶವವೂ ಮಂಜಿನಿಂದ ಹೆಪ್ಪುಗಟ್ಟಿ ಹೋಗಿತ್ತು. ವಾಯುಪಡೆ ಸಿಬಂದಿ ಸ್ಥಳಕ್ಕೆ ತೆರಳಿದಾಗ, ನಾಯಿ ಅಪರಿಚಿತರು ಬಂದಿದ್ದಾರೆಂದು ತನ್ನಲ್ಲಿ ಶಕ್ತಿ ಇಲ್ಲದಿದ್ದರೂ ಶವ ಮುಟ್ಟುವುದಕ್ಕೆ ಬಿಡದೆ ಬೊಗಳಿತ್ತು. ಬಳಿಕ ಸಿಬಂದಿ ನಾಯಿಗೆ ಆಹಾರ ಕೊಟ್ಟು ಸಂತೈಸಿ ಶವಗಳನ್ನು ಹೊತ್ತೊಯ್ಯುವ ಕೆಲಸ ಮಾಡಿದ್ದರು.

ತನ್ನ ಜೊತೆಗೆ ಬಂದಿದ್ದ ಇಬ್ಬರು ಹುಡುಗರು ಸತ್ತಿದ್ದಾರೆಂದು ತಿಳಿದರೂ ಪಿಟ್ ಬುಲ್ ನಾಯಿ ಅಲ್ಲಿಂದ ಕದಲಿರಲಿಲ್ಲ. ಮನಸ್ಸು ಮಾಡಿದ್ದರೆ ಹೋದ ದಾರಿಯಲ್ಲಿ ಹಿಂತಿರುಗಿ ಬರಬಹುದಿತ್ತು. ಮೈಗೆ ಹಿಮ ಬೀಳುತ್ತಿದ್ದರೂ ಅದನ್ನು ಸಹಿಸಿಕೊಂಡು ನಾಯಿ ಅಲ್ಲಿಯೇ ನಿಂತು ಬಿಟ್ಟಿದ್ದು ವಾಯುಪಡೆ ಸಿಬಂದಿಗೂ ತಮ್ಮ ಕಣ್ಣನ್ನೇ ನಂಬದಂತಾಗಿತ್ತು. ಪಿಯುಸಿ ಮುಗಿಸಿದ್ದ ವಿಕಸಿತ್ ರಾಣಾಗೆ ಒಂದು ವರ್ಷದ ಹಿಂದಷ್ಟೇ ಮೊಬೈಲ್ ಕೈಗೆ ಬಂದಿತ್ತು. ಅದರಲ್ಲಿ ವಿಡಿಯೋ ರೀಲ್ಸ್ ಮಾಡುವ ಹುಚ್ಚೂ ಅಂಟಿತ್ತು. ಎರಡು ವರ್ಷದ ಹಿಂದೆ ಇಬ್ಬರು ಹುಡುಗರಿಗೆ ತಂದೆ ಪಿಟ್ ಬುಲ್ ನಾಯಿಯನ್ನು ಗಿಫ್ಟ್ ಕೊಟ್ಟಿದ್ದರು. ಆನಂತರ, ತಂದೆಯೂ ಅಕಾಲಿಕ ಮರಣವನ್ನಪ್ಪಿದ್ದರು.

ಪಿಯೂಶ್ ಮತ್ತು ವಿಕಸಿತ್ ಚಾಂಬಾದಿಂದ 60 ಕಿಮೀ ದೂರದ ಮಾಲ್ಕೋಟಾ ಗ್ರಾಮದಲ್ಲಿ ವಾಸವಿದ್ದರು. ಪತಿಯ ಸಾವಿನಿಂದಾಗಿ ತಾಯಿ ನೀತಾ ದೇವಿ ಇಬ್ಬರು ಮಕ್ಕಳೊಂದಿಗೆ ಪಂಜಾಬ್ ಹೋಗುವ ಪ್ಲಾನ್ ಮಾಡಿಕೊಂಡಿದ್ದರು. ಯಾಕಂದ್ರೆ, ಪ್ರತಿ ವರ್ಷವೂ ಚಳಿಗಾಲದಲ್ಲಿ ಇವರು ತಮ್ಮ ಮಾಲ್ಕೋಟಾ ಗ್ರಾಮ ಬಿಟ್ಟು ಬೇರೆ ಕಡೆ ಹೋಗಿ ವಾಸ ಮಾಡಬೇಕಾದ ಸ್ಥಿತಿಯಿತ್ತು. ಇವರಿದ್ದ ಪ್ರದೇಶ ಎತ್ತರವಾಗಿದ್ದರಿಂದ ಚಳಿ ಜೋರಾಗಿರುತ್ತಿತ್ತು. ಪಿಯೂಶ್ ತಮ್ಮ ಹತ್ತಿರದ ಸಂಬಂಧಿಕರ ಕುಟುಂಬದ ಹುಡುಗನಾಗಿದ್ದು, ಆತನ ತಂದೆಗೆ ಮಾನಸಿಕ ತೊಂದರೆ ಇದ್ದುದರಿಂದ ಎಂಟು ವರ್ಷದ ಮಗನನ್ನು ಸಾಕಲಾಗುತ್ತಿಲ್ಲ ಎಂದು ವಿಕಸಿತ್ ಕುಟುಂಬದ ಬಳಿ ಬಿಟ್ಟು ಹೋಗಿದ್ದರು. ಹಾಗಾಗಿ, ಇಬ್ಬರು ಕೂಡ ಒಡ ಹುಟ್ಟಿದವರ ರೀತಿಯೇ ಮನೆಯಲ್ಲಿ ಬೆಳೆದಿದ್ದರು. ಆದರೆ ಈಗ ಮಕ್ಕಳಿಬ್ಬರೂ ನೆಚ್ಚಿನ ನಾಯಿ ಜೊತೆಗೆ ಹಿಮಪಾತದ ವಿಡಿಯೋ ಮಾಡಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಕೊನೆಗೆ, ಹಿಮದಲ್ಲಿ ಹುದುಗಿ ಹೋಗುತ್ತಿದ್ದ ಇವರ ಶವಗಳನ್ನು ಶೋಧಿಸಲು ನಾಯಿಯೇ ನೆರವಾಗಿದ್ದು ಕಾಕತಾಳೀಯ ಅಷ್ಟೇ.

In sub-zero temperatures near Shimla, two young boys died after getting trapped in heavy snowfall while filming reels. Their pit bull dog stayed beside their frozen bodies for four days without food or water, showing heartbreaking loyalty until rescuers arrived.