ಸುರತ್ಕಲ್ ಅಕ್ರಮ ಟೋಲ್ ಗೇಟ್ ; ಕಾಂಗ್ರೆಸಿಗರ ಮೌನ ಯಾಕೆ ? ಟೋಲ್ ವಸೂಲಿಯಲ್ಲಿ ಇವರಿಗೆಷ್ಟು ಪಾಲು ಇದೆ? ರಾಜಕೀಯ ನಾಯಕರ ನಿರ್ಲಕ್ಷ್ಯ ವಿರುದ್ಧ ಪರ್ಯಾಯಕ್ಕೆ ಕಾದಿದ್ದಾರೆ ಜನ!

13-03-22 03:50 pm       Mangalore Correspondent   ನ್ಯೂಸ್ View

ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧ ಮತ್ತೆ ಹೋರಾಟ ಆರಂಭಗೊಂಡಿದೆ. ಒಂದು ಕಡೆಯಿಂದ ಹೈವೇ ಅಧಿಕಾರಿಗಳ ಅಧಿಕೃತ ಎಂಬ ಬೋರ್ಡು, ಮತ್ತೊಂದು ಕಡೆ ಸಂಸದ ನಳಿನ್ ಕುಮಾರ್ ಟೋಲ್ ಗೇಟ್ ತೆರವುಗೊಳಿಸುವ ಭರವಸೆ.

ಮಂಗಳೂರು, ಮಾ.13: ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧ ಮತ್ತೆ ಹೋರಾಟ ಆರಂಭಗೊಂಡಿದೆ. ಒಂದು ಕಡೆಯಿಂದ ಹೈವೇ ಅಧಿಕಾರಿಗಳ ಅಧಿಕೃತ ಎಂಬ ಬೋರ್ಡು, ಮತ್ತೊಂದು ಕಡೆ ಸಂಸದ ನಳಿನ್ ಕುಮಾರ್ ಟೋಲ್ ಗೇಟ್ ತೆರವುಗೊಳಿಸುವ ಭರವಸೆ. ಇದರ ನಡುವೆಯೇ ಟೋಲ್ ಗೇಟ್ ವಿರೋಧಿ ಸಮಿತಿಯ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 60ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬೆಂಬಲ ಘೋಷಿಸಿವೆ ಎನ್ನುವ ಮಾಹಿತಿಗಳಿವೆ. ಮಾರ್ಚ್ 15ರಂದು ಹೆಜಮಾಡಿಯಿಂದ ಸುರತ್ಕಲ್ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಭಾರೀ ಜನರು ಸೇರುವ ನಿರೀಕ್ಷೆಯಿದೆ. ಆದರೆ, ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ, ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸಿಗರು ಈ ಬಗ್ಗೆ ಮೌನ ವಹಿಸಿರುವುದು ಯಾಕೆ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.

ಎನ್ಐಟಿಕೆ ಟೋಲ್ ಗೇಟ್ ವಿರುದ್ಧ ಹೋರಾಟ ನಡೆಯುತ್ತಿರುವುದು ಇದು ಮೊದಲೇನಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ಹಲವು ಬಾರಿ ಹೋರಾಟ, ಪ್ರತಿಭಟನೆ, ಧರಣಿಗಳು ನಡೆದಿವೆ. ಕೋರ್ಟ್ ಹೋರಾಟವೂ ನಡೆದಿದೆ. ಆದರೆ, ಹೈವೇ ಅಧಿಕಾರಿಗಳು ಸಂಸದ ನಳಿನ್ ಕುಮಾರ್ ಮತ್ತು ಶಾಸಕರ ಬೆಂಬಲದಿಂದ ತಾವಾಡಿದ್ದೇ ಆಟ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಇದರ ನಡುವೆ, ಸಂಸದ ನಳಿನ್ ಮಾತ್ರ ಟೋಲ್ ಗೇಟ್ ನಿಲ್ಲಿಸುವ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದ್ದೇನೆ ಎನ್ನುವುದನ್ನೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿ ಸಂಸದ, ಶಾಸಕರ ಕಡೆಯಿಂದ ಇಷ್ಟೆಲ್ಲ ಲೋಪಗಳಿದ್ದರೂ, ಕಾಂಗ್ರೆಸಿಗರು ಮಾತ್ರ ಇದ್ಯಾವುದೂ ತಮಗೆ ಸಂಬಂಧ ಪಟ್ಟಿದ್ದಲ್ಲ ಎಂದು ಮೌನ ವಹಿಸಿದ್ದಾರೆ.

Mangaluru: BJP slaps case against MLA U T Khader over 'provocative speech'  - Daijiworld.com

ಪುತ್ರನಿಗೆ ಸೋಂಕು: ಮಾಜಿ ಶಾಸಕ ಮೊಯ್ದೀನ್‌ ಬಾವಾ ಮನೆ ಸೀಲ್ಡೌನ್! | Former MLA  Mohiuddin bava house sealdown as his son tests coronavirs positive

ಮಂಗಳೂರಿನಲ್ಲಿ ‌ಸಾರ್ವಜನಿಕರಿಗೆ ಕೋವಿಡ್ ಲಸಿಕೆ ಸಿಗುತ್ತಿಲ್ಲ : ಐವಾನ್ ಡಿಸೋಜ ಆರೋಪ. |  SahilOnline

ರಾಷ್ಟ್ರ ಮಟ್ಟದಲ್ಲಿ ಮೂರಾಬಟ್ಟೆಯಾಗುತ್ತಿರುವ ಕಾಂಗ್ರೆಸ್ ಸ್ಥಿತಿಯನ್ನು ನೋಡಿಕೊಂಡು ಕರಾವಳಿಯ ನಾಯಕರು ಕೂಡ ಜಾಣ ಮೌನ ವಹಿಸಿದ್ದನ್ನು ನೋಡಿದರೆ, ಟೋಲ್ ಗೇಟ್ ವಸೂಲಿಯಲ್ಲಿ ಇವರಿಗೂ ಪಾಲು ಇದೆಯಾ ಎನ್ನುವ ಅನುಮಾನ ಬರುತ್ತದೆ. ಜ್ವಲಂತ ಸಮಸ್ಯೆ ಇದ್ದರೂ, ಕಾಂಗ್ರೆಸ್ ನಾಯಕರು ಆ ಬಗ್ಗೆ ಸೊಲ್ಲೆತ್ತುವುದಿಲ್ಲ. ಸಿಕ್ಕಿದ್ದಕ್ಕೆಲ್ಲ ಸುದ್ದಿಗೋಷ್ಠಿ ಕರೆಯುವ ಮಾಜಿ ಸಚಿವ ಯು.ಟಿ ಖಾದರ್, ಐವಾನ್ ಡಿಸೋಜ ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ. ಸುರತ್ಕಲ್ ಭಾಗವನ್ನು ಕಳೆದ ಬಾರಿ ಪ್ರತಿನಿಧಿಸಿದ್ದ ಕಾಂಗ್ರೆಸಿನ ಮೊಯ್ದೀನ್ ಬಾವಾ ಕೂಡ ಮೌನ ವ್ರತದಲ್ಲಿದ್ದಾರೆ. ಕೇವಲ 40 ಕಿಮೀ ದೂರದ ತಲಪಾಡಿಯಿಂದ ಪಡುಬಿದ್ರಿಗೆ ತೆರಳಬೇಕಿದ್ದರೆ, ಮೂರು ಕಡೆ ಟೋಲ್ ಕಟ್ಟಬೇಕಾದ ಜನಸಾಮಾನ್ಯರ ಕಷ್ಟಕ್ಕೆ ಕಿವಿಯಾಗಲು ಕಾಂಗ್ರೆಸಿಗರಿಗೆ ಆಗೋದಿಲ್ಲ ಎಂದರೆ ಇವರಿಗೆ ಮತ ಬೀಳೋದು ಹೇಗೆ ?

Punjab polls: Arvind Kejriwal promises free education, coaching for IAS,  IIT for Scheduled Caste | India News | Zee News

ರಾಜಧಾನಿ ದೆಹಲಿಯಲ್ಲಿ ಬಿಜೆಪಿ, ಕಾಂಗ್ರೆಸಿನ ಭ್ರಷ್ಟಾಚಾರವನ್ನೇ ಮುಂದಿಟ್ಟು ಆಮ್ ಆದ್ಮಿ ಹೆಸರಲ್ಲಿ ಹೊಸ ಪಕ್ಷವೇ ಉದಯವಾಗಿದೆ. ಅಲ್ಲಿ ಕೋಟಿ ತೂಗುವ ಮಂದಿಯನ್ನು ಮಾತ್ರ ತೂಗಿಕೊಂಡು ಹೋಗುತ್ತಿದ್ದ ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನಸಾಮಾನ್ಯರನ್ನು ಪ್ರತಿನಿಧಿಸಲು ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಮುಂದಾಗಿತ್ತು. ದಿನದ ಕೂಲಿಯಿಂದ ಜೀವನ ದೂಡುವ, ದಿನದ ತುತ್ತನ್ನು ಪಡೆಯುವುದಕ್ಕೇ ತೊಳಲಾಡುವ ಜನಸಾಮಾನ್ಯರಿಗೆ ನೀರು ಫ್ರೀ, ಕರೆಂಟ್ ಫ್ರೀ ಎಂದು ಹೇಳಿ ಆಮ್ ಆದ್ಮಿಗಳು ಅಧಿಕಾರ ಹಿಡಿದಿದ್ದಾರೆ. ಮೊನ್ನೆ ಪಂಜಾಬಲ್ಲೂ ಅಧಿಕಾರ ಹಿಡಿಯುತ್ತಿದ್ದಂತೆ, ಇಡೀ ದೇಶಕ್ಕೆ ಕಾಂಗ್ರೆಸಿಗೆ ಪರ್ಯಾಯವಾಗಿ ಆಮ್ ಆದ್ಮಿ ಬರಬೇಕು ಎನ್ನುವ ಕೂಗು ಜನರಿಂದ ಕೇಳಿಬರುತ್ತಿದೆ. ಇಷ್ಟೆಲ್ಲ ಬೆಳವಣಿಗೆ ಆಗುತ್ತಿದ್ದರೂ, ಕಾಂಗ್ರೆಸ್ ನಾಯಕರು ನಿದ್ದೆಗೆ ಶರಣಾಗಿದ್ದಾರೆ. ಕನಿಷ್ಠ ಜ್ವಲಂತ ಸಮಸ್ಯೆಗಳ ವಿಚಾರದಲ್ಲೂ ಜನಸಾಮಾನ್ಯರ ಪರ ನಿಲ್ಲಲಾಗದ ಕಾಂಗ್ರೆಸಿಗರು ಚುನಾವಣೆ ಬಂದಾಗ ವೆಂಕಟರಮಣ ಎನ್ನುತ್ತಾ, ಬಿಜೆಪಿ ಬಗ್ಗೆ ಟೀಕಿಸುತ್ತಾ ಬಂದರೆ ಮತಗಳು ಹುಟ್ಟುವುದೇ ಎನ್ನುವ ಪ್ರಶ್ನೆಯನ್ನು ಕೇಳಬೇಕಾಗಿದೆ.

Home

ಸುರತ್ಕಲ್ ನಿಂದ ಬಿ.ಸಿ.ರೋಡ್ ನಡುವೆ ಹೆದ್ದಾರಿ ಕಾಮಗಾರಿ ನಿರ್ವಹಿಸಿದ ಕಂಪನಿ ಬೇರೆ ಇರಬಹುದು. ಇರ್ಕಾನ್ ಕಂಪನಿ ಹದಿನೈದು ವರ್ಷಗಳ ಹಿಂದೆಯೇ ಕಾಮಗಾರಿ ಮುಗಿಸಿದ್ದು, ಆನಂತರ ಟೋಲ್ ಸಂಗ್ರಹಕ್ಕೆ ಇಳಿದಿತ್ತು. ಈ ರಸ್ತೆಯನ್ನು ಮಂಗಳೂರು ಬಂದರು ಅಭಿವೃದ್ಧಿ ರಸ್ತೆ ಎಂಬ ಹೆಸರಲ್ಲಿ ನಡೆಸಲಾಗಿತ್ತು. ಆದರೆ, ದೇಶದಲ್ಲಿ ಕಪ್ಪು ಪಟ್ಟಿಗೆ ಒಳಗಾಗಿರುವ ಗುತ್ತಿಗೆ ಸಂಸ್ಥೆ ಇರ್ಕಾನ್ ಕಂಪನಿಯ ಕೆಲಸಗಳೇ ಈ ಭಾಗದಲ್ಲಿ ಅವೈಜ್ಞಾನಿಕ ಆಗಿದ್ದವು. ಸುರತ್ಕಲ್, ಕುಳೂರು, ಕುಲಶೇಖರ, ಬಿ.ಸಿ.ರೋಡಿನಲ್ಲಿ ಏಕಮುಖವಾಗಿ ಅವೈಜ್ಞಾನಿಕ ಮೇಲ್ಸೇತುವೆಗಳನ್ನು ರಚಿಸಿದ್ದು, ಅಲ್ಲಿ ಆಗಿರುವ ಟ್ರಾಫಿಕ್ ಅವ್ಯವಸ್ಥೆಗಳಿಗೆ ಕಂಪನಿಯನ್ನೇ ಹೊಣೆ ಮಾಡಬೇಕಿತ್ತು. ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ಈ ರಸ್ತೆಯ ಕೆಲಸ ಆಗಿದ್ದರೂ, ಅದನ್ನು ಪ್ರಶ್ನೆ ಮಾಡದ ಜನನಾಯಕರು ಕೂಡ ಈ ಲೋಪಕ್ಕೆ ಕಾರಣ. ಅದನ್ನು ಸರಿಮಾಡದೆ ಈಗ ಹದಿನೈದು ವರ್ಷ ಕಳೆದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಈವರೆಗೆ 250 ಕೋಟಿ ಕಲೆಕ್ಷನ್ ಆಗಿದೆ, ಇನ್ನೂ ನೂರು ಕೋಟಿ ಆಗಬೇಕು ಎನ್ನುವ ಹೈವೇ ಅಧಿಕಾರಿಗಳಿಗೆ (ದಿನಕ್ಕೆ 15 ಲಕ್ಷ ಸಂಗ್ರಹ) ಉತ್ತರ ನೀಡಬೇಕಾದ ಸಂಸದರಿಗೆ ಸಮಸ್ಯೆ ಆಲಿಸಲು ಪುರುಸೊತ್ತಿಲ್ಲ.  

File:KPT Junction, Kadri, Mangalore.jpg - Wikimedia Commons

ಈಗ ಇದೇ ರಸ್ತೆಯ ಕೆಪಿಟಿ ವೃತ್ತದಲ್ಲಿ ಮತ್ತೊಂದು ಫ್ಲೈ ಓವರ್ ನಿರ್ಮಾಣಕ್ಕೆ ಬಂದರು ರಸ್ತೆ ಅಭಿವೃದ್ಧಿ ಯೋಜನೆಯಡಿ ಡಿಪಿಆರ್ ತಯಾರಿಸಿ, ಟೆಂಡರ್ ಆಗಿದೆ. ಇದಲ್ಲದೆ, ಕುಳೂರಿನಲ್ಲಿ ಸೇತುವೆಯ ಕೆಲಸವೂ ನಡೆಯುತ್ತಿದೆ. ಇನ್ನೆರಡು ವರ್ಷದಲ್ಲಿ ಆ ಕಾಮಗಾರಿಯೂ ಪೂರ್ತಿಗೊಂಡರೆ, ಅದರ ವೆಚ್ಚವನ್ನೂ ಜನರಿಂದ ಭರಿಸಲು ಪ್ರತ್ಯೇಕ ಟೋಲ್ ವಸೂಲಿ ಆರಂಭಿಸುತ್ತಾರೆ. ಅದೇ ಕಾರಣಕ್ಕೆ ಸುರತ್ಕಲ್ ಟೋಲ್ ಗೇಟ್ ಅಧಿಕೃತ ಎನ್ನುತ್ತಾ 2035ರ ವರೆಗೂ ಟೋಲ್ ತೆಗೆಯಲು ಪರವಾನಗಿ ಹೊಂದಿದ್ದೇವೆ ಎನ್ನುವಂತೆ ಹೈವೇ ಅಧಿಕಾರಿಗಳು ಬೋರ್ಡ್ ಹಾಕಿದ್ದಾರೆ. ಆದರೆ, 2015ರಲ್ಲಿ ಎನ್ಐಟಿಕೆ ಟೋಲ್ ಗೇಟ್ ಆರಂಭಿಸುವಾಗಲೇ ಇದನ್ನು ತಾತ್ಕಾಲಿಕ ಎನ್ನುವ ನೆಲೆಯಲ್ಲಿ ಸಣ್ಣ ಮಟ್ಟಿನಲ್ಲಿ ಆರಂಭಿಸಲಾಗಿತ್ತು. ಹೆಜಮಾಡಿ ಟೋಲ್ ಶುರುವಾದ ಬಳಿಕ ಇದನ್ನು ತೆರವು ಮಾಡುವ ಭರವಸೆಯನ್ನು ಶಾಸಕರು, ಸಂಸದರು ಮತ್ತು ಹೈವೇ ಅಧಿಕಾರಿಗಳು ಕೂಡ ನೀಡಿದ್ದರು.

2018ರ ವೇಳೆಗೆ ಹೆಜಮಾಡಿ ಟೋಲ್ ಗೇಟ್ ಆರಂಭಗೊಂಡರೂ, ಸುರತ್ಕಲ್ ನಲ್ಲಿ ಟೋಲ್ ಗೇಟ್ ತೆರವುಗೊಳಿಸದೇ ಅಕ್ರಮವಾಗಿ ಮುಂದುವರಿಸಲಾಗಿತ್ತು. ಆನಂತರ, ಸಂಸದ ನಳಿನ್ ಕುಮಾರ್ ಟೋಲ್ ರದ್ದು ಪಡಿಸುತ್ತೇನೆ ಎನ್ನುತ್ತಲೇ ಮತ್ತೆ ಮತ್ತೆ ಅದರ ಪರವಾನಗಿಯನ್ನು ನವೀಕರಣ ಮಾಡಿಸಿದ್ದಾರೆ. ಅಧಿಕಾರಿಗಳು ಕಾನೂನು ನೆಪ ಮುಂದಿಟ್ಟು ಜನರನ್ನು ಮೋಸ ಮಾಡುತ್ತಿದ್ದಾರೆ. ಕೇಂದ್ರ ಸರಕಾರದ ನಿಯಮದ ಪ್ರಕಾರ, 60 ಕಿಮೀಗೆ ಒಂದು ಟೋಲ್ ಎಂಬುದಾಗಿದ್ದರೆ, ಮಂಗಳೂರಿನಲ್ಲಿ ಮಾತ್ರ 60 ಕಿಮೀನಲ್ಲಿ ನಾಲ್ಕು ಟೋಲ್ ಗೇಟ್ ಇದೆ. ಇಂಥ ಅಸಂಬದ್ಧಗಳಿಗೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಜನರಿಂದ ಗೆದ್ದು ಹೋದವರು ಉತ್ತರ ನೀಡುವ ಬದಲು ಕುಂಟು ನೆಪ ಹೇಳುತ್ತಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಲು ಸಾಧ್ಯವಾಗದವರು ಸಂಸದ ಸ್ಥಾನಕ್ಕೇರಿದ್ದೇ ಇಂಥ ದುಸ್ಥಿತಿಗೆ ಕಾರಣ ಎನ್ನುವುದನ್ನು ಜನರು ಹೇಳುತ್ತಿದ್ದಾರೆ. ಕಾಂಗ್ರೆಸಿಗರು ಮೌನ ವ್ರತದಲ್ಲಿರುವುದು ನೋಡಿದರೆ, ಇಲ್ಲಿಯೂ ಪರ್ಯಾಯ ಆಗಲೇಬೇಕು ಎಂಬ ಭಾವನೆ ಜನರಲ್ಲಿ ಮಡುಗಟ್ಟುತ್ತಿದೆ.

Mangalore Surathkal toll illegal, why congress leaders are quite amid protest held by various social organisations a News View article by team Headline Karnataka. Activist Asif Apthbandava has urged people to participate in Toll Virodhi Horata Samiti’s mega foot march from Hejmadi to Surathkal on March 15.