ಮುಂದಿನ ಜನ್ಮ ಇದ್ದರೆ ಪಾಣಾರ ಸಮುದಾಯದಲ್ಲೇ ಹುಟ್ಟಿ ದೈವದ ಚಾಕರಿ ಮಾಡುತ್ತೇನೆ, ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ಟ್ರಸ್ಟ್ ಮಾಡಿದ್ದೇನೆ ; ರಿಷಬ್ ಶೆಟ್ಟಿ   

04-09-23 07:12 pm       Udupi Correspondent   ಕರಾವಳಿ

ಕಾಂತಾರ ಚಿತ್ರ ಸಂಪೂರ್ಣ ದೈವ ಪ್ರೇರಣೆಯಿಂದಲೇ ಆಗಿರುವುದು, ನಾನು ಮಾಡಿದ್ದಲ್ಲ. ದೈವದ ಬಲದಿಂದಲೇ ಆ ಚಿತ್ರ ಹಿಟ್ ಆಗಿರುವುದು. ದೈವದ ಚಾಕರಿ ಮಾಡುವ ಪಾಣಾರ, ನಲಿಕೆ ಸಮುದಾಯದ ಎಲ್ಲರಿಗೂ ನಮಿಸುತ್ತೇನೆ.

ಉಡುಪಿ, ಸೆ.4: ಕಾಂತಾರ ಚಿತ್ರ ಸಂಪೂರ್ಣ ದೈವ ಪ್ರೇರಣೆಯಿಂದಲೇ ಆಗಿರುವುದು, ನಾನು ಮಾಡಿದ್ದಲ್ಲ. ದೈವದ ಬಲದಿಂದಲೇ ಆ ಚಿತ್ರ ಹಿಟ್ ಆಗಿರುವುದು. ದೈವದ ಚಾಕರಿ ಮಾಡುವ ಪಾಣಾರ, ನಲಿಕೆ ಸಮುದಾಯದ ಎಲ್ಲರಿಗೂ ನಮಿಸುತ್ತೇನೆ. ಪಂಜುರ್ಲಿ ದೈವದ ಸಿನಿಮಾ ಮಾಡುವ ಮೂಲಕ ದೈವದ ಸೇವೆ ಮಾಡುವ ಅವಕಾಶ ನನಗೂ ಸಿಕ್ಕಿದೆ. ಆಮೂಲಕ ನಿಮ್ಮ ಸಮುದಾಯಕ್ಕೇ ಸೇರಿಕೊಂಡಿದ್ದೇನೆ. ಮುಂದೊಂದು ಜನ್ಮ ಇದ್ದರೆ ಪಾಣಾರ ಸಮುದಾಯದಲ್ಲೇ ಹುಟ್ಟಿ ದೈವದ ಚಾಕರಿ ಮಾಡಲು ಬಯಸುತ್ತೇನೆ ಎಂದು ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿ ಪಾಣಾರ ಯಾನೆ ನಲಿಕೆಯವರ ಜಿಲ್ಲಾ ಸೇವಾ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಮೆರಿಕದ ಮ್ಯೂಸಿಯಂನಲ್ಲಿ ಪಂಜುರ್ಲಿ ದೈವದ ಅತ್ಯಾಕರ್ಷಕ ಮೊಗ ಇದೆ. ಅಮೆರಿಕ ಅನ್ನುವುದು ನಮ್ಮ ಸಂಸ್ಕೃತಿಗೆ ತದ್ವಿರುದ್ಧ ಇರುವ ಜಾಗ. ಅಂಥ ಜಾಗದಲ್ಲಿ ನಾವು ನಂಬುವ ಪಂಜುರ್ಲಿ ದೈವದ ಮೊಗ ಇದೆಯಂದ್ರೆ ನಾವೆಲ್ಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರು ಖುಷಿ ಪಡಬೇಕು.

Rishab Shetty urges Panara community to get its children educated while  continuing Daivaradhane tradition - The Hindu

Rishab Shetty urges Panara community to get its children educated while  continuing Daivaradhane tradition - The Hindu

ನಾನು ಅಂಥ ದೊಡ್ಡ ನಟ, ನಿರ್ದೇಶಕ ಅಲ್ಲ. ದೊಡ್ಡ ಫ್ಯಾನ್ ವರ್ಗವನ್ನು ಇಟ್ಟುಕೊಂಡವನೂ ಅಲ್ಲ. ಒಂದೆರಡು ಚಿತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದೇನೆ ಅಷ್ಟೇ. ಆದರೆ ಈ ಮಟ್ಟದ ಯಶಸ್ಸು ಸಿಕ್ಕಿದ್ದಕ್ಕೆ ದೈವದ ಆಶೀರ್ವಾದವೇ ಕಾರಣ ಅಂತೇನೆ. ದೈವಗಳನ್ನು ನಂಬದವರಿಗೂ ಅವುಗಳ ಶಕ್ತಿಯ ಬಗ್ಗೆ ನಾನೇ ನಿದರ್ಶನ ಎಂದು ಹೇಳುತ್ತೇನೆ. ದೈವದ ಶಕ್ತಿಯನ್ನು ಪ್ರಪಂಚದ ಎತ್ತರಕ್ಕೆ ತೋರಿಸಲು ಸಾಧ್ಯವಾಗಿದ್ದು ದೈವದ ಶಕ್ತಿಯ ಕಾರಣದಿಂದ. ತುಳುನಾಡಿನ ಸಾಕಷ್ಟು ಇತಿಹಾಸವನ್ನು ಓದಿಕೊಂಡಿದ್ದೇನೆ. ಸಾವಿರಾರು ವರ್ಷಗಳ ಇತಿಹಾಸ ನಮ್ಮ ಜಿಲ್ಲೆಗೆ ಇದೆ. ಇಲ್ಲಿ ದೇವಸ್ಥಾನಗಳು ಬರುವ ಮೊದಲೇ ಇಲ್ಲಿ ದೈವಸ್ಥಾನಗಳು ಇದ್ದವು ಎನ್ನುವ ವಿಚಾರ ಕಂಡುಬರುತ್ತದೆ. ಇಲ್ಲಿ ದೈವಾರಾಧನೆ, ಪ್ರಕೃತಿಯ ಆರಾಧನೆ ಇತ್ತು. ಈ ಸಮುದಾಯದ ಜನರು ಸಾವಿರಾರು ವರ್ಷಗಳಿಂದ ಈ ಕಲೆಯನ್ನು ಮಾಡಿಕೊಂಡು ಬಂದಿದ್ದಾರೆ. ಈ ಕಲೆ ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ಒಂದಷ್ಟು ಮಂದಿ ಮಾತ್ರ ಪರಿಪೂರ್ಣ ಸಾಧನೆ ಮಾಡಲು ಸಾಧ್ಯ.

ಚಿತ್ರದ ಯಶಸ್ಸಿನ ಬಳಿಕ ನನ್ನ ಪತ್ನಿಯ ಸಲಹೆಯಂತೆ ಒಂದು ಟ್ರಸ್ಟ್ ಮಾಡಿಕೊಂಡಿದ್ದೇವೆ. ಈ ಟ್ರಸ್ಟ್ ಮೂಲಕ ಇಡೀ ಸಮಾಜಕ್ಕೆ ಬೆಂಬಲ ಕೊಡುವ, ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದೇವೆ. ನಿಮ್ಮ ಸಮುದಾಯದಲ್ಲಿ ಓದುವಂಥ ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ನಾವು ಬೆಂಬಲ ನೀಡುತ್ತೇವೆ. ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದ ಜೊತೆಗೆ ನಮ್ಮ ಆಚಾರ, ವಿಚಾರ ಬೆಳೆಸಿಕೊಂಡು ಹೋಗಬೇಕಾಗಿದೆ. ನಿಮ್ಮ ಸಂಘದ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ ಏನೇನು ಬೇಕು, ಅದಕ್ಕಾಗಿ ಜೊತೆಗೆ ನಿಲ್ಲುತ್ತೇನೆ. ಸರಕಾರದ ಜೊತೆಗೆ ನಿಂತು ಈ ಕೆಲಸ ಮಾಡಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

If there is any rebirth, I wish to be born in Panara community says Rishab Shetty in Udupi. He was speaking at the annual day celebrations of Udupi District Panara Sangha under the aegis of Udupi District Pana Yane Nalikeyavara Samaja Seva Sangha and Paryaya Krishnapura Mutt at Sri Krishna Mutt Rajangana in Udupi. Kantara movie revolved around the life of the Panara community and Daivaradhana (spirit worship).