ಆತ್ಮಹತ್ಯೆ ಒಂದು ಮಾನಸಿಕ ತುರ್ತು ಪರಿಸ್ಥಿತಿ ; ಬಾಳುವಂತ ಹೂವೇ ಬಾಡುವ ಆಸೆ ಯಾಕೆ?

01-08-20 08:13 pm       ಶ್ವೇತಾ ಪ್ರಸನ್ನ ಹೆಗಡೆ, ಶಿರಸಿ   ನ್ಯೂಸ್ View

ಒತ್ತಡವನ್ನು ನಿಭಾಯಿಸುವಲ್ಲಿ ವಿಫಲತೆ ಹೊಂದಿ ಮಾನಸಿಕ ಖಿನ್ನತೆಗೊಳಪಟ್ಟಾಗ ದುರ್ಬಲ ಮನಸ್ಥಿತಿಯವರು ತಮ್ಮ ಜೀವವನ್ನು ತಾವೇ ಕೈಯಾರೆ ತೆಗೆದುಕೊಳ್ಳುವಂತಹ ದುಸ್ಸಾಹಸಕ್ಕೆ ಒಳಗಾಗುತ್ತಾರೆ.

ವೇಗದ ಬದುಕಿನಲ್ಲಿ ಒತ್ತಡ – ಸಂಘರ್ಷಗಳು ಸಹಜ ಮತ್ತು ಸಾಮಾನ್ಯ. ಅದನ್ನು ಸರಿಯಾಗಿ ನಿಭಾಯಿಸುವ ಮನೋಸ್ಥಿತಿ ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡಕ್ಕೂ ಸಂಬಂಧಿಸಿರುತ್ತದೆ.

ಒತ್ತಡವನ್ನು ನಿಭಾಯಿಸುವಲ್ಲಿ ವಿಫಲತೆ ಹೊಂದಿ ಮಾನಸಿಕ ಖಿನ್ನತೆಗೊಳಪಟ್ಟಾಗ ದುರ್ಬಲ ಮನಸ್ಥಿತಿಯವರು ತಮ್ಮ ಜೀವವನ್ನು ತಾವೇ ಕೈಯಾರೆ ತೆಗೆದುಕೊಳ್ಳುವಂತಹ ದುಸ್ಸಾಹಸಕ್ಕೆ ಒಳಗಾಗುತ್ತಾರೆ.

ಪ್ರತಿಯೊಂದು ಆತ್ಮಹತ್ಯೆಗೂ  ವಿಭಿನ್ನ ಕಾರಣಗಳಿರುತ್ತವೆ. ಪ್ರೇಮ ವೈಫಲ್ಯ, ಆರ್ಥಿಕ ತೊಂದರೆ, ಸಂಶಯ, ಕೌಟುಂಬಿಕ ಜೀವನದ ಏರುಪೇರು, ಗುಣವಾಗದ ರೋಗಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಕೆ, ಕೆಟ್ಟ ಗೆಳೆಯರ ಸಹವಾಸ, ದೈಹಿಕ ಮತ್ತು ಮಾನಸಿಕ ದೌರ್ಜನ್ಯ‌ ಇತ್ಯಾದಿ ಕಾರಣಗಳನ್ನು ನಾವು ಸಾಮಾನ್ಯವಾಗಿ ನೀಡಬಹುದು.

ಹದಿ ಹರೆಯದವರ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಮತ್ತು ಮಾದಕ ವ್ಯಸನಗಳಿಗೆ ಒಳಗಾಗುತ್ತಿರುವುದು ಬಹು ಮುಖ್ಯ ಕಾರಣವಾಗಿದೆ. ಆತ್ಮಹತ್ಯೆ ಒಂದು ಮಾನಸಿಕ ತುರ್ತುಪರಿಸ್ಥಿತಿ ಇದ್ದಂತೆ ಇದಕ್ಕೆ ವಯಸ್ಸು ಜಾತಿ ಧರ್ಮ ಶ್ರೀಮಂತಿಕೆ ಬಡತನ ಎನ್ನುವ ಭೇದಭಾವ ಇಲ್ಲ.

ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿಯ ಒಂದು ದಾಖಲೆಯ ಪ್ರಕಾರ ಕಳೆದ ಒಂದು ದಶಕದ ಅವಧಿಯಲ್ಲಿ 15 ರಿಂದ 19 ವಯಸ್ಸಿನವರಲ್ಲೇ ಹೆಚ್ಚಾಗಿ ಈ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ಅಂದರೆ ಇದರ ಅರ್ಥ ಚೆನ್ನಾಗಿ ಬಾಳಿ, ಬದುಕಿ, ಸಾಧಿಸಬೇಕಾದ ಪ್ರಾಯದಲ್ಲೇ ವ್ಯಕ್ತಿಯೊಬ್ಬ ಆತ್ಮಹತ್ಯೆಯ ಯೋಚನೆ ಮಾಡುತ್ತಾನೆಂದರೆ ಈ ಕುರಿತಾಗಿ ನಮ್ಮ ಸಮಾಜ ಹಾಗೂ ಸರಕಾರಗಳು ಯೋಚಿಸಬೇಕಾದ ಅಗತ್ಯವಿದೆ ಎಂದು ಅನ್ನಿಸುವುದಿಲ್ಲವೇ?

