ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ

09-06-21 11:57 am       Shruthi, Filmbeat   ಸಿನಿಮಾ

ದಕ್ಷ ಐಎಎಸ್ ಅಧಿಕಾರಿ ಎನಿಸಿಕೊಂಡಿರುವ ರೋಹಿಣಿ ಸಿಂಧೂರಿ ಅವರ ಬಯೋಪಿಕ್ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ.

ದಕ್ಷ ಐಎಎಸ್ ಅಧಿಕಾರಿ ಎನಿಸಿಕೊಂಡಿರುವ ರೋಹಿಣಿ ಸಿಂಧೂರಿ ಅವರ ಬಯೋಪಿಕ್ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ರೋಹಿಣಿ ಅವರ ಸಾಧನೆಗಳನ್ನು ಆಧರಿಸಿ ಸಿನಿಮಾ ಮಾಡಲು ತಯಾರಿ ನಡೆದಿದ್ದು, ನಾಲ್ವಡಿ ಕೃಷ್ಣರಾಜ್ ಒಡೆಯರ್ ಫಿಲಮ್ಸ್ ಸಂಸ್ಥೆಯು ಚಿತ್ರ ನಿರ್ಮಿಸಲು ಮುಂದಾಗಿದೆ.

ಅಂದಹಾಗೆ ರೋಹಿಣಿ ಸಿಂಧೂರಿ ಪಾತ್ರದಲ್ಲಿ ನಟಿ, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಚಿತ್ರಕ್ಕೆ ಸಾಹಿತಿ, ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ನಿರ್ದೇಶನ ಮಾಡುತ್ತಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾದ ರೋಹಿಣಿ ಸಿಂಧೂರಿ ಕರ್ತವ್ಯ ನಿರ್ವಹಿಸಿದ್ದು ಕರ್ನಾಟಕದಲ್ಲಿ. ರೋಹಿಣಿ ಹುಟ್ಟಿ ಬೆಳೆದ ಸ್ಥಳ ಹಾಗೂ ಕೆಲಸ ಮಾಡಿದ ಮಂಡ್ಯ, ಮೈಸೂರು, ಹಾಸನಗಳಲ್ಲಿ ಚಿತ್ರೀಕರಣ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಲಾಕ್ ಡೌನ್ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ಅಂದಹಾಗೆ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಶಿಲ್ಪನಾಗ್ ನಡುವಿನ ಜಟಾಪಟಿಗೂ ಈ ಸಿನಿಮಾಗೂ ಸಂಬಂಧವಿಲ್ಲವಂತೆ. ಇದು ವರ್ಷದಿಂದ ನಡೆಯುತ್ತಿರುವ ಯೋಜನೆಯಾಗಿದ್ದು, ರೋಹಿಣಿ ಅವರ ಬಾಲ್ಯ ಮತ್ತು ಸಾಧನೆ ಬಗ್ಗೆ ಇರಲಿದೆಯಂತೆ. ಬಯೋಪಿಕ್ ಮಾಡಲು ರೋಹಿಣಿ ಕೂಡ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ರೋಹಿಣಿ ಅವರು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ಜಿಲ್ಲೆಯನ್ನು ರಾಜ್ಯದಲ್ಲೇ ಮೊದಲ ಬಯಲು ಶೌಚಮುಕ್ತ ಜಿಲ್ಲೆಯಾಗಿ ಮಾಡಿದ್ದರು. ರಾಷ್ಟ್ರದಲ್ಲೇ 3ನೇ ಜಿಲ್ಲೆ ಎನ್ನುವ ಖ್ಯಾತಿಗಳಿಸಿತ್ತು. ಪ್ರಧಾನಿಯಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಒಂದು ವರ್ಷದಲ್ಲಿ 1.30 ಲಕ್ಷ ಶೌಚಾಲಯ ನಿರ್ಮಿಸಿದ ಕೀರ್ತಿಗೆ ರೋಹಿಣಿ ಪಾತ್ರರಾಗಿದ್ದರು. ಅಲ್ಲದೆ ಬಾಲ್ಯ ವಿವಾಹ ನಿರ್ಮೂಲನೆ, ಹೆಣ್ಣು ಭ್ರೂಣಹತ್ಯೆ ತಡೆಗೆ ಪ್ರಯತ್ನಿಸಿದ್ದರು. ಈ ಎಲ್ಲಾ ಅಂಶಗಳನ್ನು ಆಧರಿಸಿ ಸಿನಿಮಾ ಮಾಡಲು ನಿರ್ದೇಶಕ ಕೃಷ್ಣ ಸಿದ್ಧತೆ ನಡೆಸಿದ್ದಾರೆ.

ಇನ್ನು ರೋಹಿಣಿ ಸಿಂಧೂರಿ ಪಾತ್ರದಲ್ಲಿ ನಟಿಸಲು ನಟಿ ಅಕ್ಷತಾ ಪಾಂಡವಪುರ ಕೂಡ ಉತ್ಸುಕರಾಗಿದ್ದಾರಂತೆ. ಭಾರಿ ಕುತೂಹಲ ಮೂಡಿಸಿರುವ ಭಾರತ ಸಿಂಧೂರಿ ಸಿನಿಮಾ ಹೇಗೆ ಮೂಡಿಬರಲಿದೆ ಎಂದು ಕಾದು ನೋಡಬೇಕು.

(Kannada Copy of Filmbeat Kannada)