ಉದ್ಯೋಗಕ್ಕೆ ಹೋಗುತ್ತಿರುವವರು ಯಾವ ರೀತಿಯ ಆಹಾರ ಕೊಂಡೊಯ್ಯಬೇಕು ಗೊತ್ತಾ?

23-04-22 11:23 pm       Source: Vijayakarnataka   ಡಾಕ್ಟರ್ಸ್ ನೋಟ್

ಉದ್ಯೋಗಿಗಳು ತಮ್ಮ ಬಾಕ್ಸ್‌ನಲ್ಲಿ ಯಾವ ರೀತಿ ಪೌಷ್ಟಿಕ ಆಹಾರ ಹೊಂದಿರಬೇಕು ಗೊತ್ತಾ? ಇಲ್ಲಿದೆ ಮಾಹಿತಿ.

ಒತ್ತಡದ ಜೀವನದಿಂದಾಗಿ ಜನರು ಸಮಾಧಾನವಾಗಿ ಕುಳಿತು ಊಟ ಮಾಡುವ ಕಾಲ ಹೋಯಿತು. ತರಾತುರಿಯಾಗಿ ಕೈಗೆ ಸಿಕ್ಕಿದ ಬ್ರೆಡ್, ಬನ್ ಗಳನ್ನು ತಿಂದು ಕಚೇರಿಗೆ ಧಾವಿಸುತ್ತಾರೆ. ಕೆಲಸದ ಮೇಲೆ ಏಕಾಗ್ರತೆ ಹೊಂದಬೇಕಾದರೆ ಹೊಟ್ಟೆ ತುಂಬಿರಬೇಕು. ಇಲ್ಲವಾದರೆ ಮನಸ್ಸು ಕೆಲಸದ ಮೇಲಲ್ಲ ಹೊಟ್ಟೆಯ ಮೇಲಿರುತ್ತದೆ.

ಬೆಳಗಿನ ಊಟವನ್ನು ಸ್ಕಿಪ್ ಮಾಡಿದಂತೆ ಮಧ್ಯಾಹ್ನದ ಊಟವನ್ನು ಸ್ಕಿಪ್‌ ಮಾಡುವಂತಿಲ್ಲ. ಹೀಗೆ ಸ್ಕಿಪ್‌ ಮಾಡುತ್ತಾ ಹೋದರೆ ಕಾಯಿಲೆಗಳನ್ನು ನಿಜವಾಗಿಯೂ ಸ್ವಾಗತಿಸುತ್ತೀರಿ. ಇನ್ನು ಬಹುತೇಕರು ರೆಡಿ ಫುಡ್‌ಗಳನ್ನು ಆರ್ಡರ್‌ ಮಾಡಿ ತರಿಸಿ ತಿನ್ನುತ್ತಾರೆ.

ಅನಾರೋಗ್ಯಕರವಾದ ತಿಂಡಿಗಳು ನಿಧಾನವಾಗಿ ಕಾಯಿಲೆಗಳನ್ನು ಸೃಷ್ಟಿಸುವ ಕಾರಣ ಸಮತೋಲಿತವಾದ ಆಹಾರಗಳನ್ನು ನೀವು ತಪ್ಪದೇ ಸೇವನೆ ಮಾಡಬೇಕು. ಮನೆಯಲ್ಲಿ ತಯಾರಿಸಿ ಆಹಾರ ತರಲು ಕಷ್ಟವಾದರೆ, ಲೇಖನದಲ್ಲಿ ಸುಲಭ ಮತ್ತು ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇಂತಹ ಆಹಾರಗಳು ನಿಮ್ಮ ಹೊಟ್ಟೆಯನ್ನು ತುಂಬಿಸಿ, ಆರೋಗ್ಯವನ್ನು ಕಾಪಾಡುತ್ತದೆ.

ಇಂತಹ ಆಹಾರ ನಿಮ್ಮ ಬಾಕ್ಸ್‌ನಲ್ಲಿರಲಿ

Sprout Salad Recipe (Mung Bean Sprout Salad) - Fun FOOD Frolic

ನಿಮ್ಮ ಆರೋಗ್ಯದ ಜೊತೆ ಜೊತೆಗೆ ಹೊಟ್ಟೆ ತುಂಬಿಸುವ ಆಹಾರಗಳ ಪಟ್ಟಿ ಇಲ್ಲಿದೆ. ದೇಹಕ್ಕೆ ಶಕ್ತಿ ಮತ್ತು ಅಗತ್ಯ ಪೋಷಕಾಂಶಗಳನ್ನು ನೀಡುವ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಈ ಬೇಸಿಗೆ ಕಾಲದಲ್ಲಿ ತಂಪಾದ ಹಣ್ಣು, ತರಕಾರಿಗಳನ್ನು ಸೇವನೆ ಮಾಡಿ.

ಪ್ರೋಟೀನ್ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಸೌತೆಕಾಯಿ, ಟೊಮೊಟೊ, ಕ್ಯಾರೆಟ್‌, ಬ್ರೊಕೊಲಿ, ಓಟ್ಸ್, ಮೊಳಕೆ ಕಟ್ಟಿದ ಸಲಾಡ್‌ನಂತಹ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಕಚ್ಚಾ ತರಕಾರಿಯ ಜೊತೆಗೆ ಮೊಸರನ್ನು ಸೇರಿಸಿ ಸೇವನೆ ಮಾಡಬಹುದು.

​ಸ್ಮೂಥಿಗಳು

ದ್ರವ ರೂಪದ ಪಾನೀಯಗಳು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ. ಪದೇ ಪದೇ ಹಸಿವಾಗುವುದನ್ನು ನಿಯಂತ್ರಿಸುತ್ತದೆ. ಆಫೀಸ್‌ನಲ್ಲಿ ಕಾಫಿ, ಟೀ ಗೆ ಪಯಾರ್ಯವಾಗಿ ನೀವು ಸ್ಮೂಥಿಯನ್ನು ಕೊಂಡೊಯ್ಯಬಹುದು.

ಆರೋಗ್ಯಕರವಾದ ಪಾಲಕ್, ಸೌತೆಕಾಯಿ, ಆಪಲ್‌, ಸಪೋಟ ಸ್ಮೂಥಿಗಳನ್ನು ತೆಗೆದುಕೊಂಡು ಹೋಗಿರಿ. ನೀವು ತಾಜಾ ಹಣ್ಣುಗಳನ್ನು ಚಿಕ್ಕದಾಗಿ ಕಟ್ ಮಾಡಿ ಕೂಡ ಸೇವನೆ ಮಾಡಬಹುದು. ಹೆಚ್ಚುವರಿ ಪ್ರೋಟೀನ್‌ಗಾಗಿ 4 ರಿಂದ 5 ಬಾದಾಮಿಯನ್ನು ರಾತ್ರಿ ನೆನಸಿ ಬೆಳಗ್ಗೆ ಬಾಕ್ಸ್‌ನಲ್ಲಿ ತೆಗೆದುಕೊಂಡು ಹೋಗಿ.

ಸಿಹಿ ಖಾದ್ಯ

ಬಹುತೇಕರಿಗೆ ಊಟದಲ್ಲಿ ಸಿಹಿ ಇಲ್ಲದಿದ್ದರೆ, ಊಟ ಅಪೂರ್ಣ ಎಂಬ ಭಾವನೆ ಹೊಂದಿರುತ್ತಾರೆ. ಅಂತವರು ಆರೋಗ್ಯಕರವಾದ ಸಿಹಿಯನ್ನು ಬಾಕ್ಸ್‌ನಲ್ಲಿ ಸೇರಿಸಿ. ತೆಂಗಿನ ಹಾಲಿನಿಂದ ತಯಾರಿಸಿದ ಪಾಯಸ ಅಥವಾ ಪೌಷ್ಟಿಕ ಆಹಾರವಾದ ರಾಗಿಯಿಂದ ತಯಾರಿಸಿದ ಲಡ್ಡುಗಳನ್ನು ತೆಗೆದುಕೊಂಡು ಹೋಗಿ. ಆದಷ್ಟು ಸಕ್ಕರೆಯ ಬದಲಾಗಿ ಬೆಲ್ಲವನ್ನು ಬೆರಸಿದ ಸಿಹಿ ತಿಂಡಿಗಳನ್ನು ಸೇವನೆ ಮಾಡಿ. ಇದರಿಂದ ನಿಮ್ಮ ತೂಕ ಮತ್ತು ಆರೋಗ್ಯ ಎರಡು ಕೂಡ ಕಾಪಾಡಬಹುದು.

ಕುರುಕಲು ತಿಂಡಿ

ಕೆಲಸದ ಸಮಯದಲ್ಲಿ ಕುರುಕಲು ತಿಂಡಿಯನ್ನು ತಿನ್ನುವುದನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಅಂತವರು ಸಂಸ್ಕರಿಸಿದ ಆಹಾರಗಳನ್ನು ತಿನ್ನುವ ಬದಲಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುವ ಒಣ ಹಣ್ಣುಗಳನ್ನು ಸೇವನೆ ಮಾಡಿ.

ಬೆರಳೆಣಿಕೆಯಷ್ಟು ವಾಲ್ನಟ್, ಬಾದಾಮಿ, ಒಣ ದ್ರಾಕ್ಷಿ, ಅಂಜೂರವನ್ನು ಆಫೀಸ್‌ಗೆ ತೆಗೆದುಕೊಂಡು ಹೋಗಿ. ಇದು ಸಂಜೆಯ ಕುರುಕಲು ತಿಂಡಿಯಾಗಬಹುದು.

ಆರೋಗ್ಯಕರ ಟಿಪ್ಸ್‌

How Local Fruits and Vegetable Markets Can Cause Food Safety Risks - Food  Safety Helpline

ಆಫೀಸ್‌ನಲ್ಲಿ ಪಿಜ್ಜಾ, ಬರ್ಗರ್‌, ಕೆ.ಎಫ್,ಸಿ ಚಿಕನ್ ನಂತಹ ಆಹಾರಗಳಿಗೆ ಮನಸ್ಸು ಹಾತೊರೆಯುವುದು ಸಹಜ. ಆದಷ್ಟು ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸದಿರಲು ಸಲಹೆ ನೀಡಲಾಗಿದೆ. ಈ ರೀತಿಯ ಆಹಾರಗಳು ನಿಮ್ಮ ತೂಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ನೀವು ತಿನ್ನುವ ಪ್ರತಿಯೊಂದು ಆಹಾರವು ಪೌಷ್ಟಿಕಾಂಶದಿಂದ ಕೂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಜಂಕ್‌ ಫುಡ್‌ಗಳು, ಕರಿದ ಆಹಾರವನ್ನು ಮಿತಗೊಳಿಸಿ.

Healthy Food For Office Workers.