ಬ್ರೇಕಿಂಗ್ ನ್ಯೂಸ್
29-03-21 04:58 pm By ರಂಗಸ್ವಾಮಿ ಮೂಕನಹಳ್ಳಿ ನ್ಯೂಸ್ View
ಅಮ್ಮನ ಕೈ ಉಪ್ಪಿಟ್ಟು ತಿಂದುಕೊಂಡು ಪಾಸ್ಪೋರ್ಟ್ ಕೂಡ ಮಾಡಿಸದೇ ಆರಾಮಾಗಿದ್ದ ನನಗೆ ದುಬೈನಲ್ಲಿ ಕೆಲಸ ಸಿಕ್ಕಬೇಕೆ ? ಸರಿ ಹೇಗೂ ಒಂದು ವಾರದಲ್ಲಿ ಪಾಸ್ಪೋರ್ಟ್ ಮಾಡಿಸಿಕೊಂಡು ದುಬೈ ತಲುಪಿದೆ . ದುಬೈ ಊಟ ತಿಂಡಿಗೆ ಸ್ವರ್ಗ ಸ್ವಾಮಿ . ಅಂದಿನ ಸಮಯದಲ್ಲಿ ಯಾರನ್ನೇ ಆಗಲಿ ಬುಜದಿಂದ ಮೇಲೆ ಮಾತ್ರ ನೋಡಬೇಕು ಎನ್ನುವುದು ಸಾಮಾನ್ಯವಾಗಿತ್ತು . ದುಬೈ ಊಟ ತಿಂದು ಮುಕ್ಕಾಲು ಪಾಲು ಜನ ಬುಜದಿಂದ ಕೆಳಕ್ಕೆ ಮೂಟೆಯನ್ನ ಹೋಲುತ್ತಿದ್ದರು.
ನನ್ನ ದೇಹವು ಕೂಡ ವಿಶಾಲ ಬೆಂಗಳೂರಿನಂತೆ ಅಡ್ಡಾದಿಡ್ಡಿ ಬೆಳೆದುಕೊಂಡಿತ್ತು . ಮೂರು ತಿಂಗಳ ನಂತರ ಬಾರ್ಸಿಲೋನಾಗೆ ನನ್ನ ವಾಸ್ತವ್ಯ ಬದಲಾಯಿತು. ಇಲ್ಲಿಂದ ಸ್ವಯಂಪಾಕ ಶಾಸ್ತ್ರ ಶುರು. ಬೇಳೆ ಹಾಕಲು ಮರೆತು ಸಾಂಬಾರು ಮಾಡಿದ್ದೆ . ಛೆ ಅಮ್ಮ ಮಾಡಿದರೆ ಎಷ್ಟು ಗಟ್ಟಿ ಇರುತ್ತೆ ನನಗೇಕೆ ಇಷ್ಟು ನೀರಾಗಿ ಬಂದಿದೆ ಎಂದು ಆಶ್ಚರ್ಯ ಆಗಿತ್ತು . ಇವೆಲ್ಲವುಗಳಿಂದ ಬೇಸತ್ತು ಸ್ವಾವಲಂಬನೆಗೆ ಉಪ್ಪಿಟ್ಟೇ ಸರಿ ಎನ್ನುವ ನಿಲುವಿಗೆ ಬಂದೆ .
ಸ್ಪ್ಯಾನಿಷ್ ಭಾಷೆಯಲ್ಲಿ ರವೆಗೆ ಸೆಮೋಲ ಅಥವಾ ಸೆಮೋಲೀನಾ ಎನ್ನುತ್ತಾರೆ. ಇಲ್ಲಿನ ರವೆಯ ಕಾಸಿಯತ್ತು ಏನುಗೊತ್ತೇ ? ಇದನ್ನ ಉರಿಯುವ ಅವಶ್ಯಕತೆ ಇಲ್ಲ. ಹಸಿ ರವೆಯನ್ನ ಉಪ್ಪಿಟ್ಟು ಮಾಡಲು ಬಳಸಬಹದು. ಇಲ್ಲಿ ಮೊರೊಕ್ಕಿಗಳು ಜಾಸ್ತಿ ಇರುವುದರಿಂದ ಇವರ ಅಂಗಡಿಯಲ್ಲಿ ದಪ್ಪರವೆ ಸಿಗುತ್ತೆ ಇದನ್ನ ಇಲ್ಲಿ ಕುಸ್ಕುಸ್ ಎನ್ನುತ್ತಾರೆ. ಇದು ಸ್ವಲ್ಪ ಜಾಸ್ತಿಯೇ ದಪ್ಪ , ಆದರೂ ಇದರಲ್ಲಿ ಮಾಡಿದ ಉಪ್ಪಿಟ್ಟು ಬಹಳಷ್ಟು ರುಚಿಕರ.
ಉಪ್ಪಿಟ್ಟು ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ರವೆ . ಅದೊಂದು ಇದ್ದರೆ ಮಿಕ್ಕದ್ದೆಲ್ಲ ಗೌಣ ಎನ್ನುವ ಭಾವನೆ ನನಗೆ ಬರಲು ಕಾರಣ, ಬಾರ್ಸಿಲೋನಾ ನಗರದಲ್ಲಿ ಒಮ್ಮೆ ಸಾಸಿವೆ ಸಿಕ್ಕರೆ , ಜೀರಿಗೆಯಿಲ್ಲ , ಅವರೆಡೂ ಇದ್ದರೆ ಕಡಲೆ ಬೇಳೆಯಿಲ್ಲ , ಎಲ್ಲವೂ ಇದ್ದರೆ ಮೆಣಸಿನಕಾಯಿ , ಕೊನೆಗೆ ಕರಿಬೇವು ಅಥವಾ ಕೊತ್ತಂಬರಿ ಸೊಪ್ಪು ಸಿಕ್ಕುತ್ತಿರಲಿಲ್ಲ. ಹೀಗೆ ನಮ್ಮ ಮನೆಯಲ್ಲಿ ತಯಾರಾಗುತ್ತಿದ್ದ ಉಪ್ಪಿಟ್ಟು ಸದಾ ಅನಾಥ. ಉಪ್ಪಿಟ್ಟಿಗೆ ಕೆಂಪು ಮೆಣಸಿನಕಾಯಿ ಅಷ್ಟು ರುಚಿಸುವುದಿಲ್ಲ .
ಹೀಗಾಗಿ ಭಾರತೀಯ ಸೂಪರ್ ಮಾರ್ಕೆಟ್ ಗೆ ಹೋದರೆ ಕನಿಷ್ಟ ಅರ್ಧ ಕೇಜಿ ಮೆಣಸಿನಕಾಯಿಯನ್ನ ಹೊತ್ತು ತರುತ್ತಿದ್ದೆ. ವಾರವೊಪ್ಪತ್ತಿನಲ್ಲಿ ಅದು ಖಾಲಿಯಾಗುತ್ತಿತ್ತು . ಒಮ್ಮೆ ಅಂಗಡಿಯವನು ' ಭಾಯ್ ಆಪ್ ದುಖಾನ್ ರಕ ಹೈ ಕ್ಯಾ ' ಎಂದಿದ್ದ . ಇಲ್ಲಪ್ಪ ಇದು ಮನೆಯ ಉಪಯೋಗಕ್ಕೆ ಎಂದರೂ ಅವನು ನಂಬದೆ ರಮ್ಯ ಒಬ್ಬಳೇ ಹೋಗಿದ್ದಾಗ ಕೂಡ ಇದೆ ಮಾತನ್ನ ಅವಳನ್ನ ಕೂಡ ಕೇಳಿದ್ದನಂತೆ !
ಒಟ್ಟಿನಲ್ಲಿ ಉಪ್ಪಿಟ್ಟು ರವೇ , ಈರುಳ್ಳಿ , ಎಣ್ಣೆ ಮತ್ತು ಮೆಣಸಿನಕಾಯಿ ಇದ್ದರೆ ಸಾಕು ಹೇಗೋ ಬದುಕಬಹದು ಎನ್ನುವ ಆತ್ಮವಿಶ್ವಾಸ ಕೊಟ್ಟ ಖಾದ್ಯ. ತಿನ್ನುವುದಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುವ ಬಹಳಷ್ಟು ಜನ ವಿಧ್ಯಾರ್ಥಿಗಳಾಗಿ ಬಾರ್ಸಿಲೋನಾ ಸೇರಿದ ಎಷ್ಟೋ ಭಾರತೀಯ ಹುಡುಗ -ಹುಡುಗಿಯರು ಅಲ್ಲಿ ನೆಲೆ ಕಂಡುಕೊಳ್ಳಲಾಗದೆ ವಾಪಸ್ಸು ಭಾರತದತ್ತ ಮುಖ ಮಾಡಿದಕ್ಕೆ ಕೂಡ ನಾನು ಸಾಕ್ಷಿಯಾಗಿದ್ದೇನೆ.
ಉಪ್ಪಿಟ್ಟು ಅಂದ್ರೆ ಇವತ್ತು ಅಂತಲ್ಲ ಚಿಕ್ಕವನಿಂದ ಬಹಳ ಪ್ರೀತಿ , ವ್ಯಾಮೋಹ. ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿ ಉಪ್ಪಿಟ್ಟು ಇರಲೇಬೇಕು. ಅಂದಹಾಗೆ ಉಪ್ಪಿಟ್ಟು ಬೆಳಿಗ್ಗೆಯೇ ತಿನ್ನಬೇಕು ಎನ್ನುವ ನಿಯಮ ಕೂಡ ಇಲ್ಲ. ಮಧ್ಯಾಹ್ನದ ಊಟ , ರಾತ್ರಿಯೂಟಕ್ಕೆ ಕೂಡ ಉಪ್ಪಿಟ್ಟಿಗೆ ಜೈ ಎನ್ನುವಷ್ಟು ಫೆನಾಟಿಕ್ ಉಪ್ಪಿಟ್ಟು ಪ್ರೇಮಿ ನಾನು. ನನ್ನ ಅಣ್ಣ ಮತ್ತು ತಮ್ಮ ಇಬ್ಬರಿಗೂ ಉಪ್ಪಿಟ್ಟು ಅಂದರೆ ಅಷ್ಟಕಷ್ಟೇ . ಇನ್ನು ಅಪ್ಪನಂತೂ ಪರಮ ಉಪ್ಪಿಟ್ಟು ದ್ವೇಷಿ.
ನಮ್ಮದು ಹೇಳಿಕೇಳಿ ನರಸಿಂಹಸ್ವಾಮಿ ಮನೆದೇವರು. ಅಪ್ಪನಿಗೂ ಗಂಡು ಮಕ್ಕಳಿಗೂ ಅಷ್ಟು ಹೊಂದಾಣಿಕೆ ಇರುವುದಿಲ್ಲ ಆಗಾಗ ಜಗಳವಾಗುತ್ತಿರುತ್ತದೆ ಎನ್ನುವುದು ನಮ್ಮಜ್ಜಿ ಉವಾಚ. ಬೇರಾವುದಕ್ಕೆ ಕಿತ್ತಾಡಿದ ನೆನಪಿಲ್ಲ ಆದರೆ ಅಪ್ಪ ಏನಾದರೂ ಉಪ್ಪಿಟ್ಟು ಬೇಡ ಬೇರೆ ತಿಂಡಿ ಮಾಡು ಅಂತ ಅವನ ಹೆಂಡತಿಗೆ ( ನನ್ನಮ್ಮನಿಗೆ ) ಆದೇಶ ಹೊರಡಿಸಿದರೆ ಮಾತ್ರ ಉಗ್ರ ಕೋಪ ಬರುತ್ತಿತ್ತು . ಉಪ್ಪಿಟ್ಟೇ ಬೇಕು ಅಂತ ರಂಪ ಮಾಡುತ್ತಿದ್ದೆ. ಹೀಗೆ ಒಮ್ಮೆ ಅಪ್ಪ ನನ್ನಿಚ್ಚೆಗೆ ವಿರುದ್ಧ ಹೋಗಿ ಅದ್ಯಾವುದೂ ತಿಂಡಿ ಮಾಡಿಸಿದ್ದರು . ನಾನಾಗ ಐದು ಅಥವಾ ಆರನೇ ತರಗತಿ ., ಅಪ್ಪನ ಬಳಿ ಹೋಗಿ ' ಅಣ್ಣ (ಅಪ್ಪನನ್ನ ಅಣ್ಣ ಎನ್ನುವುದು ನಮ್ಮಲ್ಲಿ ಪದ್ಧತಿ ) ನನಗೆ ಮದುವೆ ಮಾಡಿಸು ' ಎಂದಿದ್ದೆ .
ಅಪ್ಪನಿಗೆ ಚೂರು ಆಶ್ಚರ್ಯ ಆಯ್ತು ಅನ್ನಿಸುತ್ತೆ . ' ಏಕಯ್ಯಾ ಭಟ್ಟ ಇಷ್ಟು ಬೇಗ ಮದುವೆಯ ಯೋಚನೆ ' ಎಂದಿದ್ದರು . ನಾನು ' ನೀನಾದರೆ ನಿನ್ನ ಹೆಂಡತಿಗೆ ಹೇಳಿ ಬೇಕಾದ ತಿಂಡಿ ಮಾಡಿಸಿಕೊಳ್ಳುತ್ತೀಯ , ನನಗೂ ಮದುವೆ ಮಾಡು ಆಗ ತೊಂದರೆಯಿರುವುದಿಲ್ಲ , ದಿನ ಉಪ್ಪಿಟ್ಟು ಮಾಡಿಸಿಕೊಂಡು ತಿನ್ನುತ್ತೇನೆ ' ಎಂದಿದ್ದನಂತೆ . ಈ ಮಾತುಗಳನ್ನ ಅಮ್ಮ ಇಂದಿಗೂ ಹೇಳಿ ಈ ವಿಷಯವನ್ನ ಮರೆಯಲು ಬಿಟ್ಟಿಲ್ಲ . ಉಪ್ಪಿಟ್ಟಿಗಾಗಿ ಮದುವೆಗೆ ಸಿದ್ದನಾದವನು ನಾನು !
99 ರಿಂದ 2005ರ ವರೆಗೆ ಉಪ್ಪಿಟ್ಟು ತಿನ್ನದ ದಿನವಿಲ್ಲ. ನಾನು ಮೂರು ಹೊತ್ತು ಉಪ್ಪಿಟ್ಟಿಗೂ ರೆಡಿ . 2002ರಿಂದ 2005 ಮೂರು ವರ್ಷ ನನ್ನ ಪ್ಲಾಟ್ ಮೇಟ್ ಗಳು ಕೂಡ ಉಪ್ಪಿಟ್ಟಿಗೆ ಬಹಳ ಹೊಂದಿಕೊಂಡು ಬಿಟ್ಟಿದ್ದರು . ನಿತ್ಯ ಬೆಳಿಗ್ಗೆ ಎಲ್ಲರಿಗೂ ಉಪ್ಪಿಟ್ಟು ಮಾಡುವುದು ನನ್ನ ಕೆಲಸವಾಗಿತ್ತು. 2003ರಲ್ಲಿ ಬಾರ್ಸಿಲೋನಾ ಗೆ ಬಂದು ನನ್ನ ಸೇರಿಕೊಂಡ ತಮ್ಮ ಕಾಂತ ಕೂಡ ಉಪ್ಪಿಟ್ಟು ಪ್ರೇಮಿಯಾಗಿ ಬದಲಾದ. ಎಷ್ಟರ ಮಟ್ಟಿಗೆ ಎಂದರೆ ಸ್ಪ್ಯಾನಿಷ್ ನ್ಯಾಷನಲ್ ಟಿವಿಯಲ್ಲಿ ಉಪ್ಪಿಟ್ಟು ಮಾಡಿ ತೋರಿಸುವ ಮಟ್ಟಿಗೆ ಬದಲಾದ , ಬೆಳೆದ .
ನಾನು ನಿಮಗೆಲ್ಲಾ ಬೇಜಾರಾಗಿರಬಹದು ಇವತ್ತು ಉಪ್ಪಿಟ್ಟು ಮಾಡುವುದು ಬೇಡ ಎಂದರೆ , ಇಲ್ಲ ಉಪ್ಪಿಟ್ಟು ಮಾಡು ಎನ್ನುವಷ್ಟರ ಮಟ್ಟಿಗೆ ನನ್ನ ಫ್ಲಾಟ್ ಮೇಟ್ ಗಳು ಉಪ್ಪಿಟ್ಟು ಪ್ರಿಯರಾಗಿದ್ದರು . ಬಿಸಿ ಬಿಸಿ ಉಪ್ಪಿಟ್ಟಿನ ಮೇಲೆ ಗಟ್ಟಿ ಮೊಸರು ಹಾಕಿಕೊಂಡು ತಿಂದರೆ ಅದೇ ಸ್ವರ್ಗ. ಅಮ್ಮ ಮಾಡಿ ಕಳಿಸಿರುತ್ತಿದ್ದ ಚಟ್ನಿಪುಡಿ ಅಥವಾ ಉಪ್ಪಿನಕಾಯಿ ಚೂರು ನೆಂಚಿಕೆಗೆ ಸಿಕ್ಕಿ ಬಿಟ್ಟರೆ ಬದುಕಿನಲ್ಲಿ ಇನ್ನೇನೂ ಬೇಡ ಎನ್ನುವ ಭಾವ !! ಹೋಹ್ ಉಪ್ಪಿಟ್ಟೇ ನೀನಿಲ್ಲದಿದ್ದರೆ ನನ್ನ ಗತಿಯೇನು ?
2005ರಲ್ಲಿ ರಮ್ಯ ನನ್ನ ಬದುಕಿಗೆ ಬಂದಳು. ಅವಳಿಗೆ ದಿನ ಉಪ್ಪಿಟ್ಟು ತಿನ್ನುವ ನಾನು ಅನ್ಯಗ್ರಹ ಜೀವಿಯಂತೆ ಕಂಡೆ, ' ಇದೇನೂ ಗುಂಡ ನಿನ್ನ ಅವಸ್ಥೆ ' ಎಂದಿದ್ದಳು. ನಾನಾಗ ಅವಳನ್ನ ಕೂಡಿಸಿಕೊಂಡು ' ನೋಡು ನನಗೆ ಜೀವನದಲ್ಲಿ ಮೊದಲು ಅಮ್ಮ , ಎರಡನೆಯದು ಉಪ್ಪಿಟ್ಟು ಆಮೇಲೆ ನೀನು ' ಎಂದಿದ್ದೆ . ಅವಳು ತುಂಬಾ ಪಾಪದವಳು ಆಯ್ತು ಬಿಡು ಎಂದು ಮೂರನೆಯ ಸ್ಥಾನಕ್ಕೆ ಒಪ್ಪಿಕೊಂಡಳು. ಇವತ್ತಿಗೂ ಇದನ್ನ ಜ್ಞಾಪಿಸಿ ' ಈಗ ಮಗಳು ಬೇರೆ ಬಂದಿದ್ದಾಳೆ , ಎಲ್ಲರಿಗೂ ಬಡ್ತಿ ಸಿಗುತ್ತೆ ಆದರೆ ನನಗೆ ಹಿಂಬಡ್ತಿ ' ಅಂತ ಕಿಚಾಯಿಸುತ್ತಾಳೆ. ಉಪ್ಪಿಟ್ಟಿನ ಮೇಲೆ ಕಿರಿ ಕಿರಿ ಬರಿಸುವಷ್ಟು ಪ್ರೀತಿ ಹೊಂದಿರುವ ನನ್ನನ್ನ ನನಗೆ ಉಪ್ಪಿಟ್ಟಿನ ಮೇಲಿರುವಷ್ಟು ಪ್ರೀತಿಯ ಡಬ್ಬಲ್ ಪ್ರೀತಿಯಿಂದ ಕಾಣುತ್ತಿದ್ದಾಳೆ. ಬಾರ್ಸಿಲೋನಾ ದಲ್ಲಿ ಇತ್ತೀಚಿಗೆ ಒಂದಷ್ಟು ಉತ್ತಮ ಗುಣಮಟ್ಟದ ಭಾರತೀಯ ಹೋಟೆಲ್ ಗಳು ಶುರುವಾಗಿವೆ .
ಅವುಗಳನ್ನ ಭಾರತೀಯ ಎನ್ನುವುದಕ್ಕಿಂತ ಪಂಜಾಬಿ ಹೋಟೆಲ್ ಗಳು ಎನ್ನಲು ಅಡ್ಡಿಯಿಲ್ಲ . ಇಪ್ಪತ್ತು ವರ್ಷದ ಹಿಂದೆ ಕೂಡ ಇದ್ದವು , ಅವುಗಳನ್ನ ನಡೆಸುತ್ತಿದ್ದವರು ಪಾಕಿಸ್ತಾನಿಗಳು ಅಥವಾ ಬಾಂಗ್ಲಾದೇಶೀಯರು. ಅವರು ತಮ್ಮ ದೇಶದ ಹೆಸರನ್ನ ಹಾಕಿಕೊಂಡು ರೆಸ್ಟುರೆಂಟ್ ನಡೆಸಲು ಸಾಧ್ಯವಿಲ್ಲದ ಕಾರಣ , ಭಾರತೀಯ ಆಹಾರ ಎನ್ನುವ ಹೆಸರನ್ನ ತಪ್ಪದೆ ಹಾಕುತ್ತಾರೆ. ಅವರ ಧರ್ಮ ಯಾವುದೇ ಇರಲಿ , ಭಾರತೀಯ ಹೋಟೆಲ್ ಎಂದು ಹಾಕಿದ ಮೇಲೆ ಪ್ರವೇಶದಲ್ಲಿ ಗಣಪತಿಯ ಮೂರ್ತಿಯನ್ನ ಇಡದಿದ್ದರೆ ಹೇಗೆ ? ಹೀಗಾಗಿ ಬಹಳಷ್ಟು ರೆಸ್ಟುರೆಂಟ್ ಗಳ ಮಾಲೀಕರು ಪಾಕಿಸ್ಥಾನಿಯಾದರು ಗಣಪತಿ ಮೂರ್ತಿಗೆ ದೀಪ ಧೂಪವನ್ನ ಅರ್ಪಿಸುವುದನ್ನ ನಾನು ಕಂಡಿದ್ದೇನೆ. ವ್ಯಾಪಾರದ ಮುಂದೆ ಇನ್ನ್ಯಾರು ? ಅಲ್ಲವೇ ? ಹೀಗೆ ಒಂದು ವಾರಂತ್ಯದಲ್ಲಿ ಯೋರೆತ್ ದೇ ಮಾರ್ ಎಂಬ ಜಾಗಕ್ಕೆ ಸುತ್ತಲು ಹೋಗಿದ್ದೆವು.
ಮಧ್ಯಾಹ್ನದ ಊಟವನ್ನ ಪಂಜಾಬಿಯೊಬ್ಬ ನಡೆಸುವ ರೆಸ್ಟುರಾಂಟ್ನಲ್ಲಿ ಮಾಡುವುದು ಎಂದು ಅಲ್ಲಿಗೆ ಹೋಗಿದ್ದೆವು. ಆತನೊಂದಿಗೆ ಲೋಕಾಭಿರೂಡಿ ಮಾತನಾಡುತ್ತ ಇರುವಾಗ ಆತ , ನನ್ನ ಮಕ್ಕಳನ್ನು ದಕ್ಷಿಣ ಭಾರತೀಯರಂತೆ ಹೆಚ್ಚು ಓದಿಸ ಬೇಕೆಂಬ ಆಸೆ ' ಕ್ಯಾ ಪತ , ಆಗೇ ಜಾಕೆ ,ಮೇರಾ ಬಚ್ಹೊಂಕೋ ರೆಸ್ಟುರಂಟ್ ಕ ಕಾಮ್ ಅಚ್ಹ ನ ಲಗೇ ' ... ಎಂದ . ವೆಸ್ತ್ರೆನ್ ಕಲ್ಚರ್ನ ಮಜಾ/ ಬ್ಯೂಟಿ ಇದೆ. ನಾವು ಭಾರತೀಯರು ನಮ್ಮ ವ್ಯವ್ಯಸಾಯ ಕೈ ಹತ್ತಿದರೆ ಮುಗಿಯಿತು. ನಮ್ಮ ಮಕ್ಕಳೇ ಉತ್ತರಾಧಿಕಾರಿಗಳು .., ವೈದ್ಯನ ಮಗ ವೈದ್ಯ , ಆಕ್ಟಿಂಗ್ ಬರಲಿ ಬಿಡಲಿ ಪ್ರಸಿದ್ದ ನಟನ ಮಗ/ಮಗಳು ನಟನೆಗೆ ಜೋತು ಬೀಳುತ್ತಾರೆ. ಎಲ್ಲವೂ ಅಂತಲ್ಲ ಕೆಲವೊಂದು ಪಾಶ್ಚ್ಯಾತ್ಯ ಫಿಲಾಸಫಿಗಳು ಇಷ್ಟವಾಗುತ್ತವೆ. ಮನುಷ್ಯನ ಇಚ್ಛೆ ಮತ್ತು ಅವನ ಬುದ್ದಿವಂತಿಕೆ ಆಧಾರವಾಗ ಬೇಕೇ ಹೊರತು ಬೇರೆ ಯಾವುದೂ ಅಲ್ಲ.
ನಾವು ಬಹಳ ವಿಷಯದಲ್ಲಿ ಪಾಶ್ಚ್ಯಾತ್ಯರನ್ನ ತೆಗೆಳುತ್ತೇವೆ. ನಮ್ಮ ಭಾರತೀಯತೆ ಶ್ರೇಷ್ಠ ಎನ್ನುವುದು ನಮ್ಮ ಭಾವನೆ. ಎರಡೂ ಪೂರ್ಣ ತಪ್ಪಲ್ಲ , ಪೂರ್ಣ ಸರಿಯೂ ಅಲ್ಲ. ಪಾಶ್ಚ್ಯಾತ್ಯರು ಮಾಡುವ ಅಷ್ಟೇನೂ ಆರೋಗ್ಯಕ್ಕೆ ಒಳ್ಳೆಯದಲ್ಲದ ಕುಡಿತ ಮತ್ತಿತರ ಚಟಗಳನ್ನ ಬಹಳ ಬೇಗ ಅಂಟಿಸಿಕೊಳ್ಳುವ ನಾವು , ಅವರ ಸಮಯ ಪರಿಪಾಲನೆ , ಬೆಳಗಿನ ಓಟ ಅಥವಾ ದೈಹಿಕ ಕಸರತ್ತಿನ ಕಡೆಗೆ ನಮ್ಮದು ದಿವ್ಯ ನಿರ್ಲಕ್ಷ್ಯ .
ಹೀಗಾಗಿ ನಾವು ಸೆಲೆಕ್ಟಿವ್ . ನಮಗೆ ಬೇಕಾದುದಕ್ಕೆ ಅವರು ಬೇಕು . ಬೇಡವಾದಾಗ ಅವರನ್ನ ಟೀಕಿಸುವುದು . ಶ್ರೇಷ್ಠ , ನಿಕೃಷ್ಟ ಎನ್ನುವ ನಿಲುವುಗಳಿಂದ ಹೊರಬಂದು ಒಂದಾಗಿ ಬಾಳುವುದರಲ್ಲಿ ಖುಷಿಯಿದೆ.
ಬಾರ್ಸಿಲೋನಾ ದಲ್ಲಿ ಭಾರತೀಯ ಮೂಲದ ಸಿಂಧಿಗಳು ಸೊವಿನಿಯರ್ ವ್ಯಾಪಾರದಲ್ಲಿ ಬಹಳಷ್ಟು ಹಿಡಿತವನ್ನ ಹೊಂದಿದ್ದಾರೆ. ಹಾಗೆ ನೋಡಲು ಹೋದರೆ ಸ್ಪೇನ್ ನಲ್ಲಿ ಭಾರತೀಯರ ಸಂಖ್ಯೆ ಬಹಳ ಕಡಿಮೆ. ಇಲ್ಲಿರುವ ಭಾರತೀಯರಲ್ಲಿ ಪಂಜಾಬಿಗಳು ಮತ್ತಿ ಸಿಂಧಿಗಳ ಸಂಖ್ಯೆ ಸಿಂಹಪಾಲು ಪಡೆಯುತ್ತದೆ. ದಕ್ಷಿಣ ಭಾರತೀಯರ ಸಂಖ್ಯೆ ಬಹಳ ಕಡಿಮೆ. ತೀರಾ ಇತ್ತೀಚಿಗೆ ಇಲ್ಲಿಗೆ ಬರುತ್ತಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ಮಲೆಯಾಳಿಗಳ ಸಂಖ್ಯೆ ಅಧಿಕವಾಗಿದೆ. ನಿಧಾನವಾಗಿ ದಕ್ಷಿಣ ಭಾರತೀಯರೂ ಕಣ್ಣಿಗೆ ಬೀಳಲು ಶುರುವಾಗಿದ್ದಾರೆ.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm