Moral policing in Mangalore: ನೈತಿಕ ಪೊಲೀಸ್ ; ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡೀಪಾರು? ಮೂರಲ್ಲ, 60 ಮಂದಿಗೆ ಗಡೀಪಾರು ಮಾಡ್ತೀವಿ, ಯಾವ ಸಂಘಟನೆ ಗೊತ್ತಿಲ್ಲ ಎಂದ ಕಮಿಷನರ್

21-07-23 03:34 pm       Mangalore Correspondent   ಕರಾವಳಿ

ನೈತಿಕ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಬಜರಂಗದಳ ಕಾರ್ಯಕರ್ತರಿಗೆ ಪೊಲೀಸರು ನೋಟೀಸ್ ನೀಡಿದ್ದು, ನಿಮ್ಮನ್ನು ಯಾಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

ಮಂಗಳೂರು, ಜುಲೈ 21: ನೈತಿಕ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಬಜರಂಗದಳ ಕಾರ್ಯಕರ್ತರಿಗೆ ಪೊಲೀಸರು ನೋಟೀಸ್ ನೀಡಿದ್ದು, ನಿಮ್ಮನ್ನು ಯಾಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ಮರೋಳಿಯಲ್ಲಿ ನಡೆದಿದ್ದ ಹೋಳಿ ಆಚರಣೆಗೆ ಅಡ್ಡಿ ಪಡಿಸಿದ್ದು ಮತ್ತು ಕಂಕನಾಡಿಯಲ್ಲಿ ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ ಮತ್ತು ಜಯಪ್ರಕಾಶ್ ಶಕ್ತಿನಗರ ಎಂಬ ಮೂವರ ವಿರುದ್ಧ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.

ಈ ಬಗ್ಗೆ ಸ್ಥಳೀಯ ಠಾಣೆಗಳ ಇನ್ಸ್ ಪೆಕ್ಟರ್ ಗಳು ನೀಡಿರುವ ವರದಿ ಆಧರಿಸಿ ಈ ಮೂವರನ್ನು ಮಂಗಳೂರು ನಗರ ಪೊಲೀಸ್ ವಿಭಾಗದ ಡಿಸಿಪಿ ಅಂಶುಕುಮಾರ್ ಮುಂದೆ ಹಾಜರಾಗಲು ನೋಟೀಸ್ ನೀಡಲಾಗಿದೆ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು, ಅಪರಾಧಗಳಿಗೆ ಪರೋಕ್ಷವಾಗಿ ಸಹಾಯ ಮಾಡುವುದು, ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆಂಬ ಕಾರಣವೊಡ್ಡಿ ಈ ಮೂವರಿಗೆ ನೋಟೀಸ್ ನೀಡಲಾಗಿದೆ. ಮಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ರೀತಿಯ ಕ್ರಮ ಅನಿವಾರ್ಯ ಎಂದು ಆಯಾ ಠಾಣೆಗಳ ವ್ಯಾಪ್ತಿಯ ಅಧಿಕಾರಿಗಳು ಕಮಿಷನರಿಗೆ ವರದಿ ಮಾಡಿದ್ದರು. ಇದರಂತೆ ಜುಲೈ 21 ಅಥವಾ ಅದರ ಒಳಗೆ ಬಂದು ಲಿಖಿತ ಸ್ಪಷ್ಟನೆ ನೀಡುವಂತೆ ನೋಟೀಸ್ ನೀಡಲಾಗಿದೆ.

ಯಾವ ಸಂಘಟನೆಯವರು ಗೊತ್ತಿಲ್ಲ– ಕಮಿಷನರ್

ಈ ಬಗ್ಗೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅವರಲ್ಲಿ ಕೇಳಿದಾಗ, ಅಪರಾಧ ಕೃತ್ಯಗಳಲ್ಲಿ ತೊಡಗಿದವರು ನಮಗೆ ಆರೋಪಿಗಳು ಅಷ್ಟೇ. ಅವರು ಯಾವ ಸಂಘಟನೆಯವರು, ಅವರ ಹಿನ್ನೆಲೆಯೇನು ನಮಗೆ ಗೊತ್ತಿಲ್ಲ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಮ ಜರುಗಿಸುತ್ತಿದ್ದೇವೆ. ನೈತಿಕ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರ ಮೇಲೆ ಪ್ರಸ್ತಾವನೆ ಬಂದಿದೆ. ಹೀಗಾಗಿ ಒಂದು ವರ್ಷದಲ್ಲಿ 60 ಮಂದಿಯನ್ನು ಗಡೀಪಾರು ಮಾಡಲು ಪಟ್ಟಿ ಮಾಡಿದ್ದೇವೆ. ಆ ಪೈಕಿ  ಹಲವು ಸಂಘಟನೆಯವರು ಇರಬಹುದು. ಇಂಥವರ ವಿರುದ್ಧ ರೌಡಿ ಶೀಟ್ ತೆರೆಯೋದು, ಗೂಂಡಾ ಕಾಯ್ದೆ ಹೇರುವ ಪ್ರಕ್ರಿಯೆಯೂ ಆಗಲಿದೆ. ಜಿಲ್ಲೆಯ ಶಾಂತಿ ಕಾಪಾಡುವ ದೃಷ್ಟಿಯಿಂದ ಈ ರೀತಿಯ ಕ್ರಮ ಯಾವಾಗಲೂ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Moral Policing in Mangalore, three bajarang dal activist issued exile notice from Police Commissioner. Three who were booked in various moral policing cases have been issued notice to leave the district.