ಶ್ರೀನಾಥ್ ಭಲ್ಲೆ ಅಂಕಣ: ನಿದ್ದೆ ಬರ್ಲಿಲ್ಲ ಅಂತ ಅನ್ಬೇಡಿ ನೀವು

01-04-21 08:10 pm       By Srinath Bhalle   ನ್ಯೂಸ್ View

ಸ್ವಲ್ಪ ಭಯಂಕರ ಘನ ಗಂಭೀರವಾಗಿಯೇ ಆರಂಭಿಸುವಾ. ಈ ನಿದ್ದೆ ಅಂದ್ರೇನು? ನಿದ್ದೆ ಬರೋದು ಅಂದ್ರೇನು? ಎದ್ದ ಮೇಲೆ ಈ ನಿದ್ದೆ ಎಲ್ಲಿಗೆ ಹೋಗಿರುತ್ತೆ? ಅಥವಾ ನಾವು ಎದ್ದ ಮೇಲೆ ನಿದ್ದೆ ಮಲಗುತ್ತೋ? ನಾವು ನಿದ್ರಾದೇವಿಯನ್ನು ಅಪ್ಪಿಕೊಳ್ಳುತ್ತೇವೆಯೋ?

ಸ್ವಲ್ಪ ಭಯಂಕರ ಘನ ಗಂಭೀರವಾಗಿಯೇ ಆರಂಭಿಸುವಾ. ಈ ನಿದ್ದೆ ಅಂದ್ರೇನು? ನಿದ್ದೆ ಬರೋದು ಅಂದ್ರೇನು? ಎದ್ದ ಮೇಲೆ ಈ ನಿದ್ದೆ ಎಲ್ಲಿಗೆ ಹೋಗಿರುತ್ತೆ? ಅಥವಾ ನಾವು ಎದ್ದ ಮೇಲೆ ನಿದ್ದೆ ಮಲಗುತ್ತೋ? ನಾವು ನಿದ್ರಾದೇವಿಯನ್ನು ಅಪ್ಪಿಕೊಳ್ಳುತ್ತೇವೆಯೋ? ಅಥವಾ ನಿದ್ರಾದೇವಿ ನಮ್ಮನ್ನು ಅಪ್ಪಿಕೊಳ್ಳುವಳೋ? ನಿದ್ದೆ ಬರ್ತಿದೆ ಎಂದಾಗ ಆಕಳಿಕೆ ಬರುತ್ತದೆ, ಅಂತ ಅಂದ್ರೆ ರಾಜಕಾರಣಿಗಳು ಬರುವ ಮುಂಚೆ ಸೆಕ್ಯೂರಿಟಿ ಗಾರ್ಡ್ ಗಳು ಬರುವಂತೆ ಅಂದುಕೊಳ್ಳಬಹುದೇ? ಕೊನೆಯ ಪ್ರಶ್ನೆ ಅಂತೇನೂ ಗ್ಯಾರಂಟಿ ಇಲ್ಲ ಆದರೂ ಕೇಳುತ್ತೇನೆ, ನಿದ್ದೆ ಬರ್ತಿದೆ ಅಂದ್ರೆ ಆ ನಿದ್ರಾದೇವಿ ಕಣ್ಣಿಗೆ ಕಾಣುವ ದೇವಿಯೇ? ಕೊನೆ ಲಾಸ್ಟ್ ಪ್ರಶ್ನೆ, ನಿದ್ದೆ ಮತ್ತು ನಿದ್ರೆಗೆ ಏನಾದ್ರೂ ವ್ಯತ್ಯಾಸವಿದೆಯೇ? ಸೀರಿಯಸ್ಲೀ ಸದ್ಯಕ್ಕೆ ಕೊನೇ ಪ್ರಶ್ನೆ ಆಯ್ತಾ? ನಿದ್ರೆಗೆ ಜಾರಿಕೊಳ್ಳುವುದು ಅಂದ್ರೇನು?

ಇಷ್ಟೂ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಶ್ನೆ ಪತ್ರಿಕೆಯನ್ನು ನಿಮ್ಮ ಕೈಲಿ ಕೊಟ್ಟಾಗಿದೆ. ನೀವು ಪ್ರಶ್ನೆಗಳಿಗೆ ಉತ್ತರಿಸಿ ಆಯ್ತಾ? ನಾನು ಮಿಕ್ಕ ಮಾತುಗಳಿಗೆ ಜಾರುತ್ತೇನೆ.

COVID-19 lockdowns helped people sleep more but not always better | Science  News

ತೂಗಿ ಮಲಗಿಸುವ ತಾಯಂತೆ ಈ ನಿದ್ರಾದೇವಿ

ಈ ಅಪ್ಪುಗೆ ಬಾಲ್ಯದಿಂದಲೂ ಬಂದಿರೋದ್ರಿಂದ ಈ ನಿದ್ರಾದೇವಿ ತಾಯಿಯಂತೆ ಅನ್ನೋದು ಸತ್ಯ. ದಣಿದು ಬಂದ ಕೂಸನ್ನು ಅಪ್ಪಿ, ತಟ್ಟಿ ಅಥವಾ ತೂಗಿ ಮಲಗಿಸುವ ತಾಯಂತೆ ಈ ನಿದ್ರಾದೇವಿ. ಈ ತಟ್ಟುವುದು ಅಂದ್ರೇನು? ಈಗ ಒಂದು ಡಬ್ಬದಲ್ಲಿ ಯಾವುದೋ ಹಿಟ್ಟಿದೆ ಅಂತ ಅಂದುಕೊಳ್ಳಿ. ಹಿಟ್ಟನ್ನು ಇನ್ನೊಂದೆಡೆ ಬಗ್ಗಿಸಿದ ಮೇಲೆ ಅಲ್ಲಲ್ಲೇ ಅಂಟಿಕೊಂಡ ಹಿಟ್ಟನ್ನು ತೆಗೆಯೋದು ಹೇಗೆ? ಡಬ್ಬವನ್ನು ತಟ್ಟಿದಾಗ ಡಬ್ಬಿಯ ಒಳಗೆ ಅಂಟಿಕೊಂಡ ಹಿಟ್ಟು ಕಳಚಿಕೊಳ್ಳುತ್ತದೆ ತಾನೇ?

ಹಾಗೆಯೇ ಈ ತಟ್ಟುವಿಕೆಯೂ ಸಹ. ತಾಯಿ ತಟ್ಟಿದಾಗ ಮನಸ್ಸಿನ ಒಳ ಪದರಗಳಲ್ಲಿ ಅಂಟಿಕೊಂಡಿರುವ ಆಯಾಸ ಕಳಚಿ ಉದುರತ್ತದೆ, ನಿದ್ರೆ ಆವರಿಸುತ್ತದೆ. ಅದೇಕೋ ಬೇಗ ದೊಡ್ಡವರಾಗಿ ಬಿಡ್ತೀವಿ, ಇಲ್ಲವಾದಲ್ಲಿ ಈ ತಟ್ಟುವಿಕೆಯಿಂದ ನಮ್ಮ ಚಿಂತೆಗಳೂ ಉದುರಿ ನೆಮ್ಮದಿಯ ನಿದ್ದೆ ನಮ್ಮದಾಗುತ್ತಿತ್ತಲ್ಲವೇ?

Diabetes and Sleep - Sleep Disorders & Getting a Good Night's Sleep

ಆಕೆ ಹೊರಡುವ ವೇಳೆ ಬಂದಾಗ fresh ಆಗುತ್ತೇವೆ

ಬೇರೆ ಪ್ರಾಣಿಗಳನ್ನು ಸದ್ಯಕ್ಕೆ ಬದಿಗೆ ಇಟ್ಟು ಕೇವಲ ಮಾನವ ಪ್ರಾಣಿಯನ್ನು ಮಾತ್ರ ತೆಗೆದುಕೊಂಡರೆ, ಪ್ರತಿ ದೇಹಕ್ಕೂ ಒಬ್ಬೊಬ್ಬ ನಿದ್ರಾದೇವಿ allot ಆಗಿರುವಳಂತೆ. ನಾನೇನು ಹೇಳೋದಪ್ಪಾ ಅಂದ್ರೆ, ನಾವು ಈ ತಾಯಿಯನ್ನು ಚೆನ್ನಾಗಿ ನೋಡಿಕೊಂಡರೆ, ಆ ತಾಯಿಯೂ ನಮ್ಮನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾಳೆ ಅಲ್ಲವೇ? ಅರ್ಥಾತ್ ಆ ತಾಯಿ ಬಂದಾಗ ಅಪ್ಪಿ, ಆಕೆ ಹೊರಡುವ ವೇಳೆ ಬಂದಾಗ fresh ಆಗಿ ದಿನನಿತ್ಯದ ಕೆಲಸವನ್ನು ಮಾಡಿಕೊಂಡು ನೆಮ್ಮದಿಯಾಗಿದ್ರೆ ನಾವೂ ಖುಷ್, ಆಕೆಯೂ ಖುಷ್.

ನ್ಯಾಯವಾಗಿ ನೋಡಿದರೆ ಹಗಲು-ಇರುಳು ಇದ್ದ ಹಾಗೆ ಈ ಎಚ್ಚರಿಕೆ ಮತ್ತು ನಿದ್ದೆಯ ಆವರ್ತನಗಳು. ಒಂದೇ ಸಮನೆ ಒಂದೇ ರೀತಿಯ ಸ್ಥಿತಿ ಸಲ್ಲದು. ಇಂಥಾ ಸ್ಥಿತಿ ಕಂಡಿದ್ದು ಬಹುಶಃ ಕೇವಲ ರಾಮಾಯಣದಲ್ಲಿ ಇರಬೇಕೇನೋ! ಊರ್ಮಿಳೆಯು ಹದಿನಾಲ್ಕು ವರುಷಗಳ fulltime ನಿದ್ದೆ, ಲಕ್ಷ್ಮಣನೋ ಹದಿನಾಲ್ಕು ವರ್ಷಗಳ ನಿದ್ರೆ ಇಲ್ಲದ ಸ್ಥಿತಿ. ಇನ್ನು ಕುಂಭಕರ್ಣನೋ ಅರ್ಧ ಹಿಂಗೆ, ಅರ್ಧ ಹಂಗೆ.

Sleep | Psychology Today

ಒಂದು ದಿನದಲ್ಲಿ ಅರ್ಧ ಎಚ್ಚರಿಕೆ ಅರ್ಧ ನಿದ್ದೆ

ಒಂದರ್ಥದಲ್ಲಿ ತೆಗೆದುಕೊಂಡರೆ ನಾವೆಲ್ಲರೂ ಕುಂಭಕರ್ಣ ಸಂತತಿ ಎನ್ನಬೇಕು. ನಮ್ಮ ಒಂದು ವರ್ಷ ರಕ್ಕಸ ಕುಂಭಕರ್ಣನ ಒಂದು ದಿನ ಅಂದುಕೊಳ್ಳಿ. ಹಾಗಾಗಿ ಅವನ ಒಂದು ದಿನದಲ್ಲಿ ಅರ್ಧ ಎಚ್ಚರಿಕೆ ಅರ್ಧ ನಿದ್ದೆ ಅಂದುಕೊಳ್ಳೋಣ. ಬೇಡಾ ಬಿಡಿ, ಯಾರಿಗೆ ಬೇಕು ಈ ಲೆಕ್ಕ ಅಂತ ಮುಂದೆ ಸಾಗೋಣ ಇಲ್ಲದಿದ್ರೆ ದೇವತೆಗಳು, ಪಿತೃದೇವತೆಗಳು, ಬ್ರಹ್ಮ ಅಂತ ಎಲ್ಲರ ಕಾಲದ comparisonಗೆ, ಎಲ್ಲಾ ಯುಗಗಳಿಗೂ, ಎಲ್ಲ ಕಲ್ಪಗಳಿಗೂ, ಮನುಸ್ಮೃತಿಗೂ ವಿಸಿಟ್ ಕೊಡಬೇಕಾದೀತು.

ನಮ್ಮ ದೇಹ ಹೂವಿನಂತೆ ಹಗುರಾಗುತ್ತದೆ ನ್ಯಾಯವಾಗಿ ನಿದ್ದೆ

ಮಾಡಿದರೆ ಅರ್ಥಾತ್ ನಿದ್ರೆಯ ಮಧ್ಯೆ ಏಳದೆ ಇದ್ದರೆ, ನಮ್ಮ ನಿದ್ದೆ ಒಂದು ರೀತಿ ಪ್ಯಾರಾಲಿಸಿಸ್ ರೀತಿ ಅಲ್ಲವೇ? ಡೀಪ್ ನಿದ್ದೆ ಅಂತ ಮುಳುಗಿದ್ದಾಗ ಅಂಗಾಂಗಗಳ ಮೇಲೆ ಹತೋಟಿಯೇ ಇರೋದಿಲ್ಲ. ಎಲ್ಲವೂ ನಿದ್ದೆ. ಒಂದೊಳ್ಳೆಯ ನಿದ್ದೆ ಮಾಡಿ ಎಚ್ಚರಾದಾಗ ನಮ್ಮ ದೇಹ ಹೂವಿನಂತೆ ಹಗುರಾಗುತ್ತದೆ. ಒಂದು ಕಂಪ್ಯೂಟರ್ ಅನ್ನು reboot ಮಾಡಿದ ಮೇಲೆ ಹೇಗೆ ಅದು fresh ಆಗುತ್ತದೆಯೋ ಹಾಗೆ. ಲಕ್ಷಣವಾಗಿ ಹರಳೆಣ್ಣೆ ತಟ್ಟಿಕೊಂಡು ಬಿಸಿಬಿಸಿ ನೀರಿನಲ್ಲಿ ಸೀಗೆಪುಡಿ ಉಜ್ಜಿಕೊಂಡು ಸ್ನಾನ ಮಾಡಿ ಬಂದ ಮೇಲೆ ದೇಹ ಅದೆಷ್ಟು ಹಗುರಾಗುತ್ತದೋ ಹಾಗೆ.

Srinath Bhalle Column: Sleep Is Good For Everyones Health

ಹಾಸಿಗೆ ಅಂತ ಇಲ್ಲದಿದ್ದಾಗ ನಿದ್ರೆಯೇ ಬರೋದಿಲ್ಲ

ಇದಿಷ್ಟೂ ಪೀಠಿಕೆಯಾದ ಮೇಲೆ ಮೂಲ ವಿಷಯಕ್ಕೆ ಬರೋಣ. ನಿದ್ದೆ ಬರ್ಲಿಲ್ಲ ಅಂತ ಅನ್ಬೇಡಿ ನೀವು ಆಯ್ತಾ? ಎಷ್ಟೋ ಸಾರಿ ಈ ನಿದ್ದೆ ಬರುತ್ತೆ. ಆದರೆ ಯಾವ ಸಂದರ್ಭದಲ್ಲಿ ಬರಬೇಕು ಅಂತ ಆ ತಾಯಿಗೆ ಗೊತ್ತಿಲ್ಲ. ಕಾರಣ ಇಷ್ಟೇ, ಆ ನಿದಿರಾದೇವಿಗೆ ನಿಮ್ಮ ದೇಹಕ್ಕೆ ಹಿಂಸೆಯಾಗುತ್ತಿದೆ, ಆಯಾಸವಾಗುತ್ತಿದೆ, ಮನಸ್ಸು ತಮಣೆಯಾಗಬೇಕು ಅಂತಷ್ಟೇ ಗೊತ್ತು. ಹಾಗಾಗಿ, ನೀವು ಬಸ್ಸಿನಲ್ಲಿ ಪಯಣಿಸುವಾಗ, ರೈಲಿನಲ್ಲಿ ಪಯಣಿಸುವಾಗ, ಮಧ್ಯಾಹ್ನ ಊಟವಾದ ಮೇಲೆ ಯಾವುದಾದರೂ ಮೀಟಿಂಗ್ ಇರುವಾಗ, ಒಂದಿನಿತೂ ಏರಿಳಿತವಿಲ್ಲದೆ ಯಾರಾದರೂ ಮಾತನಾಡುತ್ತಿರುವಾಗ ಹೀಗೆ ಹೊತ್ತು ಗೊತ್ತಿಲ್ಲದೇ ನಿದ್ದೆ ಆವರಿಸುತ್ತದೆ. ಕೆಲವರಿಗೆ ಅವರದ್ದೇ ಮನೆ, ಮಂಚ, ದಿಂಬು, ಹಾಸಿಗೆ ಅಂತ ಇಲ್ಲದಿದ್ದಾಗ ನಿದ್ರೆಯೇ ಬರೋದಿಲ್ಲ. ಇನ್ನು ಕೆಲವರಿಗೆ ಕೊಂಚ ಥಣ್ಣನೆ ಗಾಳಿ ಬೀಸಿದರೂ ಥಟ್ಟನೆ ನಿದ್ದೆ ಬರುತ್ತದೆ. ತಾವು ಹೇಗೋ?

ಆಯಾಸಗೊಂಡ ದೇಹಕ್ಕೆ ವಿಶ್ರಾಂತಿ ಬೇಕು

ನಿದ್ರಾಹೀನತೆ ಅನ್ನೋದು ನಿದ್ದೆ ಬಾರದೇ ಇರುವುದು ಅನ್ನೋದು ನಿಜ ಅದರಂತೆಯೇ ನಿದ್ದೆ ಬಂದಾಗ ದೂರ ತಳ್ಳುವುದೂ ಎಂದೂ ಹೇಳಬಹುದು ಅಲ್ಲವೇ? ಆಯಾಸಗೊಂಡ ದೇಹಕ್ಕೆ ವಿಶ್ರಾಂತಿ ಬೇಕು. ವಿಶ್ರಾಂತಿಗೆ ನಿದ್ದೆ ಬೇಕು. ನಿದ್ರೆಗೆ ತುಂಬಾ ಸಮಯವಿಲ್ಲ, ಜಗತ್ತಿನ ಕೆಲಸವೆಲ್ಲಾ ನನ್ನ ತಲೆಯ ಮೇಲೆ ಇದೆ, ಸೃಷ್ಟಿಕರ್ತ ಬ್ರಹ್ಮನೂ ನನ್ನನ್ನು consult ಮಾಡಿಯೇ ಕೆಲಸ ಮಾಡೋದು ಅಂತ ನಿಮಗೆ ಅನ್ನಿಸಿದರೆ power nap ತೆಗೆದುಕೊಳ್ಳಿ. ಕೆಲವೊಮ್ಮೆ ಈ power nap ಅನ್ನುವುದು powerful nap ಆಗುವ ಸಂಭವ ಇರುತ್ತದೆ. ಐದು ನಿಮಿಷ ಅಂತ ಮಲಗಿದವರು ಐದು ಗಂಟೆಗಳಾದ ಮೇಲೆ ಏಳಬಹುದು.

ಈ ದೆವ್ವವನ್ನು ಹತ್ತಿರ ಮಾಡಿಕೊಳ್ಳುವುದಿಲ್ಲ

ಈ powerful napಗೂ, power napಗೂ ಸ್ವಲ್ಪವೇ ವ್ಯತ್ಯಾಸ. ಒಂದು ನಿದ್ರಾದೇವಿಯನ್ನು ಅಪ್ಪುವುದು, ಮತ್ತೊಂದು ನಿದ್ರಾದೇವಿಯನ್ನು ಅಪ್ಪಿದಂತೆ ನಟಿಸುವುದು. ದೇವಿಯನ್ನು ಅಪ್ಪಿಕೊಳ್ಳದೆ ಹೋದಾಗ ಮೆಟ್ಟಿಕೊಳ್ಳುವುದೇ ದೆವ್ವ, ಅದನ್ನು ನಿದ್ರಾಹೀನತೆ ಅಂತಲೂ ಕರೆಯುತ್ತಾರೆ. ಜೀವನದಲ್ಲಿ power napಗೂ ಸಮಯವಿಲ್ಲದೆ ಹೋದಾಗ ಕಾಡುವುದೇ ಈ ದೆವ್ವ. ಯಾರೂ ಬೇಕೂ ಅಂತಲೇ ಈ ದೆವ್ವವನ್ನು ಹತ್ತಿರ ಮಾಡಿಕೊಳ್ಳುವುದಿಲ್ಲ. ಇಂದಿನ ಜಗತ್ತಿನಲ್ಲಿ ಎಲ್ಲರನ್ನೂ ಆಳುತ್ತಿರೋದೇ ಸಮಯ. ಅಂದಿಗೂ ಇಂದಿಗೂ ಒಂದು ದಿನದಲ್ಲಿ ಇರುವುದೇ ಇಪ್ಪತ್ತನಾಲ್ಕು ಗಂಟೆಗಳು ನಿಜ. ವಿದ್ಯುತ್ ಅಥವಾ ನೀರಿನ ಬಿಲ್ ಕಟ್ಟಲು ಕ್ಯೂ ನಿಲ್ಲಬೇಕಿಲ್ಲ. ಅಂಗಡಿಯಿಂದ ಸಾಮಾನು ಹೊತ್ತು ತರಬೇಕಿಲ್ಲ. ಬ್ಯಾಂಕಿನ ತನಕ ಹೋಗಬೇಕಾಗಿ ಇಲ್ಲ. ಎಲ್ಲ ಕೆಲಸಗಳೂ ಇಂದು ಅಂಗೈಯಲ್ಲಿ ಬಂದು ಕೂತಿದೆ. ಇಷ್ಟಾಗಿಯೂ ಸಮಯವಿಲ್ಲ ಎಂದರೆ ಅರ್ಥ ಹಲವಾರು ಇತರೆ ಕೆಲಸಗಳು ಆ ಜಾಗವನ್ನು ಆಕ್ರಮಿಸಿದೆ.

lung problems: Before you doze off: Sleeping more than 11 hours or less  than 4 hours can cause incurable lung disease - The Economic Times

ಬಿಪಿ ಏರಿದರೆ ನಿದ್ದೆ ಓಡಿಹೋಗುತ್ತೆ

ಇಷ್ಟಾಗಿದ್ರೆ "ಟೈಮೇ ಇಲ್ಲ' ಎಂಬ ಮಾತು ಇರುತ್ತಿರಲಿಲ್ಲ. ಆದರೆ ಈ ಹಲವಾರು ಕೆಲಸಗಳು ಪ್ಲೇಟ್ ತುಂಬಿ ಹೊರಗೂ ಚೆಲ್ಲಿದೆ. ಹೀಗೆ ಚೆಲ್ಲಿರುವ ಕೆಲಸದಲ್ಲಿ ನಿದ್ದೆಯೂ ಒಂದು. ಉಂಬ ತಟ್ಟೆಯಲ್ಲಿ ನಿದ್ದೆಗೇ ಜಾಗವಿಲ್ಲ. ನಿದ್ರಾ ಹೀನತೆ ಆಲಿಯಾಸ್ sleep deprived ಅಂತ ಆಗಿರುವುದು ಇದರಿಂದ. ನಿದ್ರೆ ಬರ್ತಿಲ್ಲ ಅನ್ನೋದಕ್ಕೆ ಕಾರಣಗಳು ಹಲವಾರು. ಮರುದಿನ ಅದ್ಯಾವುದೋ presentation ಇರಬಹುದು, ಮನೆಯಲ್ಲಿ ದೊಡ್ಡ ಸಮಾರಂಭ ಇರಬಹುದು, ಇಂಟರ್ವ್ಯೂ ಇರಬಹುದು, ಸ್ಟೇಜಿನ ಮೇಲೆ ಹೋಗುವ competition ಇರಬಹುದು ಹೀಗೆ ಯಾವುದೂ ಆಗಬಹುದು. ಇದೆಲ್ಲದರ ಹಿಂದಿನ ವಿಷಯ ಒಂದೇ, ಅದೇ ಟೆನ್ಷನ್. ಸಾಮಾನ್ಯವಾಗಿ ಟೆನ್ಷನ್ ಏರಿದರೆ ಬಿಪಿ ಏರುತ್ತದೆ. ಬಿಪಿ ಏರಿದರೆ ನಿದ್ದೆ ಓಡಿಹೋಗುತ್ತೆ. ನಿದ್ದೆ ಹೊರಗೆ ಹೋದರೆ ಮಿಕ್ಕೆಲ್ಲಾ ತೊಂದರೆಗಳು ಹತ್ತಿರ ಬರುತ್ತದೆ.

ಬನ್ನಿ, ನಮ್ಮ ತಟ್ಟೆಯನ್ನು ಕೊಂಚ ಖಾಲಿ ಮಾಡಿ ನಿದ್ದೆಗೂ ಜಾಗ ಮಾಡಿಕೊಡೋಣ. ಒಳ್ಳೆಯ ಆರೋಗ್ಯಕ್ಕೆ ಎಂಟು ಗಂಟೆ ನಿದ್ರೆ ಬೇಕಂತೆ. ಹೋಗಲಿ ಬಿಡಿ, ಏಕ್ದಂ ಮೋಕ್ಷಕ್ಕೆ ಹೋಗೋದು ಬೇಡ. ನೆಮ್ಮದಿಯಾಗಿ ಐದಾರು ಗಂಟೆಯಾದರೂ ನಿದ್ದೆ ಮಾಡೋಣ. ಅಂದ ಹಾಗೆ, ವಯಸ್ಸಾದಂತೆ ನಿದ್ದೆ ಕಡಿಮೆಯಾಗುತ್ತಂತೆ. ಪ್ರಶ್ನೆ ಏನಪ್ಪಾ ಅಂದ್ರೆ, ವಯಸ್ಸಾದವರಿಗೆ ನಿದ್ದೆ ಕಡಿಮೆ ಅಂತಾರಾ? ನಿದ್ದೆ ಕಡಿಮೆ ಇರುವವರಿಗೆ ವಯಸ್ಸಾಗಿದೆ ಅಂತಾರಾ?