ಜಗತ್ತಿನಲ್ಲಿ ಆತ್ಮಹತ್ಯೆಯಿಂದ ಒಂದು ವರ್ಷಕ್ಕೆ ಅಂದಾಜು ಒಂದು ಮಿಲಿಯನ್ ಸಾವುಗಳು ಸಂಭವಿಸುತ್ತವೆ. ಇದರರ್ಥ ವಿಶ್ವದಾದ್ಯಂತ ಪ್ರತಿ 40 ಸೆಕೆಂಡಿಗೆ ಒಬ್ಬ ಆತ್ಮಹತ್ಯೆಯ ಸಾವಿಗೆ ಒಳಗಾಗುತ್ತಿದ್ದಾರೆ ಎಂದಾಯಿತು. ಹದಿಹರೆಯದವರ ಸಾವಿಗೆ ಆತ್ಮಹತ್ಯೆ ಮೂರನೇ ಪ್ರಮುಖ ಕಾರಣವಾಗಿದೆ.

ಹದಿ ಹರೆಯದವರಲ್ಲಿ ಆತ್ಮಹತ್ಯೆಯ ಅಪಾಯವನ್ನು ಹೆಚ್ಚಿಸುವ ಅಂಶಗಳೆಂದರೆ, ಆತಂಕ, ಖಿನ್ನತೆ ,ನಿದ್ರಾ ಹೀನತೆ, ಮಾದಕ ವ್ಯಸನಗಳ ಸೇವನೆ, ಇಂಟರ್ನೆಟ್ ಗೀಳು, ಕುಟುಂಬ ವಲಯದಲ್ಲಿ ಆತ್ಮಹತ್ಯೆಯ ಹಿನ್ನಲೆ ಇರುವುದು ಇತ್ಯಾದಿ. ಇನ್ನು, ದೈಹಿಕ ಮಾನಸಿಕ ಕಿರುಕುಳ, ಪೋಷಕರ ಮತ್ತು ಕುಟುಂಬ ವರ್ಗದ ಬೆಂಬಲ ಪ್ರೋತ್ಸಾಹದ ಕೊರತೆ ಸಹಿತ ಇನ್ನು ಹಲವಾರು ಕಾರಣಗಳು ವ್ಯಕ್ತಿಯೊಬ್ಬನನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಸಾಧ್ಯತೆಗಳಿರುತ್ತವೆ.

ಇನ್ನೊಂದು ಕುತೂಹಲಕಾರಿ ಮತ್ತು ಅಷ್ಟೇ ಕಳವಳಕಾರಿಯಾದ ಅಂಶವೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಶೇಕಡಾ 99% ಜನರು ತೀವ್ರ ಸ್ವರೂಪದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿರುತ್ತಾರೆ. ನಮ್ಮ ಮನಸ್ಸು ತುಂಬಾ ಸೂಕ್ಷ್ಮವಾದುದು. ಅದಕ್ಕೆ ಸ್ವಲ್ಪ ಘಾಸಿಯಾದರೂ ಅದು ತಡೆದುಕೊಳ್ಳುವುವದಿಲ್ಲ. ದುರ್ಬಲ ಮನಸ್ಸು ಸದಾ ಸಾವಿನ ಕುರಿತಾಗಿಯೇ ಯೋಚಿಸುತ್ತಿರುತ್ತದೆ.

ಇನ್ನು, ಸಾಯುವುದಕ್ಕೆ ಇಂತದ್ದೇ ಕಾರಣ ಬೇಕಿಲ್ಲ. ಎಷ್ಟೋ ಸಲ ಜೀವನದಲ್ಲಿ ಘಟಿಸುವ ಅದೆಷ್ಟೋ ಕ್ಷುಲ್ಲಕ ವಿಚಾರ ಮತ್ತು ಘಟನೆಗಳೇ ವ್ಯಕ್ತಿಯ ಸಾವಿಗೆ ಕಾರಣವಾಗಿರುವುದನ್ನು ನಾವು ಗಮನಿಸಬಹದಾಗಿರುತ್ತದೆ. ಆತ್ಮಹತ್ಯೆಯ ಪ್ರಮಾಣ ಹುಡುಗಿಯರು ಮತ್ತು ಹುಡುಗರ ನಡುವೆ ವಿಭಿನ್ನವಾಗಿರುತ್ತದೆ. ಹುಡುಗಿಯರು ಹುಡುಗರಿಗಿಂತ ಎರಡು ಪಟ್ಟು ಜಾಸ್ತಿ ಆಲೋಚಿಸುತ್ತಾರೆ ಮತ್ತು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ.

ಆತ್ಮಹತ್ಯೆಯನ್ನು ಮಹಾಪಾಪ, ನಿಷಿದ್ಧ ಎಂದು ಎಲ್ಲಾ ಧರ್ಮದವರೂ, ಮತದವರು ಹೇಳಿದ್ದಾರೆ. ಇನ್ನೊಂದೆಡೆ ಆತ್ಮಹತ್ಯೆ ಕಾನೂನು ಪ್ರಕಾರವೂ ಅಪರಾಧವೇ ಸರಿ.

ಹಾಗಾದರೆ, ಈ ಹದಿ ಹರೆಯದವರಲ್ಲಿ ನಡೆಯುವ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯವೆ? ಈ ನಿಟ್ಟಿನಲ್ಲಿ ಹಲವಾರು ಅಧ್ಯಯನಗಳು ನಡೆಯುತ್ತಿವೆ. ವ್ಯಕ್ತಿಯೊಬ್ಬನ ಮನಸ್ಥಿತಿಯಲ್ಲಿ ಕಾಣಿಸಿಕೊಳ್ಳಬಹುದಾದ ಪ್ರಾಥಮಿಕ ಹಂತದ ಬದಲಾವಣೆಗಳನ್ನು ಕುಟುಂಬದವರು, ಪೋಷಕರು ಗಮನಿಸಿ ಅವರಿಗೆ ಸೂಕ್ತ ತಿಳುವಳಿಕೆ ನೀಡುವುದು ಖಿನ್ನತೆಗೆ ಒಂದು ಮಟ್ಟಿನ ಪರಿಹಾರ ಎನ್ನಬಹುದು.

ಇನ್ನು, ಮುಂದುವರೆದ ಹಂತದಲ್ಲಿ, ಮನೋವೈದ್ಯರ ಭೇಟಿ, ಕೌನ್ಸಲಿಂಗ್ ಕೊಡಿಸುವದು, ಮುಂತಾದ ಕ್ರಮಗಳ ಮೂಲಕ ವ್ಯಕ್ತಿಯಲ್ಲಿನ ಆತ್ಮಹತ್ಯಾ ಯೋಚನೆಗಳನ್ನು ದೂರೀಕರಿಸಲು ಸಾಧ್ಯವಿದೆ. ಇಷ್ಟು ಮಾತ್ರವಲ್ಲದೇ, ಮಾನಸಿಕ ಖಿನ್ನತೆಗೆ ಒಳಗಾದವರ ಸಮೀಪವರ್ತಿಗಳು,  ಕುಟುಂಬದವರು ಮತ್ತು ಸಂಬಂಧಪಟ್ಟವರು ಈ ಸಮಸ್ಯೆಯನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ತಿಳಿ ಹೇಳುವದರ ಮೂಲಕ ಅವರ ಮನಸಿನಲ್ಲಿ ಬದಲಾವಣೆ ತರಬಹುದು.

ಯೋಗ, ಧ್ಯಾನ ಪ್ರಾಣಾಯಾಮಗಳ ಮೂಲಕ ಮನಸ್ಸನ್ನು ಕ್ರಿಯಾಶೀಲವಾಗಿ ಇರಿಸಿಕೊಂಡು ದೈನಂದಿನ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಜನರೊಂದಿಗೆ ಸಾಮಾಜಿಕವಾಗಿ ಬೆರೆಯುವದು, ಉತ್ತಮರೊಂದಿಗೆ ಒಡನಾಟ, ಹಿರಿಯರ  ಸಲಹೆ ಸೂಚನೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪಾಲಿಸುವದು, ಇತ್ಯಾದಿ ಕ್ರಮಗಳನ್ನು ಅಳವಡಿಸಿಕೊಂಡರೆ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಹಾರ ಸಿಗುವುದು.

ಇರುವುದೊಂದೆ ಜೀವನ ಕ್ಷುಲ್ಲಕ ಕಾರಣಗಳಿಗಾಗಿ ಜೀವ ತೆಗೆದುಕೊಳ್ಳುವಂತಹ ದುಡುಕಿನ ನಿರ್ಧಾರಕ್ಕೆ ಯುವಜನತೆ ಕೈಹಾಕಬಾರದು ಯುವಜನತೆಯು ನಮ್ಮ ದೇಶದ ಅಮೂಲ್ಯ ಸಂಪತ್ತು. ಹಾಗಾಗಿ ಇಂತಹ ನಿರ್ಧಾರ ತೆಗೆದುಕೊಂಡರೆ ನಿಮ್ಮ ಕುಟುಂಬಕ್ಕೆ ಮತ್ತು ದೇಶಕ್ಕೆ ಮೋಸ ಮಾಡಿದಂತೆ. ದುಡುಕಿನ ಕೈಯಲ್ಲಿ ಬುದ್ದಿಯನ್ನು ಕೊಟ್ಟು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಬೇಡಿ.