ಗುತ್ತಿಗಾರು ಜನರ ಹೋರಾಟಕ್ಕೆ ಮೂವತ್ತು ವರ್ಷ ; ನಳಿನ್, ಡೀವಿ, ಅಂಗಾರರೇ, ನಿಮ್ಮೂರ ಜನರ ಗೋಳು ಕೇಳಿ..!

29-10-20 04:46 pm       Mangalore Correspondent   ಕರಾವಳಿ

ಜನಪ್ರತಿನಿಧಿಗಳ ಅಗ್ಗಳಿಕೆ ಹೊಂದಿರುವ ಸುಳ್ಯ ತಾಲೂಕಿನಲ್ಲಿ ಇನ್ನೂ ವಿದ್ಯುತ್ ಇಲ್ಲದ, ಮೂಲಸೌಕರ್ಯ ತಲುಪದ ಕುಗ್ರಾಮಗಳಿವೆ.

ಸುಳ್ಯ, ಅಕ್ಟೋಬರ್ 29: ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಮಾತೆತ್ತಿದರೆ ದಕ್ಷಿಣ ಕನ್ನಡ ಜಿಲ್ಲೆಗೆ 16 ಸಾವಿರ ಕೋಟಿ ರೂಪಾಯಿ ಬಂದಿದೆ, ಕೇಂದ್ರ ಸರಕಾರದ ಅನುದಾನದಿಂದ ಜಿಲ್ಲೆಯ ಹಳ್ಳಿ ಹಳ್ಳಿಗಳು ಸಮಗ್ರ ಅಭಿವೃದ್ಧಿ ಆಗುತ್ತಿವೆ ಎಂದು ಭಾಷಣ ಬಿಗಿಯುತ್ತಾರೆ.. ಆದರೆ, ಹಳ್ಳಿಗಳಿಗೆ ತೆರಳಿ ನೋಡಿದರೆ ಅಲ್ಲಿನ ಸ್ಥಿತಿ ಕಣ್ಣಿಗೆ ರಾಚುತ್ತವೆ. ಗುಂಡಿ ಬಿದ್ದ ರಸ್ತೆಗಳು, ಸೇತುವೆಗಳಿಲ್ಲದೆ ಪರದಾಡುತ್ತಿರುವ ಜನರ ವಾಸ್ತವ ಕಣ್ಣಿಗೆ ಕಟ್ಟುತ್ತದೆ.  

ಸುಳ್ಯ ತಾಲೂಕು ಸಂಸದ ನಳಿನ್ ಕುಮಾರ್ ಅವರ ಸ್ವಂತ ಊರು. ಇದೇ ತಾಲೂಕಿನ ಸವಣೂರು ಬಳಿಯ ಚೆನ್ನಾವರ ನಳಿನ್ ಕುಮಾರ್ ಹುಟ್ಟೂರು. ಮೇಲಾಗಿ ಮಾಜಿ ಮುಖ್ಯಮಂತ್ರಿ, ಈಗ ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದ ಗೌಡರೂ ಇದೇ ತಾಲೂಕಿನವರು. ಇಲ್ಲೇ ಶಾಸಕರಾಗಿ, ಸಂಸದರಾಗಿ ಈಗ ಕೇಂದ್ರ ಮಂತ್ರಿಯಾಗಿದ್ದಾರೆ. ಸುಳ್ಯ ತಾಲೂಕಿನಲ್ಲಿ ಬಿಜೆಪಿ ಶಾಸಕ ಅಂಗಾರ ಸತತ ಆರು ಬಾರಿ ಗೆದ್ದು ಶಾಸಕರಾಗಿದ್ದಾರೆ. ಇಷ್ಟೇ ಅಲ್ಲ, ಸಂಸದ ನಳಿನ್ ಕುಮಾರ್ ಇದೇ ಸುಳ್ಯ ತಾಲೂಕಿನಲ್ಲಿ ಬಳ್ಪ ಎನ್ನುವ ಗ್ರಾಮವನ್ನು ದತ್ತು ಪಡೆದಿದ್ದಾರೆ.

ಇಷ್ಟೆಲ್ಲ ಜನಪ್ರತಿನಿಧಿಗಳ ಅಗ್ಗಳಿಕೆ ಹೊಂದಿರುವ ಸುಳ್ಯ ತಾಲೂಕಿನಲ್ಲಿ ಇನ್ನೂ ವಿದ್ಯುತ್ ಇಲ್ಲದ, ಮೂಲಸೌಕರ್ಯ ತಲುಪದ ಕುಗ್ರಾಮಗಳಿವೆ. ಅತಿ ಹೆಚ್ಚು ರಬ್ಬರ್, ಅಡಿಕೆ ಬೆಳೆಯುವ ಇಲ್ಲಿನ ಕೃಷಿಕರು ದೇಶದ ಜಿಡಿಪಿಗೂ ಹೆಚ್ಚು ಕೊಡುಗೆ ನೀಡುತ್ತಾರೆ. ಆದರೆ, ಅಲ್ಲಿನ ಕುಗ್ರಾಮಗಳಲ್ಲಿ ಸರಿಯಾದ ರಸ್ತೆಗಳಿಲ್ಲ. ಸೇತುವೆಗಳಿಲ್ಲದೆ ಜನರು ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಹೊತ್ತುಕೊಂಡು ಹೋಗುವ ಸಂಕಷ್ಟದಲ್ಲಿದ್ದಾರೆ. ಮತದಾನಕ್ಕೆ ತೆರಳುವುದಕ್ಕೂ ನದಿಯಲ್ಲಿ ಸೊಂಟ ಮಟ್ಟದ ನೀರನ್ನು ದಾಟಿಕೊಂಡು ತೆರಳಬೇಕಾದ ಸಂಕಷ್ಟ ಎದುರಿಸುತ್ತಾರೆ.

ಸಂಸದರ ಆದರ್ಶ ಗ್ರಾಮ ಬಳ್ಪದ ಬಳಿಯಲ್ಲೇ ಇರುವ ಗುತ್ತಿಗಾರು ಗ್ರಾಪಂ ವ್ಯಾಪ್ತಿಯ ಕಮಿಲ- ಮೊಗ್ರ- ಬಳ್ಳಕ್ಕ ಭಾಗದಲ್ಲಿ ಮೂಲಸೌಕರ್ಯ ಇಲ್ಲದೆ ಸ್ಥಿತಿ ಶೋಚನೀಯ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿನ ನಾಗರಿಕರು ಈಗ ಹೋರಾಟದ ಹಾದಿ ಹಿಡಿದಿದ್ದಾರೆ. ಈ ಭಾಗದಲ್ಲಿ ಕನಿಷ್ಠ ಮೂಲಸೌಕರ್ಯ ಒದಗಿಸಿ ಎಂದು ಜನರು ಗುತ್ತಿಗಾರು ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಬಾರಿ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದೆ. ಚುನಾವಣೆ ಘೋಷಣೆ ಆಗೋ ಮುನ್ನ ರಸ್ತೆ, ಸೇತುವೆ ಕಾಮಗಾರಿ ಆರಂಭಿಸದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಈ ಭಾಗದ ಜನರು, ಶಾಸಕರು ಸೇರಿ ಜನಪ್ರತಿನಿಧಿಗಳಿಗೆ ಕಳೆದ 30 ವರ್ಷಗಳಿಂದ ಮನವಿಗಳನ್ನು ನೀಡುತ್ತಲೇ ಇದ್ದಾರೆ. ಪ್ರತಿ ಬಾರಿ ಕೇಳಿದಾಗಲೂ ಇಲ್ಲಿನ ಜನರಿಗೆ ಶಾಸಕರು ಮತ್ತು ಸ್ಥಳೀಯ ಮುಖಂಡರು ಕಾಮಗಾರಿ ಪಾಸ್ ಆಗಿದೆ ಎನ್ನುವ ಉತ್ತರವನ್ನಷ್ಟೇ ನೀಡುತ್ತಿದ್ದಾರೆ. ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ನಳಿನ್ ಕುಮಾರ್ ಮತ್ತು ಶಾಸಕ ಅಂಗಾರ, ಈ ಭಾಗಕ್ಕೆ ಬಂದು ಜನರಿಗೆ ಭರವಸೆ ನೀಡಿದ್ದೂ ಆಗಿತ್ತು.

ಈ ಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ, ಆರೋಗ್ಯ ಕೇಂದ್ರ ಅಥವಾ ಶಾಲೆಗೆ ಮತ ಹಾಕಲು ಹೋಗಬೇಕಿದ್ದರೂ ಅಲ್ಲಿನ ಜನ ಹೊಳೆ ದಾಟಿಕೊಂಡು ತೆರಳಬೇಕು. ಮಳೆಗಾಲದಲ್ಲಿ ಮಕ್ಕಳು, ಹಿರಿ ಜೀವಗಳು ಜೀವ ಭಯದಲ್ಲಿ ಹೊಳೆ ದಾಟಬೇಕಾದ ಸ್ಥಿತಿ.. ಇದಲ್ಲದೆ, ಏರಣಗುಡ್ಡೆ- ಮೊಗ್ರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಕಾಲನಿ ಇದೆ. ಒಟ್ಟು ಸುಮಾರು 150 ಮನೆಗಳಿದ್ದು ಒಂದು ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಜನಪ್ರತಿನಿಧಿಗಳು ಓಟಿಗೆ ಮಾತ್ರ ಬರುತ್ತಾರೆಂಬ ಮಾತಿದೆ. ಇವರ ಒಂದು ಸಾವಿರ ಓಟುಗಳಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕೇಳಬೇಕಾಗಿದೆ.

ಧರಣಿಯಲ್ಲಿ ನೂರಕ್ಕೂ ಹೆಚ್ಚು ಜನರು ಸೇರಿದ್ದು ಸಮಸ್ಯೆಗಳ ಸರಮಾಲೆಯನ್ನು ಹೇಳಿಕೊಂಡಿದ್ದಾರೆ. ನೀರು, ರಸ್ತೆ, ವಿದ್ಯುತ್ ಸೌಕರ್ಯಕ್ಕಾಗಿ ನಾವು ಯಾರ ಬಳಿ ಕೇಳಬೇಕು ಎಂಬ ಪ್ರಶ್ನೆಗೆ ಅಲ್ಲಿಗೆ ಬಂದ ಅಧಿಕಾರಿಗಳಲ್ಲೂ ಉತ್ತರ ಇರಲಿಲ್ಲ. ಪಕ್ಷಾತೀತ ನೆಲೆಯಲ್ಲಿ ಕಟ್ಟಿಕೊಂಡ ನಾಗರಿಕ ಹೋರಾಟ ಕ್ರಿಯಾ ಸಮಿತಿಯಡಿ ಧರಣಿ ನಡೆದಿದ್ದು, ಮಹೇಶ್‌ ಪುಚ್ಚಪ್ಪಾಡಿ, ಸುಧಾಕರ ಮಲ್ಕಜೆ, ಗಂಗಾಧರ ಭಟ್‌ ಪುಚ್ಚಪ್ಪಾಡಿ, ಎಂ.ಕೆ.ಶಾರದಾ ಮುತ್ಲಾಜೆ, ಬಿಟ್ಟಿ ಬಿ ನೆಡುನೀಲಂ, ಕಾರ್ಯಪ್ಪ ಗೌಡ ಚಿಕ್ಮುಳಿ, ಲಕ್ಷ್ಮೀಶ ಗಬ್ಲಡ್ಕ, ಜೀವನ್‌ ಮಲ್ಕಜೆ, ಮೋನಪ್ಪ ಬಳ್ಳಕ್ಕ, ವಿಶ್ವನಾಥ ಕೇಂಬ್ರೋಳಿ, ರಘುವೀರ್‌ ಎಂ.ಆರ್‌, ಅಚ್ಚುತ ಮಲ್ಕಜೆ, ವೆಂಕಟ್ರಮಣ ಕೇಂಬ್ರೋಳಿ, ವಸಂತ ಮಲ್ಕಜೆ ಹೀಗೆ ಸ್ಥಳೀಯ ಗಣ್ಯರು ಊರಿನ ಸಮಸ್ಯೆಯ ಬಗ್ಗೆ ಗಮನ ಸೆಳೆದರು.

ಧರಣಿ ಸ್ಥಳಕ್ಕೆ ಬಂದ ದ.ಕ. ಜಿಪಂ ಇಂಜಿನಿಯರ್‌ ಮಣಿಕಂಠ ಬಳಿ ಈ ಬಗ್ಗೆ ಕೇಳಿದಾಗ, ಸೇತುವೆ, ರಸ್ತೆ ಕಾಮಗಾರಿ ಬಗ್ಗೆ ಪ್ರಸ್ತಾವನೆ ಬಂದಿದೆ ಎಂದಷ್ಟೇ ಹೇಳಿದರು. ಪ್ರಸ್ತಾವನೆ ಬಂದು 15 ವರ್ಷ ಆಯಿತಲ್ಲ ಎಂಬ ಪ್ರಶ್ನೆಗೆ ಕಾಮಗಾರಿ ಪಾಸ್ ಮಾಡುವುದು ಜನಪ್ರತಿನಿಧಿಗಳೇ ಅಲ್ಲವೇ ಎಂದು ಮರು ಪ್ರಶ್ನೆ ಹಾಕಿದರು. ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಇಲ್ಲಿನ ಸ್ಥಿತಿ ಹೀಗಾಗಿದೆ ಎನ್ನಲು ಬೇರೆ ಪುರಾವೆ ಬೇಕಿಲ್ಲ..! 

Guthigar village at Sullia taluk in huge trouble as people have no good facilities or development. Villagers Protest demanding for justice.