ಭೂಮಿ ಪೂಜೆ - ಉಡುಪಿಯಲ್ಲಿ ಬುಧವಾರ ನಿಷೇಧಾಜ್ಞೆ ಜಾರಿ

04-08-20 12:27 pm       Udupi Reporter   ಕರಾವಳಿ

ಭೂಮಿ ಪೂಜೆ ಪ್ರಯುಕ್ತ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆಗಸ್ಟ್ 5ರಂದು ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಉಡುಪಿ, ಆ. 04: ನಾಳೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿರುತ್ತದೆ. ಈ ಸಮಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ, ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 4ರ ರಾತ್ರಿ 8 ಘಂಟೆಯಿಂದ ಆಗಸ್ಟ್ 6 ರ ಬೆಳಿಗ್ಗೆ 6 ಘಂಟೆಯವರೆಗೆ ಮುಂಜಾಗ್ರತಾ ಕ್ರಮವಾಗಿ, ಸಿಆರ್‌ಪಿಸಿ ಕಲಂ 144ರ ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆ ಜಾರಿ ಇರುವ ಅವಧಿಯಲ್ಲಿ ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ಕೋಲುಗಳು, ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಪಟಾಕಿ, ಸ್ಪೋಟಕಗಳನ್ನು ಸಿಡಿಸುವುದು ನಿಷೇಧಿಸಿದೆ. ಯಾವುದೇ ರೀತಿಯ ಪ್ರತಿಭಟನೆ, ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ರ‍್ಯಾಲಿ, ಸಾರ್ವಜನಿಕ ರಾಜಕೀಯ, ಸಭೆ-ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಿದೆ. ವ್ಯಕ್ತಿಗಳ ಅಥವಾ ಶವಗಳ, ಆಕೃತಿಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್.ಇ.ಡಿ ಬಳಸಿ ಪ್ರದರ್ಶನ ನಡೆಸುದನ್ನು, ಸಾರ್ವಜನಿಕ ಸ್ಥಳದಲ್ಲಿ ಸಿಹಿ ಹಂಚಿ, ಸಂಭ್ರಮಾಚರಣೆ ಮಾಡುವುದನ್ನು ನಿಷೇಧಿಸಿದೆ. ಸಭ್ಯತೆ ಅಥವಾ ನೀತಿಯನ್ನು, ಅತಿಕ್ರಮಿಸಬಹುದಾದ, ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಬಾಧೆಯನ್ನುಂಟು ಮಾಡಬಹುದಾದ ಅಥವಾ ರಾಜ್ಯದ ಭದ್ರತೆ ಕುಗ್ಗಿಸಬಹುದಾದ, ಅಪರಾಧವನ್ನು ಮಾಡಲು, ಬಹಿರಂಗ ಘೋಷಣೆಗಳನ್ನು ಮಾಡುವುದು, ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಭಿತ್ತಿ ಪತ್ರಗಳನ್ನು ಅಥವಾ ಇತರ ಯಾವುದೇ ವಸ್ತು, ಅಥವಾ ಪ್ರದರ್ಶಿಸುವುದು, ಪ್ರಸಾರ ಮಾಡುವುದನ್ನು ನಿಷೇಧಿಸಿದೆ.

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪಟಾಕಿ ಮಾರಾಟ ಮಾಡುವ ಪರಾವನಿಗೆದಾರರು ಅಂಗಡಿಗಳನ್ನು ಮುಚ್ಚುವುದು, ಮತ್ತು ಪಟಾಕಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶಿಸಿದ್ದಾರೆ.