ಶುಗರ್ ಇರುವವರು ಬ್ರೇಕ್‌ಫಾಸ್ಟ್‌ಗೆ ಏನೆಲ್ಲಾ ತಿನ್ನಬೇಕು ಗೊತ್ತಾ?

03-03-22 09:48 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಒಮ್ಮೆ ಕಾಣಿಸಿಕೊಂಡರೆ, ಕೊನೆಗೆ ಜೀವನ ಪರ್ಯಾಂತ ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಆದರೆ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಿದರೆ...

ಸಕ್ಕರೆಕಾಯಿಲೆ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಎಷ್ಟು ಜಾಗರೂಕತೆ ವಹಿಸುತ್ತಾರೋ ಅಷ್ಟು ಒಳ್ಳೆಯದು. ಈ ಕಾಯಿಲೆಯ ವಿಷ್ಯದಲ್ಲಿ ಒಂದು ಮಾತೇ ಇದೆ, ಮಧುಮೇಹ ಇರುವವರು ಸ್ವಲ್ಪ ತಿಂದರೆ ಕಮ್ಮಿ ಆಗುತ್ತದೆ, ಜಾಸ್ತಿ ತಿಂದರೆ ಹೆಚ್ಚಾಗುತ್ತದೆ!

ಪಾಪ ಇವರ ಪರಿಸ್ಥಿತಿ ಹೇಗಿರುತ್ತದೆ ಎಂದರೆ, ಕೆಲವೊಂದು ಆಹಾರಗಳನ್ನು, ಹಣ್ಣು-ತರಕಾರಿಗಳನ್ನು ತಮಗೆ ಇಷ್ಟವಿಲ್ಲದೇ ಇದ್ದರೂ ಕೂಡ ಸೇವನೆ ಮಾಡಬೇಕಾಗುತ್ತದೆ! ಇನ್ನು ಕೆಲವೊಂದು ಆಹಾರಗಳನ್ನು ಮನಸ್ಸು ಬೇಕೆಂದರೂ ಕೂಡ ತಿನ್ನುವ ಹಾಗಿಲ್ಲ! ಏಕೆಂದರೆ ಇದರಿಂದಾಗಿ ಇವರ ರಕ್ತದಲ್ಲಿ ಸಕ್ಕರೆ ಅಂಶದ ಏರುಪೇರಾಗುವ ಸಂಭವ ಜಾಸ್ತಿ ಇರುತ್ತದೆಯಂತೆ...
ಹೀಗಾಗಿ ಮಧುಮೇಹ ಸಮಸ್ಯೆ ಇರುವವರು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ವಿಶೇಷವಾಗಿ ಬೆಳಗಿನ ಬ್ರೇಕ್ ಫಾಸ್ಟ್ ಸಮಯದಲ್ಲಿ ಒಳ್ಳೆಯ ಉಪಹಾರವನ್ನು ಸೇವನೆ ಮಾಡುವುದರೊಂದಿಗೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳ ಬಹುದು.

ನಾರಿನಾಂಶ ಹೆಚ್ಚಿರುವ ಆಹಾರಗಳು

  • ಹೆಚ್ಚಾಗಿ ನಾರಿನಾಂಶ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಉತ್ತಮ. ಆದರೆ ನಾವು ದಿನನಿತ್ಯ ಸೇವಿಸುವ ಎಲ್ಲಾ ಆಹಾರ ಪದಾರ್ಥಗಳಲ್ಲಿ ನಾರಿನಾಂಶ ಕಂಡು ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಕೆಲವೊಂದು ಆಹಾರ ಪದಾರ್ಥಗಳಲ್ಲಿ ಮಾತ್ರ ಯಥೇಚ್ಛವಾಗಿ ನಾರಿನಾಂಶದ ಪ್ರಮಾಣಗಳು ಕಂಡು ಬರುತ್ತದೆ. ಹೀಗಾಗಿ ಇಂತಹ ಕೆಲವೊಂದು ಆಹಾರ ಪದಾರ್ಥಗಳನ್ನು ಮಿತವಾಗಿ ಸೇವನೆ ಮಾಡಬೇಕಾಗುತ್ತದೆ. ಇದರಿಂದ ಜೀರ್ಣಶಕ್ತಿ ಕೂಡ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
  • ಇನ್ನು ಸಕ್ಕರೆ ಅಂಶದ ವಿಚಾರಕ್ಕೆ ಬರುವುದಾದರೆ, ಈಗಾಗಲೇ ತಮ್ಮ ಮೈಯಲ್ಲಿ ಸಾಕಷ್ಟು ಪ್ರಮಾಣದ ಸಿಹಿ ಅಂಶ ಇರುತ್ತದೆ. ಹಾಗಾಗಿ ನಾವು ದಿನನಿತ್ಯ ಸೇವನೆ ಮಾಡುವ ಆಹಾರ ಪದಾರ್ಥಗಳು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ನೈಸರ್ಗಿಕ ಸಕ್ಕರೆ ಅಂಶದ ಪ್ರಮಾಣವನ್ನು ಹೊಂದಿರಬೇಕು. ಇದಕ್ಕೆ ಒಳ್ಳೆಯ ಉದಾಹರಣೆಗಳು ಎಂದರೆ ಸಿರಿಧಾನ್ಯಗಳು.
  • ಹೌದು ಮಧುಮೇಹವನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬೇಕು ಎಂದರೆ, ಸಿರಿಧಾನ್ಯಗಳನ್ನು ಬಳಸಿ ಮಾಡಿದ ಕಿಚಡಿ, ಸಿರಿಧಾನ್ಯಗಳ ಪಾನೀಯ ಇತ್ಯಾದಿಗಳನ್ನು ಪ್ರತಿದಿನ ಉಪಹಾರದ ಸಮಯದಲ್ಲಿ ಸೇವನೆ ಮಾಡುವ ಅಭ್ಯಾಸವನ್ನು ಮಧುಮೇಹಿಗಳು ಇಟ್ಟುಕೊಳ್ಳಬೇಕು.

ಒಳ್ಳೆಯ ಗುಣಮಟ್ಟದ ಬ್ರೆಡ್


ಬೆಳಗ್ಗಿನ ಬ್ರೇಕ್‌ಫಾಸ್ಟ್‌ನ್ನು ಹಲವರು ತಪ್ಪಿಸುವ ಅಭ್ಯಾಸ ಹೊಂದಿರುತ್ತಾರೆ. ಇದಕ್ಕೆ ಕಾರಣ ಕೆಲಸಕ್ಕೆ ಹೊರಡುವ ಧಾವಂತದಲ್ಲಿ ಹೊಟ್ಟೆ ತುಂಬಾ ತಿನ್ನುವಷ್ಟು ಕೂಡ ಸಮಯ ಇರುವುದಿಲ್ಲ. ಆದರೆ ಕೆಲವರು ಫಟಾಫಟ್ ಎಂದು ಬ್ರೆಡ್ ಜಾಮ್ ಇಲ್ಲಾಂದರೆ ಬ್ರೆಡ್ ಬಟರ್ ರೆಡಿ ಮಾಡಿ ತಿಂದು ಹೋಗುತ್ತಾರೆ! ಇದರಿಂದ ಅವರ ಸಮಯ ಕೂಡ ಉಳಿಯುತ್ತೆ, ಹೊಟ್ಟೆ ಕೂಡ ತುಂಬುತ್ತದೆ!
ಮಧುಮೇಹ ರೋಗಿಗಳು ಕೂಡ ಇಂತಹ ಅಭ್ಯಾಸವನ್ನು ಅನುಸರಿಸುವುದು ಒಳ್ಳೆಯದು. ಆದರೆ ನೆನಪಿರಲಿ ಬ್ರೆಡ್‌ ಜೊತೆಗೆ ಬಟರ್ ಅಥವಾ ಜಾಮ್ ಬಳಸುವ ಬದಲು, ಸಕ್ಕರೆ ಹಾಕದ ಹಾಲಿ ನೊಂದಿಗೆ ಸೇವಿಸಿ. ಯಾಕೆಂದರೆ ಇದರಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೆಟ್ ಅಂಶ ಹೊಂದಿರುವ ಕಾರಣ ಅತ್ಯಂತ ಆರೋಗ್ಯಕರವಾದ ಆಹಾರ ಎಂದು ಈಗಲೂ ನಂಬಲಾಗಿದೆ.

ಬೆಣ್ಣೆ ಹಣ್ಣುಗಳು

ಅವಕ್ಯಾಡೊ ಅಥವಾ ಬೆಣ್ಣೆ ಹಣ್ಣುಗಳು ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ! ಈ ಹಣ್ಣನ್ನು ಹಾಗೆ ಕೂಡ ತಿನ್ನಬಹುದು, ಇಲ್ಲಾಂದರೆ ಜ್ಯೂಸ್ ಮಾಡಿಕೊಂಡು ಆದರೂ ಕುಡಿಯ ಬಹುದು. ಬೇರೆಲ್ಲಾ ಹಣ್ಣುಗಳಿಗೆ ಹೋಲಿಸಿದರೆ ಈ ವಿದೇಶಿ ಹಣ್ಣು ಮಾರುಕಟ್ಟೆಯಲ್ಲಿ ಸ್ವಲ್ಪ ದುಬಾರಿ, ಆದರೆ ಆರೋಗ್ಯದ ವಿಷ್ಯದಲ್ಲಿ ಮಾತ್ರ ಎತ್ತಿದಕೈ!
ಇನ್ನು ಈ ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದ ನಾರನಾಂಶ ಜೊತೆಗೆ ಆರೋಗ್ಯಕರವಾದ ಕೊಬ್ಬಿನ ಅಂಶಗಳು ಹೇರಳವಾಗಿ ಸಿಗುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೀಗಾಗಿ ಬೆಳಗಿನ ಉಪಹಾರದ ಸಮಯದಲ್ಲಿ ಈ ಹಣ್ಣನ್ನು ಯಾವುದೇ ಅನುಮಾನವಿಲ್ಲದೆ ಸೇವನೆ ಮಾಡಬಹುದು.

ಯಾವ ಆಹಾರಗಳನ್ನು ಸೇವಿಸಬಾರದು?

ಕಾರ್ಬೋಹೈಡ್ರೇಟ್ ಹಾಗೂ ಅಧಿಕ ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳಿಂದ ಮಧುಮೇಹ ಇರುವ ರೋಗಿಗಳು ದೂರ ಇದ್ದರೆ ಒಳ್ಳೆಯದು. ಇನ್ನು ದಿನನಿತ್ಯ ಕುಡಿಯುವ ಟೀ ಕಾಫಿಗೆ ಸಕ್ಕರೆ ಬೆರೆಸಬಾರದು. ಇನ್ನು ಸಂಸ್ಕರಿಸಿದ ಪ್ಯಾಕೆಟ್ ಜ್ಯೂಸ್, ಫ್ರೂಟ್ ಜಾಮ್, ಪೇಸ್ಟ್ರಿ, ಕೇಕ್ ಇತ್ಯಾದಿ ಬೇಕರಿ ತಿಂಡಿಗಳಿಂದ ಆದಷ್ಟು ದೂರವಿರಬೇಕು.

What Type Of Foods To Eat For Breakfast When You Suffering From Diabetes