ಓಣಂ ಹಬ್ಬದ ಹಿನ್ನೆಲೆ ; ಕೇರಳ - ಕರ್ನಾಟಕ ಬಸ್ ಸಂಚಾರ

16-08-20 02:27 pm       Headline Karnataka News Network   ದೇಶ - ವಿದೇಶ

ಓಣಂ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 6ರ ತನಕ ಕರ್ನಾಟಕಕ್ಕೆ ಬಸ್ ಸಂಚಾರ ನಡೆಸುವುದಾಗಿ ಕೇರಳ ಸಾರಿಗೆ ಇಲಾಖೆ ಘೋಷಣೆ ಮಾಡಿದೆ.

ಕಾಸರಗೋಡು, ಆಗಸ್ಟ್ 16: ಓಣಂ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 6ರ ತನಕ ಕರ್ನಾಟಕಕ್ಕೆ ಬಸ್ ಸಂಚಾರ ನಡೆಸುವುದಾಗಿ ಕೇರಳ ಸಾರಿಗೆ ಇಲಾಖೆ ಘೋಷಣೆ ಮಾಡಿದೆ. ಕೋವಿಡ್ ಲಾಕ್ ಡೌನ್ ಬಳಿಕ ಅಂತರರಾಜ್ಯ ಬಸ್ ಸಂಚಾರ ಸ್ಥಗಿತವಾಗಿದೆ.

ಕೇರಳದ ಸಾರಿಗೆ ಸಚಿವ ಎ. ಕೆ. ಸಸೀಂದ್ರನ್ ಈ ಕುರಿತು ಹೇಳಿಕೆ ನೀಡಿದ್ದಾರೆ. "ಈ ಬಸ್‌ಗಳಲ್ಲಿ ಸಂಚಾರ ನಡೆಸುವ ಜನರು ಕಡ್ಡಾಯವಾಗಿ ಕೇರಳ ರಾಜ್ಯದ ಜಾಗೃತ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಪ್ರಯಾಣಿಕ ಪಾಸು ಪಡೆಯಬೇಕು" ಎಂದು ಸಚಿವರು ಹೇಳಿದ್ದಾರೆ.   "ಆಗಸ್ಟ್ 15ರಿಂದಲೇ ಈ ಬಸ್‌ಗಳಿಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಕೇರಳ ರಾಜ್ಯದ ಕೆಎಸ್ಆರ್‌ಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ವಿಶೇಷ ಸೇವೆಗೆ ಶೇ 10ರಷ್ಟು ಹೆಚ್ಚು ದರವಿದೆ" ಎಂದು ಸಚಿವರು ತಿಳಿಸಿದ್ದಾರೆ.  

ತಮಿಳುನಾಡು ಮತ್ತು ಕರ್ನಾಟಕದಿಂದ ಬಸ್ ಸಂಚಾರ ನಡೆಸಲಾಗುತ್ತದೆ. ಕೋವಿಡ್ ಮಾರ್ಗಸೂಚಿ ಅನ್ವಯ ಬಸ್‌ಗಳು ಸಂಚಾರ ನಡೆಸಲಿವೆ. ಒಂದು ವೇಳೆ ಯಾರಾದರೂ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೆ ಟಿಕೆಟ್ ರದ್ದು ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಬುಕ್ ಮಾಡಿರುವ ಬಸ್‌ಗಳ ಸಂಚಾರ ಯಾವುದಾದರೂ ಕಾರಣಕ್ಕೆ ರದ್ದಾದರೆ ಸಂಪೂರ್ಣ ಹಣವನ್ನು ವಾಪಸ್ ಮಾಡಲಾಗುತ್ತದೆ ಎಂದೂ ತಿಳಿಸಲಾಗಿದೆ. ಜೊತೆಗೆ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಹೊಂದಿರಬೇಕಿದೆ.