ಆರ್.ಆರ್.ನಗರ ಉಪ ಚುನಾವಣೆ ; ಕಾಂಗ್ರೆಸಿನಿಂದ ಮಾಗಡಿ ಬಾಲಕೃಷ್ಣ , ಬಿಜೆಪಿಯಿಂದ ಮುನಿರಾಜುಗೆ ಟಿಕೆಟ್ ಸಾಧ್ಯತೆ ! 

07-10-20 09:59 pm       Political News Correspondent - Giridhar S   ನ್ಯೂಸ್ View

ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಗಡಿ ಬಾಲಕೃಷ್ಣಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರು, ಅಕ್ಟೋಬರ್ 7: ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಗಡಿ ಬಾಲಕೃಷ್ಣಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರ ನಡುವೆ ಚರ್ಚೆ ನಡೆದಿದ್ದು ಒಕ್ಕಲಿಗರ ಮತಗಳು ಹೆಚ್ಚಿರುವ ಕಾರಣ ಒಕ್ಕಲಿಗ ಅಭ್ಯರ್ಥಿಗೇ ಟಿಕೆಟ್ ನೀಡಲು ನಾಯಕರು ಒಮ್ಮತಕ್ಕೆ ಬಂದಿದ್ದಾರೆ. 

ನಿನ್ನೆಯಷ್ಟೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಐಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾಗೆ ಟಿಕೆಟ್ ಎಂದು ಹೇಳಿದ್ದರು. ನಾವು ಕುಸುಮಾಗೆ ಮತ ನೀಡುವಂತೆ ಪ್ರಚಾರ ಮಾಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದು ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಜೆಡಿಎಸ್ ಮುಖಂಡರಾಗಿದ್ದ ಹನುಮಂತರಾಯಪ್ಪ ಪುತ್ರಿ ಕುಸುಮಾ ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ಸೇರಿದ್ದರು‌. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಹನುಮಂತರಾಯಪ್ಪ ಆಪ್ತರಾಗಿರುವುದರಿಂದ ಕುಸುಮಾಗೆ ಟಿಕೆಟ್ ಸಿಗುವ ಬಗ್ಗೆ ಮಾತು ಕೇಳಿಬಂದಿತ್ತು. ಇದಲ್ಲದೆ, ಡಿಕೆ ಶಿವಕುಮಾರ್ ಸ್ವತಃ ಇತ್ತೀಚೆಗೆ ಹನುಮಂತರಾಯಪ್ಪ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಆದರೆ, ಕುಸುಮಾ ಸ್ಪರ್ಧೆಗೆ ಪಕ್ಷದಲ್ಲೇ ಅಪಸ್ವರ ಕೇಳಿಬಂದಿದೆ. ಅಲ್ಲದೆ, ಡಿ.ಕೆ.ರವಿ ತಾಯಿ ಗೌರಮ್ಮ ಬಹಿರಂಗವಾಗೇ ಕುಸುಮಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಡಿ.ಕೆ ರವಿ ಹೆಸರೆತ್ತಿದರೆ, ಪೋಸ್ಟರ್ ಬಳಸಿದರೆ ಬೆಂಕಿ ಹಾಕುವುದಾಗಿ ಬೆದರಿಸಿದ್ದರು. ಇವೆಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದ್ದು ಒಕ್ಕಲಿಗ ಮತ್ತು ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಅವರನ್ನು ಅಭ್ಯರ್ಥಿಯಾಗಿಸುವ ಬಗ್ಗೆ ಮಾತುಕತೆ ನಡೆದಿದೆ. 

ಬಿಜೆಪಿಯಿಂದ ಮುನಿರತ್ನ ಬದಲು ಮುನಿರಾಜು ? 

ಆರ್.ಆರ್.ನಗರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಮತಗಳಿದ್ದು ಅದುವೇ ನಿರ್ಣಾಯಕ. ಉಳಿದಂತೆ ಅಲ್ಪಸಂಖ್ಯಾತ ಮತಗಳು ಲಭಿಸಿದರೆ ಕಾಂಗ್ರೆಸ್ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ನಡೆಸಲಾಗಿದೆ. ಈ ಹಿಂದೆ ಶಾಸಕರಾಗಿದ್ದ ಮುನಿರತ್ನ ಸರಕಾರ ಬದಲಾದ ಸಂದರ್ಭದಲ್ಲಿ ಎಚ್.ವಿಶ್ವನಾಥ್ ಜೊತೆಗೆ ಬಿಜೆಪಿಗೆ ಹೋಗಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ನಕಲಿ ಮತಗಳನ್ನು ಹಾಕಿದ ಪ್ರಕರಣದ ಬಗ್ಗೆ ಬಿಜೆಪಿ ಮುಖಂಡರು ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೈಕೋರ್ಟ್ ನಲ್ಲಿ ಪ್ರಕರಣ ಇದ್ದುದರಿಂದ ಆರ್.ಆರ್.ನಗರ ಕ್ಷೇತ್ರದ ಚುನಾವಣೆ ಉಳಿದುಹೋಗಿತ್ತು. ಆದರೆ, ಈಗ ನ.3ಕ್ಕೆ ಚುನಾವಣೆ ಘೋಷಣೆಯಾಗಿದ್ದರೂ, ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ವಲಯದಲ್ಲೇ ಪ್ರಬಲ ವಿರೋಧ ಇದೆ. ಕಳೆದ ಬಾರಿ ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಮುನಿರಾಜು ಗೌಡ ಮತ್ತೆ ಸ್ಪರ್ಧೆಗೆ ಪ್ರಯತ್ನ ನಡೆಸಿದ್ದಾರೆ. ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೂಲಕ ಪ್ರಬಲ ಲಾಬಿ ನಡೆಸಿದ್ದಾರೆ.

ಅಲ್ಲದೆ, ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ಮುನಿರತ್ನ ವಿರುದ್ಧ ಇದ್ದಾರೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಮುನಿರಾಜು ಗೌಡ ಮತ್ತು ಮುನಿರತ್ನ ಇಬ್ಬರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಹೀಗಿದ್ದರೂ, ಮುನಿರತ್ನ ಸಿಎಂ ಯಡಿಯೂರಪ್ಪ ಮೂಲಕ ಟಿಕೆಟ್ ಪಡೆಯಲು ಒತ್ತಡ ಹೇರಿದ್ದಾರೆ.‌ ಅಲ್ಲದೆ, ತಮ್ಮ ಜೊತೆಗೆ ಬಿಜೆಪಿ ಸೇರಿ ಈಗ ಸಚಿವರಾಗಿರುವ ಜೊತೆಗಾರರ ಮೂಲಕ ಟಿಕೆಟ್ ಪಡೆಯುವುದಕ್ಕಾಗಿ ಕಸರತ್ತು ನಡೆಸಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಮುನಿರತ್ನಗೆ ಟಿಕೆಟ್ ನೀಡಲು ಒಲವು ಹೊಂದಿದ್ದಾರೆ. ಆದರೆ, ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಬಿ.ಎಲ್.ಸಂತೋಷ್ ಬಣ ಮುನಿರಾಜು ಗೌಡಗೆ ಟಿಕೆಟ್ ನೀಡಲು ಒಲವು ಹೊಂದಿದ್ದಾರೆ. ಬಿಜೆಪಿ ಒಳಗಿನ ಜಟಾಪಟಿ ಅರಿತಿರುವ ಕಾಂಗ್ರೆಸ್ ನಾಯಕರು ಪ್ರಬಲ ಅಭ್ಯರ್ಥಿ ಹಾಕುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸಿನಲ್ಲೇ ಉಳಿಸಿಕೊಳ್ಳಲು ಪ್ಲಾನ್ ನಡೆಸಿದ್ದಾರೆ